ಸೋಮವಾರ, ಜುಲೈ 26, 2021
27 °C
ಸ್ಥಳೀಯರಿಂದಲೇ ಮಾನಸಿಕ ಹಿಂಸೆ ಅನುಭವಿಸುತ್ತಿರುವ ಸೋಂಕಿತರು

ಕೊಪ್ಪಳ | ಕೋವಿಡ್-19 ಸೋಂಕಿತರ ಮನೆ ಹತ್ತಿರ ಸುಳಿಯದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ತಾಲ್ಲೂಕಿನ ಕೆಲ ಕುಟುಂಬದವರಲ್ಲಿ ಕೋವಿಡ್ ಸೋಂಕು ದೃಢಪಟ್ಟಿರುವುದರಿಂದ ಅವರು ವಾಸಿಸುವ ಮನೆಗಳ ಸುತ್ತಲಿನ ನೆರೆಹೊರೆಯರು ದೂರ ಉಳಿದಿದ್ದಾರೆ. ಮಾತನಾಡುವುದಕ್ಕೂ ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಅನೇಕ ಸೊಂಕಿತ ವ್ಯಕ್ತಿಗಳ ಕುಟುಂಬಗಳು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ.

ಮನೆಯಲ್ಲಿನ ಒಬ್ಬರಿಗೆ ಸೋಂಕು ದೃಢಪಟ್ಟರೆ ಸಂಬಂಧಿಸಿದ ಮನೆಯ ಸುತ್ತಲಿನ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗುತ್ತಿದೆ. ಆ ಕುಟುಂಬದವರು ಮನೆಯಿಂದ ಹೊರಗೆ ಬೇರೆಯವರನ್ನು ನೋಡುವುದಕ್ಕೂ ಮುಜುಗರ ಅನುಭವಿಸುವಂತಾಗಿದೆ.

ಸೋಂಕಿತರ ಕೆಲ ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿಲ್ಲದ ಕಾರಣ ಊರಿನ ಇತರೆ ಜನರು ಏಳುವ ಮೊದಲು ಮತ್ತು ಬೆಳಕು ಹರಿಯುವ ಮೊದಲೇ ಬಹಿರ್ದೆಸೆಗೆ ಹೋಗುವ ಅನಿವಾರ್ಯತೆ ಎದುರಾಗಿದೆ.

ಕುಡಿಯುವ ನೀರು, ಹಾಲು, ತರಕಾರಿ, ಔಷಧ ಸೇರಿದಂತೆ ಅಗತ್ಯ ವಸ್ತುಗಳಿಲ್ಲದೆ ಪರದಾಡುತ್ತಿದ್ದಾರೆ. ಗ್ರಾಮದಲ್ಲಿರುವ ಅಂಗಡಿಗಳಿಗೆ ಹೋಗುವಂತಿಲ್ಲ. ಬೇರೆಯವರೂ ಮನೆಯ ಹತ್ತಿರ ಸುಳಿಯುವುದಿಲ್ಲ. ಮಕ್ಕಳು ಆಟವಾಡಲು ಹೊರಗೆ ಹೋಗುವಂತಿಲ್ಲ. ಸೋಂಕಿತ ವ್ಯಕ್ತಿಗಳ ಮನೆಯವರು ಹೊರಗೆ ಹೋದರೆ ಇತರೆ ಜನ ಕೆಂಗಣ್ಣಿನಿಂದ ನೋಡುತ್ತಾರೆ.

ಬಡ ಕುಟುಂಬಗಳ ಜನರಲ್ಲಿ ಕೈಯಲ್ಲಿ ಕಾಸಿಲ್ಲ. ತಮ್ಮ ಹೊಟ್ಟೆಗೇ ಸೀಲ್‌ಡೌನ್‌ ಮಾಡಿಕೊಳ್ಳುವಂತಾಗಿದೆ. ಯಾರೂ ಸಹಾಯಕ್ಕೆ ಬಾರದ ಕಾರಣ ಬಹುತೇಕ ಜನರಲ್ಲಿ ಆತ್ಮಸ್ಥೈರ್ಯವೇ ಉಡುಗಿಹೋಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಕೆಲ ಪ್ರಮುಖರು 'ಪ್ರಜಾವಾಣಿ'ಗೆ ಸಮಸ್ಯೆಯನ್ನು ವಿವರಿಸಿದರು.

ಶಾಸಕ ಬಯ್ಯಾಪುರ ಭೇಟಿ:

ಈ ಮಧ್ಯೆ ಭಾನುವಾರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕ ಅಮರೇಗೌಡ ಬಯ್ಯಾಪುರ, ಸೋಂಕಿತರ ಕುಟುಂಬದವರನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಅಲ್ಲದೆ ಸೋಂಕಿತ ವ್ಯಕ್ತಿಗಳ ಕುಟುಂಬದವರಿಗೆ ಹೊರಗಡೆಯಿಂದ ಇತರೆ ಜನರು ಅಗತ್ಯ ವಸ್ತುಗಳನ್ನು ತಲುಪಿಸುವ ಮೂಲಕ ಮಾನವೀಯತೆ ಮೆರೆಯುವಂತೆ ಹೇಳಿದರು.

ನಂತರ ಮಾತನಾಡಿದ ಶಾಸಕ ಬಯ್ಯಾಪುರ, ‘ಸೋಂಕಿತರ ಕುಟುಂಬದವರು ಬಹಳಷ್ಟು ಮಾನಸಿಕ ಹಿಂಸೆ ಅನುಭವಿಸುತ್ತಿರುವುದು ಗೊತ್ತಾಗಿದೆ. ಅವರ ಸಂಬಂಧಿಕರು, ಅಷ್ಟೇ ಏಕೆ ಅವರವರ ಜಾತಿಯ ಜನರೇ ಹತ್ತಿರ ಸುಳಿಯುತ್ತಿಲ್ಲ. ಈ ರೀತಿ ಯಾರೂ ಮಾಡಬಾರದು‘ ಎಂದು ಹೇಳಿದರು.

ಸೋಂಕು ದೃಢಪಟ್ಟಿರುವ ಪ್ರತಿ ಹಳ್ಳಿಯಲ್ಲಿಯೂ ಆರೋಗ್ಯ, ಪೊಲೀಸ್ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಜನರಲ್ಲಿ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಸುರಕ್ಷತೆಯಿಂದ ಇರುವಂತೆಯೂ ಸೂಚಿಸುತ್ತಿದ್ದಾರೆ ಎಂದರು.

 ಕೆಲ ಸೋಂಕಿತ ಕುಟುಂಬಗಳಿಗೆ ವೈಯಕ್ತಿಕವಾಗಿ ಆಹಾರ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ಶಾಸಕರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು