ಗುರುವಾರ , ಮಾರ್ಚ್ 23, 2023
30 °C
ಇಳುವರಿ ಕುಸಿತ ಭೀತಿಯಲ್ಲಿ ರೈತರು: ಕೃಷಿ ವಿಜ್ಞಾನಿಗಳಿಂದ ಸಲಹೆ

ಹೆಸರು ಬೆಳೆಗೆ ಹಳದಿ ರೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಳವಂಡಿ: ಹೋಬಳಿ ವ್ಯಾಪ್ತಿಯ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಹೆಸರು ಬಿತ್ತನೆ ಮಾಡಿದ್ದು, ಹಳದಿ ನಂಜಾಣು ರೋಗ ಕಾಣಿಸಿಕೊಂಡಿರುವುದರಿಂದ ರೈತರಲ್ಲಿ ಆತಂಕ ಮನೆಮಾಡಿದೆ.

ಹೆಸರು ಬೆಳೆಯ ಎಲೆಯ ಮೇಲೆ ಹಳದಿ ಬಣ್ಣದ ಚುಕ್ಕೆಗಳು ಕಂಡು ಬರುತ್ತಿದ್ದು, ನಂತರ ಜಮೀನಿನಲ್ಲಿ ಬಿತ್ತಿದ ಹೆಸರು ಬೆಳೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಬೆಳೆಗಳ ಬೆಳವಣಿಗೆ ಕುಂಠಿತಗೊಂಡು ಇಳುವಾರಿ ಬಾರದೇ ನಾಶವಾಗುವ ಅಪಾಯವಿದೆ. ಹೂವುಗಳು ಕೂಡ ಕಡಿಮೆ ಸಂಖ್ಯೆಯಲ್ಲಿ ಬಿಟ್ಟು ಕಾಯಿ ಆಗದೇ ಶೇ 60ರಷ್ಟು ಬೆಳೆ ನಾಶವಾಗುವ ಭೀತಿ ಇದೆ.

ಹಳದಿ ನಂಜಾಣು ರೋಗಕ್ಕೆ ಹುಳು-ಕೀಟ ವೈಟ್ ಪ್ಲೇ (ಬಿಳಿನೊಣ) ಕಾರಣವಾಗಿದ್ದು, ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹೋಗಿ ರಸ ಹೀರುವುದರಿಂದ ಈ ವೈರಾಣು ಗಿಡದಿಂದ ಗಿಡಕ್ಕೆ ಹರಡುತ್ತದೆ. ಇದನ್ನು ಪ್ರಾರಂಭದಲ್ಲೇ ನಿಯಂತ್ರಿಸಿದರೆ ಉತ್ತಮ ಫಸಲು ಬರಲು ಸಾಧ್ಯ ಎಂದು ಕೃಷಿ ವಿಜ್ಞಾನಿಗಳು ಹೇಳುತ್ತಾರೆ.

ಹೊಲದಲ್ಲಿ ರೋಗ ಕಾಣಿಸಿಕೊಂಡ ಗಿಡಗಳನ್ನು ತಕ್ಷಣ ರೈತರು ಕಿತ್ತು ನೆಲದಲ್ಲಿ ಹೂಳಬೇಕು ಅಥವಾ ಸುಡಬೇಕು. ಪ್ರಾರಂಭದಲ್ಲೇ ಕೀಟನಾಶಕ ಬಳಕೆ ಮಾಡಬೇಕು. ಡೈಮಿಥೋಯೆಟ್ 1.5 ಮಿ.ಲೀ ಪ್ರತಿ ಲೀಟರ್ ಅಥವಾ ಇಮಿಡಾಕ್ಲೋವಿಡ್ 1 ಮಿ.ಲೀ, 1 ಲೀಟರ್ ನೀರಿಗೆ ಬೆರೆಸಿ ಗಿಡಗಳಿಗೆ ಸಿಂಪಡಿಸಬೇಕು ಹಾಗೂ ಹಳದಿ ಅಂಟು ಬಲೆಯನ್ನು 1 ಎಕರೆ ಪ್ರದೇಶದಲ್ಲಿ ಆರು ಕಡೆ ಅಳವಡಿಸಬೇಕು. ಇದನ್ನು ಮಾಡಿದರೆ ರೋಗ ನಿಯಂತ್ರಣಕ್ಕೆ ಬರುತ್ತದೆ.

ರೈತ ಸಂಪರ್ಕ ಕೇಂದ್ರದ ಎಎಒ ಯೋಗೇಶ ಕಾಟ್ರಳ್ಳಿ ಮಾತನಾಡಿ,‘ಹೆಸರು ಬೆಳೆಗೆ ಹಳದಿ ನಂಜಾಣು ರೋಗ ಕಾಣಿಸಿಕೊಂಡರೆ ಔಷಧ ಸಿಂಪಡಣೆ ಮಾಡುವ ಮೂಲಕ ನಿಯಂತ್ರಣಕ್ಕೆ ತರಬೇಕು. ಇಲ್ಲದಿದ್ದರೆ ಇಳುವರಿ ಕುಂಠಿತವಾಗುತ್ತದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.