ಸೋಮವಾರ, ಅಕ್ಟೋಬರ್ 18, 2021
24 °C
ಗಾಂಧಿ ಸ್ಮರಣೆ; ದುಶ್ಚಟ ವಿರುದ್ಧ ಜಾಗೃತಿ ಕಾರ್ಯಕ್ರಮ

‘ಕುಡಿತ ಮುಕ್ತ ದೇಶ;ಗಾಂಧಿ ಕಂಡ ಕನಸು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಲಿಗಿ (ಮುನಿರಾಬಾದ್): ಪಾನಮುಕ್ತ ರಾಷ್ಟ್ರ, ಗ್ರಾಮಾಭಿವೃದ್ಧಿ ಮತ್ತು ಮಹಿಳಾ ಸಬಲೀಕರಣ ಇವು ಮಹಾತ್ಮ ಗಾಂಧಿ ಕಂಡ ಕನಸುಗಳಲ್ಲಿ ಪ್ರಮುಖವಾದವು ಎಂದು ಜನಜಾಗೃತಿ ಸಮಿತಿಯ ಕೊಪ್ಪಳ ಪ್ರಾದೇಶಿಕ ಯೋಜನಾಧಿಕಾರಿ ಮಾಧವ ನಾಯಕ್ ಅಭಿಪ್ರಾಯಪಟ್ಟರು.

ಹುಲಿಗಿಯಲ್ಲಿ ಭಾನುವಾರ ನಡೆದ ‘ಗಾಂಧಿ ಸ್ಮರಣೆ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮ ಸ್ವರಾಜ್ಯ ಮತ್ತು ಮಹಿಳೆಯ ಸ್ವಾತಂತ್ರ್ಯ ಹಾಗೂ ಅಭಿವೃದ್ಧಿ, ದುಶ್ಚಟ ದುರಭ್ಯಾಸ ಮುಕ್ತ ಸಮಾಜ ನಿರ್ಮಾಣ ಅವರು ಕಂಡ ಕನಸು. ಮದ್ಯಪಾನದಂತಹ ದುರಭ್ಯಾಸಗಳನ್ನು ಜಗತ್ತಿನ ಯಾವ ಧರ್ಮವೂ ಬೆಂಬಲಿಸುವುದಿಲ್ಲ. ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಶೇ 37ರಷ್ಟು ಮದ್ಯವ್ಯಸನಕ್ಕೆ ಬಲಿಯಾಗಿದ್ದಾರೆ. ಇವರ ಪೈಕಿ ಶೇ 22 ವಿದ್ಯಾರ್ಥಿನಿಯರು ಎಂಬುದು ಆಘಾತಕಾರಿ ಅಂಶವಾಗಿದೆ. ಸಂಘಟಿತ ಹೋರಾಟದಿಂದ ಮಾತ್ರ ದುಶ್ಚಟ ದೂರ ಮಾಡಲು ಸಾಧ್ಯ ಎಂದರು.

ಗ್ರಾಮೀಣ ಸಿಪಿಐ ವಿಶ್ವನಾಥ ಹಿರೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾಮಿ ವಿವೇಕಾನಂದ, ಮದ್ಯ, ಗುಟಕಾ ಸೇವನೆಯಿಂದವ್ಯಕ್ತಿಯಲ್ಲಿ ವಿಕೃತ ಬುದ್ಧಿ ಉಂಟಾಗುತ್ತದೆ. ನಂತರ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಅಪರಾಧ ಮತ್ತು ಅಪಘಾತ ಪ್ರಕರಣಗಳಲ್ಲಿ ಮೂವರಲ್ಲಿ ಒಬ್ಬ ಕುಡುಕನಿರುತ್ತಾನೆ ಇದು ಅಂಕಿಅಂಶದಿಂದ ಸಾಬೀತಾಗಿದೆ. ಕುಡಿದು ಬರುವ ವ್ಯಕ್ತಿ ಪತ್ನಿ, ತಂದೆ ತಾಯಿ ಮತ್ತು ಮಕ್ಕಳ ಮೇಲೆ ಹಲ್ಲೆ ಮಾಡುವುದು ಕಂಡುಬಂದಿದೆ. ಹೆಚ್ಚಾಗಿ ಯುವಕರು ಚಟಕ್ಕೆ ದಾಸರಾಗುತ್ತಿದ್ದು ಇದರ ನಿಯಂತ್ರಣ ಅವಶ್ಯಕ ಎಂದು ಅಭಿಪ್ರಾಯಪಟ್ಟರು.

ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ರುದ್ರಮ್ಮ ಗಣವಾರಿ ಮಾತನಾಡಿ, ಗಂಡಸರಷ್ಟೇ ಚಟಕ್ಕೆ ದಾಸರಲ್ಲ. ಇದರಲ್ಲಿ ಮಹಿಳೆಯರ ಪಾಲೂ ಇದೆ. ಮೊದಲು ನಾವು ಜಾಗೃತರಾಗಿ ಮದ್ಯ ಎಂಬ ಅನಿಷ್ಟವನ್ನು ಓಡಿಸಬೇಕಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ. ಜನಾರ್ಧನ ಮಾತನಾಡಿ, ಯಾವ ಪಕ್ಷದ ಸರ್ಕಾರ ಕೂಡ ಸಂಪೂರ್ಣ ಪಾನನಿಷೇಧದ ಬಗ್ಗೆ ಆಸಕ್ತಿ ಹೊಂದಿಲ್ಲ. ಮಹಾತ್ಮರ ಜಯಂತಿ ಆಚರಿಸುವ ನಾವು, ಅವರ ಮೌಲ್ಯಗಳನ್ನು ಅಳವಡಿಸಿಕೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದೇವೆ ಎಂದು ವಿಷಾದಿಸಿದರು.

ಶಿಬಿರದಲ್ಲಿ ವ್ಯಸನಮುಕ್ತ ರಾದ ಕೆಲವರು ಅಭಿಪ್ರಾಯ ಹಂಚಿಕೊಂಡರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಯಮನೂರಪ್ಪ ಬಡಿಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ಪಾಲಾಕ್ಷಪ್ಪ ಗುಂಗಾಡಿ, ನೀಲಮ್ಮ ಹನಸಿ ಇದ್ದರು. ತಾಲ್ಲೂಕು ಯೋಜನಾಧಿಕಾರಿ ರಘುರಾಮ್ ಸ್ವಾಗತಿಸಿದರು. ಜಗದೀಶ್ ನಿರೂಪಿಸಿ, ಎಂ.ಆರ್.ಶ್ರೀಕಾಂತ್ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು