ಸೋಮವಾರ, ಜುಲೈ 4, 2022
21 °C
ಶ್ರೀರಾಮನಗರದ ಹಾಲು ಉತ್ಪಾದಕರ ಸಂಘದ ಕಾರ್ಯಕ್ಕೆ ಜನರ ಮೆಚ್ಚುಗೆ

ಗಂಗಾವತಿ: ಹಾಲು ಉತ್ಪಾದಕರ ಸಂಘದಿಂದ ಸಗಟು ದರದಲ್ಲಿ ತರಕಾರಿ ಮಾರಾಟ

ಶಿವಕುಮಾರ್‌. ಕೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ತಾಲ್ಲೂಕಿನ ಶ್ರೀರಾಮನಗರದ ಹಾಲು ಉತ್ಪಾದಕರ ಸಂಘವು ಅಗತ್ಯ ವಸ್ತುಗಳಲ್ಲಿ ಒಂದಾದ ತರಕಾರಿಯನ್ನು ಜನಸಾಮಾನ್ಯರಿಗೆ ಸಗಟು ದರದಲ್ಲಿ ಮಾರಾಟ ಮಾಡುತ್ತಿದೆ.

ಗ್ರಾಮದ ಇಂದಿರಾ ನಗರದಲ್ಲಿ ತರಕಾರಿ ಮಾರಾಟ ಕೇಂದ್ರವನ್ನು ತೆರೆದಿರುವ ಹಾಲು ಉತ್ಪಾದಕರ ಸಂಘವು, ನೇರವಾಗಿ ರೈತರಿಂದ ತಾಜಾ ತರಕಾರಿಯನ್ನು ಖರೀದಿಸಿ, ಕಡಿಮೆ ದರದಲ್ಲಿ ಯಾವುದೇ ಲಾಭವನ್ನು ಅಪೇಕ್ಷಿಸದೇ ಮಾರಾಟ ಮಾಡುವ ಕಾಯಕದಲ್ಲಿ ತೊಡಗಿದೆ. ಇದರಿಂದ ತರಕಾರಿಗಳನ್ನು ಹೆಚ್ಚು ಬೆಲೆ ಕೊಟ್ಟು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದ ಶ್ರೀರಾಮನಗರದ ಜನರು ಇದೀಗ ಕಡಿಮೆ ದರದಲ್ಲಿ ತಾಜಾ ತರಕಾರಿಯನ್ನು ಖರೀದಿಸುತ್ತಿದ್ದಾರೆ.

ಹಾಲು ಉತ್ಪಾದಕ ಸಂಘವು ಗ್ರಾಮದಲ್ಲಿ ಎರಡು ದಿನಕ್ಕೂಮ್ಮೆ ತರಕಾರಿಯನ್ನು ಮಾರಾಟ ಮಾಡುತ್ತಿದೆ. ಮೊದಲ ಬಾರಿಗೆ ಗ್ರಾಮದಲ್ಲಿ ಪ್ರಾಯೋಗಿಕವಾಗಿ ಇದನ್ನು ಆರಂಭ ಮಾಡಿದ್ದು, ಅದು, ಯಶಸ್ವಿಯಾಗಿದ್ದರಿಂದ ಗ್ರಾಮದ ಸುತ್ತಮುತ್ತಲ ಹಳ್ಳಿಗಳಿಗೂ ಹೋಗಿ ಮಾರಾಟ ಮಾಡುವ ಯೋಜನೆಯನ್ನು ರೂಪಿಸಿಕೊಂಡಿದ್ದೇವೆ ಎನ್ನುತ್ತಾರೆ ಸಂಘದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್.‌

ತರಕಾರಿಯನ್ನು ಖರೀದಿಸಲು ಬರುವ ಗ್ರಾಹಕರು ಕೂಡ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಜೊತೆಗೆ ಮಾಸ್ಕ್‌ ಅನ್ನು ಕಡ್ಡಾಯವಾಗಿ ಧರಿಸಿ ತರಕಾರಿಯನ್ನು ಖರೀದಿ ಮಾಡುತ್ತಿದ್ದಾರೆ.

ಕಡಿಮೆ ದರದಲ್ಲಿ ಮಾರಾಟ: ತರಕಾರಿ ತಾಜಾ ಆಗಿರುವುದಲ್ಲದೇ, ಜನ ಸಾಮಾನ್ಯರ ಕೈಗೆಟುಕುವ ದರದಲ್ಲಿ ಮಾರಾಟ ಮಾಡುತ್ತಿರುವುದು ವಿಶೇಷ. ಈರುಳ್ಳಿ ಕೆ.ಜಿಗೆ ₹ 10, ಮೆಣಸಿನಕಾಯಿ ₹ 20, ಬದನೆಕಾಯಿ ₹ 10, ಆಲೂಗಡ್ಡೆ ₹ 38, ಚವಳೆಕಾಯಿ ₹ 20, ಟೊಮೆಟೊ ₹ 10 ರಂತೆ ಪ್ರತಿ ಕೆಜಿಗೆ ಮಾರಾಟ ಮಾಡಲಾಗುತ್ತಿದೆ.   ಜೊತೆಗೆ 3 ಕಟ್ಟು ಕೊತ್ತಂಬರಿಗೆ ₹ 5. ಐದು ಮೂಲಂಗಿಗಳಿಗೆ ₹ 10. ಹೂಕೋಸಿಗೆ ₹ 10ಕ್ಕೆ ಮಾರಾಟ ಮಾಡಲಾಗುತ್ತಿದೆ.

 ಕನಕಗಿರಿ ಹಾಗೂ ಗಂಗಾವತಿ ಸುತ್ತಮುತ್ತಲೂ ತರಕಾರಿಯನ್ನು ಬೆಳೆದ ರೈತರಿಂದ ನೇರವಾಗಿ ಖರೀದಿಸಿ ಇಲ್ಲಿಗೆ ತಂದು ಮಾರಾಟ ಮಾಡಲಾಗುತ್ತಿದೆ. ಇದರಿಂದ ತರಕಾರಿ ಬೆಳೆದ ರೈತರಿಗೂ ಹಾಗೂ ಗ್ರಾಹಕರಿಗೂ ಅನುಕೂಲವಾಗಿದೆ ಎನ್ನುತ್ತಾರೆ ರೆಡ್ಡಿ ಶ್ರೀನಿವಾಸ್ ಅವರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು