ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಗಿರಿ: ಭಗ್ನಗೊಂಡ ಮೂರ್ತಿ ಪೂಜಿಸುವ ಭಕ್ತರು 

ಭೋಗಾಪುರೇಶ ರಥೋತ್ಸವ ಇಂದು: ಐತಿಹಾಸಿಕ ಹಿನ್ನೆಲೆಯ ಮಂದಿರ
ಮೆಹಬೂಬಹುಸೇನ ಕನಕಗಿರಿ
Published 15 ಏಪ್ರಿಲ್ 2024, 4:29 IST
Last Updated 15 ಏಪ್ರಿಲ್ 2024, 4:29 IST
ಅಕ್ಷರ ಗಾತ್ರ

ಕನಕಗಿರಿ: ತಾಲ್ಲೂಕಿನ ನವಲಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ಭೋಗಾಪುರೇಶ (ಆಂಜನೇಯ) ದೇವಸ್ಥಾನ ಐತಿಹಾಸಿಕವಾಗಿ ಪ್ರಸಿದ್ದಿ ಪಡೆದಿದೆ. ಹಂಪಿಯ ವಿರೂಪಾಕ್ಷೇಶ್ವರ ಮತ್ತು ಕನಕಗಿರಿಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಮಾದರಿಯಲ್ಲಿಯೇ ಇಲ್ಲಿನ ಗೋಪುರ ನಿಮಾ೯ಣಗೊಂಡಿದೆ. 1432ರಲ್ಲಿ ರಾಜಾ ಉಡಚಪ್ಪನಾಯಕ ಇದನ್ನು ನಿಮಿ೯ಸಿದ್ದಾರೆ.

ದೇವಸ್ಥಾನದ ಒಳಗೆ ಭೋಗಾಪುರೇಶ ಮತ್ತು ಉತ್ಸವ ಮೂತಿ೯ಯ ಮಂದಿರ ಇದೆ. ಭೋಗಾಪುರೇಶ ದೇವರು ಕಲ್ಲು ಶಿಲೆಯಲ್ಲಿದ್ದು ಹಲವಾರು ವಷ೯ಗಳ ಹಿಂದೆ ಕಳ್ಳರು ನಿಧಿ ಆಸೆಗಾಗಿ ದೇವರ ವಿಗ್ರಹವನ್ನು ಛಿದ್ರಗೊಳಿಸಿ ಹಳ್ಳಕ್ಕೆ ಎಸೆದಾಗ ಕಳ್ಳರಿಗೆ ನಿಧಿ ಸಿಗಲಿಲ್ಲ. ಬದಲಾಗಿ ಕಳ್ಳರು ತಮ್ಮ ಎರಡು ಕಣ್ಣುಗಳನ್ನು ಕಳೆದುಕೊಳ್ಳುತ್ತಾರೆ, ಮಾಡಿದ ಪ್ರಮಾದಕ್ಕೆ ಮರುಗಿ ಕಣ್ಣುಗಳನ್ನು ನೀಡುವಂತೆ ದೇವರಿಗೆ ಮೊರೆ ಹೋದ ಹಿನ್ನೆಲೆಯಲ್ಲಿ ಕಳ್ಳರಿಗೆ ಕಣ್ಣುಗಳು ಬಂದವು ಎಂಬ ಪ್ರತೀತಿ ಇದೆ.

ಬಹುತೇಕವಾಗಿ ಭಗ್ನವಾದ ದೇವರ ಮೂರ್ತಿಗೆ ಪೂಜೆ ಸಲ್ಲಿಸುವುದು ವಿರಳ ಹಾಗೂ ಅಪರೂಪ ಆದರೆ ತಾಲ್ಲೂಕಿನ ನವಲಿ ಗ್ರಾಮದಲ್ಲಿ ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಭಗ್ನಗೊಂಡ ಭೋಗಾಪುರೇಶ ಮೂರ್ತಿಗೆ ಇಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾಯ೯ಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.

‘ಭೋಗಾಪುರೇಶ ಇರುವ ಸ್ಥಳದಲ್ಲಿ ತುಪ್ಪದ ದೀಪ ಮಾತ್ರ ಹಚ್ಚಲಾಗುತ್ತಿದೆ. ಪುರುಷರೇ ಸಿದ್ದಪಡಿಸಿದ ನೈವೇದ್ಯ ಮಾತ್ರ ದೇವರಿಗೆ ಕೊಡುವುದು ಇಲ್ಲಿನ ಮತ್ತೊಂದು ವಿಶೇಷ’ ಎಂದು ಸಂಶೋಧಕ ಚೆನ್ನಪ್ಪ ಅವರು ತಿಳಿಸುತ್ತಾರೆ

ದೇಗುಲದ ಹಿಂದೆ ಹಳ್ಳ ಹರಿದು ಹೋಗಿದ್ದು ಸುಮಾರು ವರ್ಷಗಳ ಹಿಂದೆ ಭಾವಿಗಳನ್ನು ನಿರ್ಮಿಸಲಾಗಿದೆ. ಸದರಿ ದೇವರ ಪೂಜೆಗೆ ಈ ಭಾವಿಗಳಿಂದ ಮಡಿ ನೀರನ್ನು ಉಪಯೋಗಿಸಲಾಗಿದೆ.

ಪ್ರಸಿದ್ಧ ಕಟ್ಟೆಗಳು: ಭೋಗಾಪುರೇಶ ದೇವಸ್ಥಾನದ ಆವರಣದಲ್ಲಿ ಮಾಲಿಗೌಡರ ಕಟ್ಟೆ, ಪೋಲಿಸ್‍ಗೌಡರ ಕಟ್ಟೆ, ಕುಲಕರ್ಣಿಯವರ ಕಟ್ಟೆ ಎಂದು ರಥ ಬೀದಿಯಲ್ಲಿ ನಿರ್ಮಿತವಾಗಿದ್ದು ಸದರಿ ಕಟ್ಟೆಗಳು ಇಂದಿಗೂ ಇವೆ.

ಈ ದೇವಸ್ಥಾನಕ್ಕೆ ಸಾಕಷ್ಟು ಜನ ಪೀಠಾಧಿಪತಿಗಳು, ದಾಸರು, ದಾರ್ಶನಿಕರು, ಸಾಧು ಸಂತರು ಭೇಟಿ ನೀಡಿರುವ ಕುರಿತು ಪ್ರತೀತಿ ಇದೆ. ಹೀಗಾಗಿ ಪ್ರಭಾವಿ ಕ್ಷೇತ್ರವಾಗಿ ಭೋಗಾಪುರೇಶ ದೇವಾಲಯ ಭಕ್ತರ ಗಮನ ಸೆಳೆಯುತ್ತಿದೆ..

ಹೊಸ ತೇರು: ನೂರಾರು ವಷ೯ಗಳಿಂದ ಎಳೆಯಲಾಗುತ್ತಿರುವ ತೇರು ತೀರ ಶಿಥಿಲಾವಸ್ಥೆಯಲ್ಲಿತ್ತು. ಇದನ್ನು ಗಮನಿಸಿದ ಸ್ಥಳೀಯರು ಹಾಗೂ ದೇವರ ಭಕ್ತರು ಕಳೆದ ಐದು ವಷ೯ಗಳ ಹಿಂದೆ ನೂತನ ತೇರು ನಿಮಾ೯ಣಕ್ಕೆ ಸಿದ್ಧತೆ ಕೈಗೊಂಡು ಭಕ್ತರಿಂದ ಸಂಗ್ರಹಿಸಿದ ಅಂದಾಜು ₹ 40 ಲಕ್ಷ ಮೊತ್ತದಲ್ಲಿ 2020ರಲ್ಲಿ ಹೊಸ ತೇರು ನಿರ್ಮಾಣ ಮಾಡಿದರು, 45 ಅಡಿ ಎತ್ತರದಲ್ಲಿದೆ. ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ರಥೋತ್ಸವ ನಡೆಯಲಿಲ್ಲ. ಎಪ್ರಿಲ್ 15ರಂದು ಭೋಗಾಪುರೇಶ ರಥೋತ್ಸವ ನಡೆಯಲಿದ್ದು ಬೆಳಿಗ್ಗೆ ಅಭಿಷೇಕ, ಕುಂಕುಮಾರ್ಚನೆ, ಅನ್ನ ಬಲಿ,ರಥಾಂಗ ಹೋಮ, ಅನ್ನ ಸಂತರ್ಪಣೆ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

 ಕನಕಗಿರಿ ತಾಲ್ಲೂಕಿನ ನವಲಿ ಗ್ರಾಮದ  ಭೋಗಾಪುರೇಶ ದೇವಸ್ಥಾನದ ಮುಂದಿನ ನೋಟ 
 ಕನಕಗಿರಿ ತಾಲ್ಲೂಕಿನ ನವಲಿ ಗ್ರಾಮದ  ಭೋಗಾಪುರೇಶ ದೇವಸ್ಥಾನದ ಮುಂದಿನ ನೋಟ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT