ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ವಿಮೆ: ನೋಡಲ್‌ ಅಧಿಕಾರಿ ನೇಮಿಸಿ

ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಪಾಟೀಲ ಸೂಚನೆ
Last Updated 15 ಜುಲೈ 2021, 6:16 IST
ಅಕ್ಷರ ಗಾತ್ರ

ಕೊಪ್ಪಳ: ಬೆಳೆ ವಿಮಾ ಪರಿಹಾರ ಸೇರಿದಂತೆ ಬಾಕಿ ಉಳಿದಿರುವ ಕಂತು ನೀಡುವ ಕುರಿತು ಮೇಲಿಂದ ಮೇಲೆ ಗೊಂದಲವಾಗುತ್ತಿದ್ದು, ಇದಕ್ಕೆ ನೋಡಲ್‌ ಅಧಿಕಾರಿಯನ್ನು ನೇಮಕ ಮಾಡಿ ಎಲ್ಲ ರೈತರಿಗೆ ಪರಿಹಾರ ದೊರೆಯುವಂತೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಸೂಚನೆ ನೀಡಿದರು.

ಅವರು ಬುಧವಾರಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾ ಪಂಚಾಯಿತಿ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿವರ್ಷ ವಿಮೆ ಹಣ ತುಂಬುವ ರೈತರಿಗೆ ಪರಿಹಾರ ಬಾರದೇ ಇದ್ದರೆ ಅವರು ವಿಮೆ ತುಂಬುವ ಆಸಕ್ತಿಯನ್ನೇ ಕಳೆದುಕೊಳ್ಳುತ್ತಾರೆ. ನಾವು ಮಾಡುವ ನಿರ್ಲಕ್ಷ್ಯಕ್ಕೆ ರೈತರು ಬಲಿಯಾಗಬಾರದು. ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಮಾಡಬೇಕು ಎಂದರು.

ಕೋವಿಡ್ ಲಾಕ್‌ಡೌನ್‌ ಸಂಕಷ್ಟದಿಂದ ತೊಂದರೆಗೆ ಒಳಗಾದ ಹೂವು, ಹಣ್ಣು, ತರಕಾರಿ ಬೆಳೆಗಾರರು, ಕಟ್ಟಡ ಕಾರ್ಮಿಕರಿಗೆ ಸಕಾಲಕ್ಕೆ ಪರಿಹಾರ ಧನ ನೀಡಿ, ಏನೇ ತಾಂತ್ರಿಕ ತೊಂದರೆ ಇದ್ದರೂ ಪರಿಹರಿಸಿ, ಕನಕಗಿರಿ ತೋಟಗಾರಿಕೆ ಪಾರ್ಕ್‌ ಶೀಘ್ರ ಕಾರ್ಯಾರಂಭವಾಗುವಂತೆ ಶ್ರಮಿಸಿ, ಮುಂಗಾರು ಮಳೆ ಮತ್ತು ಸೋಂಕು ಹರಡುವ ಈ ಸಂದರ್ಭದಲ್ಲಿ ಜನ, ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ ಸಂಬಂಧಿಸಿದ ಇಲಾಖೆ ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಇದುವರೆಗೂ 38 ಬ್ಲಾಕ್ ಫಂಗಸ್ ರೋಗಿಗಳು ಪತ್ತೆಯಾಗಿದ್ದು, ಬ್ಲಾಕ್ ಫಂಗಸ್ ಸೋಂಕು ಹರಡದಂತೆ ಎಚ್ಚರ ವಹಿಸಿ. ಚಿಕಿತ್ಸೆಗೆ ನಮ್ಮ ಜಿಲ್ಲೆಯಲ್ಲಿಯೇ ಅಗತ್ಯ ಸೌಲಭ್ಯ ಕಲ್ಪಿಸಿ ಎಂದರು.

ರಸ್ತೆ ದುಸ್ಥಿತಿ; ಅಸಮಾಧಾನ: ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆ ನಿರ್ವಹಿಸುವ ರಸ್ತೆ ಹಾಳಾಗಿ ಹೋಗಿವೆ. ಪ್ರತಿಬಾರಿ ಸಭೆಯಲ್ಲಿ ದುರಸ್ತಿ ಮಾಡಿಸಲಾಗುವುದು ಎಂದು ಸಮಜಾಯಿಷಿ ನೀಡುತ್ತೀರಿ, ಕಾಮಗಾರಿ ಮುಗಿಸದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಿ, ಎಲ್ಲಕ್ಕೂ ಶಾಸಕರು, ಸಂಸದರ ಹೆಸರು ತರಬೇಡಿ, ಕಾನೂನಿನ ಪ್ರಕಾರ ರಸ್ತೆ ನಿರ್ಮಾಣ ಮಾಡಿ, ಒಂದು ಗುಂಡಿ ಮುಚ್ಚಲು ಎಷ್ಟು ಸಮಯ ಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಳಸಂತೆಯಲ್ಲಿಪಡಿತರ ಮಾರುವವರನ್ನು ಗುರುತಿಸಿ ಅಂತವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಪಡೆಯಲು ಗ್ರಾಮೀಣರು ತೊಂದರೆ ಅನುಭವಿಸುತ್ತಿದ್ದು,ಸಮೀಪದ ಅಂಗಡಿಗಳಲ್ಲಿ ಅವಕಾಶ ಕಲ್ಪಿಸಿ ಎಂದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳನ್ನು ಅನುಷ್ಠಾನ ಸಮಿತಿಏಜೆನ್ಸಿಗಳಾದ ನಿರ್ಮಿತಿ ಕೇಂದ್ರ, ಲೋಕೋಪಯೋಗಿ ಇಲಾಖೆ ಹಾಗೂ ಕೆಆರ್‌ಐಡಿಲ್‌ನ ಅಧಿಕಾರಿಗಳು ಕಾಲಮಿತಿಯಲ್ಲಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಿ,ಗಂಗಾ ಕಲ್ಯಾಣ ಯೋಜನೆಯಡಿ ಒಟ್ಟು 369 ಕೊಳವೆಬಾವಿಗಳನ್ನು ಕೊರೆಸಲಾಗಿದ್ದು, ಅವುಗಳಿಗೆ ಇದುವರೆಗೂ ವಿದ್ಯುತ್ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ,ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.

ಸಭೆಯಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯಿತಿ ಸಿಇಒ ಫೌಜಿಯಾ ತರನ್ನುಮ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಹೇಮಂತ್ ಎನ್., ಕೆ.ಡಿ.ಪಿಸದಸ್ಯರು ಇದ್ದರು.

690 ಮೆಟ್ರಿಕ್ ಟನ್ ರಸಗೊಬ್ಬರ:ಜಿಲ್ಲೆಯಲ್ಲಿ 690 ಮೆಟ್ರಿಕ್‌ ಟನ್‌ ರಸಗೊಬ್ಬರ ದಾಸ್ತಾನು ಇದೆ. ಆದರೂ ವಿತರಣೆ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಕೆಲವು ಭಾಗಗಳಲ್ಲಿ ಮಾತ್ರ ಉತ್ತಮ ಮಳೆಯಾಗಿದ್ದು, ಹೋಬಳಿವಾರು ಹಾಗೂ ತಾಲ್ಲೂಕುವಾರು ಮಳೆ ಪ್ರಮಾಣವನ್ನು ಪಟ್ಟಿ ಮಾಡಿ ಜನಪ್ರತಿನಿಧಿಗಳಿಗೆ ನೀಡಬೇಕು. ಬೆಳೆ ವಿಮೆ ಯೋಜನೆಯಲ್ಲಿ 2020-21ನೇ ಸಾಲಿನಲ್ಲಿ ವಿಮೆ ಕಂತು ಪಾವತಿಸಿದ ರೈತರಿಗೆ ವಿಮೆ ಮೊತ್ತವನ್ನು ಪಾವತಿಸಬೇಕು. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 83,000 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದರು.

ಅದರಲ್ಲಿ 10,300 ರೈತರಿಗೆ ₹ 10.35 ಕೋಟಿ ವಿಮೆ ಮೊತ್ತ ಪಾವತಿಯಾಗಿದೆ. ಬಾಕಿ ಉಳಿದ ರೈತರಿಗೆ ವಿಮೆ ಮೊತ್ತ ಪಾವತಿಯಾಗದ ಕುರಿತು ಉಂಟಾದ ತೊಂದರೆ ಪರಿಶೀಲಿಸಿಎಂದು ಸೂಚನೆ ನೀಡಿದರು.

ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ
ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ನಿಗದಿತ ಎಂ.ಆರ್.ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೂರು ಬಂದಿವೆ. ಈ ಬಗ್ಗೆ ಅಬಕಾರಿ ಆಯುಕ್ತರು ಅಗತ್ಯ ಕ್ರಮ ಕೈಗೊಂಡು ಅಕ್ರಮ ಮದ್ಯ ಮಾರಾಟ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ಇದಕ್ಕೆ ಜಿಲ್ಲಾಧಿಕಾರಿ ಹಾಗೂಪೊಲೀಸ್ ಇಲಾಖೆ ಸಹಕಾರ ಪಡೆಯಿರಿ. ಜಿಲ್ಲೆಯ ಎಲ್ಲ ಬಾರ್ ಅಥವಾ ಮದ್ಯ ಮಾರಾಟ ಅಂಗಡಿಗಳಲ್ಲಿ ಮದ್ಯದ ಎಂ.ಆರ್.ಪಿ ದರ ಪಟ್ಟಿಯನ್ನು ಕಡ್ಡಾಯವಾಗಿ ಪ್ರಕಟಿಸಬೇಕು. ಜಿಲ್ಲೆಯ ಯಾವುದೇ ಸ್ಥಳದಲ್ಲಿ ಮೂರು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ಅಧಿಕಾರಿ, ಸಿಬ್ಬಂದಿ ಪಟ್ಟಿಯನ್ನು ಒದಗಿಸಿ. ಅಂತವರನ್ನು ನಿಯಮಾನುಸಾರ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಅಕ್ರಮ ಮದ್ಯ ಮಾರಾಟವನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ಅವರುಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT