ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಷ್ಟಗಿ | ಕೃಷ್ಣಾ ನೀರಿನ ಮುಖ್ಯಕೊಳವೆಗೆ ರಂಧ್ರ ಕೊರೆದ ದುಷ್ಕರ್ಮಿ

ಚಳಗೇರಾ ಗ್ರಾಪಂ ಹಳ್ಳಿಗಳಿಗೆ ನೀರು ಪೂರೈಕೆ ಸ್ಥಗಿತ
Published 26 ಜೂನ್ 2024, 16:11 IST
Last Updated 26 ಜೂನ್ 2024, 16:11 IST
ಅಕ್ಷರ ಗಾತ್ರ

ಕುಷ್ಟಗಿ: ತಾಲ್ಲೂಕಿನ ಜುಂಜಲಕೊಪ್ಪ ಕ್ರಾಸ್‌ ಬಳಿ  ಚಳಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಗ್ರಾಮಗಳಿಗೆ ಕೃಷ್ಣಾ ನದಿಯಿಂದ ಶುದ್ಧ ನೀರು ಪೂರೈಕೆಯ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ (ಡಿಬಿಒಟಿ) ಮುಖ್ಯಕೊಳವೆಗೆ ವ್ಯಕ್ತಿಯೊಬ್ಬರು ರಂಧ್ರ ಕೊರೆದು ಧಕ್ಕೆ ಮಾಡಿದ್ದು, ಇದರಿಂದ ಕಳೆದ ಒಂದು ತಿಂಗಳಿನಿಂದ ಈ ಗ್ರಾಮಗಳಿಗೆ ಶುದ್ಧ ನೀರು ಪೂರೈಕೆ ಸ್ಥಗಿತಗೊಂಡಿದೆ.

ಚಳಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಳಗೇರಾ, ಜುಂಜಲಕೊಪ್ಪ, ಕನಕೊಪ್ಪ, ಕಲಾಲಬಂಡಿ ಈ ಗ್ರಾಮಗಳಲ್ಲಿ ನೀರು ಸ್ಥಗಿತಗೊಂಡಿದ್ದು, ಇದರಿಂದ ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆ ಆದ ಕಾರಣ ಗ್ರಾಮ ಪಂಚಾಯಿತಿಯು ಇತರೆ ಮೂಲಗಳಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ.‌

ಮಠ ನಿರ್ಮಾಣಕ್ಕಾಗಿ ವ್ಯಕ್ತಿಯೊಬ್ಬರು ಈ ಮುಖ್ಯ ಕೊಳವೆಯಿಂದ ಅಕ್ರಮವಾಗಿ ನೀರು ಪಡೆದುಕೊಳ್ಳುವ ಸಲುವಾಗಿ ಜುಂಜಲಕೊಪ್ಪ ಕ್ರಾಸ್‌ ಬಳಿ ಇರುವ ಏರ್‌ವಾಲ್ವ್ ಚೇಂಬರ್‌ನಲ್ಲಿನ ಮುಖ್ಯಕೊಳವೆಗೆ ರಂಧ್ರ ಕೊರೆದಿದ್ದಾರೆ. ಕೊಳವೆ ಮಾರ್ಗ ಹಾದುಹೋಗಿರುವ ಬಳಿ ಚಿಕ್ಕ ದೇವಸ್ಥಾನವಿದ್ದು ಅಲ್ಲಿ ಮಠ ನಿರ್ಮಿಸುವ ಸಲುವಾಗಿ ಅಕ್ರಮವಾಗಿ ನೀರು ಪಡೆಯಲು ಮುಖ್ಯ ಕೊಳವೆಗೆ ರಂಧ್ರ ಕೊರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಇದೇ ರೀತಿ ಎರಡು ಬಾರಿ ಮುಖ್ಯಕೊಳವೆಗೆ ಧಕ್ಕೆ ಮಾಡಿದ್ದು, ಕಾಮಗಾರಿ ನಿರ್ವಹಣೆ ಹೊಣೆಹೊತ್ತ ಎಲ್‌ ಮತ್ತು ಟಿ ಕಂಪೆನಿ ಅಧಿಕಾರಿಗಳು ದುರಸ್ತಿ ಕಾರ್ಯ ಮಾಡಿದ್ದರು. ಆದರೆ ಪುನಃ ರಂಧ್ರ ಕೊರೆದಿದ್ದಲ್ಲದೆ ದುರಸ್ತಿಗೆ ತೆರಳಿದ ಕಂಪೆನಿ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಕಂಪನಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಬೇಸತ್ತ ಸಿಬ್ಬಂದಿ ದುರಸ್ತಿ ಗೋಜಿಗೆ ಹೋಗಿಲ್ಲ. ಈ ಕಾರಣಕ್ಕೆ ನೀರು ಪೂರೈಕೆ ಇಲ್ಲದೇ ನಾಲ್ಕು ಹಳ್ಳಿಗಳ ಜನರು ಪರದಾಡುವಂತಾಗಿದೆ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 

‘ಮುಖ್ಯಕೊಳವೆಯಿಂದ ಸಂಪರ್ಕ ಕೊಡಲು ಅವಕಾಶವಿಲ್ಲ, ಈ ಬಗ್ಗೆ ಮೇಲಧಿಕಾರಿಗಳನ್ನು ಸಂಪರ್ಕಿಸಲು ತಿಳಿಸಿದರೂ ಅದಕ್ಕೆ ಆ ವ್ಯಕ್ತಿ ಓಗೊಡುತ್ತಿಲ್ಲ. ಹಟಕ್ಕೆ ಬಿದ್ದವರಂತೆ ಕೊಳವೆಗೆ ಧಕ್ಕೆ ಮಾಡುತ್ತಿದ್ದಾರೆ. ತನಗೆ ರಾಜಕೀಯ ಪ್ರಭಾವಿ ನಾಯಕರ ಬೆಂಬಲವಿದೆ ಎಂದು ಬೆದರಿಕೆ ಒಡ್ಡುತ್ತಿದ್ದಾನೆ’ ಎಂದು ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಎಚ್ಚರಿಕೆ ನೀಡಿದ ತಾ.ಪಂ ಇಒ:

ಮುಖ್ಯಕೊಳವೆಗೆ ರಂಧ್ರ ಕೊರೆದಿರುವ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ತಾಲ್ಲೂಕು ಪಂಚಾಯಿತಿ ಇಒ ನಿಂಗಪ್ಪ ಮಸಳಿ, ಶೀಘ್ರಗತಿಯಲ್ಲಿ ಕೊಳವೆ ದುರಸ್ತಿಗೊಳಿಸಿ ನೀರು ಪೂರೈಸಲು ಎಲ್‌ ಮತ್ತು ಕಂಪೆನಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಪರಿಶೀಲನೆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ರಂಧ್ರ ಕೊರೆದ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದು ಪುನಃ ರಂಧ್ರ ಕೊರೆದರೆ ಎಫ್‌ಐಆರ್ ದಾಖಲಿಸುವುದಾಗಿ ಎಚ್ಚರಿಕೆ ನೀಡಲಾಗಿದೆ’ ಎಂದು ಇಒ ನಿಂಗಪ್ಪ ಮಸಳಿ 'ಪ್ರಜಾವಾಣಿಗೆ' ಸ್ಪಷ್ಟಪಡಿಸಿದರು.

ನಿರ್ಲಕ್ಷ್ಯ: ಮುಖ್ಯಕೊಳವೆಗೆ ಪದೇ ಪದೇ ಧಕ್ಕೆ ಮಾಡುತ್ತಿರುವುದು, ನೀರು ಸ್ಥಗಿತಗೊಂಡಿರುವುದಕ್ಕೆ ಸಂಬಂಧಿಸಿದಂತೆ ಚಳಗೇರಾ ಗ್ರಾಮ ಪಂಚಾಯಿತಿಯು ಆರ್‌ಡಬ್ಲೂಎಸ್‌ ಉಪ ವಿಭಾಗಕ್ಕೆ ಪತ್ರ ಬರೆದಿದೆ. ಆದರೂ ಎಂಜಿನಿಯರ್‌ಗಳು ಕ್ರಮಕ್ಕೆ ಮುಂದಾಗಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಈ ಕುರಿತು ಮಾಹಿತಿಗಾಗಿ ಸಂಪರ್ಕಿಸಿದರೆ ಎಇಇ ವಿಜಯಕುಮಾರ ಪೂಜಾರ ಯಾವುದೇ ಮಾಹಿತಿ ನೀಡಲಿಲ್ಲ. ಇಂಥ ಘಟನೆಗಳು ಮರುಕಳಿಸುತ್ತಿದ್ದು ಕ್ರಮ ಕೈಗೊಳ್ಳಬೇಕೆಂದರೆ ಸರ್ಕಾರದ ಅಧಿಕಾರಿಗಳಿಂದ ಸಹಕಾರ ದೊರೆಯುತ್ತಿಲ್ಲ. ಜನರಿಂದ ನಾವು ಬಾಯಿಗೆ ಬಂದಂತೆ ಬೈಸಿಕೊಳ್ಳುವಂತಾಗಿದೆ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಎಲ್‌ ಮತ್ತು ಕಂಪೆನಿ ಸಿಬ್ಬಂದಿ ಅತೃಪ್ತಿ ಹೊರಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT