ಗುರುವಾರ , ಜೂನ್ 24, 2021
27 °C
ಒಂದು ವಾರದವರೆಗೂ 18 ರಿಂದ 44 ವರ್ಷದೊಳಗಿನವರಿಗೆ ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ

ಮೂರನೇ ಹಂತದ ಲಸಿಕೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: 18 ರಿಂದ 44 ವರ್ಷದವರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಲಿಂಗರಾಜು ಸೋಮವಾರ ಜಿಲ್ಲಾ ಆಸ್ಪತ್ರೆಯಲ್ಲಿ ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸೋಮವಾರದಿಂದ ಒಂದು ವಾರದವರೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆ ಹಾಕಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಕೋವಿಡ್-19ರ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪತ್ರಕರ್ತರನ್ನು ರಾಜ್ಯ ಸರ್ಕಾರ ‘ಫ್ರಂಟ್‌ಲೈನ್ ವಾರಿಯರ್ಸ್’ ಎಂದು ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಡ್ ಲಸಿಕೆ ನೀಡುವ ವ್ಯವಸ್ಥೆ ಮಾಡಿದ್ದು, ಮಾಧ್ಯಮದವರು ಸಹ ಕೊವ್ಯಾಕ್ಸಿನ್ ಪಡೆದುಕೊಂಡರು.

ಲಸಿಕೆ ಪಡೆದು ಫೋಟೊ ಕ್ಲಿಕ್: ಕೋವ್ಯಾಕ್ಸಿನ್ ಪಡೆದುಕೊಳ್ಳುವಂತೆ ಎಲ್ಲರಿಗೂ ಮತ್ತು ವಿಶೇಷವಾಗಿ ಯುವ ಜನರನ್ನು ಆಕರ್ಷಿಸಲು ಹಾಗೂ ಪ್ರೇರೆಪಿಸಲು ‘ಸೆಲ್ಫಿ ಫ್ರೇಮ್‌’ ಮಾಡಲಾಗಿದ್ದು, ಕೋವಿಡ್ ಲಸಿಕೆ ಪಡೆದುಕೊಂಡವರು ಈ ಸೆಲ್ಫಿ ಫ್ರೇಮ್ ನಲ್ಲಿ ನಿಂತುಕೊಂಡು ಫೋಟೊ ಕ್ಲಿಕ್ಕಿಸಿ, ‘ನಾನು ಕೋವಿಡ್ ಲಸಿಕೆ ಪಡೆದಿರುವೆ, ನೀವು ಪಡೆಯಿರಿ’ ಮತ್ತು ‘ಬನ್ನಿ ಕೊರೊನಾ ವಿರುದ್ಧ ಹೋರಾಡಲು ಕೈಜೋಡಿಸೋಣ’ ಎಂಬ ಸಂದೇಶವನ್ನು ನೀಡಲಾಯಿತು

ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಜಂಬಯ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಜಿ.ಸುರೇಶ್ ಸೇರಿದಂತೆ ಜಿಲ್ಲೆಯ ವಿವಿಧ ಮಾಧ್ಯಮ ಪ್ರತಿನಿಧಿಗಳು ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿಗಳು ಈ ವೇಳೆ
ಇದ್ದರು.

ಸರ್ಕಾರಿ ಕಚೇರಿ ಸಿಬ್ಬಂದಿಗೆ ಕೋವಿಡ್‌ ಭಯ

ಕುಷ್ಟಗಿ: ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದರೂ ಸರ್ಕಾರಿ ಕಚೇರಿಗಳಲ್ಲಿನ ಸಿಬ್ಬಂದಿಯ ಸುರಕ್ಷತೆಗೆ ಮೇಲಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ದೂರು ಕೇಳಿಬಂದಿದೆ.

ಇತ್ತೀಚಿನ ದಿನಗಳಲ್ಲಿ ಪಟ್ಟಣದಲ್ಲಿ ಸುಮಾರು 250ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಕೋವಿಡ್‌ ಲಕ್ಷಣಗಳು ಕಾಣಿಸಿದರೂ ಬಹುತೇಕ ವ್ಯಕ್ತಿಗಳು ತಪಾಸಣೆಗೆ ಒಳಗಾಗಿಲ್ಲ. ಪಾಸಿಟಿವ್‌ ಬಂದರೂ ಬಹುತೇಕ ಜನ ಹೊರಗಡೆ ತಿರುಗಾಡುವುದು, ಮಾರುಕಟ್ಟೆಗೆ ಬರಹೋಗುತ್ತಿರುವುದು ಕಂಡುಬಂದಿದ್ದು, ಈ ಕಾರಣಕ್ಕಾಗಿಯೇ ಸೋಂಕು ಹರಡುತ್ತಿದೆಎಂದು ಜನರು ತಿಳಿಸಿದ್ದಾರೆ.

ಸೋಂಕಿತ ವ್ಯಕ್ತಿಗಳು ಪಟ್ಟಣದಲ್ಲಿರುವ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳಿಗೆ ಬರುತ್ತಿರುವುದರಿಂದ ಅಲ್ಲಿಯ ಸಿಬ್ಬಂದಿಯೂ ಕೋವಿಡ್‌ ಸೋಂಕಿಗೆ ತುತ್ತಾಗುತ್ತಿದ್ದು, ಈ ಕಾರಣಕ್ಕೆ ತಾಲ್ಲೂಕು ಪಂಚಾಯಿತಿ, ಕೆನರಾ ಬ್ಯಾಂಕ್‌ ಸೀಲ್‌ಡೌನ್‌ ಮಾಡಲಾಗಿತ್ತು. ಇಷ್ಟಾದರೂ ಮೇಲಧಿಕಾರಿಗಳು ತಮ್ಮ ಕೈಕೆಳಗೆ ಕೆಲಸ ಮಾಡುವ ಸಿಬ್ಬಂದಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ನಿತ್ಯ ಅನೇಕ ಜನರು ಹೊರಗಿನಿಂದ ಬಂದು ಹೋಗುತ್ತಿರುತ್ತಾರೆ. ಬೇರೆ ಬೇರೆ ಕಡೆಗಳಿಂದಲೂ ಸಿಬ್ಬಂದಿ ಬರುತ್ತಿದ್ದಾರೆ. ಆದರೆ ಕೋವಿಡ್‌ ಸುರಕ್ಷತೆ ಕ್ರಮ ಕೈಗೊಂಡಿರಲಿಲ್ಲ. ಕಚೇರಿಯಲ್ಲಿ ಅಂತರವಿಲ್ಲದೆ ಸಿಬ್ಬಂದಿ ಒಂದೇ ಕಡೆ ಕುಳಿತು ಉಪಾಹಾರ ಸೇವಿಸುತ್ತಿದ್ದುದು ಕಂಡುಬಂದಿತು. ಆದರೆ ಕಚೇರಿಯಲ್ಲಿ ಸಿಡಿಪಿಒ ಇರಲಿಲ್ಲ. ಈ ಬಗ್ಗೆ ಕೇಳಿದರೆ ‘ಅವರಿಗೆ ದೈಹಿಕ ಸುಸ್ತು ಇದ್ದುದರಿಂದ ಬಂದಿಲ್ಲ ಎಂದು ಒಬ್ಬರು, ಕಚೇರಿ ವಾಹನ ಚಾಲಕ ಇರದ ಕಾರಣ ಅಧಿಕಾರಿ ಬಂದಿಲ್ಲ ಎಂದು ಮತ್ತೊಬ್ಬರು ಗೊಂದಲದ ಹೇಳಿಕೆ ನೀಡಿದರು.

ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆಯೇ ಎಂಬುದಕ್ಕೆ ಸಿಬ್ಬಂದಿ ಸ್ಪಷ್ಟ ಮಾಹಿತಿ ನೀಡಲಿಲ್ಲ.

ಅದೇ ರೀತಿ ವಿವಿಧ ಇಲಾಖೆಗಳ ಕಚೇರಿಗಳನ್ನು ಒಳಗೊಂಡಿರುವ ಮಿನಿ ವಿಧಾನಸೌಧ ಸಂಕೀರ್ಣದಲ್ಲೂ ಕೋವಿಡ್‌ ಸುರಕ್ಷತೆಗೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಕಂಡುಬಂದಿತು. ಸ್ವತಃ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಇರುವ ಕೊಠಡಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂಬುದು ಸೋಮವಾರ ಸ್ಥಳಕ್ಕೆ ಭೇಟಿ ನೀಡಿದಾಗ ತಿಳಿಯಿತು.

ಪುರಸಭೆ, ತಾಲ್ಲೂಕು ಪಂಚಾಯಿತಿಯಲ್ಲೂ ಸಿಬ್ಬಂದಿ ಸುರಕ್ಷತೆ ಬಗ್ಗೆ ಗಮನಹರಿಸಿಲ್ಲ ಎಂಬ ಆರೋಪಗಳು ಕೇಳಿಬಂದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು