ಶನಿವಾರ, ಜುಲೈ 2, 2022
27 °C
ದಕ್ಷಿಣ ಭಾರತದಲ್ಲಿಯೇ ಎತಿ ಎತ್ತರದ ತೇರು ಎಂಬ ಖ್ಯಾತಿ

ವಿಜೃಂಭಣೆಯ ಕನಕಾಚಲಪತಿ ರಥೋತ್ಸವ; ಅಪಾರ ಸಂಖ್ಯೆಯ ಭಕ್ತರು ಭಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಗಿರಿ: ದಕ್ಷಿಣ ಭಾರತದಲ್ಲಿಯೇ ಎತಿ ಎತ್ತರದ ತೇರು ಖ್ಯಾತಿ ಹೊಂದಿರುವ ಇಲ್ಲಿನ ಐತಿಹಾಸಿಕ ಪ್ರಸಿದ್ಧ ಕನಕಾಚಲಪತಿ ಮಹಾ ರಥೋತ್ಸವ ಗುರುವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಪ್ರತಿ ವರ್ಷದಂತೆ ತೇರು ಪಾದಗಟ್ಟೆಯಿಂದ ಎದುರಿನ ಹನುಮಪ್ಪ ದೇವಸ್ಥಾನ ತಲುಪಿತು. ಪುನಃ ಪಾದಗಟ್ಟೆವರೆಗೆ ಎಳೆಯುವ ಸಮಯದಲ್ಲಿ ತೇರಿನ ಗಾಲಿ ಪ್ರಭಾಕರ ಗಡ್ಡಿ ಅವರ ಮನೆ ಪರಿಸರದ ರಸ್ತೆಯಲ್ಲಿ ಸಿಲುಕಿಕೊಂಡಿತು. ಭಕ್ತರು ಶಕ್ತಿ ಮೀರಿ ಒಂದು ಗಂಟೆಗೂ ಹೆಚ್ಚು ಕಾಲ ಪ್ರಯತ್ನಿಸಿದರೂ ಮುಂದಕ್ಕೆ ಬರಲಿಲ್ಲ, ನಿರಾಶೆಗೊಂಡ ಭಕ್ತ ಸಮೂಹ ಮನೆಗೆ ಮರಳಿದರು.

ದೇವಸ್ಥಾನ ಸಮಿತಿಯವರು ಟ್ರ್ಯಾಕ್ಟರ್‌ಗಳ ಸಹಾಯದಿಂದ ತೇರನ್ನು ಮುಂದೆ ಎಳೆಯುವಲ್ಲಿ ಯಶಸ್ವಿಯಾದರು.

ರಥೋತ್ಸವದ ನಿಮಿತ್ತ ಬೆಳಿಗ್ಗೆ ಕನಕಾಚಲಪತಿ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ, ರಥದ ಮುಂಭಾಗದಲ್ಲಿ ರಥಾಂಗ ಹೋಮ, ಹವನ, ಪೂರ್ಣಾಹುತಿ, ಅನ್ನ ಬಲಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ, ಭಕ್ತಿಯಿಂದ ನಡೆದವು.

ತಳಿರು, ತೋರಣ, ಗೊಂಬೆ, ಹೂವು, ಬಾವುಟ, ಐದು ಪ್ರಕಾರದ ಚಟ್ಟಗಳನ್ನು ಕಟ್ಟಿ ರಥವನ್ನು ಶೃಂಗರಿಸಲಾಗಿತ್ತು. ರಾಜಬೀದಿಯಲ್ಲಿ ರಥೋತ್ಸವ ಆರಂಭವಾಗುತ್ತಿದ್ದಂತೆ ಭಕ್ತ ಸಮೂಹ ಬಾಳೆ ಹಣ್ಣು, ಉತ್ತತ್ತಿ, ಹೂಗಳನ್ನು ತೇರಿನತ್ತ ಎಸೆದು ಧನ್ಯತೆ ಮೆರೆದರು. ರಥದ ಗಾಲಿಗೆ ತೆಂಗಿನ ಕಾಯಿ ಒಡೆದು ಹರಕೆ ತೀರಿಸಿದರು.

ಪರಿಶಿಷ್ಟ ಜಾತಿಯ ಮಹಿಳೆಯರು ಕನಕರಾಯನ ಕುರಿತು ಬರೆದಿರುವ ಹಾಡುಗಳನ್ನು ಹಾಡುತ್ತಾ ಬೃಹತ್ ಪ್ರಮಾಣದ ಹೂವಿನ ಹಾರ, ಬಾವುಟಗಳನ್ನು ಮೆರವಣಿಗೆ ಮೂಲಕ ತಂದು ತೇರಿಗೆ ಸಮರ್ಪಿಸಿದರು.

ವಿವಿಧ ಸಮುದಾಯ ಹಾಗೂ ಸಂಘಟನೆಗಳು ಕರ್ನಾಟಕ ರತ್ನ ದಿ. ಪುನೀತರಾಜಕುಮಾರ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಹೂವಿನ ಹಾರದ ಜತೆಗೆ ಮೆರವಣಿಗೆಯಲ್ಲಿ ತಂದಿದ್ದು ಗಮನ ಸೆಳೆಯಿತು.

ವಿವಿಧ ಸ್ಥಳದಲ್ಲಿ ತಾವು ವಾಸ್ತವ್ಯ ಹೂಡಿದ್ದ ಸ್ಥಳದಿಂದ ದೇವಸ್ಥಾನದ ವರೆಗೆ ದೀಡ‌್ ನಮಸ್ಕಾರ ಹಾಕಿ ತಾವು ಬೇಡಿಕೊಂಡ ಹರಕೆಗಳನ್ನು ತೀರಿಸಿದರು. ಸಿಹಿ ಖಾದ್ಯ ಸಮರ್ಪಣೆ ಮಾಡಿದರು.

ಬಾಜಾ ಭಜಂತ್ರಿ, ತಾಷ, ವಾದ್ಯ ಮೇಳ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿದವು. ಜನರು ಮನೆ, ಮಾಳಿಗೆ, ರಾಜಬೀದಿಯಲ್ಲಿ ನಿಂತು ರಥೋತ್ಸವ ವೀಕ್ಷಿಸಿದರು.

ಶಾಸಕ ಬಸವರಾಜ ದಢೇಸೂಗೂರು, ರಾಯಚೂರು ಅಬಕಾರಿ ಜಿಲ್ಲಾಧಿಕಾರಿ ಲಕ್ಷ್ಮೀ ತೋಟಗಂಟಿ, ದೇವಸ್ಥಾನ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ಧನಂಜಯ ಮಾಲಗಿತ್ತಿ, ಆಡಳಿತಾಧಿಕಾರಿ ಅರವಿಂದ ಸುತಗುಂಡಿ, ಡಿವೈಎಸ್‌ಪಿ ರುದ್ರೇಶ ಉಜ್ಜಿನಕೊಪ್ಪ, ಪಿಐ ಪರಸಪ್ಪ ಭಜಂತ್ರಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಮಜ್ಜಿಗೆ ಸೇವೆ: ರಥೋತ್ಸವದಲ್ಲಿ ಭಾಗವಹಿಸಿದ ಜನರಿಗೆ ವಿವಿಧ ಸಂಘಟನೆಗಳು ಹಾಗೂ ಭಕ್ತರು ಮಜ್ಜಿಗೆ, ಶರಬತ್ ಹಾಗೂ ಕುಡಿಯುವ ನೀರಿನ ಸೇವೆ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು