ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಈಡೇರುವುದೇ ವಿಮಾನ ನಿಲ್ದಾಣದ ಕನಸು?: ಸಂಸದ ರಾಜಶೇಖರ ಹಿಟ್ನಾಳ ಮುಂದೆ ಸರಣಿ ಸವಾಲು

ಪೂರ್ಣಗೊಳ್ಳಲು ಕಾಯುತ್ತಿದೆ ರೈಲ್ವೆ ಯೋಜನೆ, ನೂತನ ಸಂಸದ ರಾಜಶೇಖರ ಹಿಟ್ನಾಳ ಮುಂದೆ ಸರಣಿ ಸವಾಲು
Published 10 ಜೂನ್ 2024, 6:52 IST
Last Updated 10 ಜೂನ್ 2024, 6:52 IST
ಅಕ್ಷರ ಗಾತ್ರ

ಕೊಪ್ಪಳ: ಲೋಕಸಭಾ ಚುನಾವಣೆಯಲ್ಲಿ ಎಲ್ಲ ಕಸರತ್ತುಗಳು ಮುಗಿಸಿದ ಬಳಿಕ ಜನರ ಪ್ರತಿನಿಧಿಯಾಗಿರುವ ಕೊಪ್ಪಳದ ನೂತನ ಸಂಸದ ರಾಜಶೇಖರ ಹಿಟ್ನಾಳ ಅವರ ಮೇಲೆ ಕ್ಷೇತ್ರದಲ್ಲಿ ಮಾಡಬೇಕಾದ ಅಭಿವೃದ್ಧಿ ಕೆಲಸಗಳ ಸರಣಿ ಸವಾಲುಗಳು ಇವೆ.

ಈ ಕ್ಷೇತ್ರವು ಜಿಲ್ಲೆಯ ಐದು, ರಾಯಚೂರು ಜಿಲ್ಲೆಯ ಮಸ್ಕಿ, ಸಿಂಧನೂರು ಮತ್ತು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ವ್ಯಾಪ್ತಿಯೂ ದೊಡ್ಡದಿರುವ ಕಾರಣ ಜನರ ನಿರೀಕ್ಷೆಗಳು, ಅಭಿವೃದ್ಧಿ ಕೆಲಸಗಳು ವೇಗವಾಗಿ ಆಗಬೇಕಾದ ಜರೂರತ್ತು ಇದೆ.

ಹಿಂದೆ ಸತತ ಎರಡು ಅವಧಿಗೆ ಬಿಜೆಪಿಯಿಂದ ಸಂಸದರಾಗಿದ್ದ ಸಂಗಣ್ಣ ಕರಡಿ ಬದಲಾದ ರಾಜಕೀಯ ಸ್ಥಿತ್ಯಂತರದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಗಿಣಿಗೇರಾ (ಮೊದಲು ಮುನಿರಾಬಾದ್‌ನಿಂದ) ಮೆಹಬೂಬನಗರ ರೈಲ್ವೆ ಕಾಮಗಾರಿ ಈ ಭಾಗದ ಜನರ ಅತಿದೊಡ್ಡ ಕನಸು. ಇದರಲ್ಲಿ ಸಿಂಧನೂರು ತನಕ ರೈಲು ಓಡುವಂತೆ ಸಂಗಣ್ಣ ಕರಡಿ ಮಾಡಿದ್ದಾರೆ. ಈಗ ಇನ್ನುಳಿದ ರಾಯಚೂರು ತನಕ ರೈಲು ಓಡಿಸಬೇಕಾದ ಮೊದಲ ಸವಾಲು ನೂತನ ಸಂಸದ ರಾಜಶೇಖರ ಎದುರಿಗಿದೆ.

ಬಡವರ ಸಾರಿಗೆ ಎಂದೇ ಖ್ಯಾತಿ ಪಡೆದ ರೈಲು ಓಡಾಟ ನಮ್ಮ ಭಾಗದಲ್ಲಿ ಸಾಧ್ಯವೇ ಇಲ್ಲ ಎನ್ನುವ ನಿರಾಸೆಯ ಕಾರ್ಮೋಡ ಕಾಡಿದ್ದ ಸಮಯದಲ್ಲಿಯೂ ಒಂದಷ್ಟು ಅಭಿವೃದ್ಧಿ ಕೆಲಸಗಳಾಗಿ ಗಂಗಾವತಿ, ಸಿಂಧನೂರು, ಕಾರಟಗಿ ಹಾಗೂ ಸುತ್ತಮುತ್ತಲಿನ ಭಾಗದ ಜನ ರೈಲಿನ ಮೂಲಕ ನೇರವಾಗಿ ರಾಜ್ಯ ರಾಜಧಾನಿಗೆ ಸಂಪರ್ಕ ಪಡೆದುಕೊಂಡರು. ರಾಜ್ಯದ ವಾಣಿಜ್ಯ ನಗರಿ ಹುಬ್ಬಳ್ಳಿಗೂ ನೇರ ಸಂಪರ್ಕ ಲಭಿಸಿತು. ಉತ್ತರ ಕನ್ನಡ, ಗೋವಾದಿಂದ ನಮ್ಮ ನೆರೆ ಜಿಲ್ಲೆಯ ಹಂಪಿ, ಅಂಜನಾದ್ರಿ, ಹುಲಿಗಿ ದೇವಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿದೆ. ಹೀಗಾಗಿ ರೈಲ್ವೆ ಅಭಿವೃದ್ಧಿಯಾದರೆ ಕ್ಷೇತ್ರದ ಅಭಿವೃದ್ಧಿಯೂ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತದೆ.

ಅಧ್ಯಯನ, ಕಲೆ, ಸಂಸ್ಕೃತಿ ಮತ್ತು ವಿಜಯನಗರ ಸಾಮ್ರಾಜ್ಯದ ಕುತೂಹಲದ ಕಥನಗಳನ್ನು ಕಣ್ತುಂಬಿಕೊಳ್ಳಲು ವಿದೇಶಿಗರು ಹಂಪಿಗೆ ಬರುವುದು ಹೆಚ್ಚು. ಆದ್ದರಿಂದ ಕೊಪ್ಪಳದಲ್ಲಿ ವಿಮಾನ ನಿಲ್ದಾಣ ಬೇಕು ಎನ್ನುವ ಬೇಡಿಕೆಯೂ ಜೋರಾಗಿದೆ. ವರ್ಷದ ಹಿಂದೆ ಭಾರತ ವಿಮಾನನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಪ್ರಾಥಮಿಕ ಹಂತದ ವರದಿ ನೀಡಿದ್ದಾರೆ. ಒಂದು ವೇಳೆ ಇಲ್ಲಿಂದ ಲೋಹದ ಹಕ್ಕಿಯಲ್ಲಿ ಹಾರುವ ಆಸೆ ಈಡೇರಿದರೆ ಜಿಲ್ಲೆ ಮತ್ತು ನೆರೆಜಿಲ್ಲೆಗಳ ಜನರಿಗೆ ಮಹಾನಗರಗಳ ನೇರ ಸಂಪರ್ಕದ ಕನಸೂ ಈಡೇರಿದಂತಾಗುತ್ತದೆ.

ಗಂಗಾವತಿ ಭತ್ತದ ಕಣಜ, ಕಿನ್ನಾಳ ಕರಕುಶಲ ವಸ್ತುಗಳ ತವರಾಗಿ, ಭಾಗ್ಯನಗರ ಕಲಾತ್ಮಕ ಸೀರೆಗಳು ಮತ್ತು ಕೂದಲೋದ್ಯಮ ಹೀಗೆ ಹಲವು ವಿಶೇಷತೆಗಳೊಂದಿಗೆ ಕೊಪ್ಪಳ ಜಿಲ್ಲೆ ಗುರುತಿಸಿಕೊಂಡಿದೆ. ಇಲ್ಲಿನ ತೋಟಗಾರಿಕಾ ಬೆಳೆಗಳು ದೇಶದ ಮಹಾನಗರಗಳು ಮತ್ತು ವಿದೇಶಗಳಲ್ಲಿ ಸದ್ದು ಮಾಡಿವೆ. ಈ ಎಲ್ಲ ಕಾರಣಕ್ಕಾಗಿ ಕ್ಷೇತ್ರದ ಸಾರಿಗೆ ವ್ಯವಸ್ಥೆ ಬಲಗೊಂಡರೆ ಕೃಷಿ, ಕೈಗಾರಿಕೆ, ತೋಟಗಾರಿಕೆ, ಉದ್ಯಮ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಶಕ್ತಿ ಬಂದಂತಾಗುತ್ತದೆ. ಮತ ಬೇಟೆಗೆ ಅಸ್ತ್ರವಾಗಿರುವ ಅಂಜನಾದ್ರಿ ಅಭಿವೃದ್ಧಿ ಆಗಬೇಕಾಗಿದೆ.

ಯೋಜನೆ ಪೂರ್ಣಗೊಂಡ ಬಳಿಕ ಕೊಪ್ಪಳ ರೈಲು ನಿಲ್ದಾಣ ಅಭಿವೃದ್ಧಿಗೊಳ್ಳಲಿರುವ ಮಾದರಿಯ ನೀಲನಕ್ಷೆ
ಯೋಜನೆ ಪೂರ್ಣಗೊಂಡ ಬಳಿಕ ಕೊಪ್ಪಳ ರೈಲು ನಿಲ್ದಾಣ ಅಭಿವೃದ್ಧಿಗೊಳ್ಳಲಿರುವ ಮಾದರಿಯ ನೀಲನಕ್ಷೆ

ರಾಜ್ಯ ಸರ್ಕಾರದ ಸಹಯೋಗ ಮತ್ತು ಕೇಂದ್ರದ ನೆರವಿನೊಂದಿಗೆ ತುರ್ತಾಗಿ ಆಗಬೇಕಿರುವುದು ನವಲಿ ಸಮಾನಾಂತರ ಜಲಾಶಯ. ತುಂಗಭದ್ರಾ ಜಲಾಶಯದಲ್ಲಿ ವ್ಯಾಪಕ ಹೂಳು ತುಂಬಿರುವುದರಿಂದ ಮಳೆಗಾಲದಲ್ಲಿ ಅಲ್ಲಿ ಸಂಗ್ರಹವಾಗುವ ನೀರು ಬಳಿಕ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಅದನ್ನು ಹಿಡಿದಿಟ್ಟು ರೈತರಿಗೆ ಅನುಕೂಲ ಕಲ್ಪಿಸಲು ಕನಕಗಿರಿ ಸಮೀಪದ ನವಲಿಯಲ್ಲಿ ಸಮಾನಾಂತರ ಜಲಾಶಯ ನಿರ್ಮಿಸಬೇಕು ಎನ್ನುವುದು ಜಿಲ್ಲೆಯ ಜನರ ಬೇಡಿಕೆ. ಜಲಾಶಯಕ್ಕಿಂತ ಜಲಾಶಯಗಳು ಬೇಕು ಎನ್ನುವುದು ಜಿಲ್ಲೆಯ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಆಶಯ. ಇದಕ್ಕಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ₹ 1 ಸಾವಿರ ಕೋಟಿ ಮೀಸಲಿಟ್ಟಿದೆ. ಇದು ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿದ್ದರಿಂದ ನೂತನ ಸಂಸದರು ಕೇಂದ್ರದ ನೆರವಿನೊಂದಿಗೆ ಅಂತರ ರಾಜ್ಯ ವಿಷಯವನ್ನು ಹೇಗೆ ಪರಿಹರಿಸುತ್ತಾರೆ ಎನ್ನುವುದು ಕೂಡ ಸವಾಲಿನ ವಿಷಯವಾಗಿದೆ.

ಕೊಪ್ಪಳ ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯ
ಕೊಪ್ಪಳ ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯ

ಜಿಲ್ಲೆಯಲ್ಲಿ ಸಾಕಷ್ಟು ನೀರಾವರಿ ಯೋಜನೆಗಳು ಬಾಕಿಯಿದ್ದು, ರಾಷ್ಟ್ರೀಯ ಹೆದ್ದಾರಿಗಳು ಕೂಡ ನಿರ್ಮಾಣವಾಗಬೇಕಾಗಿದೆ. ಕೇಂದ್ರೀಯ ವಿದ್ಯಾಲಯಗಳಿಗೆ ಕಾಯಂ ಬೋಧಕರ ಮೂಲಕ ಚಿಕಿತ್ಸೆ ನೀಡಬೇಕಾಗಿದೆ. ಹಿಂದಿನ ನರೇಂದ್ರ ಮೋದಿ ಸರ್ಕಾರ ಕ್ರೀಡಾಪಟುಗಳಿಗೆ ಸ್ಥಳೀಯವಾಗಿ ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಸಂಕೀರ್ಣ ನಿರ್ಮಿಸಬೇಕು. ಖೇಲೊ ಇಂಡಿಯಾ ಯೋಜನೆಯಡಿ ಇದು ಕಾರ್ಯಗತಗೊಳ್ಳಬೇಕು ಎಂದು ಸೂಚಿಸಿದ್ದರು. ಹಿಂದಿನ ಸಂಸದರ ಅವಧಿಯಲ್ಲಿ ಈ ಯೋಜನೆಯಲ್ಲಿ ಅಲ್ಪ ಕಾಮಗಾರಿಯಾಗಿದ್ದು ಕನಿಷ್ಠ ಜಿಲ್ಲಾ ಕ್ರೀಡಾಂಗಣದಲ್ಲಿಯಾದರೂ ಸಿಂಥೆಟಿಕ್ ಟ್ರ್ಯಾಕ್‌ ನಿರ್ಮಿಸಬೇಕಾದ ಅಗತ್ಯವಿದೆ.

ಅಂಜನಾದ್ರಿ ಪರ್ವತ
ಅಂಜನಾದ್ರಿ ಪರ್ವತ

ಇನ್ನಷ್ಟು ಕೆಲಸಗಳು ಆಗಬೇಕಾಗಿದ್ದು ಅವುಗಳಿಗೆ ರಾಜ್ಯದ ನೆರವು ಮತ್ತು ಕೇಂದ್ರದ ಸಹಕಾರ ಎರಡೂ ಅಗತ್ಯವಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವೇ ಅಧಿಕಾರದಲ್ಲಿದ್ದರೂ ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚಿಸಿದೆ. ಆದ್ದರಿಂದ ನೂತನ ಸಂಸದ ರಾಜಶೇಖರ ಹಿಟ್ನಾಳ ರಾಜ್ಯ ಮತ್ತು ಕೇಂದ್ರದ ನಡುವೆ ಸಮ್ವನಯ ಸಾಧಿಸಿ ಅಭಿವೃದ್ಧಿಯ ’ಗೆಲುವು’ ಹೇಗೆ ಸಾಧಿಸುತ್ತಾರೆ ಎನ್ನುವುದೇ ಕುತೂಹಲ.

ರಾಯಚೂರುವರೆಗೆ ರೈಲ್ವೆ ಯೋಜನೆ ವಿಸ್ತರಣೆ ಸೇತುವೆ ಸಂಪರ್ಕದಿಂದ ಪ್ರಯಾಣದ ಅಂತರ ತಗ್ಗಿಸುವ ಕಾಮಗಾರಿ ಅಗತ್ಯವಿರುವೆಡೆ ರಸ್ತೆಯ ಸುಧಾರಣೆಯ ಜೊತೆಗೆ ಕೇಂದ್ರ ಸರ್ಕಾರದ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳ ಲಾಭ ಕ್ಷೇತ್ರದ ಜನರಿಗೆ ತಲುಪಿಸುವಲ್ಲಿ ಉತ್ಸುಕತೆಯಿಂದ ಕೆಲಸ ಮಾಡಬೇಕು. ಕರಡಿ ಸಂಗಣ್ಣ ಅವರ ರೀತಿ ಸುಲಭವಾಗಿ ಜನರ ಕೈಗೆ ಸಿಗಬೇಕು
ಖಾನಾವಳಿ ಶರಣಯ್ಯಸ್ವಾಮಿ ಹಿರೇಮಠ ಕಾರಟಗಿ
ಸಂಗಮೇಶ ಕವಡಿಮಟ್ಟಿ
ಸಂಗಮೇಶ ಕವಡಿಮಟ್ಟಿ
ನನೆಗುದಿಗೆ ಬಿದ್ದಿರುವ ಶಿಗ್ಗಾವ್‌ ಕಲ್ಮಲಾ ರಸ್ತೆಯನ್ನು ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಲು ಪ್ರಾಶಸ್ತ್ಯ ಕೊಡಬೇಕು. ಸಿಂಗಟಾಲೂರ ಏತ ನೀರಾವರಿ ಯೋಜನೆಯಲ್ಲಿ ಸಮರ್ಪಕವಾಗಿ ರೈತರಿಗೆ ನೀರಾವರಿಗೆ ಅನುಕೂಲ ಮಾಡಿಕೊಡಬೇಕು. ಖೇಲೊ ಇಂಡಿಯಾ ಯೋಜನೆಯಡಿ ಸ್ಥಳೀಯವಾಗಿಯೇ ಕ್ರೀಡಾ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಬೇಕು.
ಸಂಗಮೇಶ ಕವಡಿಮಟ್ಟಿ ಅಳವಂಡಿ ಗ್ರಾಮಸ್ಥ
ಕನಕರೆಡ್ಡಿ ಕೆರಿ
ಕನಕರೆಡ್ಡಿ ಕೆರಿ
ಕೊಪ್ಪಳ ಲೋಕಸಭಾ ಕ್ಷೇತ್ರದ ನೂತನ ಸಂಸದರು ಈ ಭಾಗಕ್ಕೆ ಅವಶ್ಯಕವಾಗಿ ಬೇಕಾಗಿರುವ ದರೋಜಿಯಿಂದ ಬಾಗಲಕೋಟೆ ರೈಲ್ವೆ ಯೋಜನೆಯನ್ನು ಆರಂಭಿಸಬೇಕು ಒಣಭೂಮಿ ಪ್ರದೇಶವಾಗಿರುವ ತಾಲ್ಲೂಕಿನಲ್ಲಿ ಕೇಂದ್ರಿಯ ವಿದ್ಯಾಲಯ ಸ್ಥಾಪಿಸಬೇಕು. ಸ್ಮಾರಕಗಳ ರಕ್ಷಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು
ಕನಕರೆಡ್ಡಿ ಕೆರಿ ಗೌರವ ಕಾರ್ಯದರ್ಶಿ ತಾಲ್ಲೂಕು ಕ.ಸಾ.ಪ
ಹನುಮಂತಪ್ಪ ಸಜ್ಜಲಗುಡ್ಡ
ಹನುಮಂತಪ್ಪ ಸಜ್ಜಲಗುಡ್ಡ
ನೂತನ ಸಂಸದರಾಗಿರುವ ರಾಜಶೇಖರ ಹಿಟ್ನಾಳ ಅವರು ಹಿಂದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಳಮಟ್ಟದಿಂದಲೂ ಜನರೊಂದಿಗೆ ಒಡನಾಟವಿದೆ. ಸಮಗ್ರವಾಗಿ ಕೊಪ್ಪಳ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಮಾಡಬೇಕು
ಹನುಮಂತಪ್ಪ ಸಜ್ಜಲಗುಡ್ಡ ಮೆಣೆಧಾಳ ಗ್ರಾಮದ ನಿವಾಸಿ
ಸೈಫರ್ ರೆಹಮಾನ್
ಸೈಫರ್ ರೆಹಮಾನ್
ಕೊಪ್ಪಳ ಜಿಲ್ಲೆ ಅಭಿವೃದ್ಧಿ ವಿಷಯದಲ್ಲಿ ಸಾಕಷ್ಟು ಹಿಂದುಳಿದಿದ್ದು ನೂತನ ಸಂಸದರು ಅಂಜನಾದ್ರಿ ಅಭಿವೃದ್ಧಿ ಜತೆಗೆ ಎಲ್ಲ ತಾಲ್ಲೂಕುಗಳಲ್ಲಿ ವಿದ್ಯಾರ್ಥಿಗಳ ವಸತಿ ನಿಲಯಗಳನ್ನು ಹೆಚ್ಚಿಸಲು ನೆರವಾಗಬೇಕು. ಜಿಲ್ಲೆ ಪ್ರವಾಸೋದ್ಯಮ ಹಬ್‌ ಆಗಲು ಹೇರಳ ಅವಕಾಶಗಳು ಇವೆ. ರಾಜ್ಯದ ಪ್ರಯತ್ನಕ್ಕೆ ಕೇಂದ್ರದ ಅನುದಾನದ ಮೂಲಕ ನೆರವಾಗಬೇಕು
ಸೈಫರ್ ರೆಹಮಾನ್ ಸಾಣಾಪುರ ಗ್ರಾಮದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT