ಶುಕ್ರವಾರ, ಫೆಬ್ರವರಿ 26, 2021
31 °C
ಸಂಸದ ಸಂಗಣ್ಣ ಕರಡಿ ಅಧ್ಯಕ್ಷತೆಯಲ್ಲಿ ದಿಶಾ ಸಮಿತಿ ಸಭೆ: ರೋಗ ಪತ್ತೆಗೆ ವಾಹನ ಬಳಕೆ

ಕೃಷಿ ವಾಹನ: ಸೌಲಭ್ಯಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಮಣ್ಣು ಪರೀಕ್ಷೆ, ಬೆಳೆಗಳ ರೋಗ ಪತ್ತೆ ಮುಂತಾದ ಉದ್ದೇಶಕ್ಕಾಗಿ ರೈತರಿಗೆ ಅನುಕೂಲ ಮಾಡಿಕೊಡಲು ಜಿಲ್ಲೆಯಲ್ಲಿ ಚಾಲನೆ ನೀಡಿರುವ ಕೃಷಿ ಸಂಜೀವಿನಿ ವಾಹನಗಳಲ್ಲಿ ರೈತರಿಗೆ ಪೂರಕವಾಗಿ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಅಳವಡಿಸಿ ಎಂದು ಜಂಟಿ ಕೃಷಿ ನಿರ್ದೇಶಕರಿಗೆ ಸಂಸದ ಹಾಗೂ ದಿಶಾ ಸಮಿತಿ ಅಧ್ಯಕ್ಷ ಸಂಗಣ್ಣ ಕರಡಿ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಹೋಬಳಿಗೊಂದರಂತೆ 20 ಕೃಷಿ ಸಂಜೀವಿನಿ ವಾಹನ ನೀಡಲಾಗಿದೆ. ಪ್ರಸ್ತುತ ಮಣ್ಣು ಪರೀಕ್ಷೆ, ಬೆಳೆಗಳಿಗೆ ತಗುಲುವ ರೋಗಗಳ ಪತ್ತೆಗೆ ವಾಹನಗಳನ್ನು ಬಳಕೆ ಮಾಡುವ ಉದ್ದೇಶವಿದೆ. ಅದರೊಂದಿಗೆ ರೈತರಿಗೆ ಬೆಳೆ ವಿಮಾ ಯೋಜನೆ, ಕೃಷಿ ಇಲಾಖೆ ಸೌಲಭ್ಯಗಳು ಮುಂತಾದ ಮಾಹಿತಿಯನ್ನು ವಾಹನಗಳ ಮೂಲಕ ರೈತರಿಗೆ ತಲುಪಿಸಿ ಎಂದು ಸಲಹೆ ನೀಡಿದರು.

ಏಕ ಕಾಲದಲ್ಲಿ ರೈತರಿಗೆ ಅನೇಕ ವಿಷಯಗಳು ತಿಳಿಯಲು ಅನುಕೂಲವಾಗುತ್ತದೆ. ಇದರಿಂದ ವಾಹನಗಳ ಸದುಪಯೋಗವೂ ಆಗುತ್ತದೆ ಎಂದರು.

ಮೆಕ್ಕೆಜೋಳ ಬೆಳೆಯಲ್ಲಿ ಸೈನಿಕ ಹುಳುವಿನ ಬಾಧೆ ಕಂಡುಬಂದಿದ್ದು, ಅದರ ನಿಯಂತ್ರಣಕ್ಕೆ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕು. ಭತ್ತದಲ್ಲಿ ಕಾಣಿಸುವ ಕಣೆ ನೊಣದ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಿ ಎಂದರು.

ತೋಟಗಾರಿಕೆ ಬೆಳೆಗಳಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಒಂದು ಜಿಲ್ಲೆ ಒಂದು ಬೆಳೆ ಕಾರ್ಯಕ್ರಮದಡಿ ಜಿಲ್ಲೆಯಿಂದ ಪೇರಲ ಹಣ್ಣು ಆಯ್ಕೆಯಾಗಿದೆ. ಜಿಲ್ಲೆಯಲ್ಲಿ ಸುಮಾರು 700 ರಿಂದ 800 ಎಕರೆ ಪ್ರದೇಶದಲ್ಲಿ ಪೇರಲ ಬೆಳೆ ಬೆಳೆಯಲಾಗುತ್ತದೆ. ಜಿಲ್ಲೆಯ ಬೆಳೆಗೆ ಸೂಕ್ತ ಮಾರುಕಟ್ಟೆ ಒದಗಿಸಲು ರೈತರ ಸಭೆ ನಡೆಸಿ ಅಗತ್ಯ ಮಾಹಿತಿ ನೀಡಿ. ಉತ್ಪಾದನೆ ಹೆಚ್ಚಾದಂತೆ ಅದನ್ನು ಸಂರಕ್ಷಿಸುವ ಅವಶ್ಯಕತೆಯೂ ಹೆಚ್ಚಾಗಿರುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಸಂಸ್ಕರಣಾ ಘಟಕ ಸ್ಥಾಪಿಸಲು ಜಿಲ್ಲಾ ಪಂಚಾಯಿತಿ ಸಿಇಒ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ತೋಟಗಾರಿಕೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ಬೇಸಿಗೆ ಆರಂಭವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹಸುಗಳನ್ನು ಸಾಕಲು ರೈತರಿಗೆ ತೊಂದರೆಯಾಗಬಹುದು. ಅದಕ್ಕಾಗಿ ಪ್ರತಿ ತಾಲ್ಲೂಕಿಗೆ ಎರಡು ಗೋಶಾಲೆ ಸ್ಥಾಪಿಸಲು ಸರ್ಕಾರ ನಿರ್ದೇಶನ ನೀಡಿದೆ. ಅದರಂತೆ ಜಿಲ್ಲೆಯ ತಾಲ್ಲೂಕುಗಳಲ್ಲಿ ಗೋಶಾಲೆ ಸ್ಥಾಪಿಸಲು ನಿವೇಶನಗಳ ಗುರುತಿಸುವಿಕೆಗೆ ಕ್ರಮ ಕೈಗೊಳ್ಳಿ ಎಂದರು.

ಜಿಲ್ಲೆಯಲ್ಲಿ ಈಗಾಗಲೇ ತೋಟಗಾರಿಕೆ ಮಹಾವಿದ್ಯಾಲಯವಿದೆ ಅದರಂತೆ ಪಶುವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸುವ ಯೋಜನೆಯಿದೆ. ಇದಕ್ಕಾಗಿ ಇಲಾಖೆಯ ಉಪನಿರ್ದೇಶಕರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಎಂದರು.

ಶಿಕ್ಷಣ ಇಲಾಖೆಯ ಪ್ರಮುಖ ಕಾರ್ಯಕ್ರಮವಾದ ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ಸಾಮಗ್ರಿ ಪೂರೈಕೆಯಾಗುತ್ತಿರುವ ಕುರಿತು ದೂರುಗಳು ಕೇಳಿ ಬಂದಿತ್ತು. ಈ ಬಗ್ಗೆ ಅಕ್ಷರ ದಾಸೋಹ ಅಧಿಕಾರಿ ನೀಡಿರುವ ಉತ್ತರ ಸಮರ್ಪಕವಾಗಿಲ್ಲ. ಆದರೆ ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸಬಾರದು. ವಿದ್ಯಾರ್ಥಿಗಳಿಗೆ ಆರೋಗ್ಯಕರ, ಗುಣಮಟ್ಟದ ಆಹಾರವನ್ನು ನೀಡಬೇಕಾದ್ದು ಇಲಾಖೆಯ ಕರ್ತವ್ಯ. ಅದನ್ನು ಕಟ್ಟುನಿಟ್ಟಾಗಿ ನಿರ್ವಹಿಸಿ ಎಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ರಘುನಂದನ್ ಮೂರ್ತಿ, ಉಪಕಾರ್ಯದರ್ಶಿ ಶರಣಬಸವರಾಜ, ನವೀನ್ ಗುಳಗಣ್ಣನ್ನವರ‌, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು
ಇದ್ದರು.

‘ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರೆ ಕ್ರಮ’
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಮುಂಡರಗಿ ಮತ್ತು 43 ಹಳ್ಳಿಗಳ ಕಾಮಗಾರಿಯಲ್ಲಿ ಅಕ್ರಮ ಕಂಡುಬಂದಿದ್ದು ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಲೋಕಾಯುಕ್ತಕ್ಕೆ ದೂರು ನೀಡುವಂತೆ ನಿರ್ದೇಶನ ನೀಡಿದ್ದರು. ಈ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿ ಎಂದರು.

ಸಾರ್ವಜನಿಕರ ಉಪಯೋಗಕ್ಕಾಗಿ ಸರ್ಕಾರದಿಂದ ಕೈಗೊಳ್ಳಲಾದ ಕಾಮಗಾರಿಗಳಿಗೆ ಸಾರ್ವಜನಿಕರಿಂದ ಹಾನಿಯಾದಲ್ಲಿ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸಾರ್ವಜನಿಕರಿಗೆ ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡಿದಲ್ಲಿ ಕಾನೂನು ಕ್ರಮಕ್ಕೆ ಒಳಗಾಗಬಹುದು ಎಂಬುವುದನ್ನು ಮನವರಿಕೆ ಮಾಡಿ. ಹಾನಿಯದ ಪೈಪ್‌ಲೈನ್‌ಗಳ ದುರಸ್ಥಿಗೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಗ್ರಾಮೀಣ ಕುಡಿಯುವ ನೀರು ಹಾಗು ನೈರ್ಮಲ್ಯ ಇಲಾಖೆಯ ಅಧಿಕಾರಿಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು