ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಸಿವೆ ಬೆಳೆಯತ್ತ ಚಿತ್ತ ಹರಿಸಿದ ರೈತರು

ಕೆ. ಮಲ್ಲಿಕಾರ್ಜುನ
Published 12 ಫೆಬ್ರುವರಿ 2024, 6:34 IST
Last Updated 12 ಫೆಬ್ರುವರಿ 2024, 6:34 IST
ಅಕ್ಷರ ಗಾತ್ರ

ಕಾರಟಗಿ: ತುಂಗಭದ್ರಾ ಜಲಾಶಯದ ಸೆರಗಿನ ನೀರಾವರಿ ಪ್ರದೇಶದಲ್ಲಿ ಬರ ಆವರಿಸಿದ ವಾತಾವರಣವಿದೆ. ಭತ್ತದ ಬೆಳೆಯ ಶ್ರೀಮಂತಿಕೆಯಲ್ಲಿ ಮೆರೆಯುತ್ತಿದ್ದ ಭಾಗದ ಹಚ್ಚ ಹಸಿರು ಜಾಗೆಯಲ್ಲಿ ಈಗ ಏನಿದ್ದರೂ ಹಳದಿಯ ಝಲಕ್‌ ಅಂದರೆ ಸಾಸಿವೆ ಬೆಳೆ ಎದ್ದು ಕಾಣುತ್ತಿದೆ.

ದಶಕದ ಹಿಂದೆ ಒಂದು ಬೆಳೆಯ ಶಿಕ್ಷೆಯನ್ನು ಅನುಭವಿಸಿದ್ದ ತುಂಗಭದ್ರಾ ಸೆರಗಿನಡಿಯ ತ್ರಿವಳಿ ಜಿಲ್ಲೆಗಳ ರೈತರು ಪರ್ಯಾಯ ಬೆಳೆಯತ್ತ ವಾಲುವುದು ಅನಿವಾರ್ಯವಾಗಿದೆ.

ತುಂಗಭದ್ರಾ ಜಲಾಶಯದ ವ್ಯಾಪ್ತಿಯ ಪ್ರದೇಶಗಳಲ್ಲಿ ಹಸಿರಿನ ಜಾಗೆಯಲ್ಲಿ ಈಗ ಸಾಸಿವೆ ಬೆಳೆಯ ಘಮ ರಾಜಾಜಿಸುತ್ತಿದೆ. ಮುನಿದ ವರುಣ, ಜಲಾಶಯದಲ್ಲಿ ನೀರಿನ ಅಭಾವದ ಮಧ್ಯೆ ಚಿಂತಿತರಾದ ಅನೇಕ ರೈತರು ಸಾಸಿವೆಗೆ ಮೊರೆ ಹೋಗಿದ್ದಾರೆ. ರಸ್ತೆಯ ಯಾವ ಭಾಗದಲ್ಲಿ ಕ್ಷಣ ಸಂಚರಿಸಿದರೂ ಹಳದಿಯ ಸಾಸಿವೆ ಬೆಳೆ ಎದ್ದು ಕಾಣುತ್ತಾ, ತನ್ನ ಆಕರ್ಷಣೆಗೆ ಹೋಗುವವರನ್ನು ಕ್ಷಣ ನಿಲ್ಲಿಸಿ, ವೀಕ್ಷಿಸುವಂತೆ ಮಾಡಿದೆ.

ಸಾಸಿವೆ ಎಣ್ಣೆ ಸಹಿತ, ಸಹಜವಾದ ಸಾಸಿವೆ ಬೀಜಗಳನ್ನು ಭತ್ತ ಕಟಾವು ಮಾಡುವ ಸಮಯದಲ್ಲೇ ಉಗ್ಗಿದ್ದಾರೆ. ಈಗ ಅದರ ಬೆಳೆ ಹುಬ್ಬೇರಿಸುವಂತೆ ಬೆಳೆದಿದೆ. ಎಕರೆಗೆ ಒಂದು ಕೆಜಿ ಸಾಸಿವೆ ಬೀಜವನ್ನು ನೆಲ ಹಸಿ ಇರುವಾಗಲೇ ಉಗ್ಗಬೇಕು. ಬೆಳೆ ಪ್ರಫುಲ್ಲವಾಗಿ ಬರಬೇಕೆಂದರೆ ಒಂದೆರಡು ಬಾರಿ ಕ್ರಿಮಿನಾಶಕ ಸಿಂಪಡಿಸಿದರೆ ಸಾಕು. ಎಕರೆಗೆ 10 ಕ್ವಿಂಟಲ್‌ವರೆಗೆ ಬೆಳೆ ಬರುತ್ತದೆ. ಕ್ವಿಂಟಲ್‌ಗೆ ಕಳೆದ ಬಾರಿ ₹8 ಸಾವಿರ ಇತ್ತು ಈ ಬಾರಿ ಅಧಿಕವಾಗಲಿದೆ ಎಂಬುದು ರೈತರ ಆಶಯ.

ಭತ್ತದ ಬೆಳೆಗೆ ಎಕರೆಗೆ ₹50 ಸಾವಿರದವರೆಗೆ ಖರ್ಚು ಮಾಡಲಾಗುತ್ತದೆ. ಆದರೆ ಸಾಸಿವೆ ಕನಿಷ್ಟ ಬಂಡವಾಳದಲ್ಲೇ ಅಧಿಕ ಲಾಭ ತರುವ ಬೆಳೆಗಳಲ್ಲಿ ಒಂದಾಗಿದೆ. ಸಾಸಿವೆಯ ಜೊತೆಗೆ ಉದ್ದು, ಹೆಸರು, ಅಲಸಂದಿ ಬೆಳೆಯನ್ನು ಅನೇಕ ರೈತರು ತಾಲ್ಲೂಕಿನಾದ್ಯಂತ ಬೆಳೆಯುತ್ತಿದ್ದಾರೆ. ಕೂರಿಗೆ, ಉಗ್ಗಿದ ಭತ್ತದ ಬೆಳೆ ಸಮಾಧಾನ ತರುವಂತೆ ಬೆಳೆದಿದೆ. ಲವಣಾಂಶದ ನೀರಿನ, ವಾತಾವರಣದ ಹಿನ್ನೆಲೆಯಲ್ಲಿ ಬೋರ್‌ವೆಲ್‌ ಅವಲಂಬಿತ ಭತ್ತದ ಬೆಳೆ ರೈತರಿಗೆ ಕೈಕೊಟ್ಟಿದೆ ಎನ್ನುತ್ತವೆ ಕೃಷಿ ಇಲಾಖೆಯ ಮೂಲಗಳು.

ಪಟ್ಟಣದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನಾಗರಾಜ್‌ ಅವರನ್ನು ಸಂಪರ್ಕಿಸಿದಾಗ, ಸಾಸಿವೆ ಸಹಿತ ಭತ್ತದ ಬೆಳೆಗೆ ಪರ್ಯಾಯವಾಗಿ ಇತರ ಮಿತ ನೀರಾವರಿ ಬೆಳೆಗೆ ಅನಿವಾರ್ಯವಾಗಿ ರೈತರು ಒತ್ತು ನೀಡಿದ್ದಾರೆ. ಇಂಥಹ ಅನಿವಾರ್ಯ ಸ್ಥಿತಿ ಎದುರಾದಾಗ ತಮ್ಮ ಮನೋಸ್ಥಿತಿ ಬದಲಿಸುವ ರೈತರು ಈಗಿನಿಂದಲೇ ಭತ್ತದ ಜೊತೆಗೆ ಇತರ ಪರ್ಯಾಯ ಬೆಳೆಯತ್ತ ವಾಲಿದರೆ ಭವಿಷ್ಯದ ದಿನಗಳು ಚೆನ್ನಾಗಿರುತ್ತವೆ. ಇಲ್ಲದಿದ್ದರೆ ಭೂಮಿ ಬಂಜರು ಆಗಿ ಮಾರ್ಪಟ್ಟು, ಮುಂದಿನ ದಿನಗಳಲ್ಲಿ ಫಲವತ್ತತೆ ಕಡಿಮೆಯಾಗುವುದು ಎಂದರು.

ಸಾಸಿವೆ ಬೆಳೆಯ ಇಳುವರಿ ಅಧಿಕವಾಗಲು ರೈತರಿಗೆ, ಯೂರಿಯಾ, ಡಿಎಪಿ, ಪೊಟ್ಯಾಷ್‌ ಮಿಶ್ರಿತ ಯೂರಿಯಾ ಮತ್ತು ಜಿಂಕ್‌, ಐರನ್‌, ಬೋರಾನಾ, ಮಾಂಗನೀಜ್‌ ಮಿಶ್ರಿತ ಕ್ರಿಮಿನಾಶಕ ಸಿಂಪಡಿಸಲು ಸಲಹೆ ನೀಡಿದ್ದೇವೆ. ಜೊತೆಗೆ ಇತರ ಪರ್ಯಾಯ ಬೆಳಗಳ ಫಲವತ್ತಗೆ ಸೂಕ್ತ ಸಲಹೆ, ಸೂಚನೆ ನೀಡಿದ್ದೇವೆ. ಯರಡೋಣದಲ್ಲಿ ಪರ್ಯಾಯ ಬೆಳೆಯ ಬಗ್ಗೆ, ಚಳ್ಳೂರಲ್ಲಿ ಭತ್ತದ ಬೆಳೆಗಿರುವ ಕೀಟ ನಿಯಂತ್ರಣದ ಬಗ್ಗೆ ಕಾರ್ಯಾಗಾರ ನಡೆಸಿ ತಿಳುವಳಿಕೆ ನೀಡಿದ್ದೇವೆ ಎನ್ನುತ್ತಾರೆ ಕೃಷಿ ಅಧಿಕಾರಿ ನಾಗರಾಜ್.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT