ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಷ್ಟಗಿ | ಶೀತಲ ಘಟಕ: ಒಣಕಾಳು ಸಂಗ್ರಹಕ್ಕೆ ಸೀಮಿತ

ಬದಲಾದ ದಾಳಿಂಬೆ ಮಾರುಕಟ್ಟೆ ವ್ಯವಸ್ಥೆ, ಸ್ಥಗಿತಗೊಂಡ ರಫ್ತು ಉದ್ಯಮ
Published 10 ಜುಲೈ 2024, 6:33 IST
Last Updated 10 ಜುಲೈ 2024, 6:33 IST
ಅಕ್ಷರ ಗಾತ್ರ

ಕುಷ್ಟಗಿ: ದಶಕಗಳ ಹಿಂದೆ ಈ ಭಾಗದಲ್ಲಿ ದಾಳಿಂಬೆ ಹಣ್ಣಿನ ಬೇಸಾಯ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ರಫ್ತು ಉತ್ತೇಜಿಸುವ ಉದ್ದೇಶದಿಂದ ಕೋಟ್ಯಂತರ ವೆಚ್ಚದಲ್ಲಿ ಸ್ಥಾಪನೆಗೊಂಡಿರುವ ಇಲ್ಲಿಯ ಶೀತಲ ಸರಪಳಿ ಘಟಕ ಸದ್ಯ ಹಣ್ಣುಗಳ ಬದಲು ಒಣ ಕಾಳುಗಳನ್ನು ಸಂಗ್ರಹಿಸುವುದಕ್ಕೆ ಮಾತ್ರ ಸೀಮಿತಗೊಂಡಿದೆ.

ಬಹಳಷ್ಟು ಪ್ರಮಾಣದಲ್ಲಿ ರಫ್ತುಯೋಗ್ಯ ದಾಳಿಂಬೆ ಬೆಳೆಯಲಾಗುತ್ತಿತ್ತು. ಬಹಳಷ್ಟು ಜನ ರಫ್ತುದಾರರು ಇಲ್ಲಿಗೆ ಬಂದಿದ್ದರಿಂದ ದಾಳಿಂಬೆ ಅನೇಕ ರೀತಿಯಲ್ಲಿ ಈ ಭಾಗದಲ್ಲಿ ಉದ್ಯಮವಾಗಿ ಬೆಳೆದು ಉದ್ಯೋಗಾವಕಾಶಗಳ ಸೃಷ್ಟಿಗೂ ಕಾರಣವಾಗಿತ್ತು. ಹಾಗಾಗಿ ರಫ್ತುಯೋಗ್ಯ ದಾಳಿಂಬೆ ಬೇಸಾಯ ಮತ್ತು ಬೆಳೆಗಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಂಸ್ಕರಣೆ, ಸಂಗ್ರಹ ಸೇರಿದಂತೆ ಮೂಲಸೌಕರ್ಯಕ್ಕೆ ಒತ್ತು ನೀಡಿದ್ದ ಸರ್ಕಾರ ನಾಫೆಡ್ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ (ಕಪೆಕ್) ಮೂಲಕ 2009ರಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪಿಸಿತ್ತು.

ಈ ತಾಲ್ಲೂಕು ಮತ್ತು ಕೊಪ್ಪಳ ಜಿಲ್ಲೆ ಐರೋಪ್ಯ ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳುವುದಕ್ಕೆ ಅವಕಾಶ ಒದಗಿಸಿಕೊಟ್ಟಿದ್ದ ದಾಳಿಂಬೆ ದಶಕದ ಹಿಂದೆ ದುಂಡಾಣು ಅಂಗಮಾರಿ ರೋಗದಿಂದ ಸರ್ವನಾಶವಾಗಿ ಹೇಳ ಹೆಸರಿಲ್ಲದಂತಾಗಿ. ಇತ್ತೀಚಿನ ದಿನಗಳಲ್ಲಿ ದಾಳಿಂಬೆ ಅಲ್ಲಲ್ಲಿ ತಲೆ ಎತ್ತುತ್ತಿದ್ದರೂ ತೀರಾ ಬೆರಳೆಣಿಕೆ ಪ್ರದೇಶದಲ್ಲಿ ಮಾತ್ರ. ಅಷ್ಟೇ ಅಲ್ಲ ಈಗಲೂ ದಾಳಿಂಬೆಯಲ್ಲಿ ಯಶಸ್ವಿಯಾದವರು ಅಪರೂಪ ಎನ್ನಲಾಗುತ್ತಿದೆ. ಈ ಕಾರಣದಿಂದ ಮಹತ್ವದ ಉದ್ದೇಶದಿಂದ ಸ್ಥಾಪನೆಗೊಂಡಿದ್ದ ಈ ಕೋಲ್ಡ್‌ಸ್ಟೋರೇಜ್‌ನ ಉದ್ದೇಶವೇ ಬದಲಾಗಿದೆ.

ದಾಳಿಂಬೆ ಇಲ್ಲದಿದ್ದರೂ ಒಣ ದ್ರಾಕ್ಷಿ ಕಾಳುಗಳ ಸಂಗ್ರಹಿಸುವುದಕ್ಕೆ ರೈತರು ವರ್ತಕರಿಂದ ಹೆಚ್ಚಿನ ಬೇಡಿಕೆ ಬರುತ್ತಿದ್ದು ಕೆಲ ಸಂದರ್ಭದಲ್ಲಿ ಸ್ಥಳ ಅಭಾವ ಆಗುತ್ತಿದೆ. ಪಟ್ಟಣದ ಬಳಿ ಜಾಗ ದೊರೆತರೆ ಇನ್ನೂ 2000 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಕೋಲ್ಡ್‌ ಸ್ಟೋರೇಜ್‌ ಸ್ಥಾಪಿಸಬಹುದು.
ಭೀಮನಗೌಡ ಬಿರಾದಾರ, ವ್ಯವಸ್ಥಾಪಕ

ಒಂದು ಕಾಲದಲ್ಲಿ ದಾಳಿಂಬೆ ಹಣ್ಣುಗಳ ಬಣ್ಣ ಬಣ್ಣದ ಪೆಟ್ಟಿಗೆಗಳಿಂದ ಭರ್ತಿಯಾಗುತ್ತಿದ್ದ 500 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಶೀತಲಗೃಹದಲ್ಲಿ ಈಗ ಸುಮಾರು 1000 ಮೆಟ್ರಿಕ್ ಟನ್‌ ಪ್ರಮಾಣದಲ್ಲಿ ಒಣ ಕಾಳುಗಳನ್ನು ಮಾತ್ರ ಸಂಗ್ರಹಿಸಲಾಗುತ್ತಿದೆ. ದಾಳಿಂಬೆ ಪ್ರದೇಶ ಖಾಲಿಯಾದ ನಂತರ ಶೀತಲಗೃಹ ನಿರ್ವಹಣೆ ಖರ್ಚು ಸಹ ನಿಗಮಕ್ಕೆ ಹೊರೆಯಾಗಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಕಾಳುಗಳನ್ನು ಸಂಗ್ರಹಿಸುವುದಕ್ಕೆ ಅವಕಾಶ ಕಲ್ಪಿಸಿದ್ದರಿಂದ ವಾರ್ಷಿಕ ಅಂದಾಜು ₹30ರಿಂದ ₹40 ಲಕ್ಷ ಆದಾಯ ಬರುತ್ತಿದೆ. 2 ಪ್ರಿಕೂಲರ್‌ ಬ್ಲಾಕ್ ಹಾಗೂ 7 ಶೀತಲ ಕೊಠಡಿಗಳಿದ್ದು ಜೆಸ್ಕಾಂಗೆ ಮಾಸಿಕ ಅಂದಾಜು ₹1 ಲಕ್ಷದಷ್ಟು ವಿದ್ಯುತ್‌ ಶುಲ್ಕ ಪಾವತಿಸಲಾಗುತ್ತಿದೆ. ನಿರ್ವಹಣೆ ವೆಚ್ಚ, ಸಿಬ್ಬಂದಿ ವೇತನ ಇತರೆ ಖರ್ಚು ಕಳೆದು ವಾರ್ಷಿಕ ₹4.10 ಲಕ್ಷ ನಿವ್ವಳ ಆದಾಯವಾದರೂ ಬರುತ್ತಿದೆ ಎನ್ನುತ್ತಾರೆ ವ್ಯವಸ್ಥಾಪಕ ಭೀಮನಗೌಡ ಬಿರಾದಾರ.

ಹೆಚ್ಚಾಗಿ ಕಡಲೆ, ಗೋಧಿ, ಶೇಂಗಾ, ಜೋಳ, ಹುರುಳಿ ಮತ್ತು ಒಣದ್ರಾಕ್ಷಿ, ಹುಣಸೆಹಣ್ಣು ಸಂಗ್ರಹಕ್ಕೆ ಶೀತಲಗೃಹ ಬಳಕೆಯಾಗುತ್ತಿದೆ. ಕೆಲವರ್ಷಗಳ ಹಿಂದೆ ಕೇವಲ ವ್ಯಾಪಾರಿಗಳಷ್ಟೇ ಇಲ್ಲಿ ಅವುಗಳನ್ನು ಸಂಗ್ರಹಿಸುತ್ತಿದ್ದರೆ ಈಗ ರೈತರೂ ಕೂಡ ತಮ್ಮ ಕೃಷಿ ಉತ್ಪನ್ನಗಳನ್ನು ಇಲ್ಲಿ ಸಂಗ್ರಹಿಸುತ್ತಿರುವುದು ಕಂಡುಬಂದಿದೆ. ಸದ್ಯ ಕಡಲೆ ಹೆಚ್ಚಿನ ಪ್ರಮಾಣದಲ್ಲಿದ್ದು ಹಿಂಗಾರು ಹಂಗಾಮಿನ ಬಿತ್ತನೆ ಬೀಜಕ್ಕಾಗಿ ಸಂಗ್ರಹಿಸಿಡಲಾಗಿದೆ ಎಂದು ಮೂಲಗಳು ತಿಳಿಸಿವೆ. ತೀರಾ ಕಡಿಮೆ ಪ್ರಮಾಣದಲ್ಲಿ ಸೇಬು ಇತರೆ ಹಣ್ಣುಗಳನ್ನೂ ವ್ಯಾಪಾರಿಗಳು ಸಂಗ್ರಹಿಸಿಟ್ಟಿದ್ದಾರೆ.

'ಶೀತಲಗೃಹ ಬಳಕೆಯ ಅವಶ್ಯಕತೆಯಿಲ್ಲ’ 

‘ಇಲ್ಲಿಯ ದಾಳಿಂಬೆ ಯುರೋಪ್‌ ರಾಷ್ಟ್ರಗಳಿಗೆ ರಫ್ತಾಗುತ್ತಿದ್ದ ಸಂದರ್ಭದಲ್ಲಿ ರಫ್ತುದಾರರು ದಾಳಿಂಬೆ ಸಂಗ್ರಹಿಸಿಡಲು ಕೋಲ್ಡ್‌ ಸ್ಟೋರೇಜ್‌ ಬಳಕೆ ಮಾಡಿಕೊಳ್ಳುತ್ತಿದ್ದರು. ಹಿಂದೆ ದಾಳಿಂಬೆ ಬೆಳೆಗಾರರು ರಫ್ತುದಾರರನ್ನೇ ಅವಲಂಬಿಸಬೇಕಿತ್ತು. ಈಗ ಅಂಥ ಪರಿಸ್ಥಿತಿ ಇಲ್ಲ ಎನ್ನುತ್ತಾರೆ’ ಬೆಳೆಗಾರ ಜಗನ್ನಾಥ ಗೋತಗಿ.

‘ನಂತರ ಬೇರೆ ಬೇರೆ ಕಾರಣಗಳಿಂದ ದಾಳಿಂಬೆ ನಾಶವಾಗಿ ರಫ್ತು ಸ್ಥಗಿತಗೊಂಡು ರಫ್ತುದಾರರೂ ಜಾಗ ಖಾಲಿ ಮಾಡಿದ್ದರಿಂದ ಶೀತಲಸರಪಳಿ ಗೃಹ ಮುಚ್ಚಿತ್ತು. ಈಗ ದಾಳಿಂಬೆ ಬೆಳೆ ಕ್ಷೇತ್ರ ಮತ್ತೆ ವಿಸ್ತಾರಗೊಳ್ಳುತ್ತಿದ್ದು ಅನೇಕ ರೈತರು ಉತ್ತಮ ಆದಾಯ ಪಡೆಯುತ್ತಿರುವುದು ಕಂಡುಬಂದಿದೆ. ಸ್ಥಳೀಯ ಮತ್ತು ಅನ್ಯ ರಾಜ್ಯಗಳಲ್ಲೂ ದಾಳಿಂಬೆಗೆ ಬಹಳಷ್ಟು ಬೇಡಿಕೆ ಇದ್ದು ಖರೀದಿದಾರರು ನೇರವಾಗಿಯೇ ರೈತರ ತೋಟಗಳಿಗೆ ದಾಪುಗಾಲು ಇಡುತ್ತಿದ್ದಾರೆ. ಸ್ಥಳೀಯ ಮಾರುಕಟ್ಟೆಯಲ್ಲೇ ಉತ್ತಮ ದರ ಸಿಗುತ್ತಿರುವುದರಿಂದ ಶೀತಲಗೃಹ ಬಳಕೆಯಾಗುತ್ತಿಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT