ಶುಕ್ರವಾರ, ಡಿಸೆಂಬರ್ 2, 2022
22 °C

ಕೊಪ್ಪಳ: ಗುಡುಗಿನ ಆರ್ಭಟಕ್ಕೆ ಬೆಚ್ಚಿದ ಜನ; ಮುಂದುವರಿದ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಮೂರು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಶನಿವಾರವೂ ಮುಂದುವರಿಯಿತು. ರಾತ್ರಿ ವೇಳೆ ನಗರದಲ್ಲಿ ಭಾರಿ ಸದ್ದಿನೊಂದಿಗೆ ಬಿದ್ದ ಗುಡುಗಿನ ಆರ್ಭಟಕ್ಕೆ ಜನ ಒಂದು ಕ್ಷಣ ಬೆಚ್ಚಿಬಿದ್ದರು.

ಮಳೆಯಿಂದಾಗಿ ಜಿಲ್ಲೆಯಲ್ಲಿ ಮೆಕ್ಕೆ ಜೋಳ ಬೆಳೆ ಹಾಳಾಗುವ ಸಂಕಷ್ಟ ಎದುರಾಗಿದೆ. ನವಲಿ 3.3 ಸೆಂ.ಮೀ., ಕೊಪ್ಪಳ 1.94 ಸೆಂ.ಮೀ., ಇರಕಲ್‌ಗಡ 6.7 ಸೆಂ.ಮೀ., ಅಳವಂಡಿ 1.06 ಸೆಂ.ಮೀ., ಹಿರೇಸಿಂದೋಗಿ 1.8 ಸೆಂ.ಮೀ., ಕಿನ್ನಾಳ 3.84 ಸೆಂ.ಮೀ., ಗುಳದಳ್ಳಿ 4.24 ಸೆಂ.ಮೀ., ಕುಷ್ಟಗಿ 1.4 ಸೆಂ.ಮೀ. ಮಳೆಯಾಗಿದೆ. ಕಾರಟಗಿ, ಹನುಮಸಾಗರ, ಕುಷ್ಟಗಿ, ಅಳವಂಡಿ ಮತ್ತು ಗಂಗಾವತಿಯಲ್ಲಿ ಮಳೆ ಸುರಿದಿದೆ.

ತಾಲ್ಲೂಕಿನ ಇರಕಲ್‌ಗಡ ಹೋಬಳಿಯ ಹನುಮನಹಟ್ಟಿ ಗ್ರಾಮದ ಕೆರೆ ಕೋಡಿ ಬಿದ್ದಿದ್ದು, ಕೆರೆಯ ಆಚೆಗೆ ಇರುವ ಗ್ರಾಮಗಳ ಜನ ತೋಟಕ್ಕೆ ಹಾಗೂ ಇರಕಲ್‌ಗಡಕ್ಕೆ ಬರಲು ತೊಂದರೆಯಾಗಿದೆ. ಮೂರು ದಿನಗಳಿಂದ ಬಿದ್ದ ಮಳೆಗೆ ರಸ್ತೆಯಲ್ಲಿ ಹಾಕಿದ್ದ ಮೆಕ್ಕೆ ತೆನೆ ತೋಯ್ದು ಹೋಗಿದೆ. ಶನಿವಾರ ಬೆಳಿಗ್ಗೆ ಮಳೆ ಬಿಡುವು ನೀಡಿ ಪ್ರಖರ ಬಿಸಿಲು ಬಿದ್ದಿತ್ತು. ಈ ವೇಳೆ ಕೆಲ ರೈತರು ತೆನೆ ಒಣಗಿಸಿದರೂ, ಸಂಜೆ ಸುರಿದ ಮಳೆಯಲ್ಲಿ ಮೆಕ್ಕೆ ತೆನೆ ಮತ್ತೆ ನೆಂದು ಹೋದವು.  

ಬೆಳೆ ಹಾನಿಯ ಆತಂಕ: ಹಿರೇಹಳ್ಳ ಜಲಾಶಯದಿಂದ ನೀರು ಬಿಡಲಾಗಿದ್ದು, ಇದರಿಂದ ಚಿಕ್ಕಸಿಂದೋಗಿ ಹಾಗೂ ಹಿರೇಸಿಂದೋಗಿ ಭಾಗದ ಹೊಲಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ಸೆಪ್ಟೆಂಬರ್‌ ಎರಡನೇ ವಾರದಲ್ಲಿ ಹಿರೇಹಳ್ಳದ ನೀರು ಸಿಂದೋಗಿ ಭಾಗದ ಗ್ರಾಮಗಳ ಹೊಲಗಳಿಗೆ ನುಗ್ಗಿ ಅಲ್ಲಿನ ಮಣ್ಣು ಮಳೆ ನೀರಿನೊಂದಿಗೆ ಕೊಚ್ಚಿಕೊಂಡು ಹೋಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು