ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರ್ತಿಯಾಗದ ಖಾಲಿ ಹುದ್ದೆಗಳು

ಕುಷ್ಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನತ್ತ ನಿರ್ಲಕ್ಷ್ಯ: ಆರೋಪ
Last Updated 8 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಕುಷ್ಟಗಿ: ಪದವಿ ಕಾಲೇಜಿಗೆ ಅಗತ್ಯ ಉಪನ್ಯಾಸಕರ ನೇಮಕ ಮಾಡಿಕೊಳ್ಳುವ ವಿಷಯದಲ್ಲಿ ತೋರುತ್ತಿರುವ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದ್ದು, ಇದರ ಪರಿಣಾಮ ಇಲ್ಲಿನ ಪದವಿ ತರಗತಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಗಗನಕುಸುಮವಾಗಿ ಮಾರ್ಪಟ್ಟಿದೆ.

ಪಟ್ಟಣದ ಹೊರವಲಯಲ್ಲಿ ಸರ್ಕಾರದ ಸುಸಜ್ಜಿತ ಪ್ರಥಮ ದರ್ಜೆ ಕಾಲೇಜಿದ್ದು, ಬಿ.ಎ ಮತ್ತು ಬಿ.ಕಾಂ ತರಗತಿಗಳಿಗೆ ಅವಕಾಶವಿದೆ. ಇತ್ತೀಚಿನ ವರ್ಷಗಳಲ್ಲಿ ಕಾಲೇಜಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಆದರೆ, ಅದಕ್ಕೆ ಪೂರಕವಾಗಿ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಹುದ್ದೆಗಳು ಭರ್ತಿಯಾಗಿಲ್ಲ. ಹುದ್ದೆಗಳು ಖಾಲಿ ಉಳಿದಿದ್ದು, ಬೋಧನೆಗೆ ಅತಿಥಿ ಉಪನ್ಯಾಸಕರನ್ನು ಅವಲಂಬಿಸಲಾಗಿದೆ.

ಮೊದಲ ವರ್ಷದ ಬಿ.ಎ ತರಗತಿಗೆ 313, ದ್ವಿತೀಯ ವರ್ಷದ 241 ವಿದ್ಯಾರ್ಥಿಗಳು ಇರುವುದರಿಂದ ಮೂರು ವಿಭಾಗಗಳನ್ನು ತೆರೆಯಲಾಗಿದೆ. ಬಿ.ಕಾಂನ ಮೂರು ವರ್ಷದವರು ಸೇರಿ ಒಟ್ಟು 1020 ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ ಬಹುತೇಕ ವಿದ್ಯಾರ್ಥಿಗಳು ಹಿಂದುಳಿದವರು, ಆರ್ಥಿಕ ದುರ್ಬಲರು ಮತ್ತು ಗ್ರಾಮೀಣ ಪ್ರದೇಶದ ಬಡವರ ಮಕ್ಕಳೇ ಹೆಚ್ಚಿದ್ದಾರೆ.

ಸಿಬ್ಬಂದಿ ವಿವರ: ಮೂವರು ಉಪನ್ಯಾಸಕರು ಹಾಗೂ ಒಬ್ಬ ದೈಹಿಕ ಶಿಕ್ಷಣ ಉಪನ್ಯಾಸಕರು ಮಾತ್ರ ಕಾಯಂ ನೌಕರರಾಗಿದ್ದು 35 ಅತಿಥಿ ಉಪನ್ಯಾಸಕರಿದ್ದಾರೆ. 2015ರಲ್ಲಿ ಹೇಮಂತ ಭೂತನಾಳ ಎಂಬುವವರು ಸೇವಾ ನಿವೃತ್ತಿ ಹೊಂದಿದ ನಂತರ ಈವರೆಗೂ ಖಾಲಿ ಉಳಿದಿರುವ ಪ್ರಾಚಾರ್ಯರ ಹುದ್ದೆಗೆ ಬೇರೆಯವರನ್ನು ಭರ್ತಿ ಮಾಡಿಲ್ಲ.

‘ಮೂವರು ಉಪನ್ಯಾಸಕರ ಪೈಕಿ ಸೇವಾ ಹಿರಿತನ ಹೊಂದಿದ ಉಪನ್ಯಾಸಕರೊಬ್ಬರು ಪ್ರಾಚಾರ್ಯರ ಹುದ್ದೆಯನ್ನು ಪ್ರಭಾರವಾಗಿ ನಿಭಾಯಿಸುತ್ತಿದ್ದಾರೆ. ಮಂಜೂರಾದ 8 ಬೋಧಕರ ಹುದ್ದೆಗಳು ಖಾಲಿ ಇವೆ. ಅದೇ ರೀತಿ ಎಸ್‌ಡಿಎ, ಎಫ್‌ಡಿಎ, ಹಿರಿಯ ಟೈಪಿಸ್ಟ್‌, ಅಧೀಕ್ಷಕರ ತಲಾ ಒಂದೊಂದು ಹುದ್ದೆ. ಅಟೆಂಡರ್ ಮತ್ತು ಪರಿಚಾರಕರ ತಲಾ 3 ಹುದ್ದೆ ಮತ್ತು ಪರಿಚಾರಕ ಹಾಗೂ ರಾತ್ರಿ ಕಾವಲುಗಾರ ತಲಾ ಒಂದು ಮತ್ತು ಗ್ರಂಥಪಾಲಕ ಈ ಹುದ್ದೆಗಳು ಖಾಲಿ ಇವೆ. ಪಠ್ಯ ಜೊತೆಗೆ ಪಠ್ಯೇತರ ಮತ್ತಿತರೆ ಚಟುವಟಿಕೆಗಳ ನಿರ್ವಹಿಸಬೇಕಾಗುತ್ತದೆ’ ಎಂದು ಕಾಲೇಜು ಸಿಬ್ಬಂದಿ ಹೇಳುತ್ತಾರೆ.

ಹೈ–ಕದಿಂದ ಹಳೆ ಮೈಸೂರು ಭಾಗಕ್ಕೆ ಎರವಲು!
ವಾಣಿಜ್ಯಶಾಸ್ತ್ರದ ಉಪನ್ಯಾಸಕರ ಹುದ್ದೆಗೆ ಈ ಕಾಲೇಜಿಗೆ ಬಂದಿದ್ದ ಉಪನ್ಯಾಸಕರೊಬ್ಬರನ್ನು ಚಿಕ್ಕಮಗಳೂರು ಸರ್ಕಾರಿ ಪದವಿ ಕಾಲೇಜಿಗೆ ಎರವಲು ಮೇಲೆ ಕಳಿಸಲಾಗಿದೆ. ವೇತನದ ಬಿಲ್‌ಗಳನ್ನು ಈ ಕಾಲೇಜಿನಲ್ಲಿ ಸಿದ್ಧಪಡಿಸಲಾಗುತ್ತದೆ. ಆದರೆ, ಉಪನ್ಯಾಸಕರು ಸೇವೆ ಸಲ್ಲಿಸುವುದು ಚಿಕ್ಕಮಗಳೂರಿನಲ್ಲಿ.

ಹೈದರಾಬಾದ ಕರ್ನಾಟಕದ ಕಾಲೇಜುಗಳಿಗೆ ನೇಮಕಗೊಂಡಿರುವ ಬಹುತೇಕ ಉಪನ್ಯಾಸಕರಿಗೆ ಇಲ್ಲಿ ಕೆಲಸ ಮಾಡಲು ಇಷ್ಟವಿಲ್ಲ. ರಾಜಕೀಯ ವ್ಯಕ್ತಿಗಳ ಮೇಲೆ ಒತ್ತಡ ಹೇರಿ ಮಂಡ್ಯ, ಮೈಸೂರು, ಚಿಕ್ಕಮಗಳೂರು, ರಾಮನಗರ, ಹಾಸನ, ಬೆಂಗಳೂರು ಸುತ್ತಮತ್ತಲಿನ ಊರುಗಳ ಕಾಲೇಜುಗಳಿಗೆ ಎರವಲು ಸೇವೆಯ ಮೇಲೆ ಹೋಗುತ್ತಿದ್ದಾರೆ. ಹೈ–ಕ ಭಾಗದಲ್ಲಿ 160 ಉಪನ್ಯಾಸಕರನ್ನು ಈ ರೀತಿ ಎರವಲು ಸೇವೆಗೆ ತೆರಳಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

*
ಉನ್ನತ ಶಿಕ್ಷಣದಲ್ಲಿ ಹೈ–ಕ ಭಾಗಕ್ಕೆ ಆಗುತ್ತಿರುವ ಶೈಕ್ಷಣಿಕ ತಾರತಮ್ಯಕ್ಕೆ ಪರಿಹಾರ ಕಂಡುಕೊಳ್ಳಲು ಶೀಘ್ರದಲ್ಲಿ ಸಮಾನ ಮನಸ್ಕರೊಂದಿಗೆ ಸಭೆ ನಡೆಸಲಾಗುವುದು.
-ಅಮರೇಗೌಡ ಬಯ್ಯಾಪುರ, ಶಾಸಕ

*
ಕಾಯಂ ಉಪನ್ಯಾಸಕರು ಇಲ್ಲದ ಕಾರಣ ಸಮಸ್ಯೆ ಆಗಿದೆ. ಆದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಪ್ರಯತ್ನ ನಡೆದಿದೆ.
-ಬಸವರಾಜ ಕಂಬಳಿ, ಪ್ರಭಾರ ಪ್ರಾಚಾರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT