ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಕೋವಿಡ್‌ ವಿಘ್ನ ಕಳೆದು ಸಂಭ್ರಮದತ್ತ...

ಹಬ್ಬದ ಸಡಗರಕ್ಕೆ ಕಾಯುತ್ತಿರುವ ಸಂಘ, ಸಂಸ್ಥೆಗಳು; ಕಲಾವಿದರ ಆರ್ಥಿಕ ಸಂಕಷ್ಟ ದೂರ ಮಾಡುವನೇ ಗಣೇಶ?
Last Updated 1 ಸೆಪ್ಟೆಂಬರ್ 2022, 7:19 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ವಿವಿಧೆಡೆ ಮಾರುಕಟ್ಟೆಗಳಲ್ಲಿ ಒಂದು ಸುತ್ತು ಹಾಕಿಬಂದರೆ ಸಾಕು; ವಿವಿಧ ವಿನ್ಯಾಸಗಳ, ಅಳತೆಯ ಮತ್ತು ಬಣ್ಣಗಳ ಗಣಪತಿ ಮೂರ್ತಿಗಳು ರಾರಾಜಿಸುತ್ತವೆ.

ಕೋವಿಡ್‌ ಹಾಗೂ ಲಾಕ್‌ಡೌನ್‌ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವ ಪ್ರತಿಷ್ಠಾಪನೆಗೆ ಸಂಘ, ಸಂಸ್ಥೆಗಳಿಗೆ ಅವಕಾಶ ಸಿಕ್ಕಿರಲಿಲ್ಲ. ಈ ವರ್ಷ ಸರ್ಕಾರ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಯಾವುದೇ ಷರತ್ತು ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಇದು ಅನೇಕರ ಖುಷಿಗೆ ಕಾರಣವಾಗಿದೆ. ಕಲಾವಿದರ ಮನಸ್ಸೂ ಹಗುರಾಗಿದೆ.

ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ, ಸಾಂಸ್ಕೃತಿಕ ಕಾರ್ಯಕ್ರಮ, ಮಹಿಳೆಯರು ಹಾಗೂ ಮಕ್ಕಳಿಗೆ ವಿವಿಧ ಸ್ಪರ್ಧೆಗಳು, ಅದ್ದೂರಿಯಾಗಿ ವಿಸರ್ಜನೆ ಹೀಗೆ ಪ್ರತಿಯೊಂದು ಆಚರಣೆ ಉತ್ತರ ಕರ್ನಾಟಕದಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ.

ವರ್ಷಪೂರ್ತಿ ವಿವಿಧ ಕಲಾಕೃತಿಗಳ ತಯಾರಿಕೆಯಲ್ಲಿ ತೊಡಗುವ ಕುಂಬಾರರಿಗೆ ಗಣೇಶ ಚತುರ್ಥಿ ಬಂದರೆ ಆರ್ಥಿಕ ’ವಿಘ್ನ‘ ದೂರವಾಗುತ್ತವೆ. ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಮೂರ್ತಿಗಳ ಮಾರಾಟಕ್ಕೆ ರಾಜ್ಯ ಸರ್ಕಾರ ನಿರ್ಬಂಧ ಹೇರಿರುವುದು ಕರತಲವಾಗಿ ಮೂರ್ತಿ ತಯಾರಿಸಿಕೊಂಡು ಬರುತ್ತಿರುವ ಕಲಾವಿದರಿಗೆ ಅನುಕೂಲವಾಗಿದೆ. ಆದರೆ, ಸ್ಥಳೀಯ ಆಡಳಿತ ಈ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾಗಿದೆ. ಆಗ ಮಾತ್ರ ಸಾಂಪ್ರದಾಯಿಕ ಶೈಲಿಯ ಮಹತ್ವ ಉಳಿಯುತ್ತದೆ.

ಲಾಭದ ನಿರೀಕ್ಷೆಯಲ್ಲಿ ಕಲಾವಿದ
ಎರಡು ವರ್ಷಗಳಲ್ಲಿ ಅನುಭವಿಸಿದ ನಷ್ಟದಿಂದ ಹೊರಬಂದು ಈ ವರ್ಷ ಚೇತರಿಕೆ ಕಾಣುವ ಸರ್ವ ಪ್ರಯತ್ನದಲ್ಲಿದ್ದಾರೆ ಕಲಾವಿದರು.

ಯಲಬುರ್ಗಾ ಪಟ್ಟಣದಲ್ಲಿ ಬಡಿಗೇರ ಮತ್ತು ಕುಂಬಾರ ಸಮಾಜದ ಕೆಲ ಕುಟುಂಬಗಳು ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ಸುಮಾರು ವರ್ಷಗಳಿಂದಲೂ ನಿರತರಾಗಿದ್ದಾರೆ. ಪಟ್ಟಣ ಮತ್ತು ಸುತ್ತಮುತ್ತಲಿನ ಕೆಲ ಗ್ರಾಮಗಳಿಗೆ ಪ್ರತಿವರ್ಷ ಒಟ್ಟಾರೆ ಸಾವಿರಾರು ಗಣೇಶನ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡಿ ಲಕ್ಷಾಂತರ ಹಣದ ವಹಿವಾಟು ನಡೆಸುತ್ತಾರೆ.

‘ಬದಲಾದ ಪರಿಸ್ಥಿತಿ ಮತ್ತು ಪರಿಸರ ಸ್ನೇಹಿ ಗಣೇಶನ ನಿರ್ಮಾಣಕ್ಕೆ ಬೆಂಬಲ ಸಿಕ್ಕಿದ್ದು ಮೂರ್ತಿ ತಯಾರಕರ ಮುಖದಲ್ಲಿ ಹರ್ಷ ಮೂಡಿದೆ. ಈಗಾಗಲೇ ಅನೇಕರು ದೊಡ್ಡ ಮತ್ತು ಮಧ್ಯಮ ಗಾತ್ರದ ಮೂರ್ತಿಗಳ ತಯಾರಿಗೆ ಮುಂಗಡ ಹಣ ಕೊಟ್ಟು ಖರೀದಿಗೆ ಮುಂದಾಗುತ್ತಿದ್ದಾರೆ. ಹಾಗೆಯೇ ಪರಿಸರಸ್ನೇಹಿ ಮೂರ್ತಿ ಪ್ರತಿಷ್ಠಾಪನೆಗೆ ಪ್ರೋತ್ಸಾಹಿಸುತ್ತಿರುವುದರಿಂದ ಮಣ್ಣಿನ ಮೂರ್ತಿ ತಯಾರಕರಿಗೆ ಬೆಂಬಲ ಸಿಕ್ಕಂತಾಗಿದೆ‘ ಎಂಬುದು ಯಲಬುರ್ಗಾದ ಮೂರ್ತಿ ತಯಾರಕ ಪ್ರಶಾಂತ ಬಡಿಗೇರ ಅವರ ಅಭಿಪ್ರಾಯ.

‘ಮೂರ್ನಾಲ್ಕು ತಿಂಗಳ ಮುಂಚಿತವಾಗಿಯೇ ಮೂರ್ತಿ ತಯಾರಿಕೆಗೆ ಸಿದ್ದತೆ ಮಾಡಿಕೊಳ್ಳಬೇಕಾಗುವುದರಿಂದ ಉತ್ತಮ ಬೇಡಿಕೆ ಹಾಗೂ ವ್ಯಾಪಾರದ ಅವಕಾಶಗಳಿದ್ದರೂ ಸಕಾಲದಲ್ಲಿ ತಯಾರಿಸಿ ವಿತರಿಸಲು ಕಷ್ಟವಾಗುತ್ತದೆ. ಹಬ್ಬ ಹತ್ತಿರ ಇದ್ದಾಗ ಗ್ರಾಹಕರು ಖರೀದಿಗೆ ಒಟ್ಟೊಟ್ಟಿಗೆ ಬರುವುದರಿಂದ ಎಲ್ಲರಿಗೂ ಪೂರೈಸಲು ಕಷ್ಟ ಸಾಧ್ಯ‘ ಎಂದು ಕುಂಬಾರ ಕುಟುಂಬ ಶಿವರಾಜ ಹೇಳುತ್ತಾರೆ.

ವಿಘ್ನ ನಿವಾರಕನ ಮುಂದೆ ಕಲಾಗ್ರಾಮ ಲೋಕ
–ಕಿಶನರಾವ್‌ ಕುಲಕರ್ಣಿ

ಹನುಮಸಾಗರ: ಪ್ರತಿವರ್ಷ ಗಣೇಶ ಚತುರ್ಥಿ ಸಂದರ್ಭದಲ್ಲಿ ಹೊಸಬಗೆಯ ಕಲಾಕೃತಿ ಮಾಡುವುದರ ಮೂಲಕ ಗ್ರಾಮದ ಸುತ್ತಮುತ್ತಲಿನ ಜನರಿಗೆ ಚಿರಪಚಿತವಾಗಿರುವ ಸಮೀಪದ ಹನುಮನಾಳ ಗ್ರಾಮದ ಸಂಗೀತ ಕಲಾವಿದ ಗುರುನಾಥ ಪತ್ತಾರ ಈ ಬಾರಿ ಕಲಾಗ್ರಾಮ ಸೃಷ್ಟಿಸಿದ್ದಾರೆ.

ಸಾರ್ವಜನಿಕ ಗಣೇಶೋತ್ಸವ ಸಮಯದಲ್ಲಿ ಈ ಗ್ರಾಮ ಅನಾವರಣವಾಗಲಿದೆ. ಈ ಮೂಲಕ ಅವರು ಜನರಿಗೆ ಹಳೆಯ ಕಾಲದ ಜನಜೀವನ ಸ್ಥಿತಿ ಪರಿಚಯಿಸುವ ಕಾರ್ಯ ಮಾಡುತ್ತಿದ್ದಾರೆ. ಇವರ ಕಾರ್ಯಕ್ಕೆ ಸಂಗೀತ ಬಳಗದ ಕಲಾವಿದರೂ ಕೈ ಜೋಡಿಸಿದ್ದಾರೆ.

ತಿರುಗುವ ರಂಗಮಂದಿರ, ತೇಲುವ ಗಣೇಶ, ಬಾಟಲಿಯಲ್ಲಿ ಬ್ರಹ್ಮಾಂಡ ಹಾಗೂ ಲಂಡನ್ ಸೇತುವೆ ಮಾಡುವ ಮೂಲಕ ಜನಮನ ಸೆಳೆದಿದ್ದರು. ಈ ಬಾರಿ ಗುರುನಾಥ ಪತ್ತಾರ ಅವರ ಕಲಾಗ್ರಾಮದ ಸೊಬಗು ಕಣ್ತುಂಬಿಕೊಳ್ಳಲು ಜನ ಕೂಡ ಕಾಯುತ್ತಿದ್ದಾರೆ. ಸುಮಾರು 140 ಬೊಂಬೆಗಳು ಇವು.

ಕಲಾಗ್ರಾಮದಲ್ಲಿ ಹಿಂದಿನ ಕಾಲದಲ್ಲಿ ಮಟ್ಟಿ ನೀರಾವರಿ ಮೂಲಕ ಕೃಷಿ ಮಾಡುತ್ತಿರುವುದು, ಖಣದಲ್ಲಿ ಹಂತಿಕಟ್ಟಿ ಧಾನ್ಯರಾಶಿ ಮಾಡುವುದು, ಡಂಗುರ ಹಾಕುವುದು, ಬೀದಿ ದೀಪ ಹಚ್ಚಿ ಓಣಿ ಬೆಳಗಿಸುವ ವ್ಯವಸ್ಥೆ, ಗರ್ಧಿಗಮ್ಮತ್ತು, ಬಳಿಗಾರ, ಹಗ್ಗ ಹೊಸೆಯುವವರು, ಮಜ್ಜಿಗೆ ಮಾಡುವುದು, ಭಾರ ಎತ್ತುವ ಹುಡುಗರು, ಗಾಣದ ಮೂಲಕ ಎಣ್ಣೆ ತೆಗೆಯುವ ಗಾಣಿಗ, ಗುರ್ಜಿ, ಕೋಲಾಟ, ಕುಂಬಾರ, ಬಡಿಗ, ಕಮ್ಮಾರ ಹೀಗೆ ಬದುಕಿನಲ್ಲಿ ಹಾಸುಹೊಕ್ಕಿರುವ ಜನಪದೀಯರ ಜೀವನಶೈಲಿಯನ್ನು ತಾವು ತಯಾರಿಸಿದ ಮಣ್ಣಿನ ಬೊಂಬೆಗಳಲ್ಲಿ ಜೀವಂತವಾಗಿರಿಸಿದ್ದಾರೆ. ಹೀಗೆ ನೂರಕ್ಕೂ ಹೆಚ್ಚು ಮಣ್ಣಿನ ಬೊಂಬೆಗಳನ್ನು ಸುಮಾರು ನಾಲ್ಕು ತಿಂಗಳಿನಿಂದ ಮಾಡಿದ್ದಾರೆ.

ಸಾಮಿಲ್ ಹೊಂದಿರುವ ಗುರುನಾಥ ಪತ್ತಾರ ಸಂಗೀತ ಕಲಾವಿದರು ಹೌದು. ಸಿತಾರ್, ತಬಲಾ, ಹಾರ್ಮೋನಿಯಂ ಸಾಧನಗಳಲ್ಲಿ ಕಲಾಸಾಧನೆ ಮಾಡಿ ಯುವಕರಿಗೆ ಉಚಿತವಾಗಿ ಸಂಗೀತ ಕಲಿಸಿಕೊಟ್ಟಿದ್ದಾರೆ. ಅವರ ಕಾರ್ಯಕ್ಕೆ ಬಸವರಾಜ ದಾಸರ, ರವಿ ಪತ್ತಾರ, ವಿಶ್ವನಾಥ ಪತ್ತಾರ, ಮೇಘರಾಜ ಪತ್ತಾರ ಕೈ ಜೋಡಿಸಿದ್ದಾರೆ.

‘ಸಂಭ್ರಮಕ್ಕೆ ಕಾಯುತ್ತಿದ್ದೇವೆ’
ಕೊಪ್ಪಳ:
ಎರಡು ವರ್ಷಗಳ ಕಾಲ ಸಾರ್ವಜನಿಕ ಗಣೇಶೋತ್ಸವ ಸಂಭ್ರಮವೇ ಇರಲಿಲ್ಲ. ಹೀಗಾಗಿ ಬಹಳಷ್ಟು ನಿರಾಶೆಯಾಗಿತ್ತು. ಈ ಸಲ ಮುಕ್ತ ಅವಕಾಶ ಲಭಿಸಿರುವುದರಿಂದ ಖುಷಿಯಾಗಿದೆ. ಮಣ್ಣಿನ ಗಣಪತಿ ಮೂರ್ತಿ ಖರೀದಿ ಕಡ್ಡಾಯ ಮಾಡಿರುವ ಕಾರಣ ಬೆಲೆ ಸಾಕಷ್ಟು ಹೆಚ್ಚಾಗಿದೆ. ಬೆಲೆ ಎಷ್ಟೇ ಏರಿಕೆಯಾದರೂ ಗಣೇಶ ಪ್ರತಿಷ್ಠಾಪನೆಯ ಸಂಭ್ರಮ ಬಿಡುವುದಿಲ್ಲ. ಹಬ್ಬದ ದಿನವನ್ನು ನಾನು ಹಾಗೂ ನಮ್ಮ ತಂಡದ ಸದಸ್ಯರು ಎದುರು ನೋಡುತ್ತಿದ್ದೇವೆ ಎನ್ನುತ್ತಾರೆ ಕೊಪ್ಪಳ ತಾಲ್ಲೂಕಿನ ಬೆಟಗೇರಿ ಗ್ರಾಮದ ವಿನಾಯಕ ಗೆಳೆಯರ ಬಳಗದ ಸದಸ್ಯ ಯಶವಂತ ಮಳಕಪ್ಪ.

‘ಆರ್ಥಿಕ ವಿಘ್ನ ಕಳೆಯಲಿ’
ಕೊಪ್ಪಳ:
ಹಬ್ಬಕ್ಕೂ ನಾಲ್ಕೈದು ತಿಂಗಳು ಮೊದಲೇ ಮೂರ್ತಿ ತಯಾರಿಕೆ ಮಾಡಲಾಗುತ್ತದೆ. ಎರಡು ವರ್ಷಗಳ ಹಿಂದೆ 10 ಅಡಿಗಿಂತಲೂ ದೊಡ್ಡ ಮೂರ್ತಿಗಳನ್ನು ಮಾಡುತ್ತಿದ್ದೆ. ಈಗ ಬೇಡಿಕೆ ಕಡಿಮೆಯಾಗಿದೆ. ಈ ವರ್ಷ ಗರಿಷ್ಠ ಐದು ಅಡಿ ಮಾತ್ರ ಮಾಡಿದ್ದೇನೆ ಎಂದು ಕೊಪ್ಪಳದ ಗಣಪತಿ ತಯಾರಕನಿಂಗಪ್ಪ ಕುಂಬಾರ ಹೇಳಿದರು.

‘ವರ್ಷಪೂರ್ತಿ ನಡೆಯುವ ವ್ಯಾಪಾರದ ತೂಕವೇ ಒಂದಾದರೆ, ಗಣಪತಿ ಹಬ್ಬದ ಸಮಯದಲ್ಲಿ ನಡೆಯುವ ವ್ಯಾಪಾರವೇ ಒಂದು ತೂಕ. ಹೀಗಾಗಿ ಪ್ರತಿ ವರ್ಷ ಈ ಹಬ್ಬ ಬಂದಾಗ ಗಣೇಶ ಆರ್ಥಿಕ ವಿಘ್ನ ದೂರ ಮಾಡುತ್ತಾನೆ ಎಂದು ನಂಬಿಕೊಂಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT