ಮಂಗಳವಾರ, ಮಾರ್ಚ್ 28, 2023
33 °C
ಸಮಸ್ಯೆ ಬಗೆಹರಿಸುವಲ್ಲಿ ಶಾಸಕ ಬಯ್ಯಾಪುರ ವಿಫಲ; ಆರೋಪ

ಕಾಂಗ್ರೆಸ್‌ಗೆ ಭಾರತಿ ನೀರಗೇರಿ ರಾಜೀನಾಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಇಲ್ಲಿಯ ಬ್ಲಾಕ್‌ ಕಾಂಗ್ರೆಸ್‌ ಘಟಕದಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲದಂತಾಗಿದೆ. ಇದರಿಂದ ಬೇಸತ್ತು ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಭಾರತಿ ನೀರಗೇರಿ ಹೇಳಿದರು.

ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಅವರು, ಉನ್ನತ ವಿಚಾರಗಳನ್ನು ಹೊಂದಿರುವವರಿಗೆ ಈ ಘಟಕದಲ್ಲಿ ಬೆಲೆ ಇಲ್ಲ ಬದಲಾಗಿ ಬೌದ್ಧಿಕ ದಿವಾಳಿತನಕ್ಕೆ ಮಣೆ ಹಾಕಲಾಗುತ್ತಿದೆ. ಪಕ್ಷದ ಮುಖಂಡರ ವೈಫಲ್ಯದಿಂದ ಕಾಂಗ್ರೆಸ್‌ ಸಂಘಟನೆಯಿಂದ ದೂರವಾಗುತ್ತಿದೆ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಸೇರಿದಂತೆ ಪಕ್ಷದ ಪ್ರಮುಖರ ವಿರುದ್ಧದ ಅಸಮಾಧಾನ ಹೊರಹಾಕಿದರು.

ಕಳೆದ ಮೂರು ವರ್ಷದಿಂದಲೂ ತಮ್ಮನ್ನು ಕಡೆಗಣಿಸುತ್ತ ಬಂದಿದ್ದಲ್ಲದೆ ಪಕ್ಷದಲ್ಲಿ ತುಳಿಯುವ ಪ್ರಯತ್ನ ನಡೆಯುತ್ತ ಬಂದಿದೆ. ಶಾಸಕರಾದಿಯಾಗಿ ಎಲ್ಲರೂ ಕೇವಲ ಒಬ್ಬರ ಮಾತಿಗೆ ಮಾತ್ರ ಎಲ್ಲಿಲ್ಲದ ಆಸಕ್ತಿ ತೋರುತ್ತಿದ್ದರು ಎಂದು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ನಾಯಕ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು. ಪಕ್ಷ ತಮಗೆ ಉನ್ನತ ಸ್ಥಾನ ನೀಡಿದ್ದರೂ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವುದಕ್ಕೆ ಸ್ಥಳೀಯ ಮಟ್ಟದಲ್ಲಿ ಇಲ್ಲಿಯ ಮುಖಂಡರು ಸಹಕರಿಸಲಿಲ್ಲ ಎಂದು ಹರಿಹಾಯ್ದರು.

ಸಂಘಟನೆಗೆ ಆಗುತ್ತಿರುವ ತೊಡಕುಗಳ ಬಗ್ಗೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ನಾಯಕ ಅವರ ಬಳಿ ಪ್ರಸ್ತಾಪಿಸಬಹುದಿತ್ತಲ್ಲವೆ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಮಸ್ಯೆ ಆಗಿರುವುದೇ ಅವರಿಂದ, ತಾಲ್ಲೂಕು ಮಹಿಳಾ ಘಟಕ ಜಿಲ್ಲಾ ಅಧ್ಯಕ್ಷೆಯ ಕೈಗೊಂಬೆಯಾಗಿದೆ, ಶಾಸಕರು ಇಲ್ಲದಿದ್ದರೂ ಅವರ ಮನೆಗೆ ತಮ್ಮನ್ನು, ಇತರೆ ಸದಸ್ಯೆಯರನ್ನು ಕರೆಯಿಸಿಕೊಂಡ ಜಿಲ್ಲಾ ಅಧ್ಯಕ್ಷೆ ಅವರ ಮುಂದೆ ತಮ್ಮೊಂದಿಗೆ ಜಗಳ ತೆಗೆದು ಅವಮಾನಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡಿದರು. ಪಕ್ಷದ ಜಿಲ್ಲೆ ಮತ್ತು ತಾಲ್ಲೂಕು ಘಟಕದಲ್ಲಿ ನಡೆಯುವ ಸಭೆ, ಸಮಾರಂಭ, ಸೈಕಲ್‌ ಜಾಥಾ ಇತರೆ ಕಾರ್ಯಕ್ರಮಗಳಿಗೆ ಎಲ್ಲ ಮಹಿಳೆಯರಿಗೂ ಮಾಹಿತಿ ಹೋಗುತ್ತಿತ್ತು. ಆದರೆ ತಮ್ಮನ್ನು ಉದ್ದೇಶಪೂರ್ವಕವಾಗಿಯೇ ದೂರ ಇಡಲಾಯಿತು ಎಂದು ದೂರಿದರು.

ಪಕ್ಷಕ್ಕೆ ರಾಜೀನಾಮೆ ನೀಡಿದ್ದರೂ ಸದ್ಯ ಬೇರೆ ಯಾವುದೇ ಪಕ್ಷ ಸೇರುವ ಇಚ್ಛೆ ಇಲ್ಲ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು