ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ನರೇಗಾ ಹಣ ದರ್ಬಳಕೆ, ಇಬ್ಬರು ಎಇಇ, ನಾಲ್ವರು ಎಂಜಿನಿಯರ್‌ಗೆ ನೋಟಿಸ್

ಚೆಕ್‌ಡ್ಯಾಂ ನಿರ್ಮಾಣ ಕಾಮಗಾರಿ: ಅನುದಾನ ದುರ್ಬಳಕೆ ಪ್ರಕರಣ
Last Updated 2 ಜುಲೈ 2020, 13:58 IST
ಅಕ್ಷರ ಗಾತ್ರ

ಕುಷ್ಟಗಿ: ‘ನರೇಗಾ‘ ಯೋಜನೆ ಅಡಿಯಲ್ಲಿ ತಾಲ್ಲೂಕಿನಲ್ಲಿ ಕೈಗೊಂಡ ಬಹುಕಮಾನು ಚೆಕ್‌ಡ್ಯಾಂಗಳ ನಿರ್ಮಾಣ ಕಾಮಗಾರಿಯಲ್ಲಿ ನಡೆದ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮತ್ತು ನಾಲ್ವರು ಕಿರಿಯ ಎಂಜಿನಿಯರ್‌ಗಳಿಗೆ ಜಿ.ಪಂ. ಸಿಇಒ ರಘುನಂದನ ಮೂರ್ತಿ, ಕಾರಣ ಕೇಳಿ ಎರಡನೇ ಬಾರಿ ನೋಟಿಸ್‌ ಜಾರಿ ಮಾಡಿದ್ದಾರೆ.

ಚೆಕ್‌ಡ್ಯಾಂ ನಿರ್ಮಾಣದ ಹೆಸರಿನಲ್ಲಿ ನಡೆದ ಕೋಟ್ಯಂತರ ಅನುದಾನ ದುರ್ಬಳಕೆಗೆ ಸಂಬಂಧಿಸಿದಂತೆ ಸಮರ್ಪಕ ದಾಖಲೆಗಳೊಂದಿಗೆ ವಿವರಣೆ ನೀಡುವಂತೆ ಕಳೆದ ಮಾರ್ಚ್ 13 ರಂದು ನೋಟಿಸ್‌ ನೀಡಲಾಗಿತ್ತು. ಆದರೆ ಉತ್ತರ ನೀಡುವುದಕ್ಕೆ ಎಂಜಿನಿಯರ್‌ಗಳು ಒಂದು ತಿಂಗಳ ಕಾಲಾವಕಾಶ ಕೇಳಿದ್ದರು. ತಿಂಗಳು ಕಳೆದರೂ ಉತ್ತರ ನೀಡದೆ ನಿರ್ಲಕ್ಷ್ಯ ವಹಿಸಿದ್ದರು. ಜೂನ್ 30 ರಂದು ನೀಡಿರುವ ಮತ್ತೊಂದು ನೋಟಿಸ್‌ನಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

‘ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವುದರಿಂದ ನಾಗರಿಕ ಸೇವಾ ನಿಯಮಗಳ ಅನ್ವಯ ದಂಡನೆಗೆ ಅರ್ಹರಾಗಿರುತ್ತೀರಿ, ನಿಮ್ಮ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬಾರದೇಕೆ ಎಂಬುದಕ್ಕೆ ಜುಲೈ 4ರ ಒಳಗೆ ಪೂರಕ ದಾಖಲೆಗಳೊಂದಿಗೆ ಉತ್ತರ ನೀಡದಿದ್ದರೆ ಏಕಪಕ್ಷಿಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ‘ ಎಂದು ನೋಟಿಸ್‌ನಲ್ಲಿ ಎಂಜಿನಿಯರ್‌ಗಳಿಗೆ ಸಿಇಒ ಎಚ್ಚರಿಕೆ ನೀಡಿದ್ದಾರೆ.

ಎಇಇ ಶಂಕರ ಮಳಗಿ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಉಪ ವಿಭಾಗದ ಈ ಹಿಂದಿನ ಪ್ರಭಾರ ಎಇಇ ಶಿವಾನಂದ ನಾಗೋಡ, ಹಾಗೂ ಕಿರಿಯ ಎಂಜಿನಿಯರ್‌ಗಳಾದ ಎಂ.ಇಲಿಯಾಸ್, ಅಶ್ವಿನಿ (ಸದ್ಯ ಹಗರಿಬೊಮ್ಮನಹಳ್ಳಿಯ ಗ್ರಾಮೀಣ ಕುಡಿಯುವ ನೀರು ಉಪ ವಿಭಾಗದಲ್ಲಿ), ರಿಜ್ವಾನ್‌ ಮತ್ತು ಅಜಿತ್ ದಳವಾಯಿ ಎಂಬುವವರು ನೋಟಿಸ್‌ ಪಡೆದವರು.

ಯಾರಿಂದ ಎಷ್ಟು ನಷ್ಟ: ಶಿವಾನಂದ ನಾಗೋಡ ಅವರು 198 ಕಾಮಗಾರಿಗಳಿಗೆ ಸಂಬಂಧಿಸಿದಂತೆ ₹ 19.47 ಕೋಟಿ ಮೊತ್ತದ ಅಂದಾಜು ವರದಿ ತಯಾರಿಸಿ, ಎಂಬಿ ದಾಖಲೆಯಲ್ಲಿ ₹ 5.57 ಕೋಟಿ ಮೊತ್ತವನ್ನು ನಮೂದಿಸಿದ್ದರು. ಎಂಐಎಸ್‌ದಲ್ಲಿ ₹ 3.70 ಕೋಟಿ ಅಳವಡಿಸಲಾಗಿದೆ. ಅಲ್ಲದೆ ಅನುಷ್ಠಾನಗೊಳ್ಳದ ಕಾಮಗಾರಿಗಳಿಗೂ ₹ 4.54 ಕೋಟಿ ಹಣವನ್ನು ಹೆಚ್ಚುವರಿಯಾಗಿ ಅಳತೆ ಪುಸ್ತಕದಲ್ಲಿ ದಾಖಲಿಸಲಾಗಿದೆ. ಇದರಿಂದಾಗಿ ಅವರು, ₹ 2.70 ಕೋಟಿ ಹಣ ದುರ್ಬಳಕೆಗೆ ಕಾರಣರಾಗಿದ್ದಾರೆ ಎಂದು ನೋಟಿಸ್‌ನಲ್ಲಿ ವಿವರಿಸಲಾಗಿದೆ.

ಕಿರಿಯ ಎಂಜಿನಿಯರ್‌ ಎಂ.ಇಲಿಯಾಸ್ ಅವರು, ಅನುಷ್ಠಾನಗೊಳ್ಳದ ಕಾಮಗಾರಿಗಳಿಗೂ ಹೆಚ್ಚುವರಿಯಾಗಿ ₹ 3.38 ಕೋಟಿ ಹಣವನ್ನು ನಮೂದಿಸಿರುವುದು, ಅಳತೆಗಿಂತಲೂ ಹೆಚ್ಚುವರಿ ಮೊತ್ತವನ್ನು ಎಂಐಎಸ್‌ದಲ್ಲಿ ಅಳವಡಿಸಿ ₹ 2.51 ಕೋಟಿ ಹಣ ದುರ್ಬಳಕೆಗೆ ಕಾರಣರಾಗಿದ್ದಾರೆ.

ಕಿರಿಯ ಎಂಜಿನಿಯರ್‌ ಅಶ್ವಿನಿ ಎಂಬುವವರು ಅನುಷ್ಠಾನಗೊಳ್ಳದೇ ಇರುವ ಕಾಮಗಾರಿಗಳಿಗೆ ಅಳತೆ ಪುಸ್ತಕದಲ್ಲಿ ₹ 24.17 ಲಕ್ಷ ಮೊತ್ತವನ್ನು ಹೆಚ್ಚುವರಿಯಾಗಿ ನಮೂದಿಸಿರುವುದು, ಅಳತೆಗಿಂಗಲೂ ಹೆಚ್ಚುವರಿ ಹಣವನ್ನು ಎಂಐಎಸ್‌ದಲ್ಲಿ ಅಳವಡಿಸಿ ₹ 27 ಲಕ್ಷ ಹಣ ದುರ್ಬಳಕೆಗೆ ಕಾರಣರಾಗಿದ್ದಾರೆ ಎಂದು ತಿಳಿಸಲಾಗಿದೆ.

ಕಿರಿಯ ಎಂಜಿನಿಯರ್ ಶ್ರೀಮತಿ ರಿಜ್ವಾನ್ ಎಂಬುವವರು ಅನುಷ್ಠಾನಗೊಳ್ಳದೇ ಇರುವ ಕಾಮಗಾರಿಗಳಿಗೆ ಅಳತೆ ಪುಸ್ತಕದಲ್ಲಿ ₹ 81.44 ಲಕ್ಷ ಮೊತ್ತವನ್ನು ಹೆಚ್ಚುವರಿಯಾಗಿ ನಮೂದಿಸಿದ್ದಾರೆ. ಎಂಐಎಸ್‌ದಲ್ಲಿ ಅಳತೆಗಿಂತಲೂ ಹೆಚ್ಚುವರಿ ಹಣ ಪಾವತಿಸುವ ಮೂಲಕ ₹ 81.44 ಲಕ್ಷ ಹಣ ದುರ್ಬಳಕೆಗೆ ಕಾರಣರಾಗಿ ಸರ್ಕಾರದ ಆರ್ಥಿಕ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ವಿವರಿಸಲಾಗಿದೆ.

ಮತ್ತೊಬ್ಬ ಕಿರಿಯ ಎಂಜಿನಿಯರ್‌ ಅಜಿತ್‌ ದಳವಾಯಿ ಎಂಬುವವರಿಗೆ ನೀಡಿರುವ ನೋಟಿಸ್‌ದಲ್ಲಿ ಅನುಷ್ಠಾನಗೊಳ್ಳದ ಕಾಮಗಾರಿಗಳಿಗೆ ₹ 2.46 ಲಕ್ಷ ಹಣವನ್ನು ಅಳತೆ ಪುಸ್ತಕದಲ್ಲಿ ಹೆಚ್ಚುವರಿಯಾಗಿ ನಮೂದಿಸಿ ಸರ್ಕಾರಕ್ಕೆ ಅಷ್ಟು ಮೊತ್ತದ ಹಣ ದುರುಪಯೋಗಕ್ಕೆ ಕಾರಣರಾಗಿರುವುದನ್ನು ನೋಟಿಸ್‌ದಲ್ಲಿ ವಿವರಿಸಲಾಗಿದೆ.

ಚೆಕ್‌ಡ್ಯಾಂ ಹಗರಣಕ್ಕೆ ಸಂಬಂಧಿಸಿದಂತೆ 'ಪ್ರಜಾವಾಣಿ'ಯಲ್ಲಿ ಸರಣಿ ವರದಿಗಳು ಪ್ರಕಟವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT