ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಗಾರರಿಗೆ ‘ಸಿಹಿ’ ನೀಡದ ಕಲ್ಲಂಗಡಿ

ಲಾಕ್‌ಡೌನ್‌ ಪರಿಣಾಮ ಖರೀದಿಗೆ ಮುಂದಾಗದ ಸಗಟು ವ್ಯಾಪಾರಸ್ಥರು
Last Updated 29 ಏಪ್ರಿಲ್ 2021, 6:09 IST
ಅಕ್ಷರ ಗಾತ್ರ

ಹನುಮಸಾಗರ: ರಂಜಾನ್ ಮಾಸದಲ್ಲಿ ಕಲ್ಲಂಗಡಿ ಕೊಯ್ಲಿಗೆ ಬಂದರೆ ಕೈತುಂಬ ಕಾಸು ಖಚಿತ ಎಂಬ ಲೆಕ್ಕಾಚಾರದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದು, ಭರಪೂರ ಬೆಳೆಯೂ ಬಂದಿದೆ. ಆದರೆ ಲಾಕ್‌ಡೌನ್ ಕಾರಣದಿಂದ ಖರೀದಿದಾರರು ಖರೀದಿಗೆ ಹಿಂದೇಟು ಹಾಕಿದ ಕಾರಣವಾಗಿ ಮಾರುಕಟ್ಟೆಗೆ ಹೋಗಬೇಕಾದ ಕಲ್ಲಂಗಡಿ ಜಮೀನಿನಲ್ಲಿಯೇ ಕಮರುತ್ತಿದೆ.

ಹನುಮಸಾಗರ ಭಾಗದ ನಿಲೋಗಲ್, ಗೊಣ್ಣಾಗರ, ವಾರಿಕಲ್, ನರಸಾಪೂರ, ಚಿಕ್ಕಗೊಣ್ಣಾಗರ, ಹಾಬಲಕಟ್ಟಿ, ಗಡಚಿಂತಿ ಭಾಗಗಳಲ್ಲಿ ಪ್ರತಿ ವರ್ಷ ಸಣ್ಣ ರೈತರು ಬೇಸಿಗೆ ಸಮಯದಲ್ಲಿ ಕಲ್ಲಂಗಡಿ ಕೊಯ್ಲು ಮಾಡಿ ಕೈಗೊಂದಿಷ್ಟು ಸಂಪಾದನೆ ಮಾಡಿಕೊಳ್ಳುತ್ತಾರೆ. ಆದರೆ ಈ ಬಾರಿ ಹಣ್ಣಿನ ಮಾರುಕಟ್ಟೆ ತೆರೆದಿದ್ದರೂ ಗ್ರಾಹಕರು ಖರೀದಿಸಲು ಬರುತ್ತಿಲ್ಲದ ಕಾರಣ ಸಗಟು ವ್ಯಾಪಾರಸ್ಥರು ಕೈಚೆಲ್ಲಿದ್ದಾರೆ. ದೂರದ ವ್ಯಾಪಾರಸ್ಥರು ಖರೀದಿಸುವ ಒಪ್ಪಂದ ಮಾಡಿಕೊಂಡು ಕೆಲ ರೈತರಿಗೆ ಮುಂಗಡ ಹಣ್ಣ ಕೊಟ್ಟಿದ್ದರೂ ಖರೀದಿಗೆ ಬರುತ್ತಿಲ್ಲ.

‘70 ರಿಂದ 75 ದಿನದೊಳಗಾಗಿ ಕೊಯ್ಲಿಗೆ ಬರುವ ಈ ಫಸಲನ್ನು ಬರೋಬ್ಬರಿ ರಂಜಾನ್ ಮಾಸದಲ್ಲಿ ಕೈಗೆ ಬರುವಂತೆ ಜನವರಿ ತಿಂಗಳಲ್ಲಿ ಬಿತ್ತನೆ ಮಾಡಿದ್ದೇವೆ. ಪ್ರತಿ ಕೆ.ಜಿ ಬೀಜಕ್ಕೆ ₹2000, ಗೊಬ್ಬರ, ಕೂಲಿ, ಉಳಿಮೆ ಖರ್ಚು ಸೇರಿದಂತೆ ಪ್ರತಿ ಎಕರೆಗೆ ಕನಿಷ್ಠ ₹20 ಸಾವಿರ ಖರ್ಚು ಬಂದಿದೆ. ಆದರೆ ಕೈಗೆ ಒಂದು ರೂಪಾಯಿ ದಕ್ಕಲಿಲ್ಲ’ ಎಂದು ಸಹೋದರರಾದ ಷಣ್ಮುಖಪ್ಪ ನಾಗಪ್ಪ ಹನುಮನಾಳ, ಬಸವಂತಪ್ಪ ಹನುನಾಳ, ಕೆಂಚಪ್ಪ ಹನುಮನಾಳ ನೋವಿನಿಂದ
ಹೇಳಿದರು.

‘ನಾನು ಒಂದೂವರೆ ಎಕರೆಯಲ್ಲಿ ದುಬಾರಿ ಬೀಜಗಳನ್ನೇ ಬಿತ್ತನೆ ಮಾಡಿದ್ದೇನೆ, ಈ ಬಾರಿ ಹಣ್ಣಿನ ಗಾತ್ರವೂ ಕೊಂಚ ಕಡಿಮೆ ಬಂದಿದೆ, ಆದಾಗ್ಯೂ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟವಾಗಿದ್ದರೆ ನಷ್ಟ ಆಗುತ್ತಿರಲಿಲ್ಲ. ಖರೀದಿದಾರರು ಇತ್ತ ಬರುತ್ತಿಲ್ಲದ ಕಾರಣ ಆರ್ಥಿಕ ನಷ್ಟ ಉಂಟಾಗಿದ್ದು, ಕಲ್ಲಂಗಡಿ ದನಕರುಗಳ ಪಾಲಾಗುತ್ತಿವೆ’ ಎಂದು ಕಲ್ಲಂಗಡಿ ಬಿತ್ತನೆ ಮಾಡಿದ ರೈತ ಮುತ್ತಪ್ಪ ಗಡಗಿ ಹೇಳುತ್ತಾರೆ.

‘ಕಣ್ಮುಂದೆ ಕೊಳೆಯುವ ಸ್ಥಿತಿ ತಲುಪಿದ್ದ ಫಸಲು ನೋಡಲಾಗದೆ, ವಾರಾಂತ್ಯ ಕರ್ಫ್ಯೂ ಸಮಯದಲ್ಲಿ ಬಾಡಿಗೆ ವಾಹನ ಮಾಡಿಕೊಂಡು ಸಮೀಪದ ಗುಡೂರ ಪಟ್ಟಣಕ್ಕೆ ಹೋಗಿದ್ದೆ, ಆದರೆ ಪೊಲೀಸರು ಅವಕಾಶ ನೀಡದ ಕಾರಣ ಮರಳಿ ಬಂದು ಹಣ್ಣುಗಳನ್ನು ಕತ್ತರಿಸಿ ದನಗಳಿಗೆ ಹಾಕಿದ್ದೇವೆ’ ಎಂದುರೈತ ಭೀಮಪ್ಪ ಸವಳಿಕೇರಿ ಬೇಸರದಿಂದ ನುಡಿದರು.

‘ಆರಂಭದಲ್ಲಿ ಬಾಗಲಕೊಟೆ, ವಿಜಯಪುರ, ಇಲಕಲ್ಲ ವ್ಯಾಪಾರಸ್ಥರು ಕಲ್ಲಂಗಡಿ ಖರೀದಿಗೆ ಒಪ್ಪಿದ್ದರು. ಇದೀಗ ಲಾಕ್‌ಡೌನ್ ಇದೆ, ಹಣ್ಣು ಮಾರಾಟವಾಗಲ್ಲ ಎನ್ನುತ್ತಿದ್ದಾರೆ. ಪ್ರತಿ ಕೆ.ಜಿಗೆ ₹6 ರಿಂದ 8 ಮಾರಾಟವಾಗಬೇಕಿದ್ದ ಫಸಲನ್ನು ₹4ಕ್ಕಾದರೂ ತೆಗೆದುಕೊಂಡು ಹೋಗಿ ಎಂದರೂ ಬರುತ್ತಿಲ್ಲದ ಕಾರಣ, ಬೆಳೆ ಕಮರುತ್ತಿದೆ’ ಎಂದು ಷಣ್ಮುಖಪ್ಪ ಹನುಮನಾಳ ಹತಾಶೆಯಿಂದ ಹೇಳಿದರು.

ಈಗಾಗಲೇ ತಾಲ್ಲೂಕಿನಲ್ಲಿ ಬಹುತೇಕ ಭಾಗ ಕಲ್ಲಂಗಡಿ ಕೊಯ್ಲಾಗಿದೆ, ಅಧಿಕ ಬೆಲೆಯ ದೃಷ್ಟಿಯಿಂದ ಕೆಲ ರೈತರು ತಡವಾಗಿ ಬಿತ್ತನೆ ಮಾಡಿದ ಸುಮಾರು 20 ಹೆಕ್ಟೇರ್ ಮಾತ್ರ ಸದ್ಯ ಬೆಳೆ ಉಳಿದುಕೊಂಡಿದೆ. ಹಣ್ಣು, ತರಕಾರಿ, ಕೃಷಿ ಉತ್ಪನ್ನ ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ಅದಾಗ್ಯೂ ರೈತರ ಫಸಲು ಮಾರಾಟಕ್ಕೆ ಎಲ್ಲ ಬಗೆಯ ನೆರವು ನೀಡಲಾಗುತ್ತದೆ. ದಯವಿಟ್ಟು ರೈತರು ಸಂಪರ್ಕಿಸುವಂತೆ ತಾಲ್ಲೂಕು ತೋಟಗಾರಿಕಾ ಇಲಾಖೆಯ ನಿರ್ದೇಶಕರ ದುರ್ಗಾಪ್ರಸಾದ ಮನವಿ ಮಾಡಿದರು. ಹೆಚ್ಚಿನ ಮಾಹಿತಿ ಹಾಗೂ ಫಸಲು ಮಾರಾಟ ಸಂಪರ್ಕಕ್ಕಾಗಿ 8861697989 ಇಲ್ಲಿಗೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT