ಕೊಪ್ಪಳ: ಗವಿಮಠದ ಸ್ವಾಮೀಜಿ ಮುಂದಾಳತ್ವಕ್ಕೆ ಆಗ್ರಹ

ಕೊಪ್ಪಳ: ಜಿಲ್ಲಾ ಕೇಂದ್ರಕ್ಕೆ ಸಮೀಪದಲ್ಲಿರುವ ಎಂಎಸ್‌ಪಿಎಲ್ ಸೇರಿದಂತೆ ವಿವಿಧ ಕಾರ್ಖಾನೆಗಳಿಂದ ಹೊರಬರುವ ಬೂದಿಮಿಶ್ರಿತ ದೂಳಿನಿಂದಾಗಿ ಜೀವಜಲ ಮತ್ತು ಕೃಷಿಚಟುವಟಿಕೆ ಮೇಲೆ ಆಗುತ್ತಿರುವ ಪರಿಣಾಮದ ವಿರುದ್ಧದ ಹೋರಾಟಕ್ಕೆ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮುಂದಾಳತ್ವ ವಹಿಸಬೇಕು ಎನ್ನುವ ಆಗ್ರಹ ಸಭೆಯಲ್ಲಿ ವ್ಯಕ್ತವಾಯಿತು.
ಹೋರಾಟದ ರೂಪರೇಷೆ ರೂಪಿಸುವ ಸಲುವಾಗಿ ಭಾನುವಾರ ಇಲ್ಲಿನ ಮಳೆಮಲ್ಲೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕರ ಸಭೆ ನಡೆಯಿತು. ಸಭೆಯಲ್ಲಿ ವಕೀಲರು ಹಾಗೂ ವಿವಿಧ ಗ್ರಾಮಗಳಿಂದ ರೈತ ಮುಖಂಡರು ಬಂದಿದ್ದರು.
ಹಿಂದೆ ಗದುಗಿನಲ್ಲಿ ಕಾರ್ಖಾನೆ ಸ್ಥಾಪಿಸಲು ಕಂಪನಿಗಳು ಮುಂದಾದಾಗ ಅಲ್ಲಿನ ಸ್ವಾಮೀಜಿ ಮುಂದಾಳತ್ವದಲ್ಲಿ ಹೋರಾಟ ಮಾಡಿದ್ದರಿಂದ ಗೆಲುವು ಲಭಿಸಿತು. ಈಗ ಅದೇ ಮಾದರಿಯಲ್ಲಿ ಗವಿಮಠದ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಮಾಡಬೇಕು. ಸ್ವಾಮೀಜಿಗೂ ಈ ಗಂಭೀರ ಸಮಸ್ಯೆ ಬಗ್ಗೆ ಅರಿವಿದೆ ಎಂದು ಸಾರ್ವಜನಿಕರು ಹೇಳಿದರು.
ನಮ್ಮ ಹೋರಾಟಕ್ಕೆ ಕೈ ಜೋಡಿಸಲು ಕೊಪ್ಪಳದ ಜನ ಮಾತ್ರವಲ್ಲ ಹಾಲವರ್ತಿ, ಕಿಡದಾಳ, ಗಿಣಗೇರಾ ಗ್ರಾಮಗಳ ಜನ ಸಿದ್ದರಿದ್ದಾರೆ. ಈ ಹೋರಾಟವನ್ನು ಕೆಲ ನಾಯಕರಿಗೆ ಮಾತ್ರ ಸೀಮಿತಗೊಳಿಸದೇ ಸಾಮೂಹಿಕ ನಾಯಕತ್ವದಲ್ಲಿ ಎದುರಿಸಬೇಕು. ವ್ಯಕ್ತಿ ಆಧಾರಿತ ಹೋರಾಟವಾದರೆ ನಮ್ಮ ಪ್ರಯತ್ನ ಸಫಲವಾಗುವುದಿಲ್ಲ ಎನ್ನುವ ಅಭಿಪ್ರಾಯವೂ ವ್ಯಕ್ತವಾಯಿತು.
ಬಿ. ಹೊಸಳ್ಳಿ ಗ್ರಾಮದ ಎಂ. ಕೆ. ಸಾಹೇಬ್ ಮಾತನಾಡಿ ‘ಹೋರಾಟದ ನೆಪದಲ್ಲಿ ಹಳ್ಳಿ ಜನರನ್ನು ಬಳಸಿಕೊಂಡು ಬೀಸಾಡಬೇಡಿ. ಹೋರಾಟದ ಪ್ರತಿ ಚಟುವಟಿಕೆಗಳು ಪ್ರತಿಯೊಬ್ಬರಿಗೂ ಗೊತ್ತಾಗಬೇಕು. ಹಿಂದಿನ ಹೋರಾಟಗಳಲ್ಲಿ ಹಳ್ಳಿಯ ಜನ ಬಳಕೆಯ ವಸ್ತುಗಳಂತೆ ಆಗಿದ್ದರು’ ಎಂದರು.
ಈ ಹೋರಾಟಕ್ಕೆ ರಾಜಕಾರಣಿಗಳನ್ನು ಕರೆದರೆ ಪ್ರಯೋಜನವಾಗುವುದಿಲ್ಲ. ಯಾವುದೇ ಕಾರಣಕ್ಕೂ ಅವರನ್ನು ಕರೆಯುವುದು ಬೇಡ. ಹೆಚ್ಚು ಜನ ಸೇರಿದಂತೆ ಅವರೇ ನಮ್ಮೊಂದಿಗೆ ಬರುತ್ತಾರೆ ಎನ್ನುವ ಅಭಿಪ್ರಾಯ ಸಭೆಯಲ್ಲಿ ಕೇಳಿಬಂತು. ರಸ್ತೆಗಿಳಿದು ಹೋರಾಟ ಮಾಡುವ ಬದಲು ಕಾನೂನು ಹೋರಾಟವೇ ಸೂಕ್ತ ಎನ್ನುವ ಬಗ್ಗೆಯೂ ಚರ್ಚೆಯಾಯಿತು.
ಅಂತಿಮವಾಗಿ ಫೆ. 8ರಂದು ಜಿಲ್ಲಾಧಿಕಾರಿಗೆ ಮನವಿ ಕೊಡಲು ನಿರ್ಧರಿಸಲಾಯಿತು. ಮುಂದಿನ ಪ್ರತಿಕ್ರಿಯೆ ನೋಡಿಕೊಂಡು ರೂಪುರೇಷೆ ನಿರ್ಧರಿಸಲು ತೀರ್ಮಾನಿಸಲಾಯಿತು.
ವಿಶ್ವನಾಥ್ ನಾಲ್ವಾಡ್, ಮಹೇಶ ಗೋವನಕೊಪ್ಪ, ಬಸವರಾಜ ಮುತ್ತಾಳ, ಗೌತಮ್ ರಾಜಪುರೋಹಿತ, ಪುತ್ತುರಾಜ್ ಚಟ್ಟಿ, ಜಾಕೀರ್ ಕಿಲ್ಲೇದಾರ್, ಉತ್ತಮ ರಾಯ್ಕರ್, ವೈಜನಾಥ ದಿವಟರ, ಬಸವರಾಜ ಪೂಜಾರ, ಪುಷ್ಪಾ ನಿಲೋಗಲ್, ರವಿ ಕಡೇಮನಿ, ಶ್ರೀಶೈಲ ಪಲ್ಲೇದ, ವಕೀಲರಾದ ಶಂಭನಗೌಡ ಪಾಟೀಲ, ಗೌರಮ್ಮ, ರಾಜು ಬಾಕಳೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.