ಗುರುವಾರ , ಜೂಲೈ 9, 2020
28 °C

ಕಲ್ಲಂಗಡಿ ಬೆಲೆ ಕುಸಿತ: ಕಂಗಾಲಾದ ರೈತ

ಮೆಹಬೂಬಹುಸೇನ Updated:

ಅಕ್ಷರ ಗಾತ್ರ : | |

Prajavani

ಕನಕಗಿರಿ: ಇಲ್ಲಿಗೆ ಸಮೀಪದ ಸೋಮಸಾಗರ ಗ್ರಾಮದ ರೈತ ದುರಗನಗೌಡ ಅವರು ತಮ್ಮ ನಾಲ್ಕು ಎಕರೆ ಹೊಲದಲ್ಲಿ  ಬರಗಾಲದ ಸ್ಥಿತಿಯಲ್ಲಿಯೂ ಉತ್ತಮ ಕಲ್ಲಂಗಡಿ ಹಣ್ಣು ಬೆಳೆದಿದ್ದು, ಆದರೆ, ದರ ಕುಸಿತದಿಂದ ಕಂಗಾಲಾಗಿದ್ದಾರೆ.

ಕಳೆದ ಮೂರು ವರ್ಷಗಳ ಹಿಂದೆ ಕರಬೂಜ ಹಣ್ಣು ಬೆಳೆದು ಲಾಭ ಪಡೆದುಕೊಂಡಿದ್ದ ರೈತ ದುರಗನಗೌಡ ಅವರು, ಈ ಸಲ ಬೇಸಿಗೆ ಕಾಲ ಹಾಗೂ ರಂಜಾನ್ ಹಬ್ಬಕ್ಕೆ ಕಲ್ಲಂಗಡಿ ಹಣ್ಣು ಕೈ ಸೇರುವಂತೆ ಯೋಜನೆ ರೂಪಿಸಿದ್ದರು. ನಾಲ್ಕು ಎಕರೆ ಹೊಲದಲ್ಲಿ ಗೊಬ್ಬರ, ಇತರೆ ವೆಚ್ಚಕ್ಕೆ ₹ 3ರಿಂದ ₹ 4 ಲಕ್ಷ ವೆಚ್ಚ ಮಾಡಿ 20 ಟನ್‌ನಷ್ಟು ಹಣ್ಣು ಬೆಳೆದರೂ ಲಾಕ್‌ಡೌನ್ ಪರಿಣಾಮ ಸೂಕ್ತ ಮಾರುಕಟ್ಟೆ ಸಿಗದೆ ನಷ್ಟ ಅನುಭವಿಸಿದ್ದಾರೆ.

ಒಂದು ಹಣ್ಣು ಬರೋಬ್ಬರಿ ಮೂರು ಕೆಜಿಯಿಂದ ಏಳು ಕೆಜಿ ಗಾತ್ರದಷ್ಟು ಇದ್ದು ಒಂದು ಕೆಜಿ ಹಣ್ಣನ್ನು ₹ 5 ರಿಂದ ₹ 6ಕ್ಕೆ ಮಾರಾಟವಾಗುತ್ತಿರುವುದು ರೈತನ ಕಳವಳಕ್ಕೆ ಕಾರಣವಾಗಿದೆ.

‘ಹದಿನೈದು ದಿನಗಳಿಂದಲೂ ಹಣ್ಣನ್ನು ಕೀಳಲಾಗುತ್ತಿದ್ದು, ಖರೀದಿದಾರರು ಮುಂದಕ್ಕೆ ಬಾರದ ಹಿನ್ನೆಲೆಯಲ್ಲಿ ಹಣ್ಣುಗಳನ್ನು ಒಂದೆಡೆ ಸಂಗ್ರಹಿಸಲಾಗಿದೆ. ಹಣ್ಣು ಮತ್ತಷ್ಟು ಕೆಡಬಾರದು ಎಂಬ ಕಾರಣಕ್ಕೆ ಪಕ್ಕದ ರಾಯಚೂರು, ಮಾನ್ವಿಯ ಖರೀದಿದಾರರಿಗೆ ಕೆಜಿಗೆ ₹ 5 ರಿಂದ ₹ 6ಕ್ಕೆ ಮಾರಾಟ ಮಾಡುತ್ತಿದ್ದೇನೆ. ಹಣ್ಣಿನ ಗುಣಮಟ್ಟ ಚೆನ್ನಾಗಿದ್ದು, ರುಚಿಯಾಗಿದೆ. ಆದರೆ ಬೇಡಿಕೆ ಕುಸಿದಿದೆ‘ ಎಂದು ರೈತ ದುರಗನಗೌಡ ಅಳಲು ತೋಡಿಕೊಂಡರು.

ಲಾಕ್‌ಡೌನ್ ಇಲ್ಲದಿದ್ದರೆ ಕಲಬುರ್ಗಿ, ಬೆಂಗಳೂರು, ನೆರೆಯ ಹೈದರಾಬಾದ್‌, ದೆಹಲಿಗೆ ಮಾರಾಟ ಮಾಡುತ್ತಿದ್ದೆ. ಆದರೆ, ಕೊರೊನಾ ಸೋಂಕು ನಮ್ಮ ಬೆಳೆಯನ್ನು ನುಂಗಿ ಹಾಕಿದೆ ಎಂದು ಅವರು ನೋವಿನಿಂದ ತಿಳಿಸಿದರು.

ಪಂಪಸೆಟ್‌ನ ಹನಿ ನೀರಾವರಿ ಪದ್ಧತಿಯಲ್ಲಿ ಉತ್ತಮವಾಗಿ ಬೆಳೆದ ಕಲ್ಲಂಗಡಿ ಬೆಳೆಗೆ ಸಮರ್ಪಕವಾದ ಬೆಲೆ ಸಿಗದಿರುವುದರಿಂದ ನೋವಾಗುತ್ತಿದೆ ಎಂದು ರೈತ ಮುಖಂಡ ಪಂಪಾಪತಿ ತರ್ಲಕಟ್ಟಿ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.