ಕೊಪ್ಪಳ: 'ನರೇಂದ್ರ ಮೋದಿ ಅವರು ಪ್ರಧಾನಿಯಾದ ಹಿಂದಿನ ಒಂಬತ್ತು ವರ್ಷಗಳ ಅವಧಿಯಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಕಂಡಿದ್ದು, ರೈಲ್ವೆ ಕ್ಷೇತ್ರದಲ್ಲಿಯೂ ಗಣನೀಯ ಪ್ರಗತಿ ಸಾಧಿಸಿದ್ದೇವೆ’ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಇಲ್ಲಿ ಭಾನುವಾರ ಕೊಪ್ಪಳ ಹಾಗೂ ಮುನಿರಾಬಾದ್ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ‘ಯಾವ ದೇಶ ನೆಲ, ಜಲ ಮತ್ತು ವಾಯು ಮಾರ್ಗಗಳ ನಿರ್ಮಾಣದಲ್ಲಿ ಸುಧಾರಣೆ ಕಾಣುತ್ತದೆಯೇ ಆ ದೇಶ ಜಗತ್ತಿನ ಮುಂದುವರಿದ ರಾಷ್ಟ್ರಗಳ ಪಟ್ಟಿಯಲ್ಲಿ ಬರುತ್ತದೆ. ಈ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರು ಕ್ರಾಂತಿಕಾರಕ ಸುಧಾರಣೆಗಳನ್ನು ತಂದಿದ್ದಾರೆ’ ಎಂದರು.
‘ಅಮೃತ ಯೋಜನೆಯಲ್ಲಿ ಗಂಗಾವತಿಯ ರೈಲು ನಿಲ್ದಾಣ ಅಭಿವೃದ್ಧಿ ಮಾಡುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ. ಆ ಭಾಗದ ನಾಯಕರಾದ ಪರಣ್ಣ ಮುನವಳ್ಳಿ ಮತ್ತು ಬಸವರಾಜ ದಢೇಸೂಗೂರು ಅವರನ್ನು ಕರೆದುಕೊಂಡು ದೆಹಲಿಯಲ್ಲಿ ಮತ್ತೊಮ್ಮೆ ರೈಲ್ವೆ ಸಚಿವರನ್ನು ಭೇಟಿಯಾಗುತ್ತೇನೆ. ಗಂಗಾವತಿ ರೈಲು ನಿಲ್ದಾಣದಿಂದ ಅಂಜನಾದ್ರಿ ಬೆಟ್ಟದ ತನಕ ರೋಪ್ ವೇ ನಿರ್ಮಾಣಕ್ಕೆ ಒತ್ತಡ ಹಾಕುವೆ’ ಎಂದರು.
‘ಭಾನಾಪುರ ರೈಲ್ವೆ ಸೇತುವೆ ನಿರ್ಮಾಣ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಉದ್ಘಾಟನೆ ಮಾಡಲಾಗುವುದು. ಭಾಗ್ಯನಗರ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. ಕೊಪ್ಪಳದಲ್ಲಿ ಇನ್ನೊಂದು ರೈಲು ನಿಲ್ದಾಣದ ಅಗತ್ಯವಿದ್ದು, ಇದಕ್ಕಾಗಿ ಬಸಾಪುರ ಬಳಿ ಜಮೀನು ಪರಿಶೀಲಿಸಲಾಗಿದೆ. ಈಗಿನ ನಿಲ್ದಾಣದ ಇನ್ನೊಂದು ಭಾಗದಲ್ಲಿ ಪ್ರವೇಶ ದ್ವಾರ ಮತ್ತು ಟಿಕೆಟ್ ಕೌಂಟರ್ ಸ್ಥಾಪಿಸಲಾಗುವುದು’ ಎಂದು ತಿಳಿಸಿದರು.
ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಹೆಚ್ಚುವರಿ ವ್ಯವಸ್ಥಾಪಕ ಸಂಜಯ್ ಸಿಂಗ್ ಮಾತನಾಡಿ, ‘₹21 ಕೋಟಿ ವೆಚ್ಚದಲ್ಲಿ ಕೊಪ್ಪಳ ಹಾಗೂ ಮುನಿರಾಬಾದ್ ₹20 ಕೋಟಿಯಲ್ಲಿ ನಿಲ್ದಾಣಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಇದರಿಂದಾಗಿ ಈ ಭಾಗದ ಆನೆಗೊಂದಿ ಹಾಗೂ ಹಂಪಿಯಂಥ ಪಾರಂಪರಿಕ ಸ್ಥಳಗಳಿಗೆ ತೆರಳುವುದು ಸುಲಭವಾಗಲಿದೆ’ ಎಂದರು.
ಮಾಜಿ ಶಾಸಕರಾದ ಕೆ. ಶರಣಪ್ಪ, ಬಸವರಾಜ ದಢೇಸೂಗೂರು, ಜಿ.ವೀರಪ್ಪ ಕೆಸರಟ್ಟಿ, ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ನಗರಸಭೆ ಸದಸ್ಯರಾದ ರಾಜಶೇಖರ ಆಡೂರು, ಸರ್ವೇಶಗೌಡ, ಉಮಾ ಪಾಟೀಲ್, ವಿದ್ಯಾ ಹೆಸರೂರು, ದೇವಕ್ಕ ಕಂದಾರಿ, ರೈಲ್ವೆಯ ಹುಬ್ಬಳ್ಳಿ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಾಣೇಶ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಸೆಪ್ಟೆಂಬರ್‌ನಲ್ಲಿ ಸಿಂಧನೂರು ತನಕ ರೈಲು ಸಂಚಾರ ಆರಂಭದ ಭರವಸೆ ಅಮೃತ್ ಭಾರತ ರೈಲು ನಿಲ್ದಾಣಗಳ ಅಭಿವೃದ್ಧಿ ಯೋಜನೆಯಡಿ ಕ್ರಮ ಕೊಪ್ಪಳದಲ್ಲಿ ಇನ್ನೊಂದು ರೈಲು ನಿಲ್ದಾಣದ ನಿರ್ಮಾಣಕ್ಕೆ ಜಾಗ ಪರಿಶೀಲನೆ
ಕೊಪ್ಪಳ ರೈಲು ನಿಲ್ದಾಣದ ಮರು ಅಭಿವೃದ್ದಿಯಿಂದಾಗಿ ಸಂಪರ್ಕ ರಸ್ತೆ ಉನ್ನತೀಕರಣ ಸಾಧ್ಯವಾಗುತ್ತದೆ. ಕಳೆದ ಒಂಬತ್ತು ವರ್ಷಗಳಲ್ಲಿ ರೈಲ್ವೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ.ಹೇಮಲತಾ ನಾಯಕ ವಿಧಾನ ಪರಿಷತ್ ಸದಸ್ಯೆ
ಕುಷ್ಟಗಿ ಕ್ಷೇತ್ರದ ಜನ ರೈಲು ಸೌಲಭ್ಯಕ್ಕಾಗಿ ಕೊಪ್ಪಳ ಅಥವಾ ಹೊಸಪೇಟೆಗೆ ಹೋಗಬೇಕಾಗಿದೆ. ಈಗ ಕುಷ್ಟಗಿ ಸಮೀಪ ರೈಲು ಮಾರ್ಗ ಕಾಮಗಾರಿ ನಡೆಯುತ್ತಿದೆ. 2024ರ ಜೂನ್ ವೇಳೆಗೆ ಇದು ಪೂರ್ಣಗೊಳ್ಳಲಿದೆ.ದೊಡ್ಡನಗೌಡ ಪಾಟೀಲ ಕುಷ್ಟಗಿ ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.