ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಸಲು ಹೊತ್ತ ಹೊಲಗಳಿಗೆ ಸೀಮಂತ

ಜಿಲ್ಲೆಯಾದ್ಯಂತ ಹೊಲಗಳಿಗೆ ಚರಗ ಚೆಲ್ಲಿ ಎಳ್ಳ ಅಮಾವಾಸ್ಯೆ ಆಚರಿಸಿದ ರೈತರು: ಸಾಮೂಹಿಕ ಭೋಜನ
Last Updated 3 ಜನವರಿ 2022, 4:52 IST
ಅಕ್ಷರ ಗಾತ್ರ

ಕೊಪ್ಪಳ: ಫಸಲು ತುಂಬಿದ ಭೂದೇವಿಗೆ ಪೂಜೆಗೈದು, ಚರಗ ಚೆಲ್ಲಿ ಜಿಲ್ಲೆಯ ರೈತರು ಭಾನುವಾರ ಅರ್ಥಪೂರ್ಣವಾಗಿ ಎಳ್ಳ ಅಮಾವಾಸ್ಯೆ ಆಚರಿಸಿದರು.

ಎಳ್ಳ ಅಮಾವಾಸ್ಯೆ ಎಂದರೆ ಉತ್ತರ ಕರ್ನಾಟಕ ಭಾಗದ ರೈತರ ಮನೆಗಳಲ್ಲಿ ಹಬ್ಬದ ಸಂಭ್ರಮ.

ರೈತಾಪಿ ಮಹಿಳೆಯರು ಬೆಳಿಗ್ಗೆ ಎದ್ದು ಮಡಿ ಉಡಿಯಿಂದ ಎಳ್ಳು, ಶೇಂಗಾ ಹೋಳಿಗೆ, ಎಣೆಗಾಯಿ ಪಲ್ಯ, ಹೆಸರು ಕಾಳಿನ ಪಲ್ಯ, ಚಪಾತಿ, ಮೊಸರನ್ನ ಇತ್ಯಾದಿ ಪದಾರ್ಥಗಳನ್ನು ಮಾಡಿಕೊಂಡು, ಕುಟುಂಬ ಸಮೇತರಾಗಿ ಬಂಡಿಗಳಲ್ಲಿ ಹೊಲಗಳಿಗೆ ತೆರಳಿದರು. ಅಲ್ಲಿ ಭೂದೇವಿಗೆ ಪೂಜೆ ಮಾಡಿ, ಫಸಲು ತುಂಬಿದ ಹೊಲಗಳಲ್ಲಿ ಚರಗ ಚೆಲ್ಲುವ ಮೂಲಕ ಎಳ್ಳ ಅಮಾವಾಸ್ಯೆಯನ್ನು ಆಚರಿಸಿದರು.

ಆ ಬಳಿಕ ತಾವು ತಂದ ಗ್ರಾಮೀಣ ಸೊಗಡಿನ ಆಹಾರವನ್ನು ಹೊಲದಲ್ಲಿ ಕುಟುಂಬದೊಂದಿಗೆ ಸೇವಿಸಿ ಸಂಭ್ರಮಿಸಿದರು.

ಭೂದೇವಿಗೆ ಸೀಮಂತ: ಪ್ರಸ್ತುತ ಚಳಿಗಾಲವಿದ್ದು, ಈ ಭಾಗದ ಎರೆ ಹೊಲಗಳಲ್ಲಿ ಹೆಚ್ಚಾಗಿ ಬಿಳಿಜೋಳ, ಹುಳಗಡ್ಲಿ ಇತ್ಯಾದಿ ಬೆಳೆಗಳನ್ನು ಹಿಂಗಾರು ಬೆಳೆಗಳಾಗಿ ಬೆಳೆಯುತ್ತಾರೆ. ಈ ಬೆಳೆಗಳಿಗೆ ಹೆಚ್ಚಿನ ನೀರಿನ ಅವಶ್ಯಕತೆ ಇರುವುದಿಲ್ಲ. ಬಯಲು ಸೀಮೆಯ ಚಳಿಗೆ ಈ ಬೆಳೆಗಳು ಫಸಲು ನೀಡುತ್ತವೆ. ಈಗ ಬೆಳೆಗಳು ಫಸಲು ನೀಡುವ ಸಮಯ. ಹಾಗಾಗಿ ಭೂಮಿ ತಾಯಿ ಸಮೃದ್ಧವಾಗಿ ಬೆಳೆ ಕರುಣಿಸಲಿ ಎಂದು ಎಳ್ಳು, ಶೇಂಗಾ ಹೋಳಿಗೆ, ಇತ್ಯಾದಿ ನೈವೇದ್ಯ ಪದಾರ್ಥಗಳನ್ನು ಚರಗ ಚೆಲ್ಲುತ್ತಾರೆ. ಇದು ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ಧತಿ. ಇದಕ್ಕೆ ವೈಜ್ಞಾನಿಕ ಹಿನ್ನೆಲೆಯೂ ಇದೆ ಎಂದು ಹಿರಿಯರು ನಂಬಿದ್ದಾರೆ.

ಚಳಿಗಾಲದಲ್ಲಿ ಚರ್ಮ ಶುಷ್ಕಗೊಳ್ಳುತ್ತದೆ.

ಎಳ್ಳು ಚರ್ಮ ರಕ್ಷಣೆಗೆ ಹಾಗೂ ದೇಹವನ್ನು ಬಿಸಿಯಾಗಿಡಲು ಸಹಕಾರಿ. ಆದ್ದರಿಂದಲೇ ಈ ಹಬ್ಬದ ನೆಪದಲ್ಲಿ ಜನರು ಎಳ್ಳು ಸೇವನೆ ಮಾಡಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಲಿ ಎಂಬುದು ಎಳ್ಳ ಅಮಾವಾಸ್ಯೆ ಹಿಂದಿನ ವೈಜ್ಞಾನಿಕ ಉದ್ದೇಶ ಎಂದು ತಿಳಿದವರು ಹೇಳುತ್ತಾರೆ.

ಒಟ್ಟಾರೆಯಾಗಿ ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಚಳಿ ಕೂಡ ತುಸು ಹೆಚ್ಚೇ ಇದೆ.

ಈ ಬಾರಿ ಬೆಳೆ ಸಮೃದ್ಧವಾಗಿ ಬಂದು, ರೈತರ ಮೊದಲ್ಲಿ ಸಂತಸ ಮೂಡಿದರೆ ಎಳ್ಳ ಅಮಾವಾಸ್ಯೆ ಆಚರಣೆಗೆ ಸಾರ್ಥಕತೆ ಬರಲಿದೆ.

ಭೂಮಿ ತಾಯಿಗೆ ವಿಶೇಷ ಪೂಜೆ

ಯಲಬುರ್ಗಾ: ಎಳ್ಳ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಹೊಲಗಳಲ್ಲಿ ಸಂಭ್ರಮದಿಂದ ಚರಗ ಚೆಲ್ಲಲಾಯಿತು. ರೈತರು ಟಂಟಂ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ಹೊಲಗಳಿಗೆ ತೆರಳಿದರು. ತರಹೇವಾರಿ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು ಭೂಮಿ ಪೂಜೆ ನೆರವೇರಿಸಿ ನಂತರ ಒಗ್ಗೂಡಿ ಊಟ ಸವಿಯುವ ಈ ಹಬ್ಬ ಗ್ರಾಮೀಣ ಪ್ರದೇಶದಲ್ಲಿ ವಿಶೇಷತೆ ಪಡೆದುಕೊಂಡಿದೆ.

ಹೊಲ ಇದ್ದ ರೈತರು ತಮ್ಮ ಅಕ್ಕಪಕ್ಕದ ಮನೆಯವರನ್ನು, ಸ್ನೇಹಿತರನ್ನು ಹಾಗೂ ಬಂಧು ಬಳಗದರನ್ನು ಆಹ್ವಾನಿಸಿ ಅವರ ಜೊತೆ ಜೊತೆಗೆ ವೈವಿಧ್ಯಮಯ ಸಿಹಿ ಮತ್ತು ಖಾರದ ತಿನಿಸುಗಳನ್ನು ಸವಿಯುವುದೇ ಒಂದು ಸಂಭ್ರಮಕ್ಕೆ ಈದಿನ ಸಾಕ್ಷಿಯಾಗಿತ್ತು.

ಎರೆ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಚರಿಸುವ ಈ ಹಬ್ಬಕ್ಕೆಂದರೆ ನಗರ ಪ್ರದೇಶದ ಸ್ನೇಹಿತರನ್ನು ಕರೆದುಕೊಂಡು ಹೋಗುವುದು ಸಾಮಾನ್ಯವಾಗಿದೆಮುಧೋಳ, ಕರಮುಡಿ, ತೊಂಡಿಹಾಳ, ಬಂಡಿಹಾಳ, ಸಂಗನಾಳ ಪರಿಸರದಲ್ಲಿ ಹಬ್ಬದ ಸೊಬಗು ಇತರೆ ಪ್ರದೇಶಕ್ಕಿಂತಲೂ ಸ್ವಲ್ಪ ಹೆಚ್ಚಾಗಿ ಕಾಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT