ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗ ಸಾಕ್ಷಿಯಾಗಿ ಬದುಕುವುದೇ ಲಿಂಗಾಯತ: ಬಸವ ಸಮಿತಿ ರಾಜ್ಯಾಧ್ಯಕ್ಷ ಅರವಿಂದ ಜತ್ತಿ

ಲಿಂಗಾಯತರ ಜಿಲ್ಲಾಮಟ್ಟದ ಸಮಾವೇಶ; ಬಸವ ಸಮಿತಿ ರಾಜ್ಯಾಧ್ಯಕ್ಷ ಅರವಿಂದ ಜತ್ತಿ ಹೇಳಿಕೆ
Published 17 ಜೂನ್ 2024, 3:12 IST
Last Updated 17 ಜೂನ್ 2024, 3:12 IST
ಅಕ್ಷರ ಗಾತ್ರ

ಕೊಪ್ಪಳ: ‘ಎಷ್ಟೇ ದೊಡ್ಡ ಸ್ಥಾನಮಾನ ಗಳಿಸಿಕೊಂಡರೂ ನಂಬಿಕೊಂಡ ಹಾದಿಯಲ್ಲಿ ಸಾಗಿ ಲಿಂಗ ಸಾಕ್ಷಿಯಾಗಿ ಬದುಕಿದರೆ ಅದೇ ನಿಜವಾದ ಲಿಂಗಾಯತ ಧರ್ಮ ಪಾಲನೆ ಮಾಡಿದಂತಾಗುತ್ತದೆ’ ಎಂದು ಬಸವ ಸಮಿತಿ ರಾಜ್ಯಾಧ್ಯಕ್ಷ ಅರವಿಂದ ಜತ್ತಿ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ನಗರದಲ್ಲಿ ಭಾನುವಾರ ನಡೆದ ಜಿಲ್ಲಾಮಟ್ಟದ ಲಿಂಗಾಯತ ಸಮಾವೇಶದಲ್ಲಿ ‘ನಾನು ಲಿಂಗಾಯತ’ ವಿಷಯದ ಕುರಿತು ಮಾತನಾಡಿದ ಅವರು ‘ನಾವು ಲಿಂಗಾಯತರು ಎಂದು ಹೆಮ್ಮೆಯಿಂದ ಹೇಳಿದರೆ ಯಾವ ಧರ್ಮಗಳೂ ಅಡ್ಡ ಬರುವುದಿಲ್ಲ. ಸಮಾವೇಶದ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಿದಂತೆ ಹೆಮ್ಮಯಿಂದ ಹೇಳಿ ನಾವು ಲಿಂಗಾಯತ, ಒಬ್ಬ ಲಿಂಗಾಯತ ಕೋಟಿ ಲಿಂಗಾಯತ ಎನ್ನುವುದನ್ನು ಘಂಟಾಘೋಷವಾಗಿ ಹೇಳಬೇಕು’ ಎಂದರು.

‘ಸ್ರೀ ಕುಲೋದ್ಧಾರಕ ಬಸವಣ್ಣ’ ವಿಷಯದ ಕುರಿತು ಉಪನ್ಯಾಸ ನೀಡಿದ ಚಿಂತಕಿ ಮೀನಾಕ್ಷಿ ಬಾಳಿ ‘ವೈದಿಕ ಚರಿತ್ರೆಯಲ್ಲಿ ಹೆಣ್ಣು ಮಾಯೆ ಎಂದು ಬಿಂಬಿಸಿ ನಾಲ್ಕು ಗೋಡೆಗಳ ನಡುವೆ ಬಂಧಿಸಲಾಗಿದೆ. ಹೆಣ್ಣು ಮೌಢ್ಯದಲ್ಲಿ ಇರಬೇಕು ಎಂದು ಹೀಗೆಲ್ಲ ಮಾಡಲಾಗುತ್ತಿದೆ. ಆದರೆ, ಹೆಣ್ಣು ಸಮಾನಳು ಎಂದು ಬಸವ ತತ್ವ ಮಾತ್ರ ಜಗತ್ತಿಗೆ ಸಾರಿ ಹೇಳಿತು’ ಎಂದು ಪ್ರತಿಪಾದಿಸಿದರು.

‘ಲಿಂಗಾಯತ ಧರ್ಮ ಬೆಳೆಯಲು ಹೆಣ್ಣು ಮುಕ್ಕಳು ಕೂಡ ಮುಂಚೂಣಿಗೆ ಬರಬೇಕು. ಹೆಣ್ಣುಮಕ್ಕಳ ಬಗ್ಗೆ ಇರುವ ನಕಾರಾತ್ಮಕ ಭಾವನೆ ಕಳಚಬೇಕು. ಹಾಸನದಲ್ಲಿ ನಡೆದ ಲೈಂಗಿಕ ದೌರ್ಜನಕ್ಕೆ ಬಲಿಯಾಗಿದ್ದರಲ್ಲಿ ಮಧ್ಯಮ ವರ್ಗದ ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಲ್ಲಿ ಲಿಂಗಾಯತರೂ ಇದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ದೇಹ ರಾಜಕಾರಣವೇ ವ್ಯಾಪಕವಾಗಿದೆ’ ಎಂದು ಟೀಕಿಸಿದರು.

‘ದುಡಿದು ತಿನ್ನುವುದೇ ನಿಸರ್ಗ ಧರ್ಮವಾಗಿದ್ದು ಇದರ ಪಾಲನೆ ಅಗತ್ಯ. ಎಲ್ಲರೂ ಲಿಂಗಾಯತದೆಡೆಗೆ ಬರಲು ಹವಣಿಸುತ್ತಿದ್ದಾರೆ. ಈ ಧರ್ಮ ಮತ್ತಷ್ಟು ಬೆಳೆಯಲು ಅಂತರಜಾತಿ ವಿವಾಹ ಆಗಬೇಕು. ಹೃದಯದ ಮೂಲಕ ಎಲ್ಲ ಮಾರ್ಗದ ಬಾಗಿಲು ತೆರೆದು ಜನರನ್ನು ಅರ್ಪಿಸಬೆಕು. ನಡೆ ಹಾಗೂ ನುಡಿಯೇ ಲಿಂಗಾಯತರ ಬದುಕಿನ ಸಂದೇಶವಾಗಬೇಕು’ ಎಂದು ಕರೆ ನೀಡಿದರು.

ಸಂಡೂರಿನ ವಿರಕ್ತಮಠದ ಪ್ರಭು ಸ್ವಾಮೀಜಿ, ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ, ಮಹಾಸಭಾದ ರಾಜ್ಯ ಉಪಾಧ್ಯಕ್ಷ ಬಸವರಾಜ ಬಳ್ಳೊಳ್ಳಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಗವಿಸಿದ್ಧಪ್ಪ ಕೊಪ್ಪಳ, ಜಿಲ್ಲೆಯ ಗೌರವಾಧ್ಯಕ್ಷ ಸಂಗಮೇಶ ಕಲಹಾಳ, ಜಿಲ್ಲಾಧ್ಯಕ್ಷ ಹನುಮೇಶ ಕಲ್ಮಗಿ, ಮಹಿಳಾ ಘಟಕದ ಅಧ್ಯಕ್ಷೆ ಅರ್ಚನಾ ಜೆ. ಸಸಿಮಠ ಮತ್ತು ಯುವ ಘಟಕದ ಜಿಲ್ಲಾಧ್ಯಕ್ಷ ಶೇಖರ ಇಂಗಳದಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನ
ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನ

ಜನರ ಅನುಕೂಲಕ್ಕಾಗಿ ವಿವಿಧೆಡೆಯಿಂದ ಬಸ್‌ ಸೌಲಭ್ಯ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗಿ ಸಮಾವೇಶಕ್ಕೂ ಮೊದಲು ಮಹಾಸಭಾದ ವಾರ್ಷಿಕ ಮಹಾಸಭೆ

‘ಲಿಂಗಾಯತರಿಗೆ ಎಲ್ಲ ಪಕ್ಷಗಳಿಂದಲೂ ಅನ್ಯಾಯ’ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ರಾಜಕೀಯವಾಗಿ ಎಲ್ಲ ಪಕ್ಷಗಳಿಂದಲೂ ನಮಗೆ ಅನ್ಯಾಯವಾಗುತ್ತಿದೆ ಎಂದು ಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಎಸ್‌.ಎಂ. ಜಾಮದಾರ ಹೇಳಿದರು. ‘ಜಾಗತಿಕ ಲಿಂಗಾಯತ ಮಹಾಸಭೆ ಇಂದು–ಮುಂದೆ’ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು ಮಹಾಸಭಾ ಆರಂಭವಾದ ರೀತಿ ಹಾಗೂ ಎದುರಿಸಿದ ಸವಾಲುಗಳನ್ನು ಹಂಚಿಕೊಂಡರು. ಮುಂದೆ ಸಾಗಬೇಕಾದ ಹಾದಿಯ ಬಗ್ಗೆಯೂ ಹೇಳಿದರು. ‘ನಮಗೆ ಬೇಕಾಗಿದ್ದನ್ನು ಪಡೆದುಕೊಳ್ಳಲು ಸುದೀರ್ಘ ಹೋರಾಟ ಸಂಘಟಿತ ಶಕ್ತಿ ಲಿಂಗಾಯತ ಸ್ವತಂತ್ರ್ಯ ಧರ್ಮ ಸ್ಥಾನಮಾನ ಪಡೆದುಕೊಳ್ಳಲು ಬೇಕಾದ ಅಗತ್ಯ ಸಾಮಗ್ರಿ ಇವೆಲ್ಲವೂ ನಮ್ಮ ಬಳಿಯಿವೆ. ನಮ್ಮ ಹೋರಾಟ ಹಾಗೂ ಆಶಯಗಳನ್ನು ಒಪ್ಪಿಕೊಳ್ಳದ ರಾಜಕಾರಣಿಗಳು ಮಠಾಧೀಶರನ್ನು ದೂರವಿಟ್ಟು ಬಸವತತ್ವವನ್ನು ಒಪ್ಪಿಕೊಂಡವರನ್ನು ಅಪ್ಪಿಕೊಂಡು ಹೋರಾಟ ಮಾಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT