ಭಾನುವಾರ, ಏಪ್ರಿಲ್ 2, 2023
31 °C

ಸೋರೆಕಾಯಿ ಮೇಲೆ ಅರಳುವ ಕಲೆ: ಹನುಮನಾಳ ಗ್ರಾಮದ ಗುರುನಾಥ ಪತ್ತಾರ ಕಲಾ ನೈಪುಣ್ಯತೆ

ಕಿಶನರಾವ್ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ಸಮೀಪದ ಹನುಮನಾಳ ಗ್ರಾಮದ ಸಿತಾರ ವಾದಕ ಗುರುನಾಥ ಪತ್ತಾರ,  ಸೋರೆಕಾಯಿ (ಪುಂಗಿಕಾಯಿ)ಗಳಲ್ಲಿ ಮನಸೂರೆಗೊಳಿಸುವ ಕಲಾಕೃತಿ ತಯಾರಿಸುವ ಮೂಲಕ ಜನರ ಗಮನ ಸೆಳೆದಿದ್ದಾರೆ.

ಇವರು ತಯಾರಿಸಿದ ಕಲಾಕೃತಿಗಳಲ್ಲಿ ಶಹನಾಯಿ ಅದ್ಭುತವಾದ ಕಲಾಕೃತಿಯಾಗಿದೆ. ಸೋರೆಕಾಯಿಗಳ ಎರಡು ಬದಿಗಳ ತುದಿಗಳನ್ನು ಕತ್ತರಿಸಿ ಒಂದಕ್ಕೊಂದು ಜೋಡಿಸಿದ್ದಾರೆ. ಅಷ್ಟೆ ಅಲ್ಲ ಅದು ವಿಶಿಷ್ಠವಾದ ನಾದವನ್ನು ಹೊಮ್ಮಿಸುತ್ತದೆ. ಅದೇ ರೀತಿ ಹೂದಾನಿ, ತಂಬೂರಿ, ಬುಟ್ಟಿಗಳು, ಪೂಜಾಪಾತ್ರೆ, ದೀಪಸ್ಥಂಭದಂತಹ ಅನೇಕ ಕಲಾಕೃತಿಗಳು ಸೋರೆಕಾಯಿಯಲ್ಲಿಯೇ ತಯಾರಾಗಿವೆ.

ಬಾಟಲಿಯಲ್ಲಿ ಕಲಾ ನೈಪುಣ್ಯತೆ: ಗಾಜಿನ ಬಾಟಲಿಯೊಳಗೆ ಹತ್ತಿಯಿಂದ, ದಾರದಿಂದ, ಸ್ಪಂಜಿನಿಂದ ಕಲಾಕೃತಿಗಳನ್ನು ಮಾಡಿರುವುದನ್ನು ನೋಡಿದ್ದೇವೆ. ಆದರೆ ಗುರುನಾಥ ಪತ್ತಾರ ಒಂದು ಹೆಜ್ಜೆ ಮುಂದೆ ಹೋಗಿ ಬಾಟಲಿಯೊಳಗೆ ಚೌಕಟ್ಟು ಹಾಕಿದ ಭಾಚಿತ್ರಗಳು, ರಥ... ಹೀಗೆ ಅಲಂಕಾರವುಳ್ಳ ಕಲಾಕೃತಿಗಳನ್ನು ತಯಾರಿಸಿದ್ದಾರೆ.

ಕಲಾಕೃತಿಯ ಹಿಂದೆ ಕೈಚಳಕ: ಕೈ ಕಿರು ಬೆರಳು ಹೋಗಲು ಸಾಧ್ಯವಿಲ್ಲದಂತಹ ಗಾಜಿನ ಬಾಟಲಿಯ ಬಾಯಿಯೊಳಗೆ ಗುರುನಾಥ ತಮ್ಮ ಕೈಚಳಕದ ಮೂಲಕ ದೊಡ್ಡದಾಗಿರುವ ಕಚ್ಚಾ ವಸ್ತುಗಳನ್ನು ತುಂಡಾಗಿಸಿ ಒಳಗಡೆ ತೂರಿಸಿ ತಂತಿ, ಕಡ್ಡಿಗಳ ಸಹಾಯದಿಂದ ಬಾಟಲಿಯ ಒಳಗಡೆ ಸುಂದರ ಕಲಾಕೃತಿಗ ಹೆಣೆಯುತ್ತಾರೆ.

ಈಚೆಗೆ ಇವರು ತಯಾರಿಸಿದ ಚಲಿಸುವ ರಥ ಅದ್ಭುತ ಕಲಾಕೃತಿಯಾಗಿದೆ. ಈ ಬಾಟಲಿಯನ್ನು ಅಲುಗಾಡಿಸಿದರೆ ಅಥವಾ ಉರುಳಿಸಿದರೆ ಒಳಗಡೆ ಇರುವ ರಥ ತನ್ನ ಚಕ್ರಗಳನ್ನು ಉರುಳಿಸುತ್ತಾ ಮುಂದೆ ಚಲಿಸಿದಂತೆ ಭಾಸವಾಗುತ್ತದೆ.

ಡಾ.ರಾಜಕುಮಾರರ ಅವರ ಅಪ್ಪಟ ಅಭಿಮಾನಿಯಾಗಿರುವ ಇವರು ಬಾಟಲಿಯೊಳಗೆ ಭಕ್ತಪ್ರಹ್ಲಾದ ಚಲನ ಚಿತ್ರದಲ್ಲಿ ಡಾ.ರಾಜ್ ನಟಿಸಿರುವಂತೆ ಗದೆ ಹಿಡಿದು ನಿಂತಿರುವ ಹಿರಣ್ಯಕಷ್ಯಪು ಕಲಾಕೃತಿ, ಮಕ್ಕಳ ವಿವಿಧ ಆಟಿಕೆಗಳು, ಸೋಫಾ-ಚೇರ್, ಅರಮನೆ, ದೇವರು, ಭಾವಚಿತ್ರಗಳನ್ನು ಸೇರಿಸಿ ಹಾಕಿದ ಕಟ್ಟು ಹೀಗೆ ಹಲವಾರು ಕಲಾಕೃತಿಗಳನ್ನು  ತಯಾರಿಸಿದ್ದಾರೆ.

ಗುರುನಾಥ ಅವರು ಬಾಟಲಿಯ ವ್ಯಾಸದ ಅಳತೆಗೆ ತಕ್ಕಂತೆ ಕಟ್ಟಿಗೆಯ ರಥ, ಭಾವಚಿತ್ರಕ್ಕೆ ಹಾಕಿರುವ ಕಟ್ಟಗಳನ್ನು ಮೊದಲೆ ತಯಾರಿಸಿಕೊಂಡಿರುತ್ತಾರೆ. ಬಾಟಲಿ ಒಳಗಡೆ ತೂರುವ ಮುಂಚೆ ಅದನ್ನೆಲ್ಲ ಅಳತೆಗೆ ತಕ್ಕಂತೆ ತುಂಡಾಗಿ ಕತ್ತರಿಸುತ್ತಾರೆ. ಬಾಟಲಿಯೊಳಗೆ ಸೇರಿಸಿದ ನಂತರ ಕತ್ತರಿಸಿದ ಭಾಗಗಳು ಒಂದಕ್ಕೊಂದು ಜೋಡಿಸಲು ಸರಳವಾಗಲೆಂದು ಕಲವೆಡೆ ಸ್ಕ್ರೂ ಜೋಡಿಸಲು ಬರುವಂತೆ, ಮತ್ತು ಕೆಲವೆಡೆ ತ್ರಿಕೋನಾಕಾರದಲ್ಲಿ ಮೊದಲೆ ಕಟ್ಟಿಗೆಗಳ ಮೂಲೆಗಳು ಒಂದಕ್ಕೊಂದು ಕೂಡುವಂತೆ ಕೊರೆದು ಜೋಡಿಸುತ್ತಾರೆ.

ತಾಳ್ಮೆ, ಶ್ರದ್ಧೆ ಹಾಗೂ ಉತ್ಸಾಹ ಇದ್ದರೆ ಕಲೆಯಲ್ಲಿ ಸಾಧನೆ ಮಾಡಬಹುದು ಎನ್ನುತ್ತಾರೆ ಗುರುನಾಥ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು