ಗಂಗಾವತಿ: ಇಲ್ಲಿನ ಜುಲೈನಗರದಿಂದ ಮಹಾರಾಣಾ ಪ್ರತಾಪ್ ಸಿಂಗ್ ವೃತ್ತದವರೆಗೆ ರಸ್ತೆ ಮಧ್ಯದಲ್ಲಿ ಅಳವಡಿಸಿದ ಹಿಂದೂ ಧಾರ್ಮಿಕ ಸಂಕೇತವಿರುವ ವಿದ್ಯುತ್ ಕಂಬಗಳ ತೆರವಿಗೆ ಸೂಚಿಸಿದ್ದ ಆದೇಶವನ್ನು ತಹಶೀಲ್ದಾರ್ ಒಂದೇ ದಿನದಲ್ಲಿ ವಾಪಸ್ ಪಡೆದಿದ್ದಾರೆ.
ವಿದ್ಯುತ್ ಕಂಬಗಳ ಮೇಲ್ಭಾಗದಲ್ಲಿ ಧಾರ್ಮಿಕ ಸಂಕೇತಗಳಿದ್ದು, ಕೋಮು ಗಲಭೆ ಸೃಷ್ಟಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಎಸ್‌ಡಿಪಿಐ ಮುಖಂಡರು ನಗರಸಭೆಗೆ ಮನವಿ ಸಲ್ಲಿಸಿದ್ದರು. ನಂತರ ಜಿಲ್ಲಾಧಿಕಾರಿ ಮೂಲಕ ತಹಶೀಲ್ದಾರ್‌ಗೆ ವಿದ್ಯುತ್ ಕಂಬಗಳ ತೆರವಿಗೆ ಮೌಖಿಕ ಆದೇಶ ಬಂದಿತ್ತು.
ಇದರನ್ವಯ ಗಂಗಾವತಿ ತಹಶೀಲ್ದಾರ್ ಯು. ನಾಗರಾಜ ಕಂಬ ಅಳವಡಿಸಿದ ಕೊಪ್ಪಳ ಕೆ.ಆರ್.ಡಿ.ಎಲ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡಿ, ವಿದ್ಯುತ್ ಕಂಬಗಳ ತೆರವಿಗೆ ಆದೇಶಿಸಿದ್ದರು. ಅವರ ನಿರ್ಧಾರ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಟೀಕೆಗೆ ಒಳಗಾಯಿತು. ಆದ್ದರಿಂದ ಬುಧವಾರ ರಾತ್ರಿ ತೆರವಿಗೆ ಹೊರಡಿಸಿದ್ದ ಆದೇಶವನ್ನು ತಹಶೀಲ್ದಾರ್ ಗುರುವಾರ ವಾಪಸ್ ಪಡೆದರು.
ಮನವಿ ಸಲ್ಲಿಕೆ: ಇದಕ್ಕೂ ಮೊದಲು ಆದೇಶ್ ವಾಪಸ್‌ಗೆ ಆಗ್ರಹಿಸಿ ಬಿಜೆಪಿ ನಗರ ಯುವಮೋರ್ಚಾ ಸದಸ್ಯರು ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದ್ದರು.
ನಗರ ಯುವಮೋರ್ಚಾ ಅಧ್ಯಕ್ಷ ವೆಂಕಟೇಶ ಕೆ. ಮಾತನಾಡಿ, ‘ಈಚೆಗೆ ಗಂಗಾವತಿ ನಗರ ಸುಂದರೀಕರಣಕ್ಕೆ ವಿದ್ಯುತ್ ದೀಪಗಳನ್ನ ಅಳವಡಿಸಲಾಗಿದೆ. ಇಲ್ಲಿನ ಪ್ರವಾಸೋದ್ಯಮ ಬೆಳೆಸುವ ದೃಷ್ಟಿಯಿಂದ ಶಾಸಕರು, ಅಧಿಕಾರಿಗಳ ಒಮ್ಮತದ ಕೈಗೊಂಡೇ ಈ ಕೆಲಸ ಮಾಡಲಾಗಿದೆ’ ಎಂದರು.
‘ಇದನ್ನು ಸಹಿಸದ ಕೆಲವರು ಧಾರ್ಮಿಕ ಭಾವನೆಗೆ ಧಕ್ಕೆ, ಕೋಮುಸೃಷ್ಟಿಗೆ ಎಡೆಯಾಗುತ್ತದೆಯೆಂದು ತೆರವಿಗೆ ಮನವಿ ಸಲ್ಲಿಸಿದ್ದು ಸರಿಯಲ್ಲ’ ಎಂದರು.
ಯುವಮೋರ್ಚಾ ಪದಾಧಿಕಾರಿಗಳಾದ ವಿಶ್ವನಾಥ, ದುರುಗೇಶ, ಪ್ರಜ್ವಲ್, ಮಹೇಶ, ಕಾರ್ತಿಕ್, ನಾಗರಾಜ, ಶಂಕರ ಭಾಗವಹಿಸಿದ್ದರು.
ವಿವಾದಕ್ಕೆ ಕಾರಣವೇನು?
ಗಂಗಾವತಿಯಲ್ಲಿ ರಸ್ತೆ ಮಧ್ಯದಲ್ಲಿ ಅಳವಡಿಸಿದ ವಿದ್ಯುತ್ ಕಂಬದಲ್ಲಿ ಗೋವಿಂದನಾಮ ಗದೆ ಬಿಲ್ಲುಬಾಣ ಇರುವ ಬೀದಿದೀಪ ಸಂಕೇತಗಳು ಇರುವ ಚಿತ್ರಗಳಿವೆ. ಇವುಗಳಿಂದ ಕೋಮು ಗಲಭೆಯಾಗುವ ಆತಂಕವಿದೆ ಎಂದು ಎಸ್‌ಡಿಪಿಐ ಇತ್ತೀಚೆಗೆ ಮನವಿ ಸಲ್ಲಿಸಿತ್ತು. ಆಗಿನಿಂದ ಈ ವಿಷಯ ಮುನ್ನಲೆಗೆ ಬಂದಿದೆ.
‘ಧಾರ್ಮಿಕ ಭಾವನೆಗೆ ಧಕ್ಕೆ ಎನ್ನುವುದು ಕುಂಟು ನೆಪ’
ಕೊಪ್ಪಳ: ‘ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎನ್ನುವ ಕುಂಟು ನೆಪ ಮುಂದಿಟ್ಟು ರಾಜಕೀಯ ಹಿತಾಸಕ್ತಿಗಾಗಿ ಗಂಗಾವತಿಯಲ್ಲಿ ವಿದ್ಯುತ್ ಕಂಬಗಳ ಮೇಲಿದ್ದ ಸಂಕೇತಗಳನ್ನು ತೆರವಿಗೆ ಆದೇಶ ಮಾಡಲಾಗಿತ್ತು’ ಎಂದು ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ‘ಹನುಮ ಜನಿಸಿದ ನಾಡು ಅಂಜನಾದ್ರಿ ಕ್ಷೇತ್ರದ ಅಲಂಕಾರಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿತ್ತು. ಭಕ್ತರು ಪುಣ್ಯಕ್ಷೇತ್ರಕ್ಕೆ ಬಂದಾಗ ಕ್ಷೇತ್ರದ ಮಹಿಮೆ ಮನನ ಮಾಡಿಕೊಡುವ ಪ್ರಯತ್ನ ಇದಾಗಿತ್ತು. ಇದನ್ನೇ ಕೆಲ ಸಂಘಟನೆಯವರು ನೆಪ ಮಾಡಿಕೊಂಡಿದ್ದಾರೆ’ ಎಂದು ಟೀಕಿಸಿದ್ದಾರೆ. ‘ದೇಶದಲ್ಲಿ ರಾಮನಿಗೆ ಅಪಾರ ಪಾವಿತ್ರ್ಯತೆ ಇದ್ದರೂ ರಾಜಕೀಯ ಕಾರಣಕ್ಕಾಗಿ ದೀಪ ಅಲಂಕಾರಕ್ಕೆ ವಿರೋಧ ವ್ಯಕ್ತಪಡಿಸುವ ಮನಸ್ಥಿತಿ ಅಧಿಕಾರಿಗಳಲ್ಲಿರುವುದು ಸರಿಯಲ್ಲ. ಕೊನೆಗೂ ತಮ್ಮ ಆದೇಶ ವಾಪಸ್ ಪಡೆದ ತಹಶೀಲ್ದಾರ್ ಕ್ರಮ ಸ್ವಾಗತಾರ್ಹ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.