ಕುಕನೂರು: ‘ಗಣೇಶ ಹಬ್ಬದಲ್ಲಿ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಡಿಜೆ ಸೌಂಡ್ ಸಿಸ್ಟಮ್‌ಗೆ ಅನುಮತಿ ನೀಡಲಾಗುವುದಿಲ್ಲ. ನಿಯಮ ಉಲ್ಲಂಘಿಸಿದ್ದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು’ ಎಂದು ಪಿಎಸ್ಐ ಗುರುರಾಜ್ ಟಿ. ಹೇಳಿದರು.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಅಂಗವಾಗಿ ಹಮ್ಮಿಕೊಂಡಿದ್ದ ಶಾಂತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸುತ್ತಮುತ್ತಲಿನಲ್ಲಿ ಸರಿಸುಮಾರು ನೂರಕ್ಕೂ ಹೆಚ್ಚು ಗಣೇಶ ಮೂರ್ತಿ ಪ್ರತಿಷ್ಠಾಪನೆಯಾಗಲಿದ್ದು, ಅದೇ ರೀತಿ ಸೆ. 15-16 ರಂದು ಮುಸ್ಲಿಮರ ಈದ್ ಮಿಲಾದ್ ಹಬ್ಬವು ಇರುವುದರಿಂದ, ಯಾವುದೇ ರೀತಿ ಕೋಮು ಗಲಭೆಯಾಗದಂತೆ, ಸೌಹಾರ್ದಯುತವಾಗಿ ಈ ಎರಡು ಹಬ್ಬವನ್ನು ಆಚರಣೆ ಮಾಡಬೇಕು ಎಂದು ಹೇಳಿದರು.
ಈದ್ ಮಿಲಾದ್ ಇರುವ ಕಾರಣ 11ನೇ ದಿನ ಗಣೇಶನ ಮೂರ್ತಿ ವಿಸರ್ಜನೆಯನ್ನು 7ನೇ ದಿನ ಹಾಗೂ 9ನೇ ದಿನದಂದು ನೆರವೇರಿಸಬೇಕು. ಕಾನೂನಿನ ಚೌಕಟ್ಟಿನಲ್ಲಿ ಹಬ್ಬ ಆಚರಣೆ ಮಾಡಬೇಕು’ ಎಂದರು.