ಕನಕಗಿರಿ: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಬೂದಿ ಮುಚ್ಚಿದ ಕೆಂಡದಂತೆ ಇದ್ದ ಬಣ ರಾಜಕೀಯ ಕಾಂಗ್ರೆಸ್‌ನಲ್ಲಿ ವೇಗ ಪಡೆದುಕೊಂಡಿದೆ.
2021ರಲ್ಲಿ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 17 ಸ್ಥಾನಗಳ ಪೈಕಿ 5 ಬಿಜೆಪಿ ಹಾಗೂ
12 ಸ್ಥಾನಗಳು ಕಾಂಗ್ರೆಸ್ ಪಾಲಾಗಿದ್ದವು. ಪಟ್ಟಣ ಪಂಚಾಯಿತಿಯ ಚುನಾವಣೆ ನಡೆದು ಮೂರು ವರ್ಷ ಸಮೀಪಿಸುತ್ತಿದ್ದರೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಘೋಷಣೆ ಆಗದ ಪರಿಣಾಮ ಕೆಲ ಆಕಾಂಕ್ಷಿಗಳು ಹತಾಶೆಗೊಂಡಿದ್ದರು. ಇದೀಗ ಮೀಸಲಾತಿ ಪ್ರಕಟಣೆಯಿಂದ ಕ್ರಿಯಾಶೀಲರಾಗಿ ಅಧ್ಯಕ್ಷ ಗಾದಿಗೆ ಪೈಪೋಟಿ ನಡೆಸುತ್ತಿದ್ದಾರೆ. ಸದಸ್ಯರಿಗಿಂತ ಅವರ ಪತಿರಾಯರು ಮುಂಚೂಣಿಯಲ್ಲಿದ್ದಾರೆ.
ಅಧ್ಯಕ್ಷ ಸ್ಥಾನ ಬಿಸಿಎಂ ಮಹಿಳೆಗೆ ಮೀಸಲು ಬಂದಿದ್ದು ನಾಲ್ಕು ಜನ ತೀವ್ರ ಪೈಪೋಟಿ ನಡೆಸಿದ್ದಾರೆ, ಉಪಾಧ್ಯಕ್ಷ ಸ್ಥಾನ ಎಸ್‌ಟಿ ಗೆಮೀಸಲಾಗಿದ್ದು ಈ ಮೀಸಲಾತಿಯಲ್ಲಿ ಕಾಂಗ್ರೆಸ್‌ನ ಕಂಠಿರಂಗ ನಾಯಕ ಅವರೊಬ್ಬರೆ ಇರುವ ಕಾರಣ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಕನಕಗಿರಿ ಉತ್ಸವದಲ್ಲಿ ಕೈಗೊಂಡ ಕೆಲ ಕಾಮಗಾರಿಗೆ ಸಂಬಂಧಿಸಿದಂತೆ ಕೆಲವರು ತೋರಿದ ಸರ್ವಾಧಿಕಾರಿ ಧೋರಣೆ ಗುಂಪಿನಲ್ಲಿ ಅಸಮಾಧಾನಕ್ಕೆ ಕಾರಣವಾಗಿ ಎರಡು ಬಣಗಳಾಗಿ ರೂಪುಗೊಂಡಿರುವುದು ಕಂಡು ಬಂದಿದೆ. ಎರಡೂ ಬಣದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರು ಇದ್ದಾರೆ.
ಏಳು ಜನ ಕಾಂಗ್ರೆಸ್ ಸದಸ್ಯರು ಮಂಗಳವಾರ ಸಚಿವ ತಂಗಡಗಿ ಅವರ ಕಾರಟಗಿ ನಿವಾಸದಲ್ಲಿ ಭೇಟಿಯಾಗಿ ಸೈನಾಜ್ ಬೇಗಂ ಮತ್ತು ಹುಸೇನಬೀ ಸಂತ್ರಾಸ್ ಅವರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ಪ್ರತಿಪಾದಿಸಿದ್ದಾರೆ. ನಿಯೋಗದಲ್ಲಿ ಹುಸೇನಬೀ ಚಳ್ಳಮರದ ಹಾಗೂ ತನುಶ್ರೀ, ಟಿ.ಜೆ.ರಾಮಚಂದ್ರ ಅವರನ್ನು ಬಿಟ್ಟು ಹೋಗಿರುವುದು ಮತ್ತಷ್ಟು ಭಿನ್ನಾಭಿಪ್ರಾಯಕ್ಕೆ ಪುಷ್ಟಿ ನೀಡಿದೆ.
ಟಿ.ಜೆ.ರಾಮಚಂದ್ರ ಅವರು ತಂಗಡಗಿ ಅವರ ಕಟ್ಟಾ ಬೆಂಬಲಿಗರಾಗಿದ್ದು ಅವರ ಪತ್ನಿ ತನುಶ್ರೀ ಅವರನ್ನು ಅಧ್ಯಕ್ಷ ಗಾದಿಗೆ ಕೂಡಿಸಲು ವಿವಿಧ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ತಂಗಡಗಿ ಅವರನ್ನು ಭೇಟಿ ಮಾಡಿ ಬಂದ ಪಟ್ಟಣ ಪಂಚಾಯಿತಿಯ ಕೆಲ ಸದಸ್ಯರೊಂದಿಗೆ ರಾಮಚಂದ್ರ ಅವರು ಮಾತನಾಡಿ ಬೆಂಬಲಿಸಲು ಕೋರಿದ್ದಾರೆ ಎನ್ನಲಾಗಿದೆ.
ಪಟ್ಟಣದ ಬಹುತೇಕ ವಾರ್ಡ್‌ನಲ್ಲಿ ಮುಸ್ಲಿಂರು ಗಣನೀಯ ಸಂಖ್ಯೆಯಲ್ಲಿದ್ದಾರೆ. ರಾಜಧರಖಾನ್ (ಚೇರ್ಮನ್ ಬಾಬು) ಅವರು 35 ವರ್ಷಗಳ ಹಿಂದೆ ಮಂಡಲ ಪಂಚಾಯಿತಿ ಅಧ್ಯಕ್ಷರಾದ ನಂತರ ಇಲ್ಲಿಯವರೆಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ಅಧ್ಯಕ್ಷ ಸ್ಥಾನದ ಹುದ್ದೆ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಸಮುದಾಯಕ್ಕೆ ಆದ್ಯತೆ ನೀಡುವ ವಿಶ್ವಾಸ ಇದೆ ಎಂದು ಸದಸ್ಯರೊಬ್ಬರು ಪ್ರತಿಕ್ರಿಯೆ ನೀಡಿದರು.
ಬಣ ರಾಜಕೀಯದಿಂದ ದೂರವಾಗಿದ್ದ ಸದಸ್ಯೆ ಹುಸೇನಬೀ ಅವರ ಮಗ ಅನ್ನು ಚಳ್ಳಮರದ ಅವರು ಸ್ಥಳೀಯ ಹಿರಿಯ ಮುಖಂಡರ ಬೆಂಬಲ ಇರುವ ತಂಡದಲ್ಲಿ ಮಂಗಳವಾರ ರಾತ್ರಿ ಗುರುತಿಸಿಕೊಂಡಿದ್ದಾರೆ. ಬಿಸಿಎ ವರ್ಗಕ್ಕೆ ಸೇರಿದ ಸದಸ್ಯರು ಬಿಜೆಪಿಯಲ್ಲಿ ಇಲ್ಲದ ಕಾರಣ ಸಂಖ್ಯಾಬಲಕ್ಕೆ ಬೆಂಬಲಿಸುವ ಅನಿವಾರ್ಯತೆ ಎದುರಾಗಿದೆ.
ಹಿಡಿತ ಸಾಧಿಸಲು ಬಿಗಿಪಟ್ಟು: ಹೊಸ ಅಧ್ಯಕ್ಷರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಕೆಲ ಕಾಂಗ್ರೆಸ್ ಮುಖಂಡರು ತಮ್ಮ ಅಭ್ಯರ್ಥಿ ಹೆಸರು ಪ್ರಸ್ತಾಪಿಸುವ ಸಾಧ್ಯತೆ ಇದೆ. ಆದರೆ ಸಚಿವ ಶಿವರಾಜ ತಂಗಡಗಿ ಅವರು ಪಟ್ಟಣ ಪಂಚಾಯಿತಿ ಸದಸ್ಯರ ಒಲವು ಮತ್ತು ಸ್ಥಳೀಯ ಮುಖಂಡರನ್ನು ಪರಿಗಣನೆಗೆ ತೆಗೆದುಕೊಂಡು ಅಭ್ಯರ್ಥಿ ಮಾಡಲಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ. ತಂತ್ರ-ಕುತಂತ್ರಕ್ಕಿಂತ ತಂಗಡಗಿ ಅವರ ತೀರ್ಮಾನವೇ ಅಂತಿಮವಾಗಿದ್ದು 30 ತಿಂಗಳ ಅಧಿಕಾರವನ್ನು ಸಚಿವರು ಇಬ್ಬರಿಗೆ ತಲಾ 15 ತಿಂಗಳ ಕಾಲ ಹಂಚಿಕೆ ಮಾಡಿದರೂ ಅಚ್ವರಿ ಪಡಬೇಕಿಲ್ಲ. ಆದರೆ ಯಾರಿಗೆ ಮೊದಲ ಅಧಿಕಾರ ಎಂಬುದಷ್ಟೇ ಕುತೂಹಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.