ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಟಗಿ | ಕಾಂಗ್ರೆಸ್‌ ಅಭ್ಯರ್ಥಿ ಗೆಲುವು: ವಿಜಯೋತ್ಸವ

Published 4 ಜೂನ್ 2024, 16:03 IST
Last Updated 4 ಜೂನ್ 2024, 16:03 IST
ಅಕ್ಷರ ಗಾತ್ರ

ಕಾರಟಗಿ: ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ರಾಜಶೇಖರ ಹಿಟ್ನಾಳ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಸಂಭ್ರಮದಿಂದ ವಿಜಯೋತ್ಸವ ಆಚರಿಸಿದರು.

ಕನಕದಾಸ ವೃತ್ತ, ಹಳೆಯ ಬಸ್‌ ನಿಲ್ದಾಣ, ವಿಶೇಷ ಎಪಿಎಂಸಿ ಬಳಿ ತಂಡೋಪತಂಡವಾಗಿ ಕಾರ್ಯಕರ್ತರು ಜಮಾಯಿಸಿ, ಭಾರಿ ಪ್ರಮಾಣದಲ್ಲಿ ಪಟಾಕಿ ಹಚ್ಚಿ, ಪರಸ್ಪರ ಬಣ್ಣ ಎರಚಿ, ಸಿಹಿ ವಿತರಿಸಿ, ಜಯಘೋಷ ಹಾಕಿ ವಿಜಯೋತ್ಸವ ಆಚರಿಸಿದರು.

ಅನೇಕ ಕಾರ್ಯಕರ್ತರು ದ್ವಿಚಕ್ರ ವಾಹನಗಳ ಸೈಲೆನ್ಸರ್‌ ತೆಗೆದು ಅಬ್ಬರದ ಸದ್ದು ಮಾಡುತ್ತಾ, ಪಕ್ಷದ ಧ್ವಜವಿಡಿದು ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಕೇಕೆ ಹಾಕುತ್ತಾ ಸಂಚರಿಸಿದರು.

ಕನಕದಾಸ ವೃತ್ತದಲ್ಲಿ ವೆಂಕಟೇಶ ತಂಗಡಗಿ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಜಮಾಯಿಸಿ ಪಟಾಕಿ ಹಚ್ಚಿ ಸಂಭ್ರಮಿಸಿದರು.

ಕೊಪ್ಪಳದಿಂದ ಸಚಿವ ಶಿವರಾಜ ತಂಗಡಗಿ ಅವರು ಬರುತ್ತಿದ್ದಂತೆಯೇ ಅವರ ನಿವಾಸಕ್ಕೆ ನೂರಾರು ಕಾರ್ಯಕರ್ತರು, ಮುಖಂಡರು ತೆರಳಿ ತಂಗಡಗಿ ಅವರಿಗೆ ಬಣ್ಣ ಎರಚಿ, ಜಯಘೋಷ ಹಾಕಿ ಸಂಭ್ರಮಿಸಿದರು.

ಸಂಭ್ರಮಾಚರಣೆ  ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಿವರಾಜ ತಂಗಡಗಿ, ಈ ಗೆಲುವು ಪಕ್ಷದ ಹಿರಿಯರ ಆಶೀರ್ವಾದ, ಕಾರ್ಯಕರ್ತರ, ಮುಖಂಡರ ಸಾಮೂಹಿಕ ಪ್ರಯತ್ನದ ಗೆಲುವು. ಗೆಲುವಿಗೆ ಕಾರಣರಾದವರಿಗೆ ಈ ಗೆಲುವನ್ನು ಸಮರ್ಪಿಸುತ್ತೇವೆ. ಕಲ್ಯಾಣ ಕರ್ನಾಟಕದ ಕಲಬುರಗಿಯಿಂದ ಮೋದಿ ಚುನಾವಣೆ ಪ್ರಚಾರ ಪ್ರಾರಂಭಿಸಿದ್ದರು. ಕಲ್ಯಾಣ ಕರ್ನಾಟಕ ಭಾಗದ ಜನರು ಮೋದಿ ಅವರನ್ನು ತಿರಸ್ಕರಿಸಿ, 5 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜೈ ಎಂದು ಗೆಲುವು ನೀಡಿದ್ದಾರೆ. ಚುನಾವಣಾ ಫಲಿತಾಂಶ ಮೋದಿಗೊಂದೇ ಅಲ್ಲ, ಅಹಂಕಾರದಿಂದ ಬೀಗುತ್ತಿದ್ದ ಜರ್ನಾರ್ದನ ರೆಡ್ಡಿಯಂಥಹ ಮುಖಂಡರಿಗೂ ಕಪಾಳಮೋಕ್ಷ ಮಾಡಿದಂತಾಗಿದೆ ಎಂದರು.

ಕಾಂಗ್ರೆಸ್ ಮುಕ್ತ ಭಾರತ, ಚಾರ್ ಸೌ ಪಾರ್ ಬದಲು ಸ್ವತಂತ್ರವಾಗಿ ಅಧಿಕಾರಕ್ಕೇರಲೂ ಆಗದ ಸ್ಪಷ್ಟ ಸಂದೇಶವನ್ನು ಮತದಾರರು ನೀಡಿ,  ಮೋದಿಯ ಸಮೀಕ್ಷೆಗಳನ್ನೆಲ್ಲಾ ತಲೆಕೆಳಗಾಗುವಂತೆ ತೀರ್ಪು ನೀಡಿದ್ದಾರೆ. ಫಲಿತಾಂಶವು ಬೀಗುತ್ತಿದ್ದ ಬಿಜೆಪಿಗೆ  ತಕ್ಕ ಪಾಠ ಕಲಿಸಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT