ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಟೆಕಟ್ಟೆಯಲ್ಲಿಯೂ ದಿಲ್ಲಿ ಕುರ್ಚಿಯದ್ದೇ ಚಿಂತೆ

ಸ್ಥಳೀಯ ಅಭ್ಯರ್ಥಿಗಳು, ವಿಷಯಗಳು ಗೌಣ, ನರೇಂದ್ರ ಮೋದಿ ಮಾತು, ರಾಹುಲ್‌ ಗಾಂಧಿ ವಿಷಯವೇ ಪ್ರಧಾನ
ಪ್ರಮೋದ
Published 28 ಏಪ್ರಿಲ್ 2024, 5:10 IST
Last Updated 28 ಏಪ್ರಿಲ್ 2024, 5:10 IST
ಅಕ್ಷರ ಗಾತ್ರ

ಕೊಪ್ಪಳ: ನಿತ್ಯ ಬಿಸಿಲಿನ ತಾಪ ಏರುತ್ತಿರುವಂತೆ ಲೋಕಸಭಾ ಚುನಾವಣಾ ಕಾವು ಕೂಡ ಏರತೊಡಗಿದೆ. ಮಳೆ, ಬೆಳೆ, ತಮ್ಮೂರು, ನೆರೆಹೊರೆಯ ಜಿಲ್ಲೆಗಳ ಆಗುಹೋಗುಗಳ ಕುರಿತು ಚರ್ಚೆಗೆ ವೇದಿಕೆಯಾಗುತ್ತಿದ್ದ ಹರಟೆಕಟ್ಟೆಗೂ ಈಗ ‘ಲೋಕ’ದ ಕಾವು ತಟ್ಟಿದೆ.

ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳ ಕಟ್ಟೆಗಳಲ್ಲಿ ಈಗ ದಿಲ್ಲಿ ಖುರ್ಚಿಯ ಮಾಲೀಕನದ್ದೇ ಚರ್ಚೆಯ ವಸ್ತುವಾಗಿದೆ.

ಈ ಬಾರಿ ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎನ್ನುವ ‘ತಟಸ್ಥಿಗರ’ ಯೋಚನೆ ಒಂದೆಡೆಯಾದರೆ ಬಿಜೆಪಿ ಬೆಂಬಲಿಗರು ‘ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದು ನಿಶ್ಚಿತ’ ಎಂದು ಭರವಸೆ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಗನ ಅತ್ಯುತ್ಸಾಹದ ಮಾತಿಗೆ ಸೆಡ್ಡು ಹೊಡೆಯುವಂತೆ ಎದುರೇಟು ನೀಡುತ್ತಿರುವ ಕಾಂಗ್ರೆಸ್‌ ಕಾರ್ಯಕರ್ತರು ‘ಈ ಬಾರಿ ಐ.ಎನ್‌.ಡಿ.ಐ.ಎ ಒಕ್ಕೂಟದ್ದೇ ಅಧಿಕಾರದ ದರ್ಬಾರು’ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.

ಹೀಗೆ ಹಳ್ಳಿಗಳ ಹಿರಿಯರು ಪರಸ್ಪರ ಚರ್ಚೆ, ಸಮಾಲೋಚನೆ ಮೂಲಕ ತಮ್ಮ ಪಕ್ಷಗಳ ನಾಯಕರನ್ನು ಬೆಂಬಲಿಸುವ ಮಾತುಗಳಿಗೆ ಊರಿನ ಪ್ರಮುಖ ತಾಣಗಳಲ್ಲಿ ಒಂದಾದ ಹರಟೆ ಕಟ್ಟೆ ವೇದಿಕೆಯಾಗುತ್ತಿದೆ. ಬೇಸಿಗೆಯ ಸಮಯದಲ್ಲಿ ಈ ವರ್ಷ ಸಹಿಸಲು ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಬಿರುಬಿಸಿಲು. ಹೀಗಾಗಿ ಹೊಲ ಗದ್ದೆಗಳಲ್ಲಿ ರೈತರ ಕೆಲಸದ ಸಮಯವೂ ಬದಲಾಗಿದೆ. ಬೆಳಗಿನ ಜಾವವೇ ಹೊಲಕ್ಕೆ ಹೋಗಿ ಬಿಸಿಲು ರಂಗೇರುವ ಹೊತ್ತಿಗೆ ಮನೆ ಸೇರಿಕೊಳ್ಳುವ ಮತ್ತು ಸಂಜೆ ಬಿಸಿಲು ಕಡಿಮೆಯಾದ ಬಳಿಕ ಮತ್ತೆ ಹೊಲಕ್ಕೆ ಹೋಗಿ ಶ್ರಮ ಪಡುತ್ತಿದ್ದಾರೆ.

ಉಳಿದ ಅವಧಿಯಲ್ಲಿ ಮರದ ತಣ್ಣನೆಯ ನೆರಳಿನಲ್ಲಿ ಕಟ್ಟೆಯ ಮೇಲೆ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದು, ಅಲ್ಲಿ ಲೋಕಸಭಾ ಚುನಾವಣೆಯ ವಿಷಯವೇ ಪ್ರಧಾನವಾಗಿದೆ. ಕೊಪ್ಪಳ ತಾಲ್ಲೂಕಿನ ಇರಕಲ್ಲಗಡ, ಚಿಲಕಮುಖಿ, ಹಾಸಗಲ್‌, ಚಾಮಲಾಪುರ, ಕುಷ್ಟಗಿ ತಾಲ್ಲೂಕಿನ ಹನುಮನಾಳ, ಹನುಮಸಾಗರ, ನವಲಹಳ್ಳಿ, ತಾವರಗೇರಾ, ಸಿಂಧನೂರು, ಮಸ್ಕಿ, ಸಿರಗುಪ್ಪ, ಗಂಗಾವತಿ, ಕನಕಗಿರಿ ಹಾಗೂ ಯಲಬುರ್ಗಾದ ಕಟ್ಟೆಗಳಲ್ಲಿ ಚುನಾವಣೆಯೇ ಚರ್ಚೆಗೆ ಪ್ರಮುಖ ವಿಷಯವಾಗಿದೆ.

ಹಲವು ಊರುಗಳಲ್ಲಿ ’ಸಮಗ್ರ ಸಮಾಚಾರ’ ಚರ್ಚೆಗೆ ಹಳ್ಳಿಗಳಲ್ಲಿ ಮೊದಲಿನಿಂದಲೂ ಇರುವ ಹರಟೆಕಟ್ಟೆ ವೇದಿಕೆಯಾದರೆ ಇನ್ನೂ ಕೆಲ ಹಳ್ಳಿಗಳಲ್ಲಿ ಊರ ಮುಂದಿನ ಚಹಾ ಅಂಗಡಿ, ತಂಪು ಪಾನೀಯ ಮಾರಾಟ ಮಾಡುವ ಅಂಗಡಿ, ಆಟೊ ನಿಲ್ದಾಣ, ಇಸ್ತ್ರಿ ಅಂಗಡಿ, ಬಸ್‌ ನಿಲ್ದಾಣ, ಹೋಟೆಲ್‌ಗಳೇ ರಾಜಕೀಯ ಚರ್ಚೆಯ ಕಟ್ಟೆಗಳಾಗಿವೆ. ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಇದೇ ರೀತಿಯ ವಾತಾವರಣ.

ಅಷ್ಟೇ ಏಕೆ ಮಸ್ಕಿಗೆ ಸಮೀಪದಲ್ಲಿರುವ ಲಿಂಗಸಗೂರು ವಿಧಾನಸಭಾ ಕ್ಷೇತ್ರದ ಛತ್ರ ಗ್ರಾಮದ ಜಾತ್ರೆಯಲ್ಲಿ ಚುನಾವಣೆಯದ್ದೇ ಚರ್ಚೆ ಜೋರಾಗಿತ್ತು. ರಾಜ್ಯ ಹಾಗೂ ಹೊರರಾಜ್ಯಗಳಿಂದ ಬಂದಿದ್ದ ಸಾವಿರಾರು ಸಂಖ್ಯೆಯ ಜನರ ನಡುವಿನ ಚರ್ಚೆ ಆಸಕ್ತಿಕರವಾಗಿತ್ತು. ಕೆಲವರು ಬಿಜೆಪಿ ಗೆಲುವು ಪಕ್ಕಾ ಎಂದರೆ, ಕಾಂಗ್ರೆಸ್‌ ಗೆಲ್ಲೋದು ಗ್ಯಾರಂಟಿ ಎಂದರು. ಇವುಗಳ ನಡುವೆ ಯಾರು ಗೆದ್ದರೇನು ನಾವು ದುಡಿಯುವುದು ತಪ್ಪುವುದಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು ಅನೇಕರು.

ಮತ್ತಷ್ಟು ಜನ ’ನಾವು ದುಡಿದು ತಿನ್ನೊ ಜನರ್ರೀ... ನಮಗ್‌ ಯಾಕ್‌ ಬೇಕ್ರಿ ಚುನಾವಣೆ ರಗಳೆ’ ಎಂದು ಜಾರಿಕೊಂಡರು. ಹಳ್ಳಿಗಳ ಯುವತಿಯರನ್ನು ಮಾತಿಗೆಳೆದಾಗ ಅನೇಕರು ’ಇದೇ ಮೊದಲ ಸಲ ವೋಟ್‌ ಹಾಕೋಕ ಅವಕಾಶ ಸಿಕ್ಕೈತ್ರಿ. ಮುಂದಿನ ಸಲ ನನ್ನ ಅಭಿಪ್ರಾಯ ಹೇಳ್ತಿನ್ರೀ’ ಎಂದರು. ಮಸ್ಕಿ ತಾಲ್ಲೂಕಿನ ತರೇಖಾನದಲ್ಲಿ ಇದೇ ರೀತಿಯ ವಾತಾವರಣ ಕಂಡುಬಂದಿತು.

ಕುಷ್ಟಗಿ ತಾಲ್ಲೂಕಿನ ನವಲಹಳ್ಳಿಯಲ್ಲಿ ಬಿರುಬಿಸಿಲಿನಲ್ಲಿಯೂ ತಣ್ಣನೆಯ ಗಾಳಿ ಬರುತ್ತಿದ್ದ ಹರಟೆಕಟ್ಟೆಯಲ್ಲಿ ಚರ್ಚೆಗೆ ಕುಳಿತಿದ್ದ ಪರಶುರಾಮ ಎಂಬುವರು ’ಯಾರಾದರೂ ಅಧಿಕಾರಕ್ಕೆ ಬರಲಿ, ರೈತರ ಬದುಕು ಹಸನಾಗಬೇಕು. ರೈತರಿಗೆ ನೆರವಾಗುವ ಯಾವುದೇ ಪಕ್ಷವಿದ್ದರೂ ಅವರಿಗೆ ನಮ್ಮ ಬೆಂಬಲವಿರುತ್ತದೆ’ ಎಂದರು.

ಈ ಚರ್ಚೆ ಇನ್ನೂ ಎಷ್ಟು ದಿನ ಎಂದು ಸಿಂಧನೂರಿನ ಬಸವರಾಜ, ಗಂಗಾವತಿ ಆಟೊ ಚಾಲಕ ಮಹಮ್ಮದ್‌ ಹುಸೇನ್‌ ಅವರನ್ನು ಪ್ರಶ್ನಿಸಿದಾಗ ’ಚುನಾವಣೆಯ ಫಲಿತಾಂಶ ಬರುವ ಜೂ. 4ರ ತನಕ. ಅಲ್ಲಿಯ ತನಕ ನಮಗೆ ಚುನಾವಣಾ ಚರ್ಚೆಯ ರಸದೂಟ’ ಎಂದು ತುಟಿಯಂಚಿನಲ್ಲಿ ನಗು ಅರಳಿಸಿದರು.

ಅಭ್ಯರ್ಥಿಗಳೇ ಗೊತ್ತಿಲ್ಲ!

ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಮಸ್ಕಿ ಸಿರಗುಪ್ಪ ಮತ್ತು ಸಿಂಧನೂರು ತಾಲ್ಲೂಕುಗಳ ಹಲವು ಹಳ್ಳಿಗಳ ಜನರಿಗೆ ಕ್ಷೇತ್ರದ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಯಾರು ಎನ್ನುವುದೇ ಗೊತ್ತಿಲ್ಲ! ಮಸ್ಕಿ ಬಸ್‌ ನಿಲ್ದಾಣದ ಸಮೀಪದ ಹಣ್ಣಿನ ವ್ಯಾಪಾರದಲ್ಲಿ ತೊಡಗಿದ್ದ ಶಾರದಾ ತರಕಾರಿ ವ್ಯಾಪಾರಿಯೊಬ್ಬರು ಚುನಾವಣೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಕ್ಷೇತ್ರದ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಹೆಸರಾದರೂ ಹೇಳಿ ಎಂದಾಗ ’ಕ್ಯಾಂಡಿಡೇಟ್‌ ತೊಗೊಂಡು ಏನ್‌ ಮಾಡ್ತೀರಿ. ನಮಗೆ ಪಾರ್ಟಿ ಮುಖ್ಯ. ಅವರ ಹೆಸರು ನಮಗೆ ಗೊತ್ತಿಲ್ಲ’ ಎಂದು ಜಾರಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT