ಗುರುವಾರ , ಮೇ 13, 2021
40 °C
ಸ್ಥಳಾಂತರಗೊಳ್ಳದ ತರಕಾರಿ ಮಾರುಕಟ್ಟೆ: ಬಲವಂತವಾಗಿ ಅಂಗಡಿ ಮುಚ್ಚಿಸಿದ ಪೊಲೀಸರು

ಕೊರೊನಾ ‘ಕರ್ಫ್ಯೂ’: ಮುಂದುವರಿದ ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ಕೊರೊನಾ ನಿಯಮಗಳ ಅನುಷ್ಠಾನ ಹಾಗೂ ಪಾಲನೆಯಲ್ಲಿ ಗೊಂದಲ ಮುಂದುವರಿದಿದೆ. ಪೊಲೀಸರು ಶುಕ್ರವಾರ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತಪಡಿಸಿ ಉಳಿದವುಗಳನ್ನು ಬಲವಂತವಾಗಿ ಮುಚ್ಚಿಸಿದರು.

ವಾರಾಂತ್ಯದ ಎರಡು ದಿನ ಮಾತ್ರ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಮುಚ್ಚಬೇಕು ಎಂದೇ ವ್ಯಾಪಾರಿಗಳು ತಿಳಿದಿದ್ದರು. ಹಾಗಾಗಿ ಬೆಳಿಗ್ಗೆ ಹತ್ತು ಗಂಟೆಯವರೆಗೂ ವ್ಯಾಪಾರ ಭರ್ಜರಿಯಾಗಿ ನಡೆದಿತ್ತು. ಪೊಲೀಸರು ಲಾಠಿ ಹಿಡಿದು ರಸ್ತೆಗೆ ಇಳಿಯುತ್ತಿದ್ದಂತೆ ವ್ಯಾಪಾರಸ್ಥರು ಗಲಿಬಿಲಿಗೊಂಡರು. ಕಿರಾಣಿ, ಔಷಧ, ತರಕಾರಿ ಇತರ ಅಗತ್ಯ ಸೇವೆಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲವುಗಳನ್ನೂ ಮುಚ್ಚಿಸಿದರು.

ಕಟ್ಟಡ ಸಾಮಗ್ರಿ ಒದಗಿಸುವ ಹಾರ್ಡ್‌ವೇರ್‌ ಅಂಗಡಿಗಳಿಗೆ ವಿನಾಯಿತಿ ಇದ್ದರೂ ಅವನ್ನೂ ಪೊಲೀಸರು ಮುಚ್ಚಿಸಿದ್ದು ಜನರ ಅಸಮಾಧಾನಕ್ಕೆ ಕಾರಣವಾಯಿತು.

ಬಸ್‌ ಹಾಗೂ ಖಾಸಗಿ ವಾಹನಗಳ ಸಂಚಾರಕ್ಕೆ ಸುಗಮವಾಗಿತ್ತು. ಟ್ರ್ಯಾಕ್ಸ್‌, ಜೀಪ್‌ಗಳಲ್ಲಿ ಪ್ರಯಾಣಿಕರನ್ನು ಕುರಿಗಳಂತೆ ತುಂಬಿ ಸಾಗಿಸುತ್ತಿದ್ದುದು ಕಂಡುಬಂದಿತು.

ಪಾಲನೆಯಾಗದ ಸೂಚನೆ: ಈ ಮಧ್ಯೆ ಸಂತೆ ಮೈದಾನದಲ್ಲಿರುವ ತರಕಾರಿ ಮಾರುಕಟ್ಟೆಯನ್ನು ತಾಲ್ಲೂಕು ಕ್ರೀಡಾಂಗಣಕ್ಕೆ ಸ್ಥಳಾಂತರಿಸಬೇಕು ಎಂದು ಗುರುವಾರ ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ತಾಕೀತು ಮಾಡಿದ್ದರು. ಒಂದು ವೇಳೆ ಯಾರಾದರೂ ನಿಯಮ ಉಲ್ಲಂಘಿಸಿದರೆ ತಕ್ಕ ಶಾಸ್ತಿ ಮಾಡುವುದಾಗಿಯೂ ಎಚ್ಚರಿಸಿದ್ದರು. ಅದಕ್ಕೆ ವ್ಯಾಪಾರಿಗಳೂ ಒಪ್ಪಿಕೊಂಡಿದ್ದರು. ಆದರೆ ಶುಕ್ರವಾರ ಸಂತೆ ಮೈದಾನ, ಬಸವೇಶ್ವರ ವೃತ್ತದಿಂದ ಪುರಸಭೆ ಕಚೇರಿ ವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ತರಕಾರಿ ವ್ಯಾಪಾರ ಎಂದಿನಂತೆ ನಡೆಯಿತು. ಈ ವಿಷಯದಲ್ಲಿ ತಹಶೀಲ್ದಾರರ ಮತ್ತು ಪೊಲೀಸರ ಸೂಚನೆಯನ್ನು ವ್ಯಾಪಾರಿಗಳು ಕಡೆಗಣಿಸಿದರು ಎಂದು ತಿಳಿಸಲಾಗಿದೆ.

ಅದೇ ರೀತಿ ಕೆಲ ಮದ್ಯದ ಅಂಗಡಿಗಳಲ್ಲಿ ಕುಳಿತು ಕುಡಿಯುವುದಕ್ಕೆ ಅವಕಾಶ ಇಲ್ಲದಿದ್ದರೂ ಅಂಗಡಿಯವರೇ ಗ್ರಾಹಕರಿಗೆ ಅನುಕೂಲ ಕಲ್ಪಿಸಿ ಸರ್ಕಾರದ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು