ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಷ್ಟಗಿ: ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ನೀಡುತ್ತಿರುವ ಪಂಕಜಕುಮಾರ

Published 21 ಜೂನ್ 2024, 5:02 IST
Last Updated 21 ಜೂನ್ 2024, 5:02 IST
ಅಕ್ಷರ ಗಾತ್ರ

ಕುಷ್ಟಗಿ: ‘ಯೋಗ ಕೇವಲ ಆಸನಗಳನ್ನಷ್ಟೇ ಹಾಕುವುದಲ್ಲ, ಅದೊಂದು ಜೀವನ ಕ್ರಮವಾಗಿದ್ದು ವರ್ತಮಾನದಲ್ಲಿ ನಾವು ಹೇಗೆ ಬದುಕಬೇಕು ಎಂಬುದನ್ನು ಕಲಿಸುತ್ತದೆ. ಔಷಧದಿಂದಲೂ ಸಾಧ್ಯವಾಗದ ಆರೋಗ್ಯ ಸಮಸ್ಯೆಗಳಿಗೆ ಯೋಗದಲ್ಲಿ ಪರಿಹಾರವಿದೆ. ಸ್ವಸ್ಥ್ಯ ಸಮಾಜದ ಪರಿಕಲ್ಪನೆ ಸಾಕಾರಗೊಳ್ಳಬೇಕೆಂದರೆ ಸಮಾಜದಲ್ಲಿ ಯೋಗ ಇನ್ನಷ್ಟು ವ್ಯಾಪಕವಾಗಬೇಕು’ ಎನ್ನುತ್ತಾರೆ  ಪಂಕಜಕುಮಾರ.

ಪಟ್ಟಣದ ಪಂಕಜಕುಮಾರ ಯೋಗದಲ್ಲಿ ಸಾಧನೆಗೈದು ಯೋಗ ಶಿಕ್ಷಕರಾಗಿ ಮತ್ತು ಪತಂಜಲಿ ಯೋಗ ಪ್ರಚಾರಕರಾಗಿ ಕಳೆದ ಎರಡು ದಶಕಗಳಿಂದಲೂ ಸೇವೆ ಸಲ್ಲಿಸುತ್ತಿದ್ದಾರೆ. ವಿಶ್ವ ಯೋಗ ದಿನಾಚರಣೆ ಸಂದರ್ಭದಲ್ಲಿ ಅವರು 'ಪ್ರಜಾವಾಣಿ'ಯೊಂದಿಗೆ ಮಾತಿಗಿಳಿದರು.

ಪಂಕಜಕುಮಾರ ಅವರ ಪೂರ್ವಜರು ಮೂಲತಃ ಬಾಂಗ್ಲಾ ದೇಶದಿಂದ ಬಂದವರು. ಸಿಂಧನೂರು ತಾಲ್ಲೂಕಿನ ಬಂಗಾಲಿ ಕ್ಯಾಂಪ್‌ದಲ್ಲಿ ಹುಟ್ಟಿ ಬೆಳೆದ ಅವರು ಐದು ವರ್ಷ ಸಿಂಧನೂರಿನಲ್ಲಿ ಯೋಗ ಪ್ರಚಾರಕರಾಗಿದ್ದರು. ಕಳೆದ ಒಂದೂವರೆ ದಶಕದಿಂದಲೂ ಕೊಪ್ಪಳ ಜಿಲ್ಲೆಯ ಪತಂಜಲಿ ಯೋಗ ಪ್ರಚಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈಗಾಗಲೇ ಮಕ್ಕಳು, ಮಹಿಳೆಯರು, ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಸಹಸ್ರ ಸಂಖ್ಯೆ ಜನರಿಗೆ ಯೋಗದ ಮಹತ್ವ ಮತ್ತು ಅದರಿಂದ ಆಗುವ ದೇಹ ಮತ್ತು ಮನಸ್ಸುಗಳ ಮೇಲೆ ಆಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡುತ್ತ ಬಂದಿದ್ದಾರೆ.

ಪಂಕಜ ಅವರ ಯೋಗ ಕಲಿಕೆ ಆಕಸ್ಮಿಕ, ಮೆಟ್ರಿಕ್‌ವರೆಗೆ ಮಾತ್ರ ವಿದ್ಯೆ. ಬಾಲ್ಯದಿಂದಲೇ ಯೋಗದಲ್ಲಿ ಆಸಕ್ತಿ ಚಿಗುರೊಡೆದಿದೆ. ಐದನೇ ತರಗತಿಯಲ್ಲಿ ಓದುತ್ತಿದ್ದಾಗ ಆಗ ಹಳ್ಳಿಗೆ ಬಂದು ಯೋಗ ಕಲಿಸುತ್ತಿದ್ದ ಶಿಕ್ಷಕ ಅವರಿಗೆ ಪ್ರೇರಣೆ. ಯೋಗದ ಪ್ರಭಾವಕ್ಕೊಳಗಾಗಿ ಪತಂಜಲಿ ಯೋಗಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಿ ಅರಿತಿದ್ದಾರೆ.

ಪತಂಜಲಿ ರಾಜ್ಯ ಪ್ರಭಾರಿ ಭಂವರಲಾಲ್‌ ಆರ್ಯ ಅವರಿಂದ ಯೋಗ ಕಲಿತು ನಂತರ ಹರಿದ್ವಾರಕ್ಕೆ ತೆರಳಿ ಯೋಗ ಕಲಿತು ಗುರು ಬಾಬಾ ರಾಮದೇವರ ಸಲಹೆಯಂತೆ ತಮ್ಮ ಬದುಕಿನುದ್ದಕ್ಕೂ ಯೋಗದ ಬಗ್ಗೆ ಪ್ರಚಾರ ಕೈಗೊಂಡು ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಶ್ರಮಿಸಲು ಸಂಕಲ್ಪಿರುವುದಾಗಿ ಹೇಳುತ್ತಾರೆ.

ಮನುಷ್ಯರಲ್ಲಿ ಸಕಾರಾತ್ಮಕ ಗುಣಗಳು ಬೆಳೆಯಬೇಕೆಂದರೆ ಚಿತ್ತ ಪ್ರಸನ್ನವಾಗಿದ್ದಾಗ ಮಾತ್ರ ಸಾಧ್ಯ. ವಿಚಾರ, ನಮ್ಮ ಭಾವನೆಗಳು ಅತಿರೇಕಕ್ಕೆ ಹೋಗದೆ ನಿಯಂತ್ರಣದಲ್ಲಿದ್ದರೆ ಮನಸ್ಸಿನಲ್ಲಿ ದೈವಿಕ ಸಂಪತ್ತು ಹೆಚ್ಚುತ್ತದೆ. ಅದು ಕೇವಲ ವೈಯಕ್ತಿಕ, ಕೌಟುಂಬಿಕ ಅಷ್ಟೇ ಅಲ್ಲ ಸ್ವಸ್ಥ್ಯ ಸಮಾಜದ ನಿರ್ಮಾಣಕ್ಕೂ ಕಾರಣವಾಗುತ್ತದೆ. ಇಂದ್ರಿಯಗಳ ನಿಗ್ರಹಕ್ಕೆ ಯೋಗ ಉತ್ತಮ ಮದ್ದು ಎನ್ನುತ್ತಾರೆ ಅವರು.

ಮಕ್ಕಳು, ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ನೀಡುತ್ತಿರುವ ಪಂಕಜ್ ಆಸಕ್ತಿ ಇರುವವರ ಬಳಿ ಸ್ವತಃ ಹೋಗಿ ಉಚಿತವಾಗಿ ಯೋಗ ಶಿಕ್ಷಣ ನೀಡುತ್ತಿದ್ದಾರೆ. ಹೆಚ್ಚಿನದನ್ನು ನಿರೀಕ್ಷಿಸದೆ ಜನರು ಕೊಟ್ಟಷ್ಟನ್ನು ಗುರುಕಾಣಿಕೆಯಾಗಿ ಸ್ವೀಕರಿಸುತ್ತಾರೆ.  ಪಂಕಜಕುಮಾರ ಅವರ ಸಂಪರ್ಕ ಸಂಖ್ಯೆ 9380438609.

ಬಾಲ್ಯದಲ್ಲೇ ಮಕ್ಕಳಿಗೆ ಯೋಗ ಶಿಕ್ಷಣ ಲಭ್ಯವಾದರೆ ಭವಿಷ್ಯದಲ್ಲಿ ಸಮಾಜಕ್ಕೆ ಅವರು ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ಪಂಕಜಕುಮಾರ ಯೋಗ ಶಿಕ್ಷಕ
ಬಾಲ್ಯದಲ್ಲೇ ಮಕ್ಕಳಿಗೆ ಯೋಗ ಶಿಕ್ಷಣ ಲಭ್ಯವಾದರೆ ಭವಿಷ್ಯದಲ್ಲಿ ಸಮಾಜಕ್ಕೆ ಅವರು ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ಪಂಕಜಕುಮಾರ ಯೋಗ ಶಿಕ್ಷಕ
ಪಂಕಜಕುಮಾರ ಅವರ ಯೋಗದ ಭಂಗಿ
ಪಂಕಜಕುಮಾರ ಅವರ ಯೋಗದ ಭಂಗಿ
ಯೋಗ ನಮ್ಮ ದೇಶದ ಪ್ರಾಚೀನ ಪರಂಪರೆಯ ವಿದ್ಯೆ ಜನರು ನಿರೋಗಿಗಳಾಗಬೇಕು ಮಕ್ಕಳಲ್ಲಿ ಸಂಸ್ಕಾರ ಬೆಳೆಯಬೇಕೆಂದರೆ ಯೋಗ ಉತ್ತಮ ಮಾರ್ಗ
ಪಂಕಜಕುಮಾರ ಯೋಗ ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT