ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳದಲ್ಲಿ ಇಂದಿನಿಂದ ಸಂಪೂರ್ಣ ಲಾಕ್‌ಡೌನ್‌

Last Updated 17 ಮೇ 2021, 3:31 IST
ಅಕ್ಷರ ಗಾತ್ರ

ಕೊಪ್ಪಳ: ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೆಲವು ಅಗತ್ಯ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಿ ಲಾಕ್‌ಡೌನ್‌ ಘೋಷಣೆ ಮಾಡಿ, ಮಾರ್ಗಸೂಚಿ ಹೊರಡಿಸಿದೆ. ಆದರೆ ಸೋಂಕಿತರ ಸಂಖ್ಯೆ ಕಡಿಮೆಯಾಗದ ಹಿನ್ನೆಲೆಯಲ್ಲಿ ಸೋಮವಾರದಿಂದ ಐದು ದಿನಗಳ ಕಾಲ ಕಟ್ಟುನಿಟ್ಟಿನ ಸಂಪೂರ್ಣ ಲಾಕ್‌ಡೌನ್‌ ಘೋಷಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಬೆಳಿಗ್ಗೆ ದಿನಸಿ, ತರಕಾರಿ, ಹಾಲು ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಹೋಟೆಲ್‌, ಮದ್ಯದಂಗಡಿ ಸೇರಿದಂತೆ ಯಾವುದೇ ತರಹದ ಮಾರಾಟಕ್ಕೆ ನಿರ್ಬಂಧಿ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ನಗರದ ಪ್ರಮುಖ ಮಾರುಕಟ್ಟೆಗಳು ಜನರಿಂದ ತುಂಬಿ ತುಳುಕುತ್ತಿದ್ದವು. ಮಾಸ್ಕ್‌ ಇಲ್ಲದೆ, ಪರಸ್ಪರ ಅಂತರ ಕಾಪಾಡಿಕೊಳ್ಳದೆ ಜನರ ಮತ್ತು ವಾಹನ ಸಂಚಾರ ಎಂದಿಗಿಂತಲೂ ಹೆಚ್ಚಾಗಿಯೇ ಇತ್ತು.

ವಾಗ್ವಾದ:ಲಾಕ್‍ಡೌನ್ ಹಿನ್ನೆಲೆಯಲ್ಲಿ ನಿಗದಿತ ಸಮಯದ ಬಳಿಕ ತರಕಾರಿ ಮಾರಾಟವನ್ನು ಬಂದ್ ಮಾಡುವಂತೆ ಸೂಚಿಸಿದ ಪೊಲೀಸರೊಂದಿಗೆ ತರಕಾರಿ ವ್ಯಾಪಾರಸ್ಥರು ವಾಗ್ವಾದ ನಡೆಸಿದ ಘಟನೆ ಇಲ್ಲಿನ ಜೆ.ಪಿ.ಮಾರುಕಟ್ಟೆ ಆವರಣದಲ್ಲಿ ನಡೆಯಿತು.

ಭಾನುವಾರ ಬೆಳಿಗ್ಗೆ ನಿಗದಿತ 10 ಗಂಟೆಯ ನಂತರ ವ್ಯಾಪಾರ ನಡೆಸದಂತೆ ಪೊಲೀಸರು ಮಾರುಕಟ್ಟೆ ಸುತ್ತಾಡಿ ವ್ಯಾಪಾರಸ್ಥರಿಗೆ ಸೂಚಿಸುತ್ತಿದ್ದರು. ಈ ವೇಳೆ ಕೆಲ ವ್ಯಾಪಾರಸ್ಥರು ಸಮ್ಮತಿ ಸೂಚಿಸಿ, ವ್ಯಾಪಾರ ಬಂದ್‍ಗೊಳಿಸಿದರು. ಆದರೆ ಕೆಲ ವ್ಯಾಪಾರಸ್ಥರು ಅಂಗಡಿ ಮುಚ್ಚಲು ತಡಮಾಡಿದ್ದರಿಂದ ವಾಗ್ವಾದ ನಡೆಯಿತು.

ಸ್ಥಳದಲ್ಲಿ ಕೇವಲ ಒಬ್ಬರೇ ಪೊಲೀಸ್ ಇದ್ದುದರಿಂದ ಪರಿಸ್ಥಿತಿ ಕೈಮೀರಿ ಹೊಡೆದಾಡುವ ಹಂತ ತಲುಪಿತ್ತು. ಬಳಿಕ ಸ್ಥಳಕ್ಕೆ ಬಂದ ಇತರ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಿ ವ್ಯಾಪಾರಸ್ಥರಿಗೆ ಬುದ್ಧಿ ಹೇಳಿ ಬಂದ್‌ ಮಾಡಿಸಿದರು. ಜನರು ನಮ್ಮೊಂದಿಗೆ ಬಾಧ್ಯತೆ ಇಲ್ಲದೆ ವರ್ತಿಸುವುದರಿಂದ ಕರ್ತವ್ಯ ನಿರ್ವಹಣೆ ಕಷ್ಟವಾಗಿದೆ. ಇವರಿಗಾಗಿಯೇ ಇರುವ ಕಾನೂನನ್ನು ಪಾಲನೆ ಮಾಡದೇ ಇದ್ದರೆ ಹೇಗೆ ಎಂದು ಸ್ಥಳದಲ್ಲಿದ್ದ ಪೊಲೀಸರು ಅಸಮಾಧಾನ ಹೊರಹಾಕಿದರು.

‘ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರೆ ಜನರೂ ಕೇಳುತ್ತಿಲ್ಲ. ಅವರನ್ನು ಹಿಡಿದು ದಂಡ ಹಾಕಲು ಮುಂದಾದರೆ ಕೆಲವು ಪ್ರಭಾವಿಗಳು ಕರೆ ಮಾಡಿ ಅವರನ್ನು ಬಿಡುವಂತೆ ಸೂಚಿಸುತ್ತಾರೆ. ಇತ್ತ ಮಾಧ್ಯಮದಲ್ಲಿ ಪೊಲೀಸರ ವೈಫಲ್ಯ ಎಂದು ತೋರಿಸುತ್ತಾರೆ. ಒಟ್ಟಾರೆ ಪರಿಸ್ಥಿತಿ ತುಂಬಾ ವಿಚಿತ್ರವಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ವಿಷಾದದಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT