ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರು ಕಡಲೆ ಬಿತ್ತನೆ ಭರಪೂರ

ಹದಕ್ಕೆ ಬಂದ ಹೊಲ: ಶೇ 90ರಷ್ಟು ಬಿತ್ತನೆ ಪೂರ್ಣ
Last Updated 12 ನವೆಂಬರ್ 2020, 5:07 IST
ಅಕ್ಷರ ಗಾತ್ರ

ಕೊಪ್ಪಳ: ಸತತ ಮುಂಗಾರು ಮಳೆಯಿಂದ ಬಹುತೇಕ ರೈತರ ಬೆಳೆಗಳು ಹಾನಿಯಾಗಿದ್ದರೆ, ಹಿಂಗಾರು ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಜಿಲ್ಲೆಯಲ್ಲಿ ಶೇ 90ರಷ್ಟು ಒಣಬೇಸಾಯದ ರೈತರು ಕಡಲೆ ಬಿತ್ತನೆ ಮಾಡಿದ್ದಾರೆ.

ಮಳೆಯಿಂದ ಭೂಮಿಯೂ ಹದಗೊಂಡಿದ್ದು, ಇನ್ನೂ ಕೆಲವು ಕಡೆ ಹಸಿ, ಹಸಿಯಾಗಿದೆ. ಕಪ್ಪುಮಣ್ಣಿನ ಸಮೃದ್ಧ ಪ್ರದೇಶ ಹೊಂದಿರುವ ಕುಕನೂರು, ಯಲಬುರ್ಗಾ ತಾಲ್ಲೂಕು ಮತ್ತು ಕೊಪ್ಪಳದ ಅಳವಂಡಿ ಹೋಬಳಿಯಲ್ಲಿ ಬಿತ್ತನೆ ಕಾರ್ಯ ಇನ್ನೂ ನಡೆಯುತ್ತಾ ಇದೆ.

ಜಿಲ್ಲೆಯ ಒಟ್ಟು 5 ಲಕ್ಷ ಹೆಕ್ಟೇರ್ ಜಮೀನಿನಲ್ಲಿ 2 ಲಕ್ಷ ಹೆಕ್ಟೇರ್ ಒಣಬೇಸಾಯದ ಭೂಮಿ ಇದೆ. ಈ ಜಮೀನುಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಸರು, ಉದ್ದು, ಅಲಸಂದಿ, ಮೆಕ್ಕೆಜೋಳ, ಶೇಂಗಾ, ಸಜ್ಜೆ, ಹೈಬ್ರೀಡ್‌ ಜೋಳ ಬೆಳೆಯುತ್ತಾರೆ. ಹಿಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಬಿಳಿಜೋಳ, ಕುಸುಬೆ, ಕಡಲೆಗೆ ಹೆಚ್ಚಿನ ಪ್ರಾಶಸ್ತ್ಯ ಇದೆ. ನೀರಾವರಿ ಪ್ರದೇಶಗಳಲ್ಲಿ ಹೆಚ್ಚಿನ ರೈತರು ಭತ್ತ, ಹತ್ತಿ ಬೆಳೆಯುತ್ತಾರೆ.

ಜಿಲ್ಲೆಯಲ್ಲಿ ಈಗಾಗಲೇ 55,500 ಹೆಕ್ಟೇರ್‌ಗಳಲ್ಲಿ ಬಿತ್ತನೆ ಗುರಿ ಇದೆ. ಇದರಲ್ಲಿ 46,590 ಹೆಕ್ಟೇರ್‌ ಜಮೀನಿನಲ್ಲಿ ಕಡಲೆ ಬಿತ್ತನೆ ಮಾಡಲಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ 15 ಸಾವಿರ ಕ್ವಿಂಟಲ್‌ ಕಡಲೆ ಬೀಜವನ್ನು ಮಾರಾಟಕ್ಕೆ ಇಡಲಾಗಿದ್ದು, 12 ಸಾವಿರ ಕ್ವಿಂಟಲ್‌ ಕಡಲೆ ಬೀಜ ಈಗಾಗಲೇ ಮಾರಾಟವಾಗಿದೆ.

ಹದಗೊಂಡಿರುವ ಭೂಮಿ ಮತ್ತು ಈ ಸಾರಿ ಅತಿಯಾದ ಚಳಿಯಿಂದ ಕಡಲೆ ಬಂಪರ್‌ ಬೆಳೆಯನ್ನು ರೈತರು ಬೆಳೆಯಲಿದ್ದಾರೆ ಎಂಬ ನಿರೀಕ್ಷೆ ಇದೆ. ಕಡಲೆ ಬಿತ್ತನೆಯಲ್ಲಿ ಯಲಬುರ್ಗಾ ತಾಲ್ಲೂಕು 19,610 ಹೆಕ್ಟೇರ್‌ ಬಿತ್ತನೆ ಮಾಡುವ ಮೂಲಕ ಮೊದಲ ಸ್ಥಾನದಲ್ಲಿ ಇದ್ದರೆ, 7530 ಹೆಕ್ಟೇರ್‌ ಬಿತ್ತನೆ ಮಾಡುವ ಮೂಲಕ ಗಂಗಾವತಿ ತಾಲ್ಲೂಕು ಕೊನೆಯ ಸ್ಥಾನದಲ್ಲಿ ಇದೆ. ಗಂಗಾವತಿ, ಕಾರಟಗಿ, ಕನಕಗಿರಿ, ಹಿಟ್ನಾಳ, ಮುನಿರಾಬಾದ್ ಹೋಬಳಿಗಳಲ್ಲಿ ಭತ್ತವನ್ನೇ ಪ್ರಮುಖವಾಗಿ ಬೆಳೆಯುತ್ತಿರುವುದರಿಂದ ಪರ್ಯಾಯ ಇಲ್ಲದಾಗಿದೆ.

ಕನಕಗಿರಿ, ಕುಷ್ಟಗಿ ಭಾಗದಲ್ಲಿ ಕಡಲೆಯನ್ನು ವ್ಯಾಪಕ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗುತ್ತದೆ. ಯಲಬುರ್ಗಾ ನಂತರ ಕುಷ್ಟಗಿ ಭಾಗದಲ್ಲಿ ಕಡಲೆಗೆ ಹೆಚ್ಚು ಪ್ರಾಧಾನ್ಯತೆ ಇದೆ. ಈಗಾಗಲೇ ಕೆಲವು ರೈತರು ಕಡಲೆಯನ್ನು 15 ದಿನಗಳ ಹಿಂದೆಯೇ ಬಿತ್ತನೆ ಮಾಡಿದ್ದು, ಸಮೃದ್ಧವಾಗಿ ಬೆಳೆ ಕಾಣುತ್ತಿದೆ. ಕಡಲೆಗೆ ಕೆಲವು ಕಡೆ ಕೀಟಬಾಧೆ ಕಾಡುತ್ತಿದ್ದು, ತಜ್ಞರ ಸಲಹೆ ಮೇರೆಗೆ ಕೀಟನಾಶಕವನ್ನು ಸಿಂಪರಣೆ ಮಾಡುವ ಕೆಲಸವೂ ನಡೆಯುತ್ತದೆ.

ತೇವಾಂಶ ಹೆಚ್ಚು ಹಿಡಿದುಕೊಂಡಿರುವ ಕಪ್ಪು ಮಣ್ಣಿನ ಎರಿ ಭೂಮಿಗಳಲ್ಲಿ ಇನ್ನೂ ಬಿತ್ತನೆ ಕಾರ್ಯ ಮುಂದುವರಿದಿದೆ. ಮುಂಗಾರಿನಲ್ಲಿ ಆದ ನಷ್ಟವನ್ನು ಹಿಂಗಾರಿನಲ್ಲಿ ತುಂಬಿಕೊಳ್ಳುವ ಸಲುವಾಗಿ ರೈತರು ಕಡಲೆ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಸೂಕ್ತ ಹವಾಮಾನ ಮತ್ತು ಉತ್ತಮ ಬೆಲೆ ಬಂದರೆ ಕಡಲೆ ಬೆಳೆದ ರೈತರು ನಿರಾಳವಾಗಲಿದ್ದಾರೆ.

ಸದ್ಯದ ಹವಾಮಾನ ಪರಿಸ್ಥಿತಿ ಕಡಲೆಗೆ ಉತ್ತಮವಾಗಿದ್ದು, ಹವಾಮಾನ ವೈಪರಿತ್ಯ ಆಗದೇ ಇದ್ದರೆ ಭರ್ಜರಿ ಫಸಲು ರೈತರ ಕೈಸೇರಲಿದೆ ಎಂದು ಕೃಷಿ ಇಲಾಖೆ ಮೂಲಗಳು ಹೇಳುತ್ತವೆ. ಕಳೆದ ಐದು ವರ್ಷದಿಂದ ಉತ್ತಮ ಬೆಳೆಯಿಲ್ಲದೆ ನಿರಾಶೆಯಾಗಿರುವ ರೈತರಿಗೆ ಈ ಸಾರಿ ಕಡಲೆ ಬೆಳೆ ಕೈ ಹಿಡಿಯಲಿದೆ ಎಂಬ ನಂಬಿಕೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT