ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಸಂಭ್ರಮದ ಕಾರಹುಣ್ಣಿಮೆ

Last Updated 15 ಜೂನ್ 2022, 4:16 IST
ಅಕ್ಷರ ಗಾತ್ರ

ಕೊಪ್ಪಳ: ನಗರದಲ್ಲಿ ಮಂಗಳವಾರ ಕಾರಹುಣ್ಣಿಮೆ ಅಂಗವಾಗಿ ರೈತರು ಎತ್ತುಗಳನ್ನು ಓಡಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಮುಂಗಾರು ಬಿತ್ತನೆ ಸಮಯದಲ್ಲಿ ಬರುವ ಈ ಹುಣ್ಣಿಮೆವನ್ನು ರೈತಾಪಿ ವರ್ಗದ ಜನ ಹಬ್ಬದ ರೀತಿಯಲ್ಲಿ ಆಚರಿಸುತ್ತಾರೆ. ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸುತ್ತಾರೆ. ಜಾನುವಾರುಗಳನ್ನು ಅಲಂಕರಿಸುತ್ತಾರೆ.

ಒಂದೇ ವೇದಿಕೆಯಲ್ಲಿ ಎತ್ತುಗಳನ್ನು ನಿಲ್ಲಿಸಿ ಕಾರ ಹುಣ್ಣಿಮೆ ಕರಿ ಹರಿಯಲು ಅವುಗಳನ್ನು ಓಡಿಸುವ ಕಾರ್ಯಕ್ರಮ ನಡೆಯಿತು. ಬಿಳಿ ಮತ್ತು ಕಂದು ಬಣ್ಣದ ಎತ್ತುಗಳು ಕೋಟೆ ರಸ್ತೆಯ ಗಡಿಯಾರ ಕಂಬದಿಂದ ಕರಗಲ್‌ ತನಕ ಓಡಿ ಮೊದಲಿಗರಾಗಿ ಗುರಿ ತಲುಪಿದವು.

ಯಾವ ಬಣ್ಣದ ಎತ್ತು ಮೊದಲು ಕರಗಲ್‌ ಮುಟ್ಟುತ್ತದೆಯೋ; ಅದೇ ಬಣ್ಣದ ಬೆಳೆಗಳು ಚೆನ್ನಾಗಿ ಬೆಳೆಯುತ್ತದೆ ಎನ್ನುವುದು ರೈತರ ನಂಬಿಕೆ.ಬಿಳಿ ಮತ್ತು ಕಂದು ಬಣ್ಣದ ಎತ್ತುಗಳು ಮೊದಲು ಕರಗಲ್‌ ತಲುಪಿದ್ದರಿಂದ ಜೋಳ ಹಾಗೂ ಗೋದಿ ಫಸಲು ಚೆನ್ನಾಗಿ ಬರುತ್ತದೆ ಎಂದು ರೈತರು ಅಭಿಪ್ರಾಯಪಟ್ಟರು.

ಹಳ್ಳಿಗಳಲ್ಲಿ ಕಳೆಗಟ್ಟಿದ ಕರಿ ಹರಿಯುವ ಸಂಪ್ರದಾಯ

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಮಂಗಳವಾರ ಕಾರಹುಣ್ಣಿಮೆ ನಿಮಿತ್ತ ಕರಿ ಹರಿಯುವ ಸಂಪ್ರದಾಯವನ್ನು ಸಂಭ್ರಮದೊಂದಿಗೆ ನೆರವೇರಿಸಲಾಯಿತು.

ಪಟ್ಟಣದ ಕಟ್ಟಿದುರ್ಗಾದೇವಿ ದೇವಸ್ಥಾನ ಮತ್ತು ನಾಯಕವಾಡಿಯ ಮಲ್ಲಿಕಾರ್ಜುನ ದೇವಸ್ಥಾನದ ಬಳಿ ನಡೆದ ಕರಿ ಹರಿಯವು ಕಾರ್ಯಮದಲ್ಲಿ ಕಂದು ಮತ್ತು ಬಿಳಿ ಹೋರಿಗಳು ಮುನ್ನಡೆ ಸಾಧಿಸಿದವು. ಈ ಹಬ್ಬದ ಮೂಲಕ ರೈತರು ತಮ್ಮದೇ ಆದ ರೀತಿಯಲ್ಲಿ ಬರುವ ವರ್ಷದ ಬೆಳೆಗಳ ಸ್ಥಿತಿಗತಿಯನ್ನು ವ್ಯಾಖ್ಯಾನಿಸುವುದು ವಾಡಿಕೆ. ಶೇಂಗಾ, ಜೋಳ, ಕಡಲೆ ಮತ್ತಿತರೆ ಬೆಳೆಗಳಿಗೆ ಉತ್ತಮವಾಗಿರಲಿವೆ ಎಂದು ಹಿರಿಯ ರೈತ ಹನುಮಂತಪ್ಪ ಗಾದಾರಿ ಹೇಳಿದರು.

ಎತ್ತು ಹೋರಿಗಳಿಗೆ ಜಳಕ ಮಾಡಿಸಿ ವಿವಿಧ ರೀತಿಯಲ್ಲಿ ಬಣ್ಣ ಬಳಿದು, ಕೋಡುಗಳಿಗೆ ರಿಬ್ಬನ್‌, ಕೊರಳಲ್ಲಿ ಗೆಜ್ಜೆಸರಗಳನ್ನು ಕಟ್ಟಿ ಸಿಂಗರಿಸಿ ಮೆರವಣಿಗೆ ಮೂಲಕ ಕರಿ ಹರಿಯವು ಸ್ಥಳಕ್ಕೆ ವಾದ್ಯಮೇಳದೊಂದಿಗೆ ಕರೆತರಲಾಯಿತು. ಕರಿ ಹರಿಯುವ ವೇಳೆ ಬೆದರಿಸಿದ್ದರಿಂದ ಏಕಕಾಲದಲ್ಲಿ ಎತ್ತುಗಳು ಓಟ ಕಿತ್ತಿದ್ದು ರೋಚಕವಾಗಿತ್ತು. ಆಯಾ ಊರುಗಳ ಹಿರಿಯರು, ಮಕ್ಕಳು ಸೇರಿದಂತೆ ನೂರಾರು ರೈತರು ಈ ಆಚರಣೆಯ ವೇಳೆ ಕಂಡುಬಂದರು.

ಎತ್ತುಗಳ ಕೊರತೆ: ಪ್ರತಿವರ್ಷ ಎತ್ತುಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಈ ಮಧ್ಯೆ ಈ ಬಾರಿಯೂ ಕರಿಹಿರಯುವ ಸಂಪ್ರದಾಯಕ್ಕೆ ಬೇಕಾಗುವ ಎತ್ತುಗಳ ಕೊರತೆ ಕಂಡುಬಂದಿತು. ಬೇರೆ ಬೇರೆ ಸ್ಥಳಗಳಲ್ಲಿರುವ ಎತ್ತುಗಳನ್ನು ತಂದು ಆಚರಣೆ ನೆರವೇರಿಸಲಾಯಿತು ಎಂದು ಗ್ರಾಮಸ್ಥರು ವಿವರಿಸಿದರು.

ಸ್ಪರ್ಧೆ: ಕಾರಹುಣ್ಣಿಮೆಯ ನಿಮಿತ್ತ ವಿವಿಧ ಗ್ರಾಮಗಳಲ್ಲಿ ದೈಹಿಕ ಕಸರತ್ತಿನ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅನೇಕ ಯುವಕರು ತೂಕದ ಕಲ್ಲುಗಳನ್ನು ಒಂದೇ ಕೈಯಿಂದ ಎತ್ತುವ ಮೂಲಕ ಸೈ ಎನಿಸಿಕೊಂಡರು.

ಹುಲಿಗೆಮ್ಮದೇವಿ ದರ್ಶನ ಪಡೆದ ಭಕ್ತರು

ಹುಲಿಗಿ(ಮುನಿರಾಬಾದ್): ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಶಕ್ತಿಪೀಠ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಹುಣ್ಣಿಮೆಯ ಅಂಗವಾಗಿ ಮಂಗಳವಾರ ವಿವಿಧ ಭಾಗದಿಂದ ಬಂದ ಭಕ್ತರು ದೇವಿಯ ದರ್ಶನ ಪಡೆದರು.

ಹೆಚ್ಚಾಗಿ ಗ್ರಾಮೀಣ ಪ್ರದೇಶದ ಭಕ್ತರನ್ನು ಹೊಂದಿರುವ ದೇವಿಗೆ ಜಾತ್ರೆ, ಹುಣ್ಣಿಮೆ ಮತ್ತು ಮಂಗಳವಾರ ಹಾಗೂ ಶುಕ್ರವಾರದಂದು ಶ್ರದ್ಧಾಭಕ್ತಿಯಿಂದ ಬರುವ ಭಕ್ತರು, ತಮ್ಮ ಆಹಾರ ಪದ್ಧತಿಯಂತೆ ಶಾಖಾಹಾರ ಅಥವಾ ಮಾಂಸಾಹಾರ ಅಡುಗೆ ಮಾಡಿ ದೇವಿಗೆ ನೈವೇದ್ಯ ಸಮರ್ಪಿಸಿ ತಾವು ಊಟ ಮಾಡುವುದು ವಾಡಿಕೆ. ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡುವ ಭಕ್ತರು ಸ್ಥಳದಲ್ಲೇ ಕರಿಗಡಬು ತಯಾರಿಸಿ, ಜೋಗತಿ ಪೂಜೆ ನೆರವೇರಿಸಿ ಊಟ ಮಾಡಿದರೆ, ಕೆಲವು ಭಕ್ತರು ಮಾಂಸದ ಅಡುಗೆ ತಯಾರಿಸಿ, ನೈವೇದ್ಯ ಸಮರ್ಪಿಸಿ ಊಟ ಮಾಡಿದರು.

ಜಾತ್ರೆಯ ಸಂಭ್ರಮ: ಕಳೆದ ತಿಂಗಳು ದೇವಿಯ ವಿಜೃಂಭಣೆಯ ಜಾತ್ರೆ ನಡೆದಿದೆ. ಮಂಗಳವಾರ ಕೂಡ ದರ್ಶನದ ನಂತರ ಭಕ್ತರು, ಬಳೆ ಆಟಿಕೆ ಸಾಮಾನುಗಳು ಗೃಹಪಯೋಗಿ ವಸ್ತುಗಳನ್ನು ಖರೀದಿಸಿದರು. ಕುಟುಂಬ ಸಮೇತ ಬಂದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ಮುಕ್ತ ದರ್ಶನ ಪಡೆದರು.

ರೈತರ ಮೊಗದಲ್ಲಿ ಕಾಣದ ಸಂಭ್ರಮ

ಹನುಮಸಾಗರ: ಸಮೀಪದ ಹನುಮನಾಳ ಸೇರಿದಂತೆ ವಿವಿಧ ಭಾಗದಲ್ಲಿ ಮಂಗಳವಾರ ಕಾರಹುಣ್ಣಿಮೆ ನಿಮಿತ್ತ ಎತ್ತುಗಳಿಂದ ಕರಿ ಹರಿಯಲಾಯಿತು.

‘ಕಾರುಹುಣ್ಣಿಮೆಗೆ ಕಡೆ ಕೂರಿಗೆ ಮಣ್ಣೆತ್ತುಗಳು ಮಳೆ ತರುತ್ತವೆ’ ಎಂಬ ನಾಣ್ಣುಡಿ ಈ ಭಾಗದಲ್ಲಿ ಇದೆಯಾದರೂ ಕಾರುಹುಣ್ಣಿಮೆ ಬಂದರೂ ಈವರೆಗೂ ಮಳೆಯಾಗದ ಕಾರಣ ಬಿತ್ತುವ ಕೂರಗಿಗಳು ಹೊಲಗಳಿಗೆ ಹೋಗದೆ ಬಡಿಗೇರ ಕುಲುಮೆಗಳಲ್ಲಿಯೇ ಕುಳಿತಿವೆ.

ಈ ಹೊತ್ತಿಗೆ ಬಿತ್ತನೆ ಮುಗಿಸಿ ಉಳಿದ ಬೀಜಗಳನ್ನು ಮಿಶ್ರಣ ಮಾಡಿ ಹಿಟ್ಟು ಹಾಕಿಸಿ ದೋಸೆ ಮಾಡಿ ಎತ್ತುಗಳಿಗೆ ನೈವೇದ್ಯ ಮಾಡಿ ಊಟ ಮಾಡುತ್ತೇವೆ. ಆದರೆ ಬಿತ್ತನೆ ಮಾಡಬೇಕಾದ ಬೀಜಗಳು ಮನೆಯಲ್ಲಿ ಇವೆ, ಹೇಗೆ ಹಬ್ಬ ಮಾಡುವುದು ಎಂದು ಹನುಮನಾಳದ ಈರಣ್ಣ ಬಡಿಗೇರ, ಶರಣಪ್ಪ ಹಂಡಿ, ಗುರುನಾಥ ಪತ್ತಾರ, ಗುರುರಾಜ ಹಡಪದ ನೋವಿನಿಂದ ಹೇಳಿದರು.

ಕೆಲ ಭಾಗದಲ್ಲಿ ಅರೆಬರೆ ಬಿದ್ದ ಮಳೆಗೆ ಹೆಸರು, ಎಳ್ಳು, ಸೂರ್ಯಕಾಂತಿ, ಮೆಕ್ಕೆಜೋಳ ಬಿತ್ತನೆ ಮಾಡಿದ್ದು, ಮಳೆ ಇಲ್ಲದ ಕಾರಣ ಆ ಎಲ್ಲ ಬೆಳೆಗಳು ಬಾಡುತ್ತಿರುವುದು ಕಂಡು ಬರುತ್ತಿದೆ. ಆದಾಗ್ಯೂ ಸಂಪ್ರದಾಯದಂತೆ ಹಬ್ಬಗಳನ್ನು ನಿಲ್ಲಿಸಬಾರದು ಎಂದು ರೈತರು ಆಚರಿಸುತ್ತಿರುವುದು ಕಂಡು ಬಂತು.

ಮಳೆಯ ಮೇಲೆ ಈಗಲೂ ರೈತರ ನಂಬಿಕೆ ಇದ್ದ ಕಾರಣ ಹಳ್ಳಿಗಳಲ್ಲಿ ಎತ್ತುಗಳನ್ನು ಮೈತೊಳೆದು, ಪೂಜಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡಿ ಊರ ಮುಂದಿನ ಅಗಸಿ ಬಾಗಿಲಿನಲ್ಲಿ ಕರಿ ಹರಿಯಲಾಯಿತು ಎಂದು ಅಡವಿಭಾವಿಯ ಮಲ್ಲಿಕಾರ್ಜುನ ದೋಟಿಹಾಳ, ಕಡೆಕೊಪ್ಪದ ನಿಂಗಪ್ಪ ಜೀಗೇರಿ ಹೇಳಿದರು.

ಕಾರ ಹುಣ್ಣಿಮೆ: ಕರಿ ಹರಿದ ಎತ್ತುಗಳು

ಅಳವಂಡಿ: ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾರ ಹುಣ್ಣಿಮೆಯ ನಿಮಿತ್ತ ಎತ್ತುಗಳಿಂದ ಕರಿ ಹರಿಸಲಾಯಿತು. ಅದರಂತೆ ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಕಾರಹುಣ್ಣಿಮೆ ನಿಮಿತ್ತ ಮಂಗಳವಾರ ಎತ್ತುಗಳಿಂದ ಕರಿ ಹರಿಯಲಾಯಿತು.

ಎತ್ತುಗಳನ್ನು ಬಣ್ಣ ಹಚ್ಚಿ, ರಿಬ್ಬನ್ ಹಾಗೂ ಬಲೂನ್ ಕಟ್ಟಿ ಸಿಂಗರಿಸಲಾಗಿತ್ತು. ಗ್ರಾಮದ ಅಗಸಿ ಬಾಗಿಲನ್ನು ತಳಿರು, ತೋರಣಗಳಿಂದ ಸಿಂಗರಿಸಲಾಗಿತ್ತು. ಎತ್ತುಗಳನ್ನು ಅಲಂಕಾರ ಮಾಡಲಾಗಿತ್ತು. ಕಂದು ಹಾಗೂ ಬಿಳಿ ಬಣ್ಣದ ಎತ್ತುಗಳನ್ನು ಕರಿ ಹರಿಯಲು ತರಲಾಯಿತು.

ಎತ್ತುಗಳನ್ನು ಬಿಡುವ ಸಮಯದಲ್ಲಿ ಗ್ರಾಮದ ಅಗಸಿಯಲ್ಲಿ ಬೇವಿನ ಕೊಂಬೆ ಹಾಗೂ ಕೊಬ್ಬರಿ ಬಟ್ಟಲು ಕಟ್ಟಿದ ಹುರಿ ಹಿಡಿಯಲಾಗಿತ್ತು.ನಂತರ ಎತ್ತುಗಳು ಬಂದು ಕರಿ ಹರಿಯಿತು.ಇ ದರಿಂದ ಈ ವರ್ಷದ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಬಿಳಿಜೋಳ ಹತ್ತಿ ಸೇರಿ ಇತರ ಬೆಳೆ ಸಮೃದ್ಧವಾಗಿ ಬೆಳೆಯಲಿದೆ ಎಂದು ರೈತರು ತಿಳಿಸಿದರು.

ತಿಗರಿ: ಅಳವಂಡಿ ಸಮೀಪದ ತಿಗರಿ ಗ್ರಾಮದಲ್ಲಿ ಕಾರ ಹುಣ್ಣಿಮೆಯ ಪ್ರಯುಕ್ತ ಎತ್ತುಗಳನ್ನು ಕರಿ ಹಾರಿಸಲಾಯಿತು. ಈ ವರ್ಷ ನಿಂಗಪ್ಪ ಕರಿಯಪ್ಪ ಕುಂಟಗೇರಿ ಅವರ ಎತ್ತು ಕರಿ ಹರಿಯಿತು.

ಶೇಖರಪ್ಪ ಅಗಸಿಮನಿ, ಬೀರಪ್ಪ, ನಿಂಗಪ್ಪ ಕುಂಟಗೇರಿ, ಸುರೇಶ ಹಲವಾಗಲಿ, ನಿಂಗಪ್ಪ ಅಂಬಿಗೇರ, ದೇವಪ್ಪ ನಾಗರಹಳ್ಳಿ, ಶರಣು ಬಳೆಗೇರ, ಹನುಮಂತ ಕುಂಟಗೇರಿ, ಗವಿ ಅಂಗಡಿ, ಮಂಜುನಾಥ, ಹಾಲಪ್ಪ, ಹನುಮಪ್ಪ ತಳವಾರ, ಧರ್ಮಗೌಡ, ವೀರೇಶ ಕುರಿ ಇದ್ದರು.

ಕಾರಹುಣ್ಣಿಮೆ ಸಂಭ್ರಮ: ಎತ್ತುಗಳಿಗೆ ಪೂಜೆ

ಕುಕನೂರು: ತಾಲ್ಲೂಕಿನ ವಿವಿಧೆಡೆ ರೈತರ ಮುಂಗಾರಿನ ಮೊದಲ ಹಬ್ಬ ಕಾರಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ರೈತರು ತಮ್ಮ ಎತ್ತು, ಹಸುಗಳಿಗೆ ಹಳ್ಳ, ಕೆರೆ ದಂಡೆಗಳಲ್ಲಿ ಸ್ನಾನ ಮಾಡಿಸಿ ವಿವಿಧ ಬಗೆಯ ಅಲಂಕಾರ ಮಾಡಿದರು. ತಲೆಗೆ ಹೂವಿನ ಗೊಂಡೆ, ಕೊರಳಿಗೆ ಗೆಜ್ಜೆ, ಟೊಂಕಕ್ಕೆ ಕಪ್ಪುದಾರ, ಕೋಡಿಗೆ ಬಣ್ಣ, ದೇಹಕ್ಕೆ ಕೆಂಪು, ಹಳದಿ ಬಣ್ಣ ಹಚ್ಚಿ, ಶೃಂಗಾರಗೊಳಿಸಿ, ಗ್ರಾಮದ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಕುಣಿದು, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಸಂಜೆ ವೇಳೆ ರೈತರು ಎತ್ತುಗಳಿಂದ ಕರಿ ಹರಿಯುವ ಮೂಲಕ ಕಾರ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಿದರು. ಮುಂಗಾರು ಮಳೆ ಆಗಾಗ ಸಿಂಚನವಾಗುತ್ತಿದ್ದು, ಹೊಲಗಳಲ್ಲಿ ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ. ಹೀಗಾಗಿ ಮಂಗಳವಾರ ಬಿಡುವು ನೀಡಿ ರೈತಾಪಿ ವರ್ಗ ಖುಷಿ ಪಟ್ಟರು.

ತೆಂಗಿನಕಾಯಿ ಒಡೆದು, ನೈವೇದ್ಯ ಅರ್ಪಿಸಿ, ಭಕ್ತಿ ಸಮರ್ಪಿಸಿದರು. ಯುವತಿಯರು ಹೊಸ ಸೀರೆ ಉಟ್ಟು ಆರತಿ ಬೆಳಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT