ಸೋಮವಾರ, ಮಾರ್ಚ್ 27, 2023
22 °C

ಶಾಲಾ ಕಾರ್ಯಕ್ರಮದಲ್ಲಿ ಶಾಸಕ ಹಾಲಪ್ಪ ಚುನಾವಣಾ ಪ್ರಚಾರ: ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪ‍ಳ: ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಗೆದಗೇರಿ ಗ್ರಾಮದಲ್ಲಿ ಇತ್ತೀಚೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ, ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್‌ ಅವರು ಶಾಲಾ ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡಿ ಮತಯಾಚನೆ ಮಾಡಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. 

ದೇಶವನ್ನು ಅಭಿವೃದ್ಧಿಶೀಲ ರಾಷ್ಟ್ರ ಮಾಡಲು ಪ್ರಧಾನಿ ನರೇಂದ್ರ ಮೋದಿ ದಿನ‍ಪೂರ್ತಿ ಕೆಲಸ ಮಾಡುತ್ತಿದ್ದಾರೆ. ಮೋದಿ ನಿಮಗೆ ಬೇಕಾ? ಬೇಡವಾ? ಎನ್ನುವ ಸಚಿವರ ಪ್ರಶ್ನೆಗೆ ವಿದ್ಯಾರ್ಥಿಗಳು ’ಬೇಕು’ ಎಂದು ಉತ್ತರಿಸಿದ್ದಾರೆ. ಮಾತು ಮುಂದುವರಿಸಿ ‘ನಿಮ್ಮ ಅಪ್ಪ, ಅವ್ವ, ನಿಮ್ಮೂರಿನ ಜನರಿಗೆ ಹೋಗಿ ಹೇಳಿ; ದೇಶ ಶ್ರೀಮಂತವಾಗಿರಲು ಮೋದಿ ಆಡಳಿತ ಇರಬೇಕು. ಯಾವ ನಿರ್ಣಯ ಕೈಗೊಳ್ಳುತ್ತೀರಿ ಎನ್ನುವುದನ್ನು ತಿಳಿಸಿ’ ಎಂದಿದ್ದಾರೆ.

‘60 ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್‌ ಹಾಗೂ ನಮ್ಮ ಸರ್ಕಾರ ಜನರಿಗೆ ಏನು ಕೊಡುಗೆಗಳನ್ನು ಕೊಟ್ಟಿದೆ ಎನ್ನುವುದನ್ನು ವಿವರವಾಗಿ ಎಲ್ಲರಿಗೂ ಹೇಳಿ. ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್‌ ಪಾಸ್‌ ಕೊಟ್ಟಿದ್ದು ನಾವು. ಇನ್ನೊಂದು ತಿಂಗಳಲ್ಲಿ ಚುನಾವಣೆ ಬರುತ್ತದೆ. ಭಾರತ ವಿಶ್ವದಲ್ಲಿ ಅಗ್ರಸ್ಥಾನ ಗಳಿಸಲು ಮತ್ತೊಮ್ಮೆ ಮೋದಿ ಎಂದು ಹೇಳಬೇಕು’ ಎಂದು ಸಚಿವರು ಭಾಷಣದಲ್ಲಿ ಹೇಳಿದ ವಿಡಿಯೊ ವೈರಲ್‌ ಆಗಿದೆ.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಮುಖಂಡ ಬಸವರಾಜ ರಾಯರಡ್ಡಿ ‘ಯಲಬುರ್ಗಾ ಕ್ಷೇತ್ರದಲ್ಲಿ ಶಿಕ್ಷಣ ಇಲಾಖೆ ಸಚಿವ ಹಾಲಪ್ಪ ಕೈಗೊಂಬೆ ಎಂಬುದು ಸಾಬೀತಾಗಿದೆ’ ಎಂದಿದ್ದಾರೆ.

‘ಶಾಲಾ ಕೊಠಡಿ ಉದ್ಘಾಟನೆಗೆ ಹೋಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ರಾಜಕೀಯ ಭಾಷಣ ಮಾಡಿದ್ದಾರೆ. ಸರ್ಕಾರದ ಭಾಗವಾದ ಸಚಿವರು ಸರ್ಕಾರಿ ಇಲಾಖೆಗಳನ್ನು ತಮ್ಮ ಪಕ್ಷದ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯೇ. ಶಿಕ್ಷಣ ಇಲಾಖೆಯಲ್ಲಿ ಬಹಿರಂಗವಾಗಿ ರಾಜಕಾರಣ ತಾಂಡವಾಡುತ್ತಿದ್ದರೂ ಇಲಾಖೆಯ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ’ ಎಂದು ಆರೋಪಿಸಿದ್ದಾರೆ.

ರಾಯರಡ್ಡಿ ಹೇಳಿಕೆಗೆ ಭಾನುವಾರ ನಗರದಲ್ಲಿ ಪ್ರತಿಕ್ರಿಯಿಸಿದ ಹಾಲಪ್ಪ ಆಚಾರ್ ’ಅಭಿವೃದ್ಧಿ ವಿಚಾರದಲ್ಲಿ ನನ್ನನ್ನು ಟೀಕಿಸಲು ಅವಕಾಶವೇ ಇಲ್ಲದಂತಾಗಿದೆ. ಇಲ್ಲದ ಕುಂಟುನೆಪಗಳನ್ನು ಮಾಡಿಕೊಂಡು ವಿನಾಕಾರಣ ಟೀಕಿಸುತ್ತಿದ್ದಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು