ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಎಕ್ಸ್‌ ಇಂಡಿಯಾ ಕಂಪನಿ ಹೆಸರಿನಲ್ಲಿ ಭೂಮಿ ಖರೀದಿ: ರೈತರ ಪ್ರತಿಭಟನೆ

Published 24 ಮೇ 2024, 4:09 IST
Last Updated 24 ಮೇ 2024, 4:09 IST
ಅಕ್ಷರ ಗಾತ್ರ

ಕೊಪ್ಪಳ: ಸ್ಟೀಲ್‌ ಫ್ಯಾಕ್ಟರಿ ಆರಂಭಿಸಿ ಉದ್ಯೋಗ ನೀಡುವುದಾಗಿ ಎಕ್ಸ್‌ ಇಂಡಿಯಾ ಕಂಪನಿಯ ಹೆಸರಿನಲ್ಲಿ ರೈತರಿಂದ ಭೂಮಿ ಪಡೆದವರು ಹಿಂದಿನ ಹತ್ತು ವರ್ಷಗಳಿಂದ ಫ್ಯಾಕ್ಟರಿಯನ್ನೇ ಆರಂಭಿಸಿಲ್ಲ.

ತಮಗೆ ಅಥವಾ ಕುಟುಂಬದ ಸದಸ್ಯರಿಗೆ ಉದ್ಯೋಗ ಸಿಗುತ್ತದ ಎನ್ನುವ ಆಸೆಯಿಂದಾಗಿ ಕೊಪ್ಪಳ ತಾಲ್ಲೂಕಿನ ಕುಣಿಕೇರಿ ತಾಂಡಾ, ಕುಣಿಕೇರಿ, ಹಿರೇಬಗನಾಳ, ಚಿಕ್ಕಬಗನಾಳ ಗ್ರಾಮದ ರೈತರು ಭೂಮಿ ಮಾರಾಟ ಮಾಡಿದ್ದರು. ಆದರೆ ಈಗ ಫ್ಯಾಕ್ಟರಿಯೇ ಆರಂಭವಾಗದ ಕಾರಣ ಉದ್ಯೋಗದ ಕನಸು ನನಸಾಗಿಲ್ಲ.

ಇದನ್ನು ಖಂಡಿಸಿ ಗುರುವಾರ ರೈತರು ಹೊಲದಲ್ಲಿ ಪ್ರತಿಭಟನೆ ನಡೆಸಿದರು. ಇಷ್ಟು ದಿನಗಳ ಕಾಲ ಉಳುಮೆ ಮಾಡುತ್ತಿದ್ದ ರೈತರಿಗೆ ಈಗ ಉಳುಮೆಗೂ ಅವಕಾಶ ಕೊಡುತ್ತಿಲ್ಲ ಎನ್ನುವುದು ರೈತರ ಆರೋಪ. ಭೂಮಿಗೆ ಬೇಲಿಗೆ ಹಾಕಲು ಬಂದವರ ಮೇಲೆ ರೈತರು ಆಕ್ರೋಶ ವ್ಯಕ್ತಪಡಿಸಿ ನಮಗೆ ನ್ಯಾಯ ಕೊಡಿಸಿ ಎಂದು ಅಧಿಕಾರಿಗಳು ಮತ್ತು ಪೊಲೀಸರ ಮೊರೆ ಹೋಗಿದ್ದಾರೆ.

‘ಎಕ್ಸ್ ಇಂಡಿಯಾ ಸ್ಟೀಲ್ ಕಂಪನಿ ಆರಂಭವಾಗುತ್ತದೆ ಎನ್ನುವ ನಿರೀಕ್ಷೆಯನ್ನು ಭೂಮಿಕೊಟ್ಟ ರೈತರು ಇಟ್ಟುಕೊಂಡಿದ್ದರು. ಇದೇ ಕಾರಣಕ್ಕಾಗಿ 2008ರಿಂದ 2011ರ ವರಗೆ ನೂರಾರು ರೈತರು ಫಲವತ್ತಾದ 300ಕ್ಕೂ ಹೆಚ್ಚು ಎಕರೆ ಕೃಷಿ ಭೂಮಿ ನೀಡಿದ್ದಾರೆ. ಆರಂಭದಲ್ಲಿ ಪ್ರತಿ ಎಕರೆಗೆ ₹1 ಲಕ್ಷ ನೀಡಿದ್ದ ದಲ್ಲಾಳಿಗಳು ನಂತರ ಪ್ರತಿ ಎಕರೆಗೆ ₹5ರಿಂದ ₹6 ಲಕ್ಷ ನೀಡಿ ಭೂಮಿ ಖರೀದಿಸಿದ್ದಾರೆ’ ಎಂದು ರೈತರು ಹೇಳಿದರು.

ಭೂಮಿ ಖರೀದಿಸುವಾಗ ಎಕ್ಸ್‌ ಇಂಡಿಯಾ ಹೆಸರು ಬಿಟ್ಟು ಕೆಲ ವ್ಯಕ್ತಿಗಳ ಹೆಸರಿನಲ್ಲಿ ಭೂಮಿ ಖರೀದಿಸಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ದಲ್ಲಾಳಿಗಳು ಎಕ್ಸ್ ಇಂಡಿಯಾ ಕಂಪನಿ ಹೆಸರಲ್ಲಿ ಉದ್ಯೋಗ ಖಚಿತತೆಯ ಪ್ರಮಾಣ ಪತ್ರ ನೀಡಿದ್ದಾರೆ ಎಂದರು.

ಭೂಮಿ ಖರೀದಿ ಮಾಡಿದವರು ಕೂಡ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ‘ನಮ್ಮ ಭೂಮಿಯನ್ನು ನಮಗೆ ಮರಳಿ ನೀಡಬೇಕು’ ಅಂತ ರೈತರು ಪಟ್ಟು ಹಿಡಿದಿದ್ದಾರೆ.

‘ನನ್ನ ಕುಟುಂಬದ 15 ಎಕರೆ ಜಮೀನು ನೀಡಿದ್ದೇವೆ. ಪ್ರತಿ ಎಕರೆಗೆ ₹6 ಲಕ್ಷ ನೀಡಿ ಖರೀದಿಸಲಾಗಿದೆ. ಆದರೆ ಇದುವರೆಗೆ ಉದ್ಯೋಗ ನೀಡಿಲ್ಲ. ನಮ್ಮ ಭೂಮಿ ನಮಗೆ ಕೊಡಿ ಎಂದು ಕೇಳುತ್ತಿದ್ದೇವೆ’ ಎಂದು ಕುಣಿಕೇರಿ ಗ್ರಾಮದ ರೈತ ಮಲ್ಲೇಶಪ್ಪ ಕೋಳೂರು ತಿಳಿಸಿದರು. ಈ ಬಗ್ಗೆಯ ಪ್ರತಿಕ್ರಿಯೆ ಪಡೆಯಲು ಕಂಪನಿಯ ಯಾರೂ ಲಭ್ಯರಾಗಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT