ಶುಕ್ರವಾರ, ಡಿಸೆಂಬರ್ 3, 2021
26 °C
ಜೆಡಿಎಸ್, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ

ಬಾಲಿಶ ಹೇಳಿಕೆಯಿಂದ ಮೋದಿ ವರ್ಚಸ್ಸು ಕುಗ್ಗದು: ಬಿ.ವೈ.ವಿಜಯೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಜಿದ್ದಿಗೆ ಬಿದ್ದವರಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜೆಡಿಎಸ್‌, ಕಾಂಗ್ರೆಸ್ ಬಾಲಿಶ ಟೀಕೆಗಳನ್ನು ಮಾಡುತ್ತಿರುವುದರಿಂದ ಅವರ ವರ್ಚಸ್ಸು ಕುಗ್ಗುವುದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಸಿಂದಗಿ ಉಪಚುನಾವಣೆ ಪ್ರಚಾರಕ್ಕೆ ತೆರಳುವ ಮಾರ್ಗ ಮಧ್ಯೆ ಗುರುವಾರ ನಗರದ ಶ್ರೀ ಗವಿಮಠಕ್ಕೆ ಭೇಟಿ ನೀಡಿ, ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಷ್ಟ್ರ ಸೇವೆ ಮಾಡುತ್ತಿರುವ ಆರ್.ಎಸ್.ಎಸ್. ಸಂಘಟನೆ ಕುರಿತು  ಮಾತನಾಡುವವರಿಗೆ ಯೋಗ್ಯತೆ ಇಲ್ಲ. ಅಲ್ಪಸಂಖ್ಯಾತರನ್ನು ಓಲೈಕೆ ಮಾಡಬೇಕು ಎಂಬ ಒಂದೇ ಕಾರಣಕ್ಕೆ ತಲೆಬುಡವಿಲ್ಲದ ಇವರ  ಟೀಕೆಗೆ ನಮ್ಮ ಪಕ್ಷ ಸರಿಯಾಗಿ ಉತ್ತರವನ್ನು ನೀಡಿದೆ ಎಂದು ಸಮರ್ಥಿಸಿಕೊಂಡರು.

ತಮ್ಮ ಆಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್‌ನವರಿಗೆ ಯಾವುದೇ ಭವಿಷ್ಯವಿಲ್ಲ. ಹತಾಶರಾಗಿ ಪ್ರಧಾನಿ ಮೋದಿಯವರ ಬಗ್ಗೆ ಹಗುರವಾಗಿ ಹೇಳಿಕೆ ನೀಡುತ್ತಿದ್ದು, ಇದನ್ನು ದೇಶದ ಜನತೆ ಗಮನಿಸುತ್ತಿದ್ದಾರೆ. ರಾಷ್ಟ್ರಕ್ಕಾಗಿ ಸಮರ್ಪಿತಗೊಂಡಿರುವ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಿ ಜನರ ದಿಕ್ಕು ತಪ್ಪಿಸಲು ತೀರಾ ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಉಪ ಚುನಾವಣೆ ಪ್ರಚಾರ ಸಂದರ್ಭದಲ್ಲಿ ತೀರಾ ವೈಯಕ್ತಿಕವಾಗಿ ಮಾತನಾಡುತ್ತಿರುವುದು ನಾವಲ್ಲ. ಅದು ಕಾಂಗ್ರೆಸ್‌. ಜನರ ದಿಕ್ಕನ್ನು ಬೇರೆಡೆ ಸೆಳೆಯಲು ಅಪಪ್ರಚಾರ ಮಾಡುತ್ತಿರುವ ಇವರಿಗೆ ಜನರು ತಕ್ಕ ಉತ್ತರ ನೀಡಲಿದ್ದಾರೆ. ಪ್ರಧಾನಿ ಮೋದಿ ಹಾಗೂ ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳನ್ನು ಕಾರ್ಯಕರ್ತರು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ರಾಜಕೀಯವಾಗಿ ಮಾಜಿ ಸಿಎಂ ಬಿಎಸ್‌ವೈ ಅವರನ್ನು ಮುಗಿಸಲು ಅಥವಾ ಯಡಿಯೂರಪ್ಪ ಕುಟುಂಬವನ್ನು ಗುರಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಮಾಧ್ಯಮದವರು ಯಾಕೆ ಆ ರೀತಿ ಭಾವಿಸಿಕೊಳ್ಳಬೇಕು. ನಮಗೆ ಜನರ ಶಕ್ತಿ, ಬೆಂಬಲ ಇದೆ. ಜನರ ಮತ್ತು ಈ ನಾಡಿನ ಸೇವೆ ಮಾಡುವುದೇ ನಮ್ಮ ಧ್ಯೇಯವಾಗಿದೆ. ಪಕ್ಷಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ ಎಂದರು.

‘ಯತ್ನಾಳ ಹಾಗೂ ನಮ್ಮ ಮಧ್ಯೆ ಯಾವುದೇ ಗೊಂದಲ ವಿಲ್ಲ. ನಮಗೆ ಪಕ್ಷ ಹಾಗೂ ಜನರ ಹಿತ ಮುಖ್ಯವಾಗಿದ್ದು, ಈ ಎರಡೂ ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸುವುದೇ ನಮ್ಮ ಗುರಿ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನು ಬಹುಮತದಿಂದ ಅಧಿಕಾರಕ್ಕೆ ತರುವುದೇ ಯಡಿಯೂರಪ್ಪನವರ ಸಂಕಲ್ಪವಾಗಿದೆ‘ ಎಂದು ಸ್ಪಷ್ಟಪಡಿಸಿದರು.

ಕನಕಗಿರಿ ಶಾಸಕ ಬಸವರಾಜ ದಡೇಸೂಗರ್, ತಮ್ಮೇಶಗೌಡ, ಮುಖಂಡರಾದ ಅಮರೇಶ ಕರಡಿ, ಸಿ.ವಿ.ಚಂದ್ರಶೇಖರ್, ಶರಣು ತಳ್ಳಿಕೇರಿ, ಮಹಾಂತೇಶ ಪಾಟೀಲ ಮೈನಳ್ಳಿ, ನವೀನ್ ಗುಳಗಣ್ಣನವರ್, ಗವಿಸಿದ್ದಪ್ಪ ಕರಡಿ, ಫಕೀರಸ್ವಾಮಿ ಕರ್ಕಿಹಳ್ಳಿ, ಗವಿ ಜಂತಕಲ್ಲ ಸೇರಿದಂತೆ ಇನ್ನಿತರರು ಇದ್ದರು.

‘ಮೋದಿ ಟೀಕಿಸಿದರೆ ದೊಡ್ಡವರಾಗಲ್ಲ’

ಕುಷ್ಟಗಿ: 'ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಮನ್ನಣೆ ಗಳಿಸಿರುವ ನಾಯಕರಾಗಿದ್ದಾರೆ. ಅವರ ವಿರುದ್ಧ ಮಾತನಾಡಿದರೇನೆ ದೊಡ್ಡವರಾಗುತ್ತೇವೆ ಎಂಬ ಭ್ರಮೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಪಕ್ಷಕ್ಕಿದೆ‘ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾಂಗ್ರೆಸ್‌ ಮುಖಂಡರ ವಿರುದ್ಧ ಹರಿಹಾಯ್ದರು.

‘ಸಿಂಧಗಿ ಉಪ ಚುನಾವಣೆ ಪ್ರಚಾರಕ್ಕೆ ತೆರಳುವ ಮಾರ್ಗಮಧ್ಯೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಆಡಳಿತ ಪಕ್ಷದ ಲೋಪದೋಷಗಳನ್ನು ಎತ್ತಿತೋರಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ಪಾತ್ರ ಅತ್ಯಂತ ಜವಾಬ್ದಾರಿಯುತವಾದುದು. ಆದರೆ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ ಪಕ್ಷದವರಿಗೆ ಕೇವಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವುದರಲ್ಲಿಯೇ ಸಮಯ ವ್ಯರ್ಥ ಮಾಡುತ್ತಿದ್ದಾರೆ‘ ಎಂದು ವ್ಯಂಗ್ಯವಾಡಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಸರ್ಕಾರ ಮತ್ತು ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಯಾರಲ್ಲಿಯೂ ಅಸಮಾಧಾನವಿಲ್ಲ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಮೂಲಕ ಸಮನ್ವಯ ಸಾಧಿಸುವಲ್ಲಿ ಬೊಮ್ಮಾಯಿ ಯಶಸ್ವಿಯಾಗುತ್ತಿದ್ದಾರೆ‘ ಎಂದರು.

‘ದೇಶದೆಲ್ಲೆಡೆ ಮೂಲೆಗುಂಪಾಗಿರುವ ಕಾಂಗ್ರೆಸ್‌ ಪಕ್ಷ ಈಗಾಗಲೇ ರಾಜ್ಯದಲ್ಲಿಯೂ ಆಂತರಿಕ ಕಚ್ಚಾಟದಿಂದ ಎರಡು ಹೋಳಾಗಿದ್ದು ಬಹಿರಂಗಕ್ಕೆ ಬರುವುದಷ್ಟೇ ಬಾಕಿ ಉಳಿದಿದೆ. ಆ ಪಕ್ಷಕ್ಕೆ ಹೇಳಿಕೊಳ್ಳುವುದಕ್ಕೆ ಯಾವುದೇ ಸಾಧನೆಗಳು ಇಲ್ಲ ಎಂದ ಅವರು, ಈ ಬಾರಿ ಹಾನಗಲ್‌ ಮತ್ತು ಸಿಂಧಗಿ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ‘ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿ.ವೈ.ವಿಜಯೇಂದ್ರ ಅವರನ್ನು ಸನ್ಮಾನಿಸಲಾಯಿತು.

ಪಕ್ಷದ ಮುಖಂಡರಾದ ಅಮರೇಶ ಕರಡಿ, ನವೀನ ಗುಳಗಣ್ಣನವರ, ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಹಳ್ಳೂರು, ಯುವ ಮೋರ್ಚಾ ಅಧ್ಯಕ್ಷ ಉಮೇಶಗೌಡ ಯಾದವ, ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ ಸೇರಿದಂತೆ ಪಕ್ಷದ ಅನೇಕ ಪ್ರಮುಖರು, ಕಾರ್ಯಕರ್ತರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು