ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ರೈತರು

ಜಿಲ್ಲೆಯ ಏಳು ತಾಲ್ಲೂಕು ಅತಿವೃಷ್ಟಿ ಪೀಡಿತ ಘೋಷಣೆ
Last Updated 7 ಅಕ್ಟೋಬರ್ 2020, 20:00 IST
ಅಕ್ಷರ ಗಾತ್ರ

ಕೊಪ್ಪಳ: ಸೆಪ್ಟೆಂಬರ್, ಆಗಸ್ಟ್‌ ತಿಂಗಳಲ್ಲಿ ಸುರಿದ ಮಳೆಯಿಂದ ಜಿಲ್ಲೆಯ ಮುಂಗಾರು ಬೆಳೆ ಸೇರಿದಂತೆ ಆಸ್ತಿ, ಪಾಸ್ತಿ ಹಾನಿಯಾಗಿರುವ ಕುರಿತು ಸಲ್ಲಿಸಿದ ಪ್ರಸ್ತಾವದ ಮೇಲೆ ಏಳು ತಾಲ್ಲೂಕು ಅನ್ನು ಅತಿವೃಷ್ಟಿ ಮತ್ತು ಪ್ರವಾಹ ಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ.

ಈ ಮೊದಲುಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ಕೊಪ್ಪಳ, ಗಂಗಾವತಿ, ಕಾರಟಗಿ ತಾಲ್ಲೂಕಿನಲ್ಲಿ ಭತ್ತ, ಗೋವಿನಜೋಳ ಸೇರಿದಂತೆ ಪ್ರಮುಖ ಬೆಳೆಗಳು ಹಾಳಾಗಿದ್ದಲ್ಲದೆ, ನೂರಾರು ಮನೆಗಳು ಬಿದ್ದಿದ್ದವು. ವರದಿ ಆಧಾರಿಸಿ ಈ ಮೂರು ತಾಲ್ಲೂಕುಗಳನ್ನು ಮಾತ್ರ ಅತಿವೃಷ್ಟಿ ಪೀಡಿತ ಎಂದು ಸರ್ಕಾರ ಘೋಷಣೆ ಮಾಡಿತ್ತು.

ಮಳೆಯಿಂದ ತೀವ್ರ ಹಾನಿಗೆ ಒಳಗಾದ ಮೇಲಿಂದ ಮೇಲೆ ಬರಗಾಲಕ್ಕೆ ತುತ್ತಾಗುತ್ತಿದ್ದ ಯಲಬುರ್ಗಾ, ಕುಕನೂರು, ಕುಷ್ಟಗಿ, ಕನಕಗಿರಿಯನ್ನು ಪಟ್ಟಿಯಲ್ಲಿ ಸೇರಿಸದೇ ಇರುವುದರಿಂದ ಜಿಲ್ಲೆಯ ರೈತರು, ಮುಖಂಡರು ಅಸಮಾಧಾನಗೊಂಡಿದ್ದರು. ಈಗ ಹೊಸ ಆದೇಶದ ಅನ್ವಯ 28 ಜಿಲ್ಲೆಗಳ 43 ತಾಲ್ಲೂಕುಗಳನ್ನು ಸೇರಿಸಲಾಗಿದೆ.

ಲಾಭವೇನು?: ಅತಿವೃಷ್ಟಿ ಮತ್ತು ಪ್ರವಾಹ ಪೀಡಿತ ಎಂಬ ಸಾಲಿಗೆ ತಾಲ್ಲೂಕುಗಳನ್ನು ಸೇರಿಸುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಕೃತಿ ವಿಕೋಪ ಪರಿಹಾರ ನಿಧಿ ಮತ್ತು ವಿಶೇಷ ಅನುದಾನ ದೊರೆಯಲಿದೆ. ಇದರಿಂದ ರೈತರು, ಮನೆ ಕಳೆದುಕೊಂಡು ಜನರಿಗೂ ಅನುಕೂಲವಾಗಲಿದೆ.

ಅತ್ಯಧಿಕ ಮಳೆಯಿಂದ ಜಿಲ್ಲೆಯ ಮುಂಗಾರು ಪ್ರಮುಖ ಬೆಳೆಗಳಾದ ಸಜ್ಜೆ, ಶೇಂಗಾ, ಹೆಸರು, ಈರುಳ್ಳಿ, ತೋಟಗಾರಿಕೆ ಬೆಳೆಗಳು, ಮೆಕ್ಕೆಜೋಳ, ಭತ್ತ, ಅಲಸಂದಿ, ಉದ್ದು, ಸಾವಯವ ಧಾನ್ಯಗಳು ಸಂಪೂರ್ಣ ಹಾಳಾಗಿವೆ. ಅಳಿದುಳಿದ ಬೆಳೆಗಳು ಗುಣಮಟ್ಟ, ಇಳುವರಿಯಿಲ್ಲದೆ ರೈತರು ಪರಿತಪಿಸುತ್ತಿದ್ದಾರೆ. ರೈತರ ಅನುಕೂಲಕ್ಕಾಗಿ ಕಾಲಕಾಲಕ್ಕೆ ಬರುವ ಅನುದಾನವನ್ನು ಜಿಲ್ಲಾಡಳಿತ ನೀಡಬಹುದಾಗಿದೆ.

ಮಳೆಯ ಪ್ರಮಾಣ: ಗಂಗಾವತಿ ತಾಲ್ಲೂಕಿನಲ್ಲಿ ವಾಡಿಕೆ ಮಳೆಯ ಪ್ರಮಾಣ 384 ಮಿ.ಮೀ, ಆದರೆ 522 ಮಿ.ಮೀ ಸುರಿದು ಶೇ 36ರಷ್ಟು ಹೆಚ್ಚಳವಾಗಿದೆ. ಎಡದಂಡೆ ಕಾಲುವೆಯ ನೀರು ಮತ್ತು ಮಳೆಯ ನೀರಿನಿಂದ ತೀವ್ರ ತೊಂದರೆಯಾಗಿದೆ. ಕೊಪ್ಪಳ ಶೇ 43, ಕುಷ್ಟಗಿ ಶೇ 50, ಯಲಬುರ್ಗಾ ಶೇ 50 ಮಿಲಿ ಮೀಟರ್ ಮಳೆಯ ಪ್ರಮಾಣ ಹೆಚ್ಚಳವಾಗಿದೆ.

ಇದರಿಂದ ಕೃಷಿ ಬೆಳೆಗಳು ಸಂಪೂರ್ಣ ಕೊಳೆತೇ ಹೋಗಿದ್ದವು. ಕುಕನೂರ, ಯಲಬುರ್ಗಾ, ಕುಷ್ಟಗಿ ತಾಲ್ಲೂಕನ್ನು ಪಟ್ಟಿಯಲ್ಲಿ ಸೇರಿಸುವಂತೆ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ ಸರ್ಕಾರಕ್ಕೆ ಒತ್ತಡವನ್ನು ಹೇರಿದ್ದರಲ್ಲದೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರು. ಪರಿಣಾಮವಾಗಿ ಈ ಮೂರು ತಾಲ್ಲೂಕುಗಳ ಜೊತೆ ಜಿಲ್ಲೆಯ ಏಳು ತಾಲ್ಲೂಕುಗಳು ಈಗ ಪಟ್ಟಿಯಲ್ಲಿ ಸೇರಿಕೊಂಡಿವೆ.

ರೈತರು ಈಗಾಗಲೇ ಬೆಳೆವಿಮಾ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸಹಕಾರಿ ಸಂಘಗಳಿಂದ ಬೆಳೆ ಸಾಲ ನೀಡಬೇಕಿದೆ. ರೈತರ ಸಾಲ ಮನ್ನಾ ಜೊತೆಗೆ ಬಿದ್ದ ಮನೆಗಳಿಗೆ ತಕ್ಷಣ ಪರಿಹಾರವೂ ಈ ಯೋಜನೆ ಅಡಿ ದೊರೆಯಲಿದೆ. ಜಿಲ್ಲಾಡಳಿತ ಸಂಪೂರ್ಣ ಸಮೀಕ್ಷೆ ಕೈಗೊಂಡು ಮಳೆಯಿಂದ ಬಾಧಿತ ಕುಟುಂಬಕ್ಕೆ ನೆರವು ನೀಡಬೇಕಿದೆ.

ಮಳೆಯಿಂದ ಹಾನಿಯ ಅಂದಾಜು ತಯಾರಿಸಿ ಬೆಳೆ, ಮನೆ, ಮೂಲಸೌಕರ್ಯಕ್ಕೆ ಆದ ನಷ್ಟವನ್ನು ಸರಿದೂಗಿಸಬೇಕಾಗಿದೆ. ಇದಕ್ಕೆ ಜಿಲ್ಲಾಡಳಿತ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಿದ್ದು, ಕೃಷಿ, ಕಂದಾಯ ಸೇರಿದಂತೆ ಪ್ರಮುಖ ಇಲಾಖೆಗಳ ಸಹಕಾರದಿಂದ ಹಾನಿಯ ಅಂದಾಜು ತಯಾರಿಸಿ ಬಾಧಿತರ ನೆರವಿಗೆ ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT