ಕನಕಗಿರಿ: ರಾಜಕೀಯ ಕುತಂತ್ರದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ದೂರಿದರು.
ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆದ ಪಕ್ಷದ ಮುಖಂಡರ ಸಭೆಯ ನಂತರ ಪತ್ರಕರ್ತರ ಜತೆಗೆ ಮಾತನಾಡಿದರು.
‘ರಾಜ್ಯಪಾಲರ ಭವನ ಬಿಜೆಪಿ ಕಚೇರಿಯಾಗಿದೆ. ಸಿಎಂ ಮುಡಾ ವಿಚಾರ ಬಿಜೆಪಿ ಅಧಿಕಾರದಲ್ಲಿ ನಡೆದಿದ್ದು ಯಾವುದಕ್ಕೂ ಶಿಫಾರಸು, ಸಹಿ ಇಲ್ಲ. ಆದರೂ ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಕಳಂಕ ತರುವ ಸಲುವಾಗಿ ಷಡ್ಯಂತ್ರ ಮಾಡಲಾಗಿದೆ’ ಎಂದರು.
‘ಸಿದ್ದರಾಮಯ್ಯ ಅವರ ಜನಪ್ರಿಯತೆ ಸಹಿಸಿಕೊಳ್ಳಲು ಬಿಜೆಪಿ ಅವರಿಗೆ ಆಗುತ್ತಿಲ್ಲ, ಅವರನ್ನು ಕುಗ್ಗಿಸುವ ಯತ್ನ ಎಲ್ಲರಿಗೂ ಗೊತ್ತಾಗಿದೆ’ ಎಂದರು.
‘ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಸಿದ್ದರಾಮಯ್ಯವರ ಬಗ್ಗೆ ಮಾತನಾಡುವುದಕ್ಕೆ ಯಾವುದೇ ನೈತಿಕ ಹಕ್ಕು ಇಲ್ಲ. ಕುಮಾರಸ್ವಾಮಿ ಅವರ ಮೇಲೆ ಹಲವಾರು ಪ್ರಕರಣಗಳಿವೆ. ಕೇಂದ್ರ ಸರ್ಕಾರ ಸಿಬಿಐ, ಇಡಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ’ ಎಂದರು.