ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜನಪದ ಕಲಾವಿದ ಮಲ್ಲಿಕಾರ್ಜುನ ಯಶೋಗಾಥೆ: ಹಾಡಿಗೆ ಸೈ, ಅಭಿನಯಕ್ಕೂ ಜೈ

ಮೆಹಬೂಬಹುಸೇನ
Published 4 ಆಗಸ್ಟ್ 2024, 5:33 IST
Last Updated 4 ಆಗಸ್ಟ್ 2024, 5:33 IST
ಅಕ್ಷರ ಗಾತ್ರ

ಕನಕಗಿರಿ: 40 ವರ್ಷಗಳಿಂದಲೂ ಗೀಗೀ ಪದ, ಲಾವಣಿ, ರಿವಾಯಿತ, ಜನಪದ, ಭಾವಗೀತೆಗಳನ್ನು ಮನಮುಟ್ಟುವಂತೆ ಹಾಡುತ್ತಿರುವ ಕೇವಲ ಒಂದನೇ ತರಗತಿ ಓದಿರುವ ಸಮೀಪದ ಮಸಾರಿಕ್ಯಾಂಪ್ (ಗುಳದಾಳ)ನ ಮಲ್ಲಿಕಾರ್ಜನ ಕುಲಕರ್ಣಿ ಜನಪದ ಕಲಾ ಪ್ರಕಾರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಯಾವುದೇ ಪ್ರಚಾರದ ಗೊಡವೆಗೆ ಹೋಗದೆ ಕಲಾ ಸರಸ್ವತಿ ಸೇವೆ ಮಾಡುತ್ತಿರುವ ಮಲ್ಲಿಕಾರ್ಜುನ ಅವರು ಮೂಲತಃ ಆಗಿನ ಸಿಂಧನೂರು ತಾಲ್ಲೂಕಿನ ಉಮಲೂಟಿಯವರು. ಸ್ವಗ್ರಾಮದಲ್ಲಿ ನಡೆಯುತ್ತಿದ್ದ ಭಜನೆ ತಾಳ ಹಾಕುತ್ತಿದ್ದರು. ಹುಡುಗನ ತನ್ಮಯತೆ ಗುರುತಿಸಿದ ಗ್ರಾಮಸ್ಥರು ‘ಸ್ಟೇಷನ್ ಮಾಸ್ತರ’ ಎಂಬ ಬಯಲಾಟದಲ್ಲಿ ‘ರಾಮಾಬಾಯಿ’ ಹೆಸರಿನ ಸ್ತ್ರೀ ಪಾತ್ರದಲ್ಲಿ ಅಭಿನಯಿಸಲು ಮಲ್ಲಿಕಾರ್ಜುನ ಅವರಿಗೆ ಅವಕಾಶ ನೀಡಿದರು. 

15 ವಯಸ್ಸಿನಲ್ಲೇ ರಮಾಬಾಯಿ ಪಾತ್ರದಲ್ಲಿ ಉತ್ತಮವಾಗಿ ಅಭಿನಯಿಸಿ ಜನರ ಚೆಪ್ಪಾಳೆ, ಸಿಳ್ಳೆ ಗಿಟ್ಟಿಸಿದ ಮಲ್ಲಿಕಾರ್ಜುನ ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ನಡೆದ ಯುವಜನ ಮೇಳದಲ್ಲಿ ಮಲ್ಲಿಕಾರ್ಜುನ ಅವರು ಪ್ರತಿ ವರ್ಷವೂ ಭಾಗಿಯಾಗಿದ್ದಾರೆ. ಗೀಗೀ, ಲಾವಣಿ ಪದಗಳನ್ನು ಹಾಡಿ ಹಲವಾರು ಪ್ರಶಸ್ತಿಗಳನ್ನು ಮುಗಿಲಿಗೇರಿಸಿಕೊಂಡಿದ್ದಾರೆ.

ದೆಹಲಿಯಲ್ಲಿ ಜನಪದ ಕಂಪು: ಅಪ್ಪಟ್ಟ ಹಳ್ಳಿ ಪ್ರತಿಭೆ ಮಲ್ಲಿಕಾರ್ಜುನ ಅವರು ದೆಹಲಿಯಲ್ಲಿಯೂ ಮಿಂಚಿದ್ದಾರೆ. ದೆಹಲಿಯ ಜನಕಪುರಿ ಹಾಗೂ ದೆಹಲಿ ಕರ್ನಾಟಕ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಕೂಟರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾವಗೀತೆ, ಲಾವಣಿ, ಜನಪದ ಗೀತೆ ಸೇರಿ ಇತರೆ ಜನಪದ ಕಲಾ ಪ್ರಕಾರಗಳನ್ನು ಪ್ರಸ್ತುತಪಡಿಸಿ ಚಪ್ಪಾಳೆ ಗಿಟ್ಟಿಸಿದ್ದಾರೆ. 

ಗಂಗಾವತಿ, ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಹಂಪಿ ಉತ್ಸವ, ಗಿರಿಜನ ಉತ್ಸವ, ಹಲವಾರು ಜಿಲ್ಲಾ, ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ಇವರು ಕಲಾಪ್ರದರ್ಶನ ನೀಡಿದ್ದಾರೆ. 

‘ಪ್ರಶಸ್ತಿ, ಪುರಸ್ಕಾರದ ಹಿಂದೆ ಬೀಳಲಿಲ್ಲ, ತಂದೆ-ತಾಯಿ ಆಶೀರ್ವಾದವೇ ನನ್ನ ದೊಡ್ಡ ಆಸ್ತಿ. ಬಡತನ ಇದ್ದರೂ ಪ್ರೋತ್ಸಾಹ ನೀಡಿದ ಗುರುಗಳಾದ ಸೈಯದ್‌ಸಾಬ್‌ ಉತ್ತಮ ಮಾರ್ಗದರ್ಶನ ನೀಡಿದರು. ನನ್ನ ಕಲಾ ಸೇವೆಯನ್ನು ಗುರುತಿಸಿ ರಾಜ್ಯದ ಹಲವಾರು ಸಂಘ-ಸಂಸ್ಥೆಗಳು ಸನ್ಮಾನಿಸಿವೆ ಆದರೆ ಸರ್ಕಾರ ಗುರುತಿಸುವ ಕೆಲಸ ಮಾಡಿಲ್ಲ’ ಎನ್ನುವುದು ಮಲ್ಲಿಕಾರ್ಜೂಣ ಅವರ ಅಸಮಾಧಾನ.

ನಾಟಕದಲ್ಲೂ ಎತ್ತಿದ ಕೈ

ಮಲ್ಲಿಕಾರ್ಜುನ ಅವರು ಬಯಲಾಟಗಳಲ್ಲಿ ಅಷ್ಟೇ ಅಲ್ಲದೆ ‘ಚಿತ್ರಪತಿರಾಜ’ ನಾಟಕದಲ್ಲಿ ‘ಮದನ ಮೋಹಿನಿ– ‘ಬಸವಂತ-ಬಲವಂತ’ದಲ್ಲಿ ‘ತಾರವತಿ’ ‘ಬಾಲಭಿಕ್ಷೆರಾಜ’ ನಾಟಕದಲ್ಲಿ ‘ರತ್ನಾವತಿ’ ‘ಸಂಗ್ಯಾಬಾಳ್ಯ’ದಲ್ಲಿ ‘ವೀರಣ್ಣ’ ‘ಚಿತ್ರಸೇನಾ’ ಗಂಧರ್ವ’ದಲ್ಲಿ ‘ಭೀಮ’ನ ಪಾತ್ರದಲ್ಲಿ ಅಭಿನಯಿಸಿ ಜನಪ್ರಿಯತೆ ಗಳಿಸಿದ್ದಾರೆ. ಇಷ್ಟಕ್ಕೇ ಮಲ್ಲಿಕಾರ್ಜುನ ಅವರ ಪ್ರತಿಭೆ ಮುಗಿಯುವುದಿಲ್ಲ; ಇವರ ನಿರ್ದೇಶನದ ಹಲವಾರು ನಾಟಕಗಳು ಸಿಂಧನೂರು ದಢೇಸೂಗೂರು ತೆಕ್ಕಲಕೋಟೆ ಪುರ ಮಲ್ಲದಗುಡ್ಡ ಮಾನ್ವಿಯ ತರಕಲ್ ಕಾರಟಗಿ ಕನಕಗಿರಿ ಉಮಲೂಟಿ ಮಲಕನಮರಡಿ ಸೇರಿದಂತೆ ಕೊಪ್ಪಳ ಬಳ್ಳಾರಿ ವಿಜಯನಗರ ರಾಯಚೂರು ಜಿಲ್ಲೆಗಳಲ್ಲಿ ಅದ್ಬುತ ಪ್ರದರ್ಶನ ಕಂಡಿವೆ.

ಬೀದಿ ನಾಟಕಕ್ಕೂ ಸೈ:

ಕಲೆಯನ್ನು ಮೆಚ್ಚಿದ ವಿವಿಧ ಇಲಾಖೆಗಳು ಜಾಗೃತಿ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿ ಕೊಟ್ಟಿವೆ. ಅಪರಾಧ ತಡೆ ಮಾಸಾಚರಣೆ ಅನಕ್ಷರತೆ ವರದಕ್ಷಿಣೆ ಬಾಲ್ಯವಿವಾಹದ ವಿರುದ್ಧ ಜಾಗೃತಿ ಮೂಡಿಸುವ ಬಗ್ಗೆ ಮಲ್ಲಿಕಾರ್ಜುನ ಬೀದಸಿ ನಾಟಕ ಮಾಡಿದ್ದಾರೆ. ತಂಡವೊಂದನ್ನು ಕಟ್ಟಿಕೊಂಡು ನೆರೆಯ ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ. ಚರ್ಮವಾದ್ಯ ಡೊಳ್ಳು ಬಡಿಯುವುದು ಹಾರ್ಮೊನಿಯಂ ನುಡಿಸುವುದು ಗೌರಿ ಕೋಲಾಟ ಪದ ಹಾಡುವುದು ಇವರಿಗೆ ನೀರು ಕುಡಿದಷ್ಟೇ ಸುಲಭ.

ಮನೆಯಲ್ಲಿದ್ದ ಜೋಳ ಸಜ್ಜೆಗಳನ್ನು ಮಾರಾಟ ಮಾಡಿ ತಾಲ್ಲೂಕು ಜಿಲ್ಲಾ ಮಟ್ಟದ ಯುವಜನ ಮೇಳಕ್ಕೆ ಹೋಗುತ್ತಿದ್ದ ಆ ದಿನಗಳನ್ನು ನೆನಪಿಸಿಕೊಂಡರೆ ಮೈ ರೋಮಾಂಚನವಾಗುತ್ತದೆ. ಈಗಿನ ಜನರಿಗೆ ಎಲ್ಲ ಸೌಲಭ್ಯಗಳು ಸಿಕ್ಕರೂ ಕಲೆಯ ಬಗ್ಗೆ ಆಸಕ್ತಿ ಬೆಳಸಿಕೊಳ್ಳದಿರುವುದು ಬೇಸರವಾಗುತ್ತದೆ.
ಮಲ್ಲಿಕಾರ್ಜನ ಕುಲಕರ್ಣಿ, ಜನಪದ ಕಲಾವಿದ
ಮಲ್ಲಿಕಾರ್ಜುನ ಅವರು ಗ್ರಾಮೀಣ ಪ್ರತಿಭೆಯಾಗಿದ್ದು ಸೇವೆಗೆ ತಕ್ಕಂತೆ ಪುರಸ್ಕಾರ ಸಿಕ್ಕಿಲ್ಲ. ಅವರು ಪ್ರಚಾರದ ಹಿಂದೆ ಬಿದ್ದಿಲ್ಲ. ಇಂಥವರನ್ನು ಗುರುತಿಸಿ ಸರ್ಕಾರ ವಿವಿಧ ಆಕಾಡೆಮಿ ಪ್ರಾಧಿಕಾರದಲ್ಲಿ ಸ್ಥಾನಮಾನ ನೀಡಬೇಕು. ಪ್ರಶಸ್ತಿಗಳ ಆಯ್ಕೆಯಲ್ಲಿ ಪರಿಗಣಿಸಬೇಕು
ಕನಕರೆಡ್ಡಿ ಕೆರಿ, ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್
ಕನಕಗಿರಿ ಸಮೀಪದ ಮಸಾರಿ ಕ್ಯಾಂಪ್ ನ ಮಲ್ಲಿಕಾರ್ಜುನ ನಾಟಕದಲ್ಲಿ ಅಭಿನಯಿಸಿರುವುದು( ಎಡದಿಂದ ಮೊದಲಿನವರು)
ಕನಕಗಿರಿ ಸಮೀಪದ ಮಸಾರಿ ಕ್ಯಾಂಪ್ ನ ಮಲ್ಲಿಕಾರ್ಜುನ ನಾಟಕದಲ್ಲಿ ಅಭಿನಯಿಸಿರುವುದು( ಎಡದಿಂದ ಮೊದಲಿನವರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT