ಭಾನುವಾರ, ಜುಲೈ 25, 2021
28 °C
ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ

ಕುಷ್ಟಗಿ: ನೇಮಕಾತಿ ಪ್ರಕ್ರಿಯೆಗೆ ಅಧಿಕಾರಿಗಳೇ ಅಡ್ಡಿ: ಶಾಸಕ ಬಯ್ಯಾಪುರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕುಷ್ಟಗಿ: ಪದವಿಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯೂ ಸೇರಿದಂತೆ ರಾಜ್ಯಮಟ್ಟದ ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದವರಿಗೆ ಹುದ್ದೆಗಳು ದೊರೆಯದಂತೆ ನೋಡಿಕೊಳ್ಳುವಲ್ಲಿ ಆಯಾ ಇಲಾಖೆಗಳ ಮುಖ್ಯಸ್ಥರು ವ್ಯವಸ್ಥಿತ ರೀತಿಯಲ್ಲಿ ಸಂಚು ನಡೆಸುತ್ತಿದ್ದಾರೆ ಎಂದು ಇಲ್ಲಿಯ ಶಾಸಕ ಅಮರೇಗೌಡ ಬಯ್ಯಾಪುರ ಆರೋಪಿಸಿದರು.

ಬುಧವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದಲ್ಲಿನ ಹುದ್ದೆಗಳಿಗೆ ಶೇ 80ರಷ್ಟು ಮತ್ತು ರಾಜ್ಯ ಮಟ್ಟದ ನೇಮಕಾತಿಯಲ್ಲಿ ಈ ಭಾಗದವರಿಗೆ ಶೇ 8ರಷ್ಟು ಹುದ್ದೆಗಳನ್ನು ಮೀಸಲಿಡಬೇಕೆಂಬ ನಿಯಮವನ್ನು ಪಾಲಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಇಲ್ಲದ ನೆಪ ಒಡ್ಡಿ ಅನಗತ್ಯವಾಗಿ ಸುತ್ತೋಲೆಗಳನ್ನು ಹೊರಡಿಸುವ ಮೂಲಕ ನೇಮಕಾತಿ ಪ್ರಕ್ರಿಯೆಯನ್ನೇ ತಡೆಹಿಡಿಯುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಅವರು ದೂರಿದರು.

2015-16ರಲ್ಲಿ ಜೂನಿಯರ್ ಕಾಲೇಜು ಉಪನ್ಯಾಸಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿ, ಸಿಇಟಿ ಮತ್ತು ಮೆರಿಟ್‌ ಆಧಾರದ ಮೇಲೆ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸಲಾಗಿತ್ತು. ಆದರೆ ಕೆಲವರು ಈ ಪ್ರಕ್ರಿಯೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ತಡೆಯಾಜ್ಞೆ ತೆರವುಗೊಳಿಸಿದ ನ್ಯಾಯಾಲಯ ನೇಮಕಾತಿ ನಡೆಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು.

ಈ ಮಧ್ಯೆ ಜುಲೈ 8 ರಂದು ನೇಮಕಾತಿಗೆ ಕೌನ್ಸೆಲಿಂಗ್‌ ಪ್ರಕ್ರಿಯೆ ನಡೆಸಲು ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಕೊನೆಗಳಿಗೆಯಲ್ಲಿ ಕೋವಿಡ್‌ ಸಮಸ್ಯೆಯ ನೆಪದಿಂದ ಜುಲೈ 6 ರಂದು ಮರು ಆದೇಶ ಹೊರಡಿಸಿ, ಕೌನ್ಸೆಲಿಂಗ್‌ ಪ್ರಕ್ರಿಯೆಯನ್ನೇ ತಡೆಹಿಡಿದಿರುವುದು ಖಂಡನೀಯ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಯಾವುದೇ ಹುದ್ದೆಗಳಿಗೆ ಆಯ್ಕೆ ನಡೆಯುವ ಆಯ್ಕೆ ಪ್ರಕ್ರಿಯೆಗೆ ಮೊದಲೇ ಆರ್ಥಿಕ ಅನುಮತಿ ದೊರಕಿರುತ್ತದೆ. ಉಪನ್ಯಾಸಕರ ಹುದ್ದೆ ನೇಮಕ ಕೌನ್ಸೆಲಿಂಗ್‌ ಹಂತಕ್ಕೆ ಬಂದ ನಂತರ ಮತ್ತೆ ಆರ್ಥಿಕ ಇಲಾಖೆ ಅನುಮತಿ ಬೇಕು ಎಂಬ ವಿಷಯವನ್ನು ಕಡತದಲ್ಲಿ ಸೇರಿಸಿದೆ ಎಂದು ಬಯ್ಯಾಪುರ ಬೇಸರ ವ್ಯಕ್ತಪಡಿಸಿದರು.

ಐದಾರು ದಶಕಗಳಿಂದ ಈ ಭಾಗದವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಸಂದರ್ಭದಲ್ಲಿ ಸರ್ಕಾರದ ಯಾವುದೇ ನಿಯಮಗಳು ಅಡ್ಡಿಯಾಗಬಾರದು ಎಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಆರ್ಥಿಕ ಇಲಾಖೆಯ ಅಡಚಣೆಯಿಂದ ಮುಕ್ತಗೊಳಿಸಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರ ಅದಕ್ಕೆ ಅಡ್ಡಿಪಡಿಸುತ್ತಿದೆ ಎಂದು ದೂರಿದರು.

‘ಈಗಲೂ ನೇಮಕಾತಿ ನಡೆದಿಲ್ಲ’

ಕಾಲೇಜು ಉಪನ್ಯಾಸಕರ ನೇಮಕಾತಿ ರಾಜ್ಯಮಟ್ಟದಲ್ಲಿ ನಡೆಯುತ್ತಿದ್ದರೂ ಜು.6ರ ಆದೇಶದಲ್ಲಿ 'ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳನ್ನೂ ಸೇರಿಸಿ' ಎಂದು ವಿಶೇಷವಾಗಿ ನಮೂದಿಸುವ ಮೂಲಕ ಈ ಭಾಗದ ಜನರನ್ನು ಸರ್ಕಾರ ಅಪಮಾನಗೊಳಿಸಿದೆ. ಕಲಬುರ್ಗಿಯಲ್ಲಿ ಸಂಪುಟ ಸಭೆ ನಡೆಸಿದ್ದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಡಿ ದರ್ಜೆಯಿಂದ ಕ್ಲಾಸ್‌ 1 ಹಂತದ ಸುಮಾರು ಐವತ್ತು ಸಾವಿರ ಹುದ್ದೆಗಳನ್ನು ಮೂರು ವರ್ಷದಲ್ಲಿ ಭರ್ತಿ ಮಾಡುವುದಾಗಿ ಹೇಳಿದ್ದರು. ಆದರೆ ಈಗಲೂ ನೇಮಕಾತಿ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮುರಿದುಬಿದ್ದ ಮದುವೆಗಳು!

ಐದು ವರ್ಷಗಳ ಹಿಂದೆ ಉಪನ್ಯಾಸಕರ ಹುದ್ದೆಗೆ ಸಂಬಂಧಿಸಿದ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ನೌಕರಿ ಖಾತರಿ ಎಂದೆ ಭಾವಿಸಲಾಗಿತ್ತು. ಉದ್ಯೋಗದ ಭದ್ರತೆ ದೊರೆಯಿತು ಎಂದೆ ಬಹುತೇಕ ಅಭ್ಯರ್ಥಿಗಳ ಮದುವೆ ನಿಶ್ಚಯವಾಗಿತ್ತು. ಕೆಲವರ ಮದುವೆಯೂ ಆಯಿತು. ಆದರೆ, ನಂತರ ನೇಮಕಾತಿ ನಡೆಯದ ಕಾರಣ ಅನೇಕ ಸಂಬಂಧಗಳು, ಮದುವೆಗಳೂ ಮುರಿದುಬಿದ್ದವು. ಇದೀಗ ಬಹಳಷ್ಟು ಅಭ್ಯರ್ಥಿಗಳ ವಯೋಮಿತಿಯೇ ಮೀರಿಹೋಗುತ್ತಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಶಾಸಕ ಅಮರೇಗೌಡ ಬಯ್ಯಾಪುರ ಸರ್ಕಾರವನ್ನು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು