ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಕನೂರು: ಜಿಂಕೆ ಹಾವಳಿಗೆ ಕಂಗಾಲಾದ ರೈತ

Published 16 ಜೂನ್ 2024, 15:44 IST
Last Updated 16 ಜೂನ್ 2024, 15:44 IST
ಅಕ್ಷರ ಗಾತ್ರ

ಕುಕನೂರು: ನಿರಂತರ ಬರದ ಭೀತಿ ಎದುರಿಸುತ್ತಿರುವ ತಾಲ್ಲೂಕಿನ ರೈತರು ಬರದ ದವಡೆಯಿಂದ ಪಾರಾಗಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದರೆ, ಪ್ರಸಕ್ತ ವರ್ಷ ಮುಂಗಾರು ಮಳೆಯಾಗುತ್ತಿದ್ದು ಸಂತಸದಿಂದ ಹೆಸರು ಬೆಳೆ ಬೆಳೆದಿದ್ದಾರೆ. ಆದರೆ, ಬೆಳೆಗೆ ಜಿಂಕೆ ಹಾವಳಿ ವ್ಯಾಪಕವಾಗಿದ್ದು, ಬೆಳೆ ರಕ್ಷಣೆ ಬೆಳೆಗಾರರಿಗೆ ಸವಾಲಾಗಿ ಪರಿಣಮಿಸಿದೆ.

ರೈತರ ನಿರೀಕ್ಷೆಯಂತೆ ಉತ್ತಮ ಬೆಳೆ ಮೂಡಿ ಬಂದಿತ್ತು. ಆದರೆ, 40 ರಿಂದ 50 ಜಿಂಕೆಗಳ ತಂಡ ಹೆಸರು ಬೆಳೆಗೆ ಲಗ್ಗೆ ಇಟ್ಟು ಬೇರು ಸಹಿತ ಹೆಸರು ಬೆಳೆಯನ್ನು ತಿಂದು ಹಾಕುತ್ತಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಲಾಭದ ಬೆಳೆ: ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ನೀಡುವ ಬೆಳೆ ಎಂದೇ ಕರೆಯಲ್ಪಡುವ ಹೆಸರು ಬೆಳೆ ಈ ಭಾಗದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಬೀಜ, ಗೊಬ್ಬರ ಸೇರಿದಂತೆ ಹೆಸರು ಬಿತ್ತನೆಗೆ ಎಕರೆಗೆ ₹2 ಸಾವಿರ ರೂಪಾಯಿವರೆಗೆ ವೆಚ್ಚವಾಗುತ್ತದೆ. ಬಿತ್ತನೆ ಬಳಿಕ ಕಳೆ ನಿರ್ವಹಣೆ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಿದರೆ ಬೆಳೆ ಕೈ ಸೇರುವವರೆಗೂ ಚಿಂತೆ ತಪ್ಪಿದ್ದಲ್ಲ.

ಜಿಂಕೆಗಳಿಗೆ ಹೊಟ್ಟೆ ತುಂಬಿಸಿಕೊಳ್ಳಲು ಅಗತ್ಯವಿರುವ ಹಸಿರು ದೊರಕುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಎರೆಭೂಮಿಗಳಾದ ಯರೆಹಂಚಿನಾಳ, ಬಿನ್ನಾಳ, ಚಿಕನಕೊಪ್ಪ, ಸೋಂಪುರ, ಮಾಳೆಕೊಪ್ಪ ಮುಂತಾದ ಗ್ರಾಮಗಳಲ್ಲಿ ವ್ಯಾಪಕವಾಗಿದ್ದ ಜಿಂಕೆಗಳು ಹಸಿರು ಅರೆಸಿ ಅಲೆಯುತ್ತಿರುವುದು ಒಂದೆಡೆಯಾದರೆ, ನೆರೆಯ ರೋಣ ತಾಲ್ಲೂಕಿನಲ್ಲಿ ನೆಲೆ ಕಂಡುಕೊಂಡಿದ್ದ ಜಿಂಕೆಗಳು ಸಹ ತಾಲ್ಲೂಕಿಗೆ ಲಗ್ಗೆ ಇಟ್ಟಿರುವುದೇ ಇಲ್ಲಿನ ಹೆಸರು ಬೆಳೆಗೆ ಕಂಟಕವಾಗಿ ಪರಿಣಮಿಸಿದೆ.

ಕುಕನೂರು ತಾಲ್ಲೂಕಿನ ಯರೆಹಂಚಿನಾಳ ಗ್ರಾಮದ ಹೊಲವೊಂದರಲ್ಲಿ ಹೆಸರು ಬೆಳೆ ತಿನ್ನುತ್ತಿರುವ ಜಿಂಕೆಗಳು
ಕುಕನೂರು ತಾಲ್ಲೂಕಿನ ಯರೆಹಂಚಿನಾಳ ಗ್ರಾಮದ ಹೊಲವೊಂದರಲ್ಲಿ ಹೆಸರು ಬೆಳೆ ತಿನ್ನುತ್ತಿರುವ ಜಿಂಕೆಗಳು

ಮರಿಚಿಕೆಯಾದ ಜಿಂಕೆಧಾಮ: ತಾಲ್ಲೂಕಿನ ರೈತ ಸಮುದಾಯದ ನೆಮ್ಮದಿಗೆ ನಿರಂತರ ಭಂಗವನ್ನುಂಟು ಮಾಡ್ತುತಿರುವ ಜಿಂಕೆಗಳ ಹಾವಳಿ ನಿಯಂತ್ರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾಡಳಿತ 2006ರಲ್ಲಿಯೇ ‘ಜಿಂಕೆಧಾಮ’ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿವೆ. ಹೀಗಿದ್ದರೂ ಸರ್ಕಾರ ಹಾಗೂ ಜನಪ್ರತಿನಿಧಿಗಳು ತಲೆ ಕೆಡಿಸಿಕೊಳ್ಳದ ಪರಿಣಾಮ ಜಿಂಕೆಗಳ ಹಾವಳಿ ರೈತರಿಗೆ ಶಾಪವಾಗಿ ಪರಿಣಮಿಸಿದೆ’ ಎಂದು ಯರೆಹಂಚಿನಾಳ ಗ್ರಾಮದ ರೈತ ನಾಗರಾಜ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT