ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ಶಿಕ್ಷಕರ ತವರೂರು ಅಳವಂಡಿ

ಈ ಗ್ರಾಮದ ಬಹುತೇಕ ಮನೆಗಳಲ್ಲಿದ್ದಾರೆ ಶಿಕ್ಷಕರು
Published 5 ಸೆಪ್ಟೆಂಬರ್ 2023, 5:27 IST
Last Updated 5 ಸೆಪ್ಟೆಂಬರ್ 2023, 5:27 IST
ಅಕ್ಷರ ಗಾತ್ರ

ಅಳವಂಡಿ : ಧಾರವಾಡದಲ್ಲಿ ಎಲ್ಲಿಯಾದರೂ ನಿಂತು ಕಲ್ಲು ಎಸೆದರೆ ಅದು ಸಾಹಿತಿಯೊಬ್ಬರ ಮನೆಯ ಅಂಗಳದಲ್ಲಿ ಬೀಳುತ್ತದೆ ಎನ್ನುವುದು ರೂಢಿಗತ ಮಾತು. ಅದನ್ನೇ ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮಕ್ಕೆ ಹೋಲಿಸಿ ಹೇಳುವುದಾದರೆ ಈ ಗ್ರಾಮದಲ್ಲಿ ಕಲ್ಲು ಎಸೆದರೆ ಅದು ಶಿಕ್ಷಕರೊಬ್ಬರ ಮನೆ ಅಂಗಳಕ್ಕೇ ಬೀಳುತ್ತದೆ.

ಅಳವಂಡಿಯಲ್ಲಿ ಬಹುತೇಕ ಮನೆಗಳಲ್ಲಿ ಕನಿಷ್ಠ ಒಬ್ಬರಾದರೂ ಶಿಕ್ಷಕರಿದ್ದಾರೆ. ಜಿಲ್ಲೆಯ ದೊಡ್ಡ ಹೋಬಳಿ ಕೇಂದ್ರವಾದ ಅಳವಂಡಿಯಲ್ಲಿ ಅಂದಾಜು ಮೂರು ಸಾವಿರ ಮನೆಗಳು ಹಾಗೂ ಹತ್ತು ಸಾವಿರ ಜನಸಂಖ್ಯೆಯಿದೆ. ಇಲ್ಲಿ ಎಲ್‌ಕೆಜಿಯಿಂದ ಪದವಿ ತನಕ ಶಿಕ್ಷಣ ದೊರೆಯುತ್ತದೆ. ಒಂದೇ ಮನೆಯಲ್ಲಿ ಐದಾರು ಶಿಕ್ಷಕರಿರುವ ಹಲವು ಕುಟುಂಬಗಳು ಇಲ್ಲಿವೆ. ಪ್ರಸ್ತುತ ಈ ಗ್ರಾಮದ 600ಕ್ಕೂ ಅಧಿಕ ಸರ್ಕಾರಿ ಶಿಕ್ಷಕರು ರಾಜ್ಯದ ಬೇರೆ ಬೇರೆ ಕಡೆ ಕಾರ್ಯ ನಿರ್ವಹಿಸುತ್ತಿದ್ದಾರೆ. 100ಕ್ಕೂ ಹೆಚ್ಚು ಶಿಕ್ಷಕರು ನಿವೃತ್ತರಾಗಿದ್ದಾರೆ.

ಕಾರಣವೇನು?: 1980ರ ದಶಕದಲ್ಲಿ ಪಿಯುಸಿ ನಂತರ ಐಟಿಸಿ ಎಂಬ ಶಿಕ್ಷಕ ವೃತ್ತಿಗೆ ಸಂಬಂಧಿಸಿದ ತರಬೇತಿಯ ಕೋರ್ಸ್‌ ಗದಗ ಜಿಲ್ಲೆಯ ಮುಂಡರಗಿಯ ಕೆ.ಆರ್.ಬೆಲ್ಲದ ಕಾಲೇಜಿನಲ್ಲಿ ಪ್ರಾರಂಭವಾಗಿತ್ತು. ಅಳವಂಡಿಯಿಂದ ಮುಂಡರಗಿಗೆ 15 ಕಿ.ಮೀ. ಮಾತ್ರ ದೂರ. ಹೀಗಾಗಿ ಅಳವಂಡಿಯಲ್ಲಿ ಸಿದ್ದೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಣ ವಿಷಯದಲ್ಲಿ ಪಿಯುಸಿ ಆಯ್ಕೆ ಮಾಡಿಕೊಂಡವರು ನೇರವಾಗಿ ಕೆ.ಆರ್.ಬೆಲ್ಲದ ಕಾಲೇಜಿನಲ್ಲಿ ಐಟಿಸಿ ಶಿಕ್ಷಕ ತರಬೇತಿ ಮುಗಿಸುತ್ತಿದ್ದರು. ಬಳಿಕ ಶಿಕ್ಷಕ ವೃತ್ತಿ ಆಯ್ಕೆ ಮಾಡಿಕೊಳ್ಳುತ್ತಿದ್ದರು.  

ನಂತರದ ಕೆಲ ವರ್ಷಗಳಲ್ಲಿ ಅಳವಂಡಿ ಹಾಗೂ ಮುಂಡರಗಿ ಎರಡೂ ಗ್ರಾಮಗಳಲ್ಲಿ ಟಿಸಿಎಚ್ ಕಾಲೇಜು ತೆರೆಯಲಾಯಿತು. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರವೇಶ ಕಲ್ಪಿಸಲಾಯಿತು. ಹೀಗಾಗಿ ಶಿಕ್ಷಕರ ಸಂಖ್ಯೆ ಏರಿಕೆಯಾಯಿತು ಎಂದು ಶಿಕ್ಷಕರು ನೆನಪಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT