ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಷ್ಟಗಿ | ಆರೋಪಪಟ್ಟಿ, ಆಡಿಟ್‌ ವರದಿ ಸಲ್ಲಿಕೆಗೆ ಅಧಿಕಾರಿಗಳ ಹಿಂದೇಟು

ಕುಷ್ಟಗಿ ಶಿಕ್ಷಕರ ಪತ್ತಿನ ಸಹಕಾರ ಸಂಘದಲ್ಲಿ ₹ 81 ಲಕ್ಷ ದುರ್ಬಳಕೆ
Published : 23 ಸೆಪ್ಟೆಂಬರ್ 2024, 6:08 IST
Last Updated : 23 ಸೆಪ್ಟೆಂಬರ್ 2024, 6:08 IST
ಫಾಲೋ ಮಾಡಿ
Comments

ಕುಷ್ಟಗಿ: ಹೊಸದಾಗಿ ಸಾಲ ಕೊಡಲ್ಲ, ಅವಧಿ ಮೀರಿದ ಠೇವಣಿ ಹಿಂತಿರುಗಿಸುವುದಿಲ್ಲ, ನಿವೃತ್ತರು, ವರ್ಗವಾದವರ ಷೇರು ಮರಳಿಸುತ್ತಿಲ್ಲ. ಲಾಭಾಂಶ ಹಂಚಿಕೆಯಿಲ್ಲ. ಮೂರು ವರ್ಷದಿಂದಲೂ ಸಾಮಾನ್ಯ ಸಭೆಯೂ ಇಲ್ಲ. ಅಷ್ಟೇ ಏಕೆ ಮೂರು ವರ್ಷವಾದರೂ ಲೆಕ್ಕಪರಿಶೋಧನೆ ವರದಿ ನೀಡಿಲ್ಲ. ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿಯೂ ಸಲ್ಲಿಕೆಯಾಗಿಲ್ಲ. ಸಂಘದ ಎಲ್ಲ ಚಟುವಟಿಕೆಗಳೂ ಸ್ಥಗಿತ.

ಹೌದು, ಶಿಕ್ಷಕರ ಕಲ್ಯಾಣಕ್ಕೆಂದೇ ಅಸ್ತಿತ್ವಕ್ಕೆ ಬಂದಿರುವ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಸದ್ಯದ ಸ್ಥಿತಿಗತಿ ಇದು. ಶಿಕ್ಷಕರಿಗೆ ಅಗತ್ಯ ಸಂದರ್ಭದಲ್ಲಿ ಆರ್ಥಿಕ ನೆರವಿಗೆ ಆಧಾರವಾಗಿರುವ ಸಂಘದ ಎಲ್ಲ ರೀತಿಯ ಚಟುವಟಿಕೆಗಳು ಬಂದ್‌ ಆಗಿದ್ದು ಕಳೆದ ಮೂರು ವರ್ಷದಿಂದಲೂ ಸಂಘ ಶಿಕ್ಷಕರ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಎಂಬ ದೂರುಗಳು ಕೇಳಿಬಂದಿವೆ.

ಆಗಿದ್ದೇನು?: ಸಂಘದಲ್ಲಿ ಮೂರು ವರ್ಷದ ಹಿಂದೆ ಶಿಕ್ಷಕರಿಗೆ ಸೇರಿದ ಷೇರು ಹಣ, ಶಿಕ್ಷಕರ ಹೆಸರಿನಲ್ಲಿ ನಕಲಿ ಸಹಿ ಮಾಡಿ ಸಾಲ ಎತ್ತುವಳಿ, ಸಾಲ ಮರುಪಾವತಿಸಿದ ಹಣ ಸಾಲದ ಖಾತೆಗೆ ಜಮೆಯಾಗದಿರುವುದು ಸೇರಿದಂತೆ ₹81 ಲಕ್ಷ ಹಣ ದುರ್ಬಳಕೆಯಾಗಿರುವ ಬಗ್ಗೆ ಸಂಘದ ಆಗಿನ ಕಾರ್ಯದರ್ಶಿ ಬಸವರಾಜ ಹೊರಪ್ಯಾಟಿ ಮತ್ತು ಲೆಕ್ಕಿಗರಾಗಿದ್ದ ಸುಧೀರಕುಮಾರ ಗೋನಾಳ ಮಠ ಎಂಬುವವರ ವಿರುದ್ಧ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ವರ್ಷವಾದರೂ ನ್ಯಾಯಾಲಯಕ್ಕೆ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸದಿರುವುದು ಅಚ್ಚರಿ ಮೂಡಿಸಿದೆ. ಅಲ್ಲದೆ ಲೆಕ್ಕಪರಿಶೋಧನೆ ಇಲಾಖೆ ಮೂರು ವರ್ಷ ಕಳೆದರೂ ಸಂಘದ ಲೆಕ್ಕಪರಿಶೋಧನೆ ವರದಿ ನೀಡದ ಕಾರಣ ಮೂರು ವರ್ಷಗಳಿಂದಲೂ ಸಂಘದ ವಾರ್ಷಿಕ ಮಹಾಸಭೆಗಳೇ ನಡೆದಿಲ್ಲ.

ರಾಜಕೀಯ ಒತ್ತಡ: ಲಕ್ಷಾಂತರ ಹಣ ದುರ್ಬಳಕೆಗೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸುವುದಕ್ಕೆ ಪೊಲೀಸ್‌ ಇಲಾಖೆ ಹಿಂದೇಟು ಹಾಕುತ್ತಿದೆ. ಅದೇ ರೀತಿ ಲೆಕ್ಕಪರಿಶೋಧನೆ ವರದಿ ಸಲ್ಲಿಸುವುದಕ್ಕೆ ಸಹಕಾರ ಇಲಾಖೆಯೂ ಮೀನಮೇಷ ಎಣಿಸುತ್ತಿರುವುದು ಅರ್ಥವಾಗುತ್ತಿಲ್ಲ. ಸಮಸ್ಯೆ ಇತ್ಯರ್ಥಪಡಿಸಿ ಷೇರುದಾರ ಶಿಕ್ಷಕರಿಗೆ ನ್ಯಾಯ ಒದಗಿಸುವಂತೆ ಸಂಬಂಧಿಸಿದ ಎರಡೂ ಇಲಾಖೆಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದಿರುವ ಅಧಿಕಾರಿಗಳು ಇಲ್ಲದ ನೆಪ ಹೇಳಿ ಸಮಯ ವ್ಯರ್ಥಮಾಡುತ್ತಿದ್ದಾರೆ. 2005 ರಿಂದ 2019ರವರೆಗೆ ಲೆಕ್ಕ ಪರಿಶೋಧನೆ ನಡೆಸುತ್ತಾ ಬಂದಿರುವ ಲೆಕ್ಕಪರಿಶೋಧಕರು ಹಣ ದುರ್ಬಳಕೆಯಾಗಿದ್ದನ್ನು ವರದಿಯಲ್ಲಿ ಪ್ರಸ್ತಾಪಿಸದೆ ಮುಚ್ಚಿಡುತ್ತಾ ಬಂದಿದ್ದಾರೆ. ಈಗ ಆಡಿಟ್‌ ವರದಿ ಬಹಿರಂಗಗೊಂಡರೆ ಉದ್ದೇಶಪೂರ್ವಕವಾಗಿ ತಪ್ಪು ಎಸಗಿರುವ ಕೆಲ ಲೆಕ್ಕಪರಿಶೋಧಕರ ಮೇಲೆ ಕ್ರಮ ಜರುಗಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಈವರೆಗೂ ಆಡಿಟ್‌ ವರದಿ ಸಲ್ಲಿಸುತ್ತಿಲ್ಲ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಸಂಘದ ಕೆಲ ಪ್ರಮುಖರು ಅಸಮಾಧಾನ ಹೊರಹಾಕಿದರು.

ದಾಖಲೆ ನೀಡಲು ಅಸಹಕಾರ

‘‍ಸಂಘದ ಅರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರತಿಯೊಂದಕ್ಕೂ ದಾಖಲೆ ಬೇಕಾಗುತ್ತದೆ. ಆದರೆ ಅನೇಕ ಬಾರಿ ನೋಟಿಸ್‌ ನೀಡಿದರೂ ಸಹಕಾರ ಸಂಘದವರು ತಾವು ಕೇಳಿದ 17 ಅಂಶಗಳಿಗೆ ಸಂಬಂಧಿಸಿದ ದಾಖಲೆ ನೀಡಿಲ್ಲ’ ಎಂದು ಕೊಪ್ಪಳದ ಸೈಬರ್‌ ಕ್ರೈಂ ಠಾಣೆ ಇನ್‌ಸ್ಪೆಕ್ಟರ್ ಮಹಾಂತೇಶ ಸಜ್ಜನ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ಅಲ್ಲದೆ ಇನ್ನೂ ಕೆಲ ದಿನ ಕಾಯುತ್ತೇವೆ ಮಾಹಿತಿ ದಾಖಲೆ ನೀಡದಿದ್ದರೆ ನಿಯಮಾನುಸಾರ ಚಾರ್ಜ್‌ಶೀಟ್‌ ಸಲ್ಲಿಕೆಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಸ್ಪಷ್ಟಪಡಿಸಿದರು. ಈ ಕುರಿತು ವಿವರಿಸಿದ ಸಹಕಾರ ಸಂಘಗಳ ಉಪ ನಿಬಂಧಕ ದಸ್ತಗೀರ್‌ಸಾಬ್ ಕೆಲ ಸಮಸ್ಯೆಗಳು ಇದ್ದ ಕಾರಣ ವಿಳಂಬಗೊಂಡಿದ್ದ ಆಡಿಟ್‌ ವರದಿ ಈಗ ಸಿದ್ಧವಾಗುತ್ತಿದೆ ಎಂದರು. ಆದರೆ ವಿಳಂಬಕ್ಕೆ ಸ್ಪಷ್ಟ ಮಾಹಿತಿ ನೀಡಲು ನಿರಾಕರಿಸಿದರು.

ನ್ಯಾಯಕ್ಕಾಗಿ ಸಿಎಂಗೆ ಇಂದು ಮೊರೆ

ಈ ಮಧ್ಯೆ ಸಂಘದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಶನಿವಾರ ಇಲ್ಲಿಯ ಗುರುಭವನದಲ್ಲಿ ಶಿಕ್ಷಕರು ಸಭೆ ನಡೆಸಿದರು. ಆರ್ಥಿಕ ಅಪರಾಧ ನಡೆದಿರುವುದನ್ನು ದಾಖಲೆಗಳು ಸ್ಪಷ್ಟಪಡಿಸಿದ್ದರೂ ಪೊಲೀಸರು ಸಹಕಾರ ಇಲಾಖೆಯವರು ಅಂಗೈ ಹುಣ್ಣಿಗೆ ಕನ್ನಡಿ ಹುಡುಕುತ್ತಿದ್ದಾರೆ. ಇವರಿಂದ ನ್ಯಾಯ ಸಿಗುವುದಿಲ್ಲ ಎಂಬುದು ಖಾತರಿಯಾಗಿದೆ. ಹಾಗಾಗಿ ಸೆ.22 ರಂದು ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲು ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ಸಲ್ಲಿಸಿ ನ್ಯಾಯ ದೊರಕಿಸಿಕೊಡಲು ಮನವಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಶಿಕ್ಷಕರು ನಂತರ ಮಾಹಿತಿ ನೀಡಿದರು.

ಸಂಘದ ಸಮಸ್ಯೆ ಬಗೆಹರಿಸಿ ಶಿಕ್ಷಕರಿಗೆ ಅನುಕೂಲ ಒದಗಿಸಲು ಅಧಿಕಾರಿಗಳು ತಕ್ಷಣ ಮುಂದಾಗಲಿ
-ಮಲ್ಲಪ್ಪ ಕುದರಿ ಅಧ್ಯಕ್ಷ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ಆಡಿಟ್‌ ವರದಿ ಹಾಗೂ ಹಣ ದುರ್ಬಳಕೆ ಪ್ರಕರಣದ ಚಾರ್ಜ್‌ಶೀಟ್‌ ಸಲ್ಲಿಸಿ ದುರ್ಬಳಕೆಯಾಗಿರುವ ಹಣವನ್ನು ಶಿಕ್ಷಕರಿಗೆ ಮರಳಿಸಲು ಸಂಬಂಧಿಸಿದ ಇಲಾಖೆಗಳು ಕ್ರಮ ಕೈಗೊಳ್ಳಬೇಕು
-ಮಲ್ಲಿಕಾರ್ಜುನ ಲಕ್ಕಲಕಟ್ಟಿ ಸಹಕಾರ ಸಂಘದ ಮಾಜಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT