ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅನಾಥನ ಬಾಳಲ್ಲಿ ‘ಕಲ್ಯಾಣ’ದ ಸಂಭ್ರಮ

ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಟ್ಟ ಮಹಿಳೆಯರು, ಮೂರು ವರ್ಷಗಳ ಪ್ರೀತಿಗೆ ವಿವಾಹದ ಮುದ್ರೆ
Published 8 ಜೂನ್ 2024, 6:30 IST
Last Updated 8 ಜೂನ್ 2024, 6:30 IST
ಅಕ್ಷರ ಗಾತ್ರ

ಕೊಪ್ಪಳ: ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಅವರು ಬದುಕಿನ ಬಂಡಿ ಸಾಗಿಸಲು ಬೇರೆ ಬೇರೆ ಕಡೆ ಕೆಲಸ ಮಾಡುತ್ತಿದ್ದಾರೆ. ವರನ ಅಪ್ಪ–ಅಮ್ಮ ಮೃತಪಟ್ಟು ನಾಲ್ಕು ವರ್ಷಗಳೇ ಕಳೆದಿವೆ. ನನ್ನ ಬದುಕಿಗೆ ಯಾರು ದಿಕ್ಕು ಎನ್ನುವ ಚಿಂತೆಯಲ್ಲಿದ್ದ ದೃಷ್ಟಿದೋಷ ಹೊಂದಿರುವ ಆ ಅನಾಥ ಯುವಕನಿಗೆ ಶುಕ್ರವಾರ ಮನೆಗೆ ಮಹಾಲಕ್ಷ್ಮಿಯನ್ನು ಬರಮಾಡಿಕೊಂಡ ಸಂಭ್ರಮ.

ಇದಕ್ಕೆ ವೇದಿಕೆಯಾಗಿದ್ದು ಭಾಗ್ಯನಗರದ ಇನ್ನರ್‌ ವೀಲ್‌ ಕ್ಲಬ್‌. ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಶಾಸ್ತ್ರೋಕ್ತವಾಗಿ ಹಾಗೂ ಅರ್ಥಪೂರ್ಣವಾಗಿ ನಡೆದ ಸರಳ ಮದುವೆಯಲ್ಲಿ ಕೂಡ್ಲಿಗಿ ತಾಲ್ಲೂಕಿನ ಅಂಜಿನಪ್ಪ ಎಂಬ ಯುವಕ ಬಳ್ಳಾರಿಯ ಕವಿತಾ ಜೊತೆ ದಾಂಪತ್ಯ ಬದುಕಿಗೆ ಕಾಲಿಟ್ಟರು. ಅಂಜಿನಪ್ಪ ಅವಿದ್ಯಾವಂತ. ಕವಿತಾ ಏಳನೇ ತರಗತಿ ತನಕ ಓದಿದ್ದು ಇವರ ಪ್ರೀತಿಗೆ ಮದುವೆಯ ಮುದ್ರೆ ಬೀಳಲು ಓದಿನ ಕೊರತೆ ಅಡ್ಡಿಯಾಗಲಿಲ್ಲ.

ಅಂಜಿನಪ್ಪ ಕೊಪ್ಪಳದಲ್ಲಿ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕವಿತಾ ಇಲ್ಲಿಯೇ ಖಾಸಗಿ ಶಾಲೆಯ ಉದ್ಯೋಗಿ. ಹಲವು ತಿಂಗಳುಗಳ ಹಿಂದೆ ಕವಿತಾ ಸಹೋದರ ತಮ್ಮ ತಂಗಿಯ ಫೋಟೊ ತೋರಿಸಿ ಮದುವೆಯಾಗುತ್ತೀಯಾ? ಎಂದು ಕೇಳಿದಾಗ ಅಂಜಿನಪ್ಪ ಒಪ್ಪಿಕೊಂಡಿದ್ದ. ಅಂಜಿನಪ್ಪನ ಬದುಕಿನ ಜೊತೆಯಾಗಲು ಕವಿತಾ ಕೂಡ ಸಮ್ಮತಿ ಸೂಚಿಸಿದ್ದಳು.

ಕವಿತಾ ಜೊತೆ ಅವರ ತಾಯಿಯಿದ್ದು ಕೊಪ್ಪಳದಲ್ಲಿ ವಾಸವಾಗಿದ್ದಾರೆ. ಮದುವೆಯಾಗದಿದ್ದರೂ ಒಂದೇ ಮನೆಯಲ್ಲಿ ವಾಸಿಸುವ ಬದುಕಿನ ಅನಿವಾರ್ಯತೆಯೂ ಈ ಜೋಡಿಗೆ ಇತ್ತು. ಅತ್ಯಂತ ಸರಳವಾಗಿಯಾದರೂ ಮದುವೆ ಮಾಡಿಕೊಳ್ಳಲು ಬೇಕಾಗುವಷ್ಟು ಹಣವೂ ಅವರ ಬಳಿ ಇರಲಿಲ್ಲ. ಈ ವಿಷಯವನ್ನು ಇಬ್ಬರು ಇನ್ನರ್‌ ವೀಲ್‌ ಕ್ಲಬ್‌ ಪ್ರಮುಖರ ಗಮನಕ್ಕೆ ತಂದಿದ್ದಾರೆ. ಆಗ ಕ್ಲಬ್‌ನ ಸದಸ್ಯರೆಲ್ಲರೂ ಸೇರಿ ಸಂಭ್ರಮದಿಂದ ಮದುವೆ ಮಾಡಿದ್ದಾರೆ.

ಅದರಂತೆ ಸಂಪ್ರದಾಯಬದ್ಧವಾಗಿ ಮದುವೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ನವದಂಪತಿ ಮೈಮೇಲೆ ಹೊಸ ಬಟ್ಟೆಗಳು ರಾರಾಜಿಸಿದವು. ಬಾಜಿ ಭಜಂತ್ರಿ ಸದ್ದು ಮಾಡಿದವು. ಕ್ಲಬ್‌ನ ಪದಾಧಿಕಾರಿಗಳು ಮತ್ತು ಒಂದಷ್ಟು ಸಮಾನಮನಸ್ಕ ಮಹಿಳೆಯರು ಹಾಗೂ ಪುರುಷರು ನವದಂಪತಿಗೆ ಹಾರೈಸಿದರು. ನವದಂಪತಿ ಕೆಲಸ ಮಾಡುವ ಹೋಟೆಲ್‌ ಮಾಲೀಕರೂ ಬಂದು ಶುಭಕೋರಿದರು.

ಕೈ ತುಂಬಾ ಉಡುಗೊರೆ ನೀಡಿ ತಮ್ಮ ಕುಟುಂಬ ಸದಸ್ಯರ ಮದುವೆ ಸಮಾರಂಭವೇನೊ ಎನ್ನುವಂತೆ ಖುಷಿ ಪಟ್ಟರು. ಎಲ್ಲರೂ ಸೇರಿ ತರಹೇವಾರಿ ತಿನಿಸುಗಳ ಊಟ ಸವಿದರು.

‘ಹೇಗಾದರೂ ಆಗಲಿ ನಮಗೆ ಮದುವೆಯಾದರೆ ಸಾಕು ಎನ್ನುವ ದಯನೀಯ ಅಸಹಾಯಕ ಸ್ಥಿತಿಯಲ್ಲಿದ್ದೆವು. ಆದರೆ ಹಿರಿಯರೆಲ್ಲರೂ ಸೇರಿ ಸಂಭ್ರಮದಿಂದ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟರು. ಅವರೆಲ್ಲರ ಋಣವನ್ನು ಎಂದಿಗೂ ತೀರಿಸಲು ಆಗುವುದಿಲ್ಲ. ಈ ಸಡಗರ ಶಾಶ್ವತ. ನಮ್ಮ ಬದುಕಿನಲ್ಲಿಯೂ ಇಂಥದ್ದೊಂದು ಸುಂದರ ಗಳಿಗೆ ಬರುತ್ತದೆ ಅಂದುಕೊಂಡಿರಲಿಲ್ಲ’ ಎಂದು ಹೇಳುವಾಗ ಅಂಜಿನಪ್ಪ ಮತ್ತು ಕವಿತಾ ಅವರ ಕಣ್ಣಂಚಿನಲ್ಲಿ ಆನಂದಭಾಷ್ಪ ಸುರಿಯುತ್ತಿದ್ದವು.

ಹೊಸಬಟ್ಟೆ ಕೂಡ ಖರೀದಿಸಲು ಸಾಧ್ಯವಾಗದ ಬಡತನದ ಪರಿಸ್ಥಿತಿಯಲ್ಲಿದ್ದರು. ಆದ್ದರಿಂದ ನಮ್ಮ ಕ್ಲಬ್‌ ವತಿಯಿಂದ ಅರ್ಥಪೂರ್ಣವಾಗಿ ಮದುವೆ ಮಾಡಿದ್ದೇವೆ. ನಮಗೂ ಸಾರ್ಥಕತೆ ಭಾವವಿದೆ.

- ಸುವರ್ಣ ಘಂಟಿ ಇನ್ನರ್‌ ವೀಲ್‌ ಕ್ಲಬ್‌ ಕಾರ್ಯದರ್ಶಿ

ಅನಾಥರಿಗೆ ಮದುವೆ ಮಾಡಬೇಕು ಎನ್ನುವ ಸಂಕಲ್ಪ ಹಲವು ವರ್ಷಗಳಿಂದ ಇತ್ತು. ಅದು ಈಗ ಈಡೇರಿದೆ. ಎರಡ್ಮೂರು ದಿನಗಳಲ್ಲಿಯೇ ಎಲ್ಲ ತಯಾರಿ ಮಾಡಿಕೊಂಡು ಮದುವೆ ಮಾಡಿಸಿದ್ದೇವೆ.

- ಶಾರದಾ ಪಾನಘಂಟಿ ಇನ್ನರ್‌ ವೀಲ್‌ ಕ್ಲಬ್‌ ಅಧ್ಯಕ್ಷೆ ಭಾಗ್ಯನಗರ

ಶಾರದಾ ಪಾನಘಂಟಿ ಅವರು ದೃಢವಾದ ನಿರ್ಧಾರ ತೆಗೆದುಕೊಂಡು ಅನಾಥ ಹಾಗೂ ಅಂಗವಿಕಲನ ಬದುಕಿಗೆ ಜೋಡಿ ಮಾಡಿದ್ದಾರೆ. ಅವರ ಶ್ರಮವನ್ನು ಕ್ಲಬ್‌ ಗೌರವಿಸುತ್ತದೆ.

-ಡಾ. ಪಾರ್ವತಿ ಪಲೋಟಿ ಕ್ಲಬ್‌ನ ಜಿಲ್ಲಾ ಸಂಪಾದಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT