ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ಪಂಪಾ ಸರೋವರದ ಬಳಿ ಗವಿವರ್ಣ ಚಿತ್ರಗಳು ಪತ್ತೆ

Published 31 ಮೇ 2024, 8:31 IST
Last Updated 31 ಮೇ 2024, 8:31 IST
ಅಕ್ಷರ ಗಾತ್ರ

ಕೊಪ್ಪಳ: ಹಂಪಿ ವಿಶ್ವ ಪರಂಪರೆ ಪ್ರದೇಶದಲ್ಲಿರುವ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿಯ ಹತ್ತಿರದ ಪಂಪ ಸರೋವರಕ್ಕೆ ಹೋಗುವ ದಾರಿಯ ಎಡಬದಿಯ ಗುಡ್ಡದಲ್ಲಿರುವ ಬಂಡೆಯಲ್ಲಿ ಗವಿವರ್ಣ ಚಿತ್ರಗಳು ಪತ್ತೆಯಾಗಿವೆ.

ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಪರಂಪರೆ ಇಲಾಖೆಯ ಕಮಲಾಪುರ ಹಂಪಿಯ ಉಪ ನಿರ್ದೇಶಕ ಆರ್.ಶೇಜೇಶ್ವರ ಹಾಗೂ ಪುರಾತತ್ವ ಸಹಾಯಕ ಆರ್.ಮಂಜನಾಯ್ಕ ಕ್ಷೇತ್ರ ಕಾರ್ಯ ಕೈಗೊಂಡಾಗ ಇವು ಪತ್ತೆಯಾಗಿವೆ.

ಕಿತ್ತಳೆ ಕೆಂಪು ವರ್ಣದಿಂದ ಮೂಡಿಸಿದ ಚಿತ್ರಗಳಾಗಿದ್ದು, ನಿಂತಿರುವ ಗೂಳಿಯು ಡುಬ್ಬದಿಂದ ಕೂಡಿವೆ. ಈ ಗೂಳಿಯ ಕಾಲುಗಳನ್ನು ಹುಲಿಯು ಹಿಡಿದಿರುವಂತೆ ಚಿತ್ರಿಸಲಾಗಿದ್ದು, ಹುಲಿಯು ದಷ್ಟ ಪುಷ್ಟವಾಗಿದ್ದು ಪಟ್ಟೆಗಳಿಂದ ಕೂಡಿದೆ. ಹುಲಿಯ ಚಿತ್ರ 50 ಸೆಂ.ಮೀ ಉದ್ದ ಹಾಗೂ 20 ಸೆಂ.ಮೀ ಅಗಲವಾಗಿದೆ. ಗೂಳಿಯು 40.ಸೆಂ.ಮೀ ಉದ್ದ ಹಾಗೂ 20 ಸೆಂ.ಮೀ ಅಗಲವಾಗಿದೆ. ಇನ್ನೆರಡು ಚಿಕ್ಕ ಚಿಕ್ಕ ಗೂಳಿಗಳ ಅಸ್ಪಷ್ಟ ಚಿತ್ರಗಳು ಗೋಚರಿಸುತ್ತವೆ. ಈ ಚಿತ್ರಗಳ ಅಕ್ಕಪಕ್ಕದಲ್ಲಿ ಅಸ್ಪಷ್ಟ ಕಿತ್ತಳೆ ಕೆಂಪು ವರ್ಣದಿಂದ ಮೂಡಿಸಿದ ಇತರ ಚಿತ್ರಗಳು ಸಹ ಕಂಡುಬರುತ್ತವೆ.

ಈ ಗವಿ ವರ್ಣ ಚಿತ್ರಗಳು ನೈಸರ್ಗಿಕವಾಗಿ ಎರಡು ಬಂಡೆಗಳಿರುವ ಒಂದು ಬೃಹದಾಕಾರದ ಬಂಡೆಯು ಸಣ್ಣ ಪ್ರಮಾಣದ ಬಂಡೆಯ ಮೇಲೆ ವಾಲಿ ನಿಂತಿದ್ದು ಇದರಲ್ಲಿ ವರ್ಣ ಚಿತ್ರ ಮೂಡಿರುವ ಸಣ್ಣ ಬಂಡೆಗೆ ರಕ್ಷಣೆಯಂತಿದೆ. ಇದನ್ನು ಬಳಸಿಕೊಂಡು ವರ್ಣ ಚಿತ್ರಕ್ಕೆ ನೈಸರ್ಗಿಕವಾಗಿ ಮಳೆ ಗಾಳಿ ಬಿಸಿಲು ಮುಂತಾದ ನೈಸರ್ಗಿಕ ವಿಕೋಪಕ್ಕೆ ಹಾಳಾಗದೆ ಇರುವ ಜಾಗವನ್ನು ಆಯ್ಕೆ ಮಾಡಿಕೊಂಡಿರುವುದು ಗವಿ ವರ್ಣ ಚಿತ್ರಗಳನ್ನು ಚಿತ್ರಿಸಿರುವುದು ಚಿತ್ರಕಾರನ ಕೌಶಲತೆ ಸೂಚಿಸುತ್ತದೆ.

ಇವು ಪ್ರಾಗೈತಿಹಾಸ ಕಾಲದ ಗವಿವರ್ಣ ಚಿತ್ರಗಳಾಗಿದ್ದು, ಸುಮಾರು 2,500 ವರ್ಷಗಳ ಹಿಂದಿನ ವರ್ಣ ಚಿತ್ರಗಳೆಂದು ಹೇಳಬಹುದಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT