ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ‘ಪುಸ್ತಕಗಳು ಶಾಶ್ವತ ದಾಖಲೆಗಳು’

ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ ಅಭಿಮತ
Last Updated 26 ಮೇ 2020, 17:25 IST
ಅಕ್ಷರ ಗಾತ್ರ

ಕೊಪ್ಪಳ: ಪುಸ್ತಕಗಳು ಶಾಶ್ವತ ದಾಖಲೆಗಳು. ಆದ್ದರಿಂದ ಅವುಗಳನ್ನು ಜಾಗ್ರತೆಯಿಂದ ರಚಿಸಬೇಕು ಎಂದು ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ ಅಭಿಪ್ರಾಯಪಟ್ಟರು.

ನಗರದ ಪದಕಿ ಟ್ಯೂಷನ್‌ ಹಾಲ್‌ನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಸಾಹಿತಿ ಜಿ.ಎಸ್‌.ಗೋನಾಳರ `ಅಂದು ವಿಮೋಚನೆ-ಇಂದು ವಿವೇಚನೆ' ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಕನ್ನಡದ ಅಸ್ಮಿತೆ ಇರುವ ರಾಜ್ಯದ ಅತ್ಯಂತ ಪ್ರತಿಷ್ಠಿತ ಭಾಗ. ಏಕೀಕರಣದ ನಂತರ ಇಲ್ಲಿನ ರಾಜಕೀಯ ನಾಯಕರು ಹಾಗೂ ಈ ಭಾಗ ಇಲ್ಲಿಯವರೆಗೂ ಹಿಂದುಳಿದುದರ ಬಗೆಗೂ ಸಹ ಮಾರ್ಮಿಕ ಮಾಹಿತಿ ಈ ಪುಸ್ತಕದಲ್ಲಿದೆ. ಕೋಟೆ, ಶಾಸನಗಳು ಹಾಗೂ ಪ್ರವಾಸಿ ತಾಣಗಳ ರಕ್ಷಣೆ ಬಗ್ಗೆ ಸಮಗ್ರ ಮಾಹಿತಿಯೂ ಇದೆ. ಈ ಭಾಗದ ಹೋರಾಟಗಾರರನ್ನು ಸ್ಮರಿಸಿರುವುದು ಗಮನಾರ್ಹ ಎಂದರು.

ದೇಶದ ಅನೇಕ ರಾಜಮನೆತನಗಳು, ಜನಾಂಗಗಳ ಆಕ್ರಮಣ ನಡೆದಿದೆ. ಅದರಂತೆ ಇಲ್ಲಿಯ ಸಂಸ್ಕೃತಿ, ಆಚಾರ, ವಿಚಾರಗಳು ಬದಲಾಗುತ್ತ ಸಾಗಿದೆ. ಕಾಲಘಟ್ಟದ ಆಧಾರದಲ್ಲಿ ಅವುಗಳನ್ನು ಇತಿಹಾಸಕಾರರು ಪ್ರಮುಖವಾಗಿ 11ರಿಂದ 17ನೇ ಶತಮಾನದವರೆಗೆ ಒಂದು ಸಂಸ್ಕೃತಿ, 17 ರಿಂದ 21ನೇ ಶತಮಾನದವರೆಗೆ ಮತ್ತೊಂದು ಸಂಸ್ಕೃತಿಯಾಗಿ ಪರಿಗಣಿಸಿದ್ದಾರೆ ಎಂದು ಹೇಳಿದರು.

ಶೇ 12ರಷ್ಟು ಮುಸ್ಲಿಮರಿದ್ದ ಈ ಪ್ರದೇಶದಲ್ಲಿ ಉರ್ದು ಆಡಳಿತ ಭಾಷೆಯಾಗಿತ್ತು. ಕನ್ನಡ ಭಾಷೆಗೆ ಹೆಚ್ಚಿನ ಮಾನ್ಯತೆ ಇರಲಿಲ್ಲ. ಇಲ್ಲಿನ ಬಹುತೇಕ ಶಾಲೆಗಳು ಉರ್ದು ಕಲಿಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದವು. ಇದು ಏಕೀಕರಣಕ್ಕಾಗಿ ಹೋರಾಟ ಮಾಡುವ ಅನಿವಾರ್ಯತೆ ಹೆಚ್ಚಿಸಿತು. ಗೋನಾಳರು ಈ ಪುಸ್ತಕಕ್ಕಾಗಿ ಬಹಳ ಕಷ್ಟಪಟ್ಟು ಮಾಹಿತಿ ಸಂಗ್ರಹಿಸಿದ್ದಾರೆ ಎಂದರು.

ಪತ್ರಕರ್ತ ಸಂತೋಷ್‌ ದೇಶಪಾಂಡೆ ಮಾತನಾಡಿ, 371 (ಜೆ) ತಿದ್ದುಪಡಿ ಕಾಯ್ದೆ ಜಾರಿಗೆ ಒತ್ತಾಯಿಸಿ ಕಲಬುರ್ಗಿ ಸೇರಿ ಈ ಭಾಗದ ಇತರ ಕಡೆಗಳಲ್ಲಿ ಹೋರಾಟ ಆರಂಭಿಸಲಾಯಿತು. ಕೆಲ ಯುವಕರು ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ ಕೊಪ್ಪಳದಲ್ಲಿಯೂ ಹೋರಾಟ ಆರಂಭಿಸಿದರು. ಗವಿಸಿದ್ಧೇಶ್ವರ ಸ್ವಾಮೀಜಿ ಅಂದಿನ ಹೋರಾಟಕ್ಕೆ ಚಾಲನೆ ನೀಡಿದ್ದರು. ಆ ಬಳಿಕ ದೆಹಲಿಯಲ್ಲಿ ವೈಜನಾಥ್‌ ಪಾಟೀಲರ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಇಲ್ಲಿಂದ ಸುಮಾರು 800 ಜನ ಭಾಗವಹಿಸಿದ್ದೆವು ಎಂದು ಮೆಲುಕು ಹಾಕಿದರು.

ವೈಜನಾಥ್‌ ಪಾಟೀಲರ ಹೋರಾಟದ ನೆನಪಿಗಾಗಿ ಈ ಭಾಗದ ಎಲ್ಲ ಜಿಲ್ಲೆಗಳಲ್ಲೂ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಬೇಕು ಎಂದರು.

ಉಪನ್ಯಾಸಕಿ ಭಾಗ್ಯಜ್ಯೋತಿಮಾತನಾಡಿದರು. ಸಾಹಿತಿ ಶರಣೇಗೌಡ ಯರದೊಡ್ಡಿ ಅವರ 'ಪ್ರೀತಿಯು ನದಿಯಂತೆ' ಗದ್ಯ, ಪದ್ಯಗಳ ಸಂಗ್ರಹ ಕೃತಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಉಪನ್ಯಾಸಕ ವಿಜಯಕುಮಾರ ಪದಕಿ, ಪತ್ರಕರ್ತ ಸಾಧಿಕ್ ಅಲಿ, ಹರೀಶ್, ಎಚ್.ಎನ್.ದೊಡ್ಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT