ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿಕೋರರ ಇತಿಹಾಸ ಕಲಿಸಿದ ಹಿಂದಿನ ಸರ್ಕಾರ

‘ಅಮೃತ ಭಾರತಿಗೆ ಕನ್ನಡದಾರತಿ’ ಅಭಿಯಾನದಲ್ಲಿ ಶಿಕ್ಷಣ ಸಚಿವ ನಾಗೇಶ್ ಹೇಳಿಕೆ
Last Updated 29 ಮೇ 2022, 4:53 IST
ಅಕ್ಷರ ಗಾತ್ರ

ಕೊಪ್ಪಳ: ‘ಸ್ವಾಭಿಮಾನ, ರಾಷ್ಟ್ರಪ್ರೇಮ ಜಾಗೃತಗೊಳಿಸಬೇಕಾದ ಹಿಂದಿನ ಸರ್ಕಾರಗಳು ದಾಳಿಕೋರರ ಇತಿಹಾಸ ವೈಭವೀಕರಿಸಿ ಭಾರತೀಯ ಸಮಾಜ ಸದಾ ಕೀಳರಿಮೆಯಿಂದ ಬಳಲುವಂತೆ ಮಾಡಿದ್ದರು’ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ನಗರದ ಸಾಹಿತ್ಯ ಭವನದಲ್ಲಿಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ‘ಅಮೃತ ಭಾರತಿಗೆ ಕನ್ನಡದಾರತಿ’ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಕಾರಣ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಹೋರಾಟದ ಘಳಿಗೆಗಳನ್ನು ಸ್ಮರಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಕನ್ನಡದ ಹೋರಾಟಗಾರರನ್ನು, ಅವರ ತ್ಯಾಗ, ಬಲಿದಾನಗಳನ್ನು ಕೂಡ ಸ್ಮರಿಸಬಹುದು ಎಂದರು.

ವ್ಯಾಪಾರಕ್ಕಾಗಿ ಬಂದ ಟರ್ಕರು, ಮಂಗೋಲಿಯನ್, ಮೊಘಲರು,ಪೋರ್ಚುಗೀಸರು, ಫ್ರೆಂಚರು, ಬ್ರಿಟಿಷರಿಗೆ ದೇಶ ಕಟ್ಟುವ ಯಾವ ದೃಷ್ಟಿಯೂ ಇರಲಿಲ್ಲ. ಲಾಭ, ದುರಾಡಳಿತ ಮಾಡಿಕೊಂಡೇ ಬಂದಿದ್ದರು. ಅಂತಹ ದ್ರೋಹಿಗಳ ವಿರುದ್ಧ ಸದಾ ಸಂಘರ್ಷ ನಡೆಸಿದ ಕಿತ್ತೂರು ಚನ್ನಮ್ಮ, ಹಲಗಲಿ ಬೇಡರು, ಅಬ್ಬಕ್ಕ, ದೋಂಡಿಯಾ ವಾಘ, ಉಳಿದ ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಮರೆತಿದ್ದೇವೆ ಎಂದರು.

ಅಹಿಂಸೆಯಿಂದ ಸ್ವಾತಂತ್ರ್ಯ ಬಂದಿದೆ ಎಂದು ಹೇಗೆ ನಮ್ಮನ್ನು ನಂಬಿಸಿದ್ದಾರೋ ಹಾಗೆಯೇ ದೇಶಕ್ಕಾಗಿ ಪ್ರಾಣ ಅರ್ಪಣೆ ಮಾಡಿದ ಅನೇಕರನ್ನು ನಾವು ಮರೆತಿದ್ದೇವೆ.ಆಡಳಿತ ಮತ್ತು ಜೀವನ ಶೈಲಿಯ ನಡುವಿನ ವ್ಯತ್ಯಾಸ ಅರಿಯದ ನಮ್ಮ ಜನ ವಿದೇಶಿಗರ ತಂತ್ರಗಾರಿಕೆಗೆ, ಮೋಸಕ್ಕೆ ಒಳಗಾಗಿ ಬ್ರಿಟಿಷ್ ಆಡಳಿತಕ್ಕೆ ದಾರಿ ಮಾಡಿಕೊಟ್ಟರು. ಇದರಿಂದ ನೂರಾರು ವರ್ಷಗಳ ಕಾಲ ನಮ್ಮ ನಾಡಿನ ಅನೇಕ ರಾಜರು, ಹೋರಾಟಗಾರರು, ನಾಯಕರು ಸತತ ಹೋರಾಟ ಮಾಡಿ ತಮ್ಮ ಪ್ರಾಣಗಳನ್ನು ಬಲಿ ಕೊಟ್ಟು ನಮಗೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟರು ಎಂದು ಅವರು ಹೇಳಿದರು.

ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಮಾತನಾಡಿ,‘ನಾವೆಲ್ಲರೂ ಆ.15 ರಂದು ಮಾತ್ರ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಮಾತನಾಡುತ್ತೇವೆ. ಅದು ಒಂದು ದಿನದ ಆಚರಣೆಗೆ ಸೀಮಿತವಾಗದೆ, ಪ್ರತಿನಿತ್ಯ ಸ್ಮರಿಸಬೇಕು’ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸಂಸದ ಸಂಗಣ್ಣ ಕರಡಿ ಅವರು ಮಾತನಾಡಿ,‘ಇತಿಹಾಸ ತಿಳಿಯದವನು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂಬ ಮಾತಿದೆ’ ಎಂದರು.

ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ ಸಂಕಲ್ಪ ಸ್ವೀಕಾರ ಬೋಧಿಸಿದರು. ಕಿನ್ನಾಳನ ಕಲಾವಿದರಾದ ಬಾಷಾ ಕಿನ್ನಾಳ ಹಾಗೂ ಸಂಗಡಿಗರು ನಾಡಗೀತೆ ಹಾಗೂ ರಾಷ್ಟ್ರಗೀತೆ ಕಾರ್ಯಕ್ರಮ ನಡೆಸಿಕೊಟ್ಟರು. ಸಿ.ವಿ.ಜಡಿಯವರ ನಿರೂಪಿಸಿದರು.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಸಿಇಒ ಬಿ ಫೌಜಿಯಾ ತರನ್ನುಮ್, ಎಸ್ಪಿ ಅರುಣಾಂಗ್ಷು ಗಿರಿ,ಎಸಿ ಬಸವಣಪ್ಪ ಕಲಶೆಟ್ಟಿ, ತಹಶೀಲ್ದಾರ್ ವಿಠ್ಠಲ್ ಚೌಗಲೆ,ಡಿಡಿಪಿಐ ಮುತ್ತರೆಡ್ಡಿ ರಡ್ಡೇರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT