ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಗ್ರಾ.ಪಂ. ಬಲವರ್ಧನೆಗೆ ‘ಕಸ ತೆರಿಗೆ’

ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನ, ಹಂತಹಂತವಾಗಿ ವಿಸ್ತರಣೆ
Published 11 ಮಾರ್ಚ್ 2024, 5:54 IST
Last Updated 11 ಮಾರ್ಚ್ 2024, 5:54 IST
ಅಕ್ಷರ ಗಾತ್ರ

ಕೊಪ್ಪಳ: ಗ್ರಾಮಗಳಲ್ಲಿ ಮನೆಮನೆಗೆ ಹೋಗಿ ತ್ಯಾಜ್ಯ ಸಂಗ್ರಹಿಸುವ ವಾಹನಗಳ ಸಿಬ್ಬಂದಿಗೆ ಗೌರವಧನ ಪಾವತಿ ಮತ್ತು ಗ್ರಾಮ ಪಂಚಾಯಿತಿಗಳ ಬಲವರ್ಧನೆಗಾಗಿ ಜಿಲ್ಲೆಯ ಹಲವು ಕಡೆ ‘ಕಸ ತೆರಿಗೆ’ ಯೋಜನೆ ಅನುಷ್ಠಾನಗೊಂಡಿದೆ.

ಕೊಪ್ಪಳ ತಾಲ್ಲೂಕಿನ ಲೇಬಗೇರಿ ಮತ್ತು ಕಾರಟಗಿ ತಾಲ್ಲೂಕಿನ ಬೆನ್ನೂರು ಸೇರಿದಂತೆ ಜಿಲ್ಲೆಯ 12 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇದು ಜಾರಿಗೆ ಬಂದಿದೆ. ಈ ಪಂಚಾಯಿತಿಗಳ ಗ್ರಾಮಗಳಲ್ಲಿ ಕಸ ವಿಲೇವಾರಿ ಮಾಡುವವರು ಪ್ರತಿ ಮನೆಯಿಂದ ಒಂದು ದಿನಕ್ಕೆ ₹1 ಸಂಗ್ರಹಿಸುತ್ತಿದ್ದಾರೆ. ಸಂಗ್ರಹವಾಗುವ ಕಸದ ಆಧಾರದ ಮೇಲೆ ಹೋಟೆಲ್‌ಗಳಿಂದಲೂ ಕಸತೆರಿಗೆ ಸಂಗ್ರಹ ಮಾಡಲಾಗುತ್ತಿದ್ದು, ಈ ಹಣವನ್ನು ವಾಹನಗಳ ಸಿಬ್ಬಂದಿ ಗೌರವ ಧನಕ್ಕೆ ಬಳಕೆ ಮಾಡಲು ಆಯಾ ಗ್ರಾಮ ಪಂಚಾಯಿತಿಗಳಿಗೆ ಅವಕಾಶ ನೀಡಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 153 ಗ್ರಾಮ ಪಂಚಾಯಿತಿಗಳಿದ್ದು, ತ್ಯಾಜ್ಯ ಸಂಗ್ರಹ ಮತ್ತು ಘನತ್ಯಾಜ್ಯ ವಿಲೇವಾರಿಗೆ 18 ಟ್ರ್ಯಾಕ್ಟರ್‌ಗಳು, ಉಳಿದವು ಆಟೊ ಟಿಪ್ಪರ್‌ಗಳು ಇವೆ. ಕಳೆದ ವರ್ಷ 171 ಜನ ಮಹಿಳೆಯರಿಗೆ ಕಸ ವಿಲೇವಾರಿ ವಾಹನಗಳ ತರಬೇತಿ ನೀಡಲಾಗಿದೆ.

ಸಿಬ್ಬಂದಿಗೆ ಮೊದಲ ಆರು ತಿಂಗಳು ವಾಹನಗಳ ನಿರ್ವಹಣೆಗೆ ಸರ್ಕಾರವೇ ಹಣ ಕೊಡುತ್ತದೆ. ಬಳಿಕ ಅವರೇ ವಾಹನಗಳ ಚಾಲನೆ, ಇಂಧನ, ತಮ್ಮ ಗೌರವ ಧನ ಹೀಗೆ ಎಲ್ಲದಕ್ಕೂ ತಾವೇ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಮಾಡಿಕೊಳ್ಳಬೇಕು. ವಾಹನಗಳ ಸಿಬ್ಬಂದಿ ಒಂದು ತಿಂಗಳಲ್ಲಿ ಎಷ್ಟು ಮನೆಗಳಿಂದ ಸಂಗ್ರಹ ಮಾಡಿದ್ದಾರೆ ಎನ್ನುವ ಮಾಹಿತಿಯ ದಾಖಲೆ ನಿರ್ವಹಣೆ ಮಾಡಬೇಕು. ಕಸ ನೀಡಿದ ಸಾರ್ವಜನಿಕರು ಮಾಸಿಕವಾಗಿ ಹಣ ನೀಡಬೇಕು.

ಈ ಯೋಜನೆ ಇತ್ತೀಚೆಗಷ್ಟೇ ಆರಂಭವಾಗಿದ್ದು ಜನರಲ್ಲಿ ಇನ್ನೂ ಜಾಗೃತಿ ಮೂಡಿಲ್ಲ. ಹೀಗಾಗಿ ಕೆಲವು ಗ್ರಾಮಗಳಲ್ಲಿ ಜನ ಕಸ ತೆರಿಗೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ತಾತ್ಕಾಲಿಕವಾಗಿ ಗ್ರಾಮ ಪಂಚಾಯಿತಿಯಿಂದಲೇ ವಾಹನಗಳ ಸಿಬ್ಬಂದಿಗೆ ಗೌರವ ಧನ ಪಾವತಿಸಲಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಕಸ ತೆರಿಗೆ ಸಂಗ್ರಹ ಹೆಚ್ಚಾದರೆ ಅದೇ ಹಣವನ್ನು ವೇತನ, ವಾಹನಗಳ ನಿರ್ವಹಣೆಗೆ ಬಳಸಿಕೊಳ್ಳಲು ಆಯಾ ಗ್ರಾ.ಪಂ.ಗಳು ಕ್ರಮ ವಹಿಸಬೇಕಾಗಿದೆ.

ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್‌ ಸೇರಿದಂತೆ ಇನ್ನಿತರ ತ್ಯಾಜ್ಯ ಮಾರಾಟ ಮಾಡಿಯೂ ಪಡೆಯುವ ಆದಾಯದಲ್ಲಿ ಕಸ ಸಂಗ್ರಹ ವಾಹನಗಳ ಸಿಬ್ಬಂದಿಗೆ ಗೌರವ ಧನ ಪಾವತಿಸಬಹುದು. ಆರ್ಥಿಕವಾಗಿ ಬಲವರ್ಧನೆಯಾಗಬಹುದು ಎಂದು ಜಿಲ್ಲಾ ಪಂಚಾಯಿತಿ ತಿಳಿಸಿದೆ.

ರಾಹುಲ್‌ ರತ್ನಂ ಪಾಂಡೆಯ
ರಾಹುಲ್‌ ರತ್ನಂ ಪಾಂಡೆಯ

ಗ್ರಾಮ ಪಂಚಾಯಿತಿಗಳ ಬಲವರ್ಧನೆಗಾಗಿ ಕಸ ತೆರಿಗೆ ಸಂಗ್ರಹ ಆರಂಭಿಸಲಾಗಿದೆ. ತಮ್ಮ ಗ್ರಾಮ ಸ್ವಚ್ಛವಾಗಿರಬೇಕಾದರೆ ಜನ ಕೂಡ ಕೈ ಜೋಡಿಸಬೇಕು. ಕಸತೆರಿಗೆ ನೀಡಬೇಕು. - ರಾಹುಲ್‌ ರತ್ನಂ ಪಾಂಡೆಯ ಸಿಇಒ ಜಿಲ್ಲಾ ಪಂಚಾಯಿತಿ ಕೊಪ್ಪಳ

ಟ್ರ್ಯಾಕ್ಟರ್‌ ಚಾಲನೆ ಸಾಹಸಕ್ಕೆ ಪ್ರಶಸ್ತಿ ಕೊಪ್ಪಳ: ಮಹಿಳೆ ಪುರುಷನಿಗೆ ಸಮನಾಗಿಯೇ ಜವಾಬ್ದಾರಿ ನಿರ್ವಹಿಸಬೇಕು ಎನ್ನುವ ಕಾರಣಕ್ಕೆ ಜಿಲ್ಲೆಯ ಹಲವು ಮಹಿಳೆಯರಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಘನತ್ಯಾಜ್ಯ ಸಂಗ್ರಹ ನಿರ್ವಹಣೆ ವಾಹನಗಳ ಚಾಲನಾ ತರಬೇತಿ ನೀಡಲಾಗಿದ್ದು ಈ ವರ್ಷ ಒಂದು ಪ್ರಶಸ್ತಿ ಒಲಿದಿದೆ. ಒಂದು ವರ್ಷದ ಹಿಂದೆಯಷ್ಟೇ ಕೆಲಸಕ್ಕೆ ನಿಯೋಜನೆಯಾಗಿರುವ ಲೇಬಗೇರಿ ಗ್ರಾ.ಪಂ. ವ್ಯಾಪ್ತಿಯ ಟ್ರ್ಯಾಕ್ಟರ್‌ ಚಾಲಕಿ ರತ್ನಮ್ಮ ಎಂ. ಸೂಳಿಕೇರಿ ಟ್ರ್ಯಾಕ್ಟರ್‌ ಮೂಲಕ ಘನತ್ಯಾಜ್ಯ ನಿರ್ವಹಣೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಈ ಬಾರಿ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ರಾಜ್ಯ ಮಟ್ಟದಲ್ಲಿ ಘನತ್ಯಾಜ್ಯ ನಿರ್ವಹಣೆಯಲ್ಲಿ ಅತ್ಯುತ್ತಮ ಮಹಿಳಾ ವಾಹನ ಚಾಲಕಿ ಎನ್ನುವ ಪ್ರಶಸ್ತಿ ಲಭಿಸಿದೆ. ಕೊಪ್ಪಳ ತಾಲ್ಲೂಕಿನ ಲೇಬಗೇರಿ ಹಾಗೂ ಕಾರಟಗಿ ತಾಲ್ಲೂಕಿನ ಜೀರಾಳ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಾತ್ರ ಮಹಿಳೆಯರು ಟ್ರ್ಯಾಕ್ಟರ್‌ ಚಾಲನೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT